ನವದೆಹಲಿ: ಭಾರತ ತಂಡದ ಎಡಗೈ ಬ್ಯಾಟ್ಸ್‌ಮನ್ ಶಿಖರ್ ಧವನ್ ನಂತರ ಇದೀಗ ಮತ್ತೊಬ್ಬ ಕ್ರಿಕೆಟಿಗ ನಿವೃತ್ತಿ ಘೋಷಿಸಿದ್ದಾರೆ. ಬೌಲರ್ ಜಸ್ಪ್ರೀತ್ ಬುಮ್ರಾ ಅವರೊಂದಿಗೆ ವೃತ್ತಿ ಜೀವನ ಆರಂಭಿಸಿದ್ದ ವೇಗದ ಬೌಲರ್ ಬರೀಂದರ್ ಸರನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್ ಬೈ ಹೇಳಿದ್ದಾರೆ.
31ರ ಹರೆಯದ ಬರೀಂದರ್ 2016ರಲ್ಲಿ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ್ದರು. ತಮ್ಮ ಚೊಚ್ಚಲ ಟಿ20 ಪಂದ್ಯದಲ್ಲೇ ಅತ್ಯುತ್ತಮ ಆಟಗಾರ ಎಂಬ ದಾಖಲೆಯನ್ನು ಬರೆದಿದ್ದರು. ಈ ಪಂದ್ಯದಲ್ಲಿ ಸರನ್ 4 ಓವರ್ ಬೌಲಿಂಗ್ ಮಾಡಿ 10 ರನ್ ನೀಡಿ 4 ವಿಕೆಟ್ ಪಡೆದು, ಮೊದಲ ಪಂದ್ಯದಲ್ಲೇ ಈ ಸಾಧನೆ ಮಾಡಿದ ಅತ್ಯುತ್ತಮ ಬೌಲರ್ಗಳಲ್ಲಿ ಒಬ್ಬರು ಎನಿಸಿಕೊಂಡಿದ್ದರು. ಸರನ್ ಒಂದು ವರ್ಷದ ಕ್ರಿಕೆಟ್ ವೃತ್ತಿಜೀವನದಲ್ಲಿ ಭಾರತಕ್ಕಾಗಿ ಆರು ಏಕದಿನ ಮತ್ತು ಎರಡು ಟಿ20 ಪಂದ್ಯಗಳನ್ನು ಆಡಿದ್ದಾರೆ.
ತಮ್ಮ ನಿವೃತ್ತಿ ಕುರಿತು ಇನ್ಸ್ಟಾಗ್ರಾಮ್ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ನಾನು ಅಧಿಕೃತವಾಗಿ ಕ್ರಿಕೆಟ್‌ನಿಂದ ನಿವೃತ್ತಿಯಾಗುತ್ತಿದ್ದು, ನನ್ನ ಕ್ರಿಕೆಟ್ ಪ್ರಯಾಣವನ್ನು ಕೃತಜ್ಞತೆಯಿಂದ ತುಂಬಿದ ಹೃದಯದಿಂದ ಹಿಂತಿರುಗಿ ನೋಡುತ್ತೇನೆ. 2009ರಲ್ಲಿ ಬಾಕ್ಸಿಂಗ್‌ನಿಂದ ಕ್ರಿಕೆಟ್‌ಗೆ ಬದಲಾದ ಬಳಿಕ ಇದು ನನಗೆ ಲೆಕ್ಕವಿಲ್ಲದಷ್ಟು ಮತ್ತು ನಂಬಲಾಗದ ಅನುಭವಗಳನ್ನು ನೀಡಿದೆ. ವೇಗದ ಬೌಲಿಂಗ್ ಶೀಘ್ರದಲ್ಲೇ ನನ್ನ ಅದೃಷ್ಟದ ಮೋಡಿಯಾಯಿತು ಮತ್ತು ಐಪಿಎಲ್ ಫ್ರಾಂಚೈಸಿಗಳನ್ನು ಪ್ರತಿನಿಧಿಸಲು ಬಾಗಿಲು ತೆರೆಯಿತು, 2016ರಲ್ಲಿ ಭಾರತವನ್ನು ಪ್ರತಿನಿಧಿಸುವಾಗ ಅತ್ಯುನ್ನತ ಗೌರವ ಸಿಕ್ಕಿದೆ.
ನನ್ನ ಅಂತಾರಾಷ್ಟ್ರೀಯ ವೃತ್ತಿಜೀವನವು ಚಿಕ್ಕದಾಗಿದ್ದರೂ, ಆ ಸಮಯದಲ್ಲಿನ ನೆನಪುಗಳು ಶಾಶ್ವತವಾಗಿರಲಿವೆ . ನನ್ನ ಪ್ರಯಾಣದುದ್ದಕ್ಕೂ ನನಗೆ ಬೆಂಬಲ ನೀಡಿದ ತರಬೇತುದಾರರು ಮತ್ತು ದೇವರಿಗೆ ನಾನು ಶಾಶ್ವತವಾಗಿ ಕೃತಜ್ಞನಾಗಿದ್ದೇನೆ. ನಾನು ಕ್ರಿಕೆಟ್ ಆರಂಭಿಸುತ್ತಿದ್ದಂತೆ, ಕ್ರಿಕೆಟ್ ನನಗೆ ನೀಡಿದ ಅವಕಾಶಗಳಿಗಾಗಿ ನಾನು ಅತ್ಯಂತ ಕೃತಜ್ಞನಾಗಿದ್ದೇನೆ. ಎಂದು ತಮ್ಮ ಕ್ರಿಕೆಟ್ ಜರ್ನಿ ಬಗ್ಗೆ ಬರೆದುಕೊಂಡಿದ್ದಾರೆ.
ಬರಿಂದರ್ ಸರನ್ ಕ್ರಿಕೆಟ್ ಪ್ರಯಣ: 2016ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಬರೀಂದರ್ 6 ಏಕದಿನ ಮತ್ತು 2 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅವರು ಏಕದಿನದಲ್ಲಿ 7 ವಿಕೆಟ್ ಪಡೆದಿದ್ದು 3/56 ಅವರ ಅತ್ಯುತ್ತಮ ಬೌಲಿಂಗ್ ಆಗಿದೆ. ಇದರ ಹೊರತಾಗಿ, ಅವರು ಟಿ20ಯಲ್ಲೂ 6 ವಿಕೆಟ್ ಉರುಳಿಸಿದ್ದಾರೆ. 10 ರನ್ಗಳಿಗೆ 4 ವಿಕೆಟ್ ಪಡೆದಿರುವುದು ಅತ್ಯುತ್ತಮ ಬೌಲಿಂಗ್ ಆಗಿದೆ.
ಇದಕ್ಕೂ ಮುನ್ನ ಬರೀಂದರ್ ಪಂಜಾಬ್ ಪರ ಪ್ರಥಮ ದರ್ಜೆ ಕ್ರಿಕೆಟ್ ಆಡಿದ್ದಾರೆ. ಅವರು ತಮ್ಮ ವೃತ್ತಿಜೀವನದಲ್ಲಿ ಒಟ್ಟು 18 ಪ್ರಥಮ ದರ್ಜೆ ಮತ್ತು 31 ಲಿಸ್ಟ್ ಎ ಪಂದ್ಯಗಳನ್ನು ಆಡಿದ್ದಾರೆ. ಪ್ರಥಮ ದರ್ಜೆಯ 28 ಇನ್ನಿಂಗ್ಸ್‌ಗಳಲ್ಲಿ ಬೌಲಿಂಗ್ ಮಾಡಿದ ಅವರು 47 ವಿಕೆಟ್‌ಗಳನ್ನು ಪಡೆದರೆ, ಅವರು ಲಿಸ್ಟ್ ಎ ನಲ್ಲಿ 31 ಇನ್ನಿಂಗ್ಸ್‌ಗಳಲ್ಲಿ 45 ವಿಕೆಟ್‌ಗಳನ್ನು ಪಡೆದಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸರನ್ ಪಂಜಾಬ್ ಕಿಂಗ್ಸ್, ರಾಜಸ್ಥಾನ ರಾಯಲ್ಸ್, ಮುಂಬೈ ಇಂಡಿಯನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್‌ಗಳನ್ನು ಪ್ರತಿನಿಧಿಸಿದ್ದಾರೆ. ಇದರಲ್ಲಿ ಅವರು 24 ಪಂದ್ಯಗಳಲ್ಲಿ 9.40ರ ಎಕಾನಮಿಯಲ್ಲಿ 18 ವಿಕೆಟ್‌ಗಳನ್ನು ಪಡೆದಿದ್ದಾರೆ. ಆರಂಭದಲ್ಲಿ ಭಿವಾನಿ ಬಾಕ್ಸಿಂಗ್ ಕ್ಲಬ್‌ನಲ್ಲಿ ಬಾಕ್ಸರ್ ಆಗಿದ್ದ ಸರನ್ 2008ರ ಬೀಜಿಂಗ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ವಿಜೇಂದರ್ ಸಿಂಗ್ ಅವರ ತರಬೇತುದಾರರಾಗಿದ್ದರು ಎಂಬದು ಗಮನಾರ್ಹ.