ನಾರ್ತ್ ಸೌಂಡ್ (ಆಂಟಿಗುವಾ): ಇಲ್ಲಿನ ಸರ್ ವಿವಿಯನ್ ರಿಚರ್ಡ್ಸ್ ಮೈದಾನದಲ್ಲಿ ಗುರುವಾರ ನಡೆದ ಟಿ20 ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಜೋಸ್ ಬಟ್ಲರ್ ನೇತೃತ್ವದ ಇಂಗ್ಲೆಂಡ್ ತಂಡವು ಓಮನ್ ವಿರುದ್ಧ 8 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿತು. ಓಮನ್ ನೀಡಿದ 48 ರನ್ ಅಲ್ಪಮೊತ್ತವನ್ನು ಬೆನ್ನಟ್ಟಿದ ಆಂಗ್ಲರು 3.1 ಓವರ್ಗಳಲ್ಲೇ ತಲುಪುವ ಮೂಲಕ ಗೆಲುವಿನ ನಗೆ ಬೀರಿದರು.
ಮಹತ್ವದ ಪಂದ್ಯದಲ್ಲಿ ಓಮನ್ ವಿರುದ್ಧ ಟಾಸ್ ಗೆದ್ದ ಇಂಗ್ಲೆಂಡ್, ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ನಾಯಕನ ನಿರ್ಧಾರಕ್ಕೆ ತಕ್ಕಂತೆ ಆಂಗ್ಲ ಬೌಲರ್ಗಳು ಓಮನ್ ಬ್ಯಾಟರ್ಗಳ ಮೇಲೆ ಸವಾರಿ ನಡೆಸಿದರು. ಇಂಗ್ಲೆಂಡ್ ಬೌಲಿಂಗ್ ದಾಳಿಗೆ ತತ್ತರಿಸಿದ ಓಮನ್ ಕೇವಲ 13.2 ಓವರ್ಗಳಲ್ಲೇ 47 ರನ್ಗೆ ಆಲೌಟ್ ಆಯಿತು. ತಂಡದ ಪರ ಶೋಯಬ್ ಖಾನ್ (11) ಮಾತ್ರ ಎರಡಂಕಿ ಮೊತ್ತ ತಲುಪಿದರು.
ದ್ವಿತೀಯ ಓವರ್ನಿಂದಲೇ ಓಮನ್ ವಿಕೆಟ್ ಬೀಳುವ ಸರಣಿ ಆರಂಭವಾಯಿತು. ಕಶ್ಯಪ್ ಪ್ರಜಾಪತಿ 9, ವಿಕೆಟ್ ಕೀಪರ್ ಪ್ರತೀಕ್ ಅಠವಳೆ 5, ನಾಯಕ ಅಕಿಬ್ ಇಲ್ಯಾಸ್ 8, ಜೀಶನ್ ಮಕ್ಸೂದ್ 1, ಖಾಲಿದ್ ಕೈಲ್ 1, ಅಯಾನ್ ಖಾನ್ 1, ಮೆಹ್ರಾನ್ ಖಾನ್ 0, ಫಯಾಜ್ ಬಟ್ 2 ಕಲೀಮುಲ್ಲಾ 5 ಹಾಗೂ ಬಿಲಾಲ್ ಖಾನ್ 0* ರನ್ ಗಳಿಸಿದರು. ಇಂಗ್ಲೆಂಡ್ ಪರ ಜೋಫ್ರಾ ಆರ್ಚರ್ 12ಕ್ಕೆ3, ಮಾರ್ಕ್ ವುಡ್ 12ಕ್ಕೆ 3 ಹಾಗೂ ಆದಿಲ್ ರಶಿದ್ 11 ರನ್ಗೆ 4 ವಿಕೆಟ್ ಕಬಳಿಸಿ ಭಾರಿ ಮೇಲುಗೈ ಒದಗಿಸಿದರು.
48 ರನ್ ಮೊತ್ತ ಬೆನ್ನತ್ತಿದ ಇಂಗ್ಲೆಂಡ್ 3.1 ಓವರ್ಗಳಲ್ಲೇ ಗುರಿ ತಲುಪಿತು. ಫಿಲಿಪ್ ಸಾಲ್ಟ್ 3 ಎಸೆತಗಳಲ್ಲಿ 2 ಸಿಕ್ಸರ್ ಸಹಿತ 12 ರನ್ ಬಾರಿಸಿ ಔಟಾದರೆ, ವಿಲ್ ಜಾಕ್ಸ್ 5 ರನ್ಗೆ ಪೆವಿಲಿಯನ್ಗೆ ಮರಳಿದರು. ಬಳಿಕ ನಾಯಕ ಜೋಸ್ ಬಟ್ಲರ್ ಅಜೇಯ 24 ಹಾಗೂ ಜಾನಿ ಬೈರ್ಸ್ಟೋ 8* ರನ್ ಬಾರಿಸಿ ಇಂಗ್ಲೆಂಡ್ಗೆ ಗೆಲುವು ತಂದಿದ್ದರು.
ಇದನ್ನೂ ಓದಿ: ಟಿ20 ವಿಶ್ವಕಪ್ಗಾಗಿ ₹250 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದ ನ್ಯೂಯಾರ್ಕ್ ಕ್ರೀಡಾಂಗಣ ನೆಲಸಮ! - Nassau Cricket Stadium
ಸೂಪರ್-8ಗೆ ಪೈಪೋಟಿ: ಅಬ್ಬರದ ಗೆಲುವಿನೊಂದಿಗೆ ಬಿ ಗ್ರೂಪ್ನಲ್ಲಿ ಇಂಗ್ಲೆಂಡ್ ಅತ್ಯಮೂಲ್ಯ ರನ್ರೇಟ್ ಏರಿಕೆ ಮಾಡಿಕೊಂಡಿತು. 3 ಪಂದ್ಯಗಳಲ್ಲಿ ತಲಾ ಒಂದರಲ್ಲಿ ಸೋಲು ಹಾಗೂ ಗೆಲುವು ಕಂಡಿರುವ ತಂಡವು 3 ಅಂಕಗಳೊಂದಿಗೆ +3.081 ರನ್ ದರ ಹೊಂದಿದೆ. ಇನ್ನೊಂದೆಡೆ, ಮೂರು ಪಂದ್ಯಗಳಲ್ಲಿ 2ರಲ್ಲಿ ಗೆದ್ದು 5 ಅಂಕ ಹೊಂದಿರುವ ಸ್ಕಾಟ್ಲೆಂಡ್ +2.164 ರನ್ರೇಟ್ನೊಂದಿಗೆ ಮುಂದಿನ ಹಂತಕ್ಕೇರಲು ಆಂಗ್ಲರಿಗೆ ಸವಾಲೊಡ್ಡಿದೆ. ಇವೆರಡೂ ತಂಡಗಳ ನಡುವಿನ ಪಂದ್ಯವು ಮಳೆಯಿಂದ ರದ್ದಾಗಿದ್ದರಿಂದ ತಲಾ 1 ಅಂಕ ಪಡೆದಿದ್ದವು.
ಮುಂದಿನ ಪಂದ್ಯಗಳಲ್ಲಿ ಜೂನ್ 15ರಂದು ಇಂಗ್ಲೆಂಡ್ ತಂಡವು ನಮೀಬಿಯಾ ವಿರುದ್ಧ ಆಡಲಿದ್ದು, ಸ್ಕಾಟ್ಲೆಂಡ್ ತಂಡ ಆಸ್ಟ್ರೇಲಿಯಾ ಜೊತೆ ಸೆಣಸಲಿದೆ. ಈ ಪಂದ್ಯಗಳ ಫಲಿತಾಂಶದ ಮೇಲೆ ಮುಂದಿನ ಹಂತವು ನಿರ್ಧಾರವಾಗಲಿದೆ. ಈಗಾಗಲೇ ಆಡಿದ ಮೂರು ಪಂದ್ಯಗಳನ್ನು ಜಯಿಸಿರುವ ಕಾಂಗರೂಪಡೆ ಬಿ ಗ್ರೂಪ್ನ ಅಗ್ರ ತಂಡವಾಗಿ ಸೂಪರ್-8 ಹಂತಕ್ಕೆ ತಲುಪಿದೆ.
ಇದನ್ನೂ ಓದಿ: 'ವಿರಾಟ್ ಕೊಹ್ಲಿಗೆ ಏನಾಗಿದೆ?': ಬ್ಯಾಟಿಂಗ್ ಕಿಂಗ್ ಕಳಪೆ ಪ್ರದರ್ಶನಕ್ಕೆ ಅಭಿಮಾನಿಗಳು ಬೇಸರ - virat kohli