ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ 2025ಕ್ಕೂ ಮುಂಚಿತವಾಗಿ ನಡೆಯಲಿರುವ ಆಟಗಾರರ ಮೆಗಾ ಹರಾಜಿಗೆ ಸಂಬಂಧಿಸಿದಂತೆ ಫ್ರಾಂಚೈಸಿಗಳು ತಂಡಗಳಲ್ಲಿ ತಲಾ ಎಷ್ಟು ಆಟಗಾರರನ್ನು ರಿಟೇನ್ ಮಾಡಿಕೊಳ್ಳಬಹುದು ಎಂಬುದರ ಕುರಿತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹೊಸ ನಿಯಮ ತಂದಿದೆ. ಶನಿವಾರ ನಡೆದ ಐಪಿಎಲ್ ಆಡಳಿತ ಮಂಡಳಿಯ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಯಿತು.
18ನೇ ಆವೃತ್ತಿಯ ಹರಾಜಿಗೂ ಮೊದಲು ಫ್ರಾಂಚೈಸಿಗಳು ತಲಾ ಗರಿಷ್ಠ 6 ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳಬಹುದು. ಐವರು ಆಟಗಾರರನ್ನು ರಿಟೇನ್ ಮಾಡಿಕೊಂಡರೆ ಮತ್ತೊಬ್ಬ ಆಟಗಾರನನ್ನು ಅನ್‌ಕ್ಯಾಪ್ಡ್ ಪ್ಲೇಯರ್ ಆಗಿ ಉಳಿಸಿಕೊಳ್ಳಬಹುದಾಗಿದೆ. ಇದರೊಂದಿಗೆ ಆರ್‌ಟಿಎಂ (ರೈಟ್ ಟು ಮ್ಯಾಚ್) ಕಾರ್ಡ್ ಬಳಸಿಕೊಳ್ಳುವ ಆಯ್ಕೆಯೂ ಇದೆ.
ಆರ್‌ಟಿಎಂ ಕಾರ್ಡ್ ಎಂದರೇನು?: ರೈಟ್ ಟು ಮ್ಯಾಪ್ ಕಾರ್ಡ್ ಅಥವಾ ಆರ್‌ಟಿಎಂ ಇದನ್ನು 2018ರಲ್ಲಿ ಜಾರಿಗೆ ತರಲಾಯಿತು. ಇದರಡಿಯಲ್ಲಿ ಫ್ರಾಂಚೈಸಿಗಳು ತಮ್ಮ ತಂಡದ ಆಟಗಾರನನ್ನು ರಿಟೇನ್ ಮಾಡಿಕೊಳ್ಳದೇ ಆರ್‌ಟಿಎಂ ಪಟ್ಟಿಯಲ್ಲಿ ಸೇರಿಸಿದ್ದರೆ, ಆ ಆಟಗಾರ ಹರಾಜಿಗೆ ಬರುತ್ತಾನೆ. ನಂತರ ತಂಡ ಆತನನ್ನು ಮರಳಿ ಪಡೆಯಬೇಕೆಂದು ಬಯಸಿದರೆ ಅಂತಿಮವಾಗಿ ಆ ಆಟಗಾರನ ಮೇಲೆ ಯಾವ ತಂಡ ಎಷ್ಟು ಹಣ ಬಿಡ್ ಮಾಡಿರುತ್ತದೋ ಅದೇ ಮೊತ್ತಕ್ಕೆ ಮರಳಿ ಖರೀದಿಸಬಹುದು.
NEWS 🚨 - IPL Governing Council announces TATA IPL Player Regulations 2025-27.
— IndianPremierLeague (@IPL) September 28, 2024
READ - https://t.co/3XIu1RaYns #TATAIPL pic.twitter.com/XUFkjKqWed
ಉದಾಹರಣೆಗೆ..: ಆರ್ಸಿಬಿ ಆಟಗಾರ ವಿರಾಟ್ ಕೊಹ್ಲಿ ಹರಾಜಿಗೆ ಬಂದಾಗ ಮುಂಬೈ ಅವರನ್ನು ಖರೀದಿಸಲು 20 ಕೋಟಿ ರೂ.ಯಷ್ಟು ಬಿಡ್ ಮಾಡಿತು ಎಂದಿಟ್ಟುಕೊಳ್ಳಿ. ಆಗ ಆರ್ಸಿಬಿ ಕೊಹ್ಲಿಯನ್ನು ಮರಳಿ ತಂಡಕ್ಕೆ ಸೇರಿಸಿಕೊಳ್ಳಬೇಕೆಂದು ಬಯಸಿದರೆ, ಆರ್‌ಟಿಎಂ ಕಾರ್ಡ್ ಬಳಸಿ ಮುಂಬೈ ಬಿಡ್ ಮಾಡಿದ ಮೊತ್ತಕ್ಕೆ ಖರೀದಿಸಬೇಕಾಗುತ್ತದೆ. ಇದರಲ್ಲಿ ಆಟಗಾರನ ಬೆಲೆ ಹೆಚ್ಚಾದರೂ ಆಗಬಹುದು ಕಡಿಮೆಯಾದರೂ ಆಗಬಹುದು.
ರಿಟೇನ್ ಆಟಗಾರರ ಬೆಲೆ: ಮೊದಲ ರಿಟೇನ್ ಆಟಗಾರ-18 ಕೋಟಿ ರೂ, ಎರಡನೇ ಆಟಗಾರ- 14 ಕೋಟಿ ರೂ, ಮೂರನೇ ಆಟಗಾರ- 11 ಕೋಟಿ ರೂ, ನಾಲ್ಕನೇ ಆಟಗಾರ- 18 ಕೋಟಿ ರೂ, ಐದನೇ ಆಟಗಾರ- 14 ಕೋಟಿ ರೂ ಆಗಿದೆ. 2021ರ ನಿಯಮದಂತೆ ಐಪಿಎಲ್ ಅನ್‌ಕ್ಯಾಪ್ಡ್ ಆಟಗಾರರಿಗೆ 4 ಕೋಟಿ ರೂಪಾಯಿ ಇರಿಸಲಾಗಿದೆ.
ಫ್ರಾಂಚೈಸಿಗಳ ಪರ್ಸ್ ಮಿತಿ ಹೆಚ್ಚಳ: ಈ ಬಾರಿ ಫ್ರಾಂಚೈಸಿಗಳ ಪರ್ಸ್ ಮಿತಿ ಹೆಚ್ಚಿಸಲಾಗಿದೆ. ಈ ಹಿಂದೆ ಫ್ರಾಂಚೈಸಿಗೆ ತಲಾ 100 ಕೋಟಿ ರೂ ಮಿತಿ ಇತ್ತು. ಇದೀಗ ಹೊಸ ಆವೃತ್ತಿಗೆ ಅದರ ಮಿತಿಯನ್ನು 120 ಕೋಟಿ ರೂ.ಗೆ ಏರಿಸಲಾಗಿದೆ.
ಇಂಪ್ಯಾಕ್ಟ್ ಪ್ಲೇಯರ್ ನಿಯಮ ಬದಲಿಲ್ಲ: ಇಂಪ್ಯಾಕ್ಟ್ ಪ್ಲೇಯರ್ ನಿಯಮದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಈ ನಿಯಮ 2025ರಿಂದ 2027ರವರೆಗೆ ಜಾರಿಯಲ್ಲಿರಲಿದೆ.
ಪ್ರತಿ ಪಂದ್ಯಕ್ಕೆ ಆಟಗಾರನಿಗೆ 7.5 ಲಕ್ಷ ರೂ: ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪ್ಲೇಯಿಂಗ್ 11ನಲ್ಲಿರುವ ಆಟಗಾರರು ಪಂದ್ಯ ಶುಲ್ಕ ಪಡೆಯಲಿದ್ದಾರೆ. ಪ್ರತಿ ಆಟಗಾರ (ಇಂಪ್ಯಾಕ್ಟ್ ಪ್ಲೇಯರ್ ಒಳಗೊಂಡಂತೆ) ಪ್ರತಿ ಪಂದ್ಯಕ್ಕೆ 7.5 ಲಕ್ಷ ರೂ. ವೇತನ ನಿಗದಿ ಮಾಡಲಾಗಿದೆ. ಅಂದರೆ ಹರಾಜಿನಲ್ಲಿ ಪಡೆದ ಹಣ ಹೊರತುಪಡಿಸಿ 14 ಪಂದ್ಯಗಳಿಂದ ಆಟಗಾರರು 1.5 ಕೋಟಿ ರೂ.ಯನ್ನು ಹೆಚ್ಚುವರಿಯಾಗಿ ಪಡೆಯುವರು.
ವಿದೇಶಿ ಆಟಗಾರರ ನೋಂದಣಿ ಕಡ್ಡಾಯ: ಇನ್ಮುಂದೆ, ವಿದೇಶಿ ಆಟಗಾರರು ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಬೇಕೆಂದರೆ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕಾಗಿದೆ.