ನವದೆಹಲಿ: ಭಾರತ ಕ್ರಿಕೆಟ್ ತಂಡ ಸೆಪ್ಟೆಂಬರ್ ತಿಂಗಳಲ್ಲಿ ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಸರಣಿಯನ್ನು ಆಡಲಿದೆ. ಇದಕ್ಕಾಗಿ ತಂಡ ಈಗಾಗಲೇ ತಯಾರಿ ನಡೆಸುತ್ತಿದೆ. ಇತ್ತೀಚಿಗೆ ಶ್ರೀಲಂಕಾ ವಿರುದ್ಧದ ಸೀಮಿತ ಓವರ್ಗಳ ಸರಣಿ ಬಳಿಕ ವಿರಾಮದಲ್ಲಿರುವ ಟೀಂ ಇಂಡಿಯಾ ಆಟಗಾರರು ಸೆ.19ರಿಂದ ಟೆಸ್ಟ್ ಸರಣಿಯಲ್ಲಿ ಕಣಕ್ಕಿಳಿಯಲಿದ್ದಾರೆ. ಇದಲ್ಲದೇ ಟೀಂ ಇಂಡಿಯಾ 6 ತಿಂಗಳ ಬಳಿಕ ಟೆಸ್ಟ್ ಪಂದ್ಯವನ್ನಾಡುತ್ತಿದೆ.
ಆದರೇ ಈ ಬಹು ನಿರೀಕ್ಷಿತ ಟೆಸ್ಟ್ ಸರಣಿಗೂ ಮುನ್ನವೇ ಭಾರತದ ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಗಾಯಕ್ಕೆ ತುತ್ತಾಗಿದ್ದಾರೆ. ಇದರಿಂದಾಗಿ ಸರಣಿ ಆರಂಭಕ್ಕೂ ಮೊದಲೇ ಭಾರತ ತಂಡ ಅನುಭವಿಸಿದೆ. ಟಿ20 ತಂಡದ ನಾಯಕನಾಗಿರುವ ಸೂರ್ಯಕುಮಾರ್ ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ ಕೇವಲ ಒಂದು ಟೆಸ್ಟ್ ಮಾತ್ರ ಆಡಿದ್ದು, ದೀರ್ಘ ಸ್ವರೂಪದ ಪಂದ್ಯಕ್ಕೆ ಪುನರಾಗಮನ ಮಾಡಲು ನಿರೀಕ್ಷಿಸುತ್ತಿದ್ದಾರೆ. ಇದಕ್ಕಾಗಿ ಈಗಿನಿಂದಲೇ ಸಿದ್ಧತೆ ನಡೆಸಿದ್ದು, ಬುಚ್ಚಿ ಬಾಬು ಪಂದ್ಯಾವಳಿಯಲ್ಲೂ ಭಾಗಿಯಾಗಿ ಮುಂಬೈ ತಂಡದ ಪರ ಆಡುತ್ತಿದ್ದಾರೆ. ಸೆಪ್ಟೆಂಬರ್ 5ರಿಂದ ಪ್ರಾರಂಭವಾಗಲಿರುವ ದುಲೀಪ್ ಟ್ರೋಫಿಯಲ್ಲಿ ಸಹ ಸೂರ್ಯಕುಮಾರ್ ಕಾಣಿಸಿಕೊಳ್ಳಲಿದ್ದಾರೆ.
ಆದಾಗ್ಯೂ, ತಮಿಳುನಾಡು ವಿರುದ್ಧ ಬುಚ್ಚಿ ಬಾಬು ಟೂರ್ನಮೆಂಟ್ ಪಂದ್ಯದ ವೇಳೆ ಕೈಗೆ ಗಾಯಮಾಡಿಕೊಂಡಿದ್ದು, ಇದೀಗ ಬಾಂಗ್ಲಾ ವಿರುದ್ಧ ಟೆಸ್ಟ್ನಲ್ಲಿ ಆಡುವುದಕ್ಕೆ ದೊಡ್ಡ ಹೊಡೆತ ಬಿದ್ದಂತಾಗಿದೆ. ಇಎಸ್‌ಪಿಎನ್ ಕ್ರಿಕ್‌ಇನ್ಫೋ ವರದಿಯ ಪ್ರಕಾರ, ಕೊಯಮತ್ತೂರಿನಲ್ಲಿ ನಡೆದ ತಮಿಳುನಾಡು ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ಸೂರ್ಯಕುಮಾರ್ ಯಾದವ್ ಗಾಯಕ್ಕೆ ತುತ್ತಾಗಿದ್ದಾರೆ ಎಂದು ವರದಿಯಾಗಿದೆ.
ಅಲ್ಲದೇ ಮುಂಬರುವ ದುಲೀಪ್ ಟ್ರೋಫಿಯಲ್ಲಿ ಆಡುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದಾಗ್ಯೂ, ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗಾಗಿ ಭಾರತ ತಂಡದಲ್ಲಿ ಅವರನ್ನು ಸೇರಿಸಿಕೊಳ್ಳಲಾಗುತ್ತದೆಯೇ ಇಲ್ಲವೇ ಎಂಬುದು ಖಚಿತ ಆಗಿಲ್ಲ. ಆದರೆ ಭಾರತ ಟೆಸ್ಟ್ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ಬಯಕೆಯಿಂದಾಗಿ ಸೂರ್ಯ ಬುಚ್ಚಿ ಬಾಬು ಟೂರ್ನಮೆಂಟ್ನಲ್ಲಿ ಭಾಗಿಯಾಗಿದ್ದರು.
ಈ ಹಿಂದೆ ಸೂರ್ಯಕುಮಾರ್ ಯಾದವ್ ಫೆಬ್ರವರಿ 2023ರಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಚೊಚ್ಚಲ ಪಂದ್ಯವನ್ನು ಆಡಿದ್ದರು. ಆದರೆ, ನಂತರ ಗಾಯದ ಸಮಸ್ಯೆಯಿಂದಾಗಿ ಸಂಪೂರ್ಣ ಸರಣಿಯಿಂದ ಹೊರಗುಳಿದಿದ್ದರು.
ಇದನ್ನೂ ಓದಿ: 18 ವರ್ಷಗಳ ಬಳಿಕ ಗ್ರ್ಯಾಂಡ್ ಸ್ಲಾಮ್ ನಾಲ್ಕನೇ ಸುತ್ತಿನಿಂದ ಹೊರಬಿದ್ದ ಜೋಕೋವಿಕ್ - Novak Djokovic