ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಸೀಸನ್ ಇನ್ನೂ ಬಹಳ ದೂರದಲ್ಲಿದೆ. ಆದರೆ ಮುಂದಿನ ಐದು ತಿಂಗಳಲ್ಲಿ ಆಟಗಾರರ ಮೆಗಾ ಹರಾಜು ನಡೆಯಲಿದೆ. ಹೊಸ ಸೀಸನ್ ಮೇಲೆ ಅಭಿಮಾನಿಗಳಿಗೂ ಭಾರೀ ನಿರೀಕ್ಷೆಗಳಿವೆ. ಈ ನಡುವೆ ಹಲವು ಸ್ಟಾರ್ ಆಟಗಾರರು ತಂಡವನ್ನು ಬದಲಾಯಿಸುವ ಸಾಧ್ಯತೆ ಗೋಚರಿಸಿದೆ. ಕೆಲವು ಫ್ರಾಂಚೈಸಿಗಳು ರೋಹಿತ್ ಮತ್ತು ರಿಷಬ್ ಪಂತ್ ಅವರಂತಹ ಸ್ಟಾರ್ ಆಟಗಾರರ ಮೇಲೆ ಕಣ್ಣಿಟ್ಟಿವೆ ಎಂಬ ವದಂತಿಗಳಿವೆ.
ಮುಂಬೈನಿಂದ ಇವರು ದೂರ!: ರೋಹಿತ್ ಶರ್ಮಾ, ಸೂರ್ಯ ಕುಮಾರ್ ಯಾದವ್ ಮತ್ತು ಜಸ್ಪ್ರೀತ್ ಬುಮ್ರಾ ಮುಂಬೈ ಇಂಡಿಯನ್ಸ್(ಎಂಐ) ತಂಡದಲ್ಲಿ ಹಲವು ವರ್ಷಗಳಿಂದ ಆಡುತ್ತಿದ್ದಾರೆ. ಫ್ರಾಂಚೈಸಿಯನ್ನು ಅಗ್ರಸ್ಥಾನಿಯಾಗಿ ಮಾಡುವುದರಲ್ಲಿ ಈ ಆಟಗಾರರ ಪಾತ್ರ ಹಿರಿದು. ಆದರೆ, ಮೂವರು ಕೂಡಾ ಎಂಐನಿಂದ ದೂರವಾಗಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ಹರಾಜಿನಲ್ಲಿ ರೋಹಿತ್ ಮತ್ತು ಸೂರ್ಯರನ್ನು ಖರೀದಿಸಲು ಯೋಚಿಸುತ್ತಿದೆ ಎನ್ನಲಾಗುತ್ತಿದೆ.
ಕಳೆದ ಸೀಸನ್‌ನಲ್ಲಿ ರೋಹಿತ್ ಅವರನ್ನು ಸೈಡ್‌ಲೈನ್ ಮಾಡಿದ್ದು ಮತ್ತು ಪಾಂಡ್ಯಗೆ ಮುಂಬೈ ನಾಯಕತ್ವ ನೀಡಿದ್ದು ಸೂರ್ಯ ಮತ್ತು ಬುಮ್ರಾಗೆ ಇಷ್ಟವಾಗಲಿಲ್ಲ ಎಂದು ತೋರುತ್ತಿದೆ. ಹಾಗಾಗಿ, ಇಬ್ಬರೂ ಮುಂಬೈ ತೊರೆಯಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಹಿಟ್‌ಮ್ಯಾನ್ ರೋಹಿತ್ ಶರ್ಮಾ ಗುಜರಾತ್ ಟೈಟಾನ್ಸ್ ಅಥವಾ ಡೆಲ್ಲಿ ಕ್ಯಾಪಿಟಲ್ಸ್ ಸೇರುವ ಸಾಧ್ಯತೆ ಇದೆ.
ಚೆನ್ನೈಗೆ ರಿಷಬ್ ಪಂತ್?: ರಿಷಬ್ ಪಂತ್ 2016ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸೇರಿದ್ದರು. ಅಂದಿನಿಂದ ಅದೇ ಫ್ರಾಂಚೈಸಿಯಲ್ಲಿ ಮುಂದುವರಿದಿದ್ದಾರೆ. ಆದರೆ 2024ರಲ್ಲಿ ಪಂತ್ ಅವರಿಂದ ಮೂಡಿಬಂದ ಪ್ರದರ್ಶನ ಫ್ರಾಂಚೈಸಿಗೆ ತೃಪ್ತಿಯಾಗಿಲ್ಲ ಎಂಬ ಮಾತುಗಳಿವೆ. ಮತ್ತೊಂದೆಡೆ, ಸಿಎಸ್‌ಕೆ ತಂಡ ಧೋನಿ ಉತ್ತರಾಧಿಕಾರಿಗೆ ಹುಡುಕಾಟ ನಡೆಸುತ್ತಿದೆ. ಹೊಸ ಋತುವಿಗೆ ಮೊದಲು ಧೋನಿ ಐಪಿಎಲ್‌ಗೆ ವಿದಾಯ ಹೇಳಬಹುದು. ಹೀಗಾಗಿ, ಚೆನ್ನೈ ತಂಡ ವಿಕೆಟ್ ಕೀಪರ್ ಹಾಗೂ ಬ್ಯಾಟರ್ ಪಂತ್ ಅವರನ್ನು ಖರೀದಿಸುವ ಚಿಂತನೆಯಲ್ಲಿದೆ ಎಂಬ ಮಾತಿದೆ.
ಮರಳಿ ಗೂಡಿಗೆ ಕೆ.ಎಲ್.ರಾಹುಲ್!: ಐಪಿಎಲ್‌ನ ಬಹುತೇಕ ತಂಡಗಳು ಭಾರತೀಯ ನಾಯಕರನ್ನೇ ಹೊಂದಿವೆ. ಫಾಫ್ ಡು ಪ್ಲೆಸಿಸ್ ಅವರು ಆರ್‌ಸಿಬಿಯಂತಹ ಜನಪ್ರಿಯ ತಂಡವನ್ನು ಮುನ್ನಡೆಸುತ್ತಿದ್ದಾರೆ. ಆರ್‌ಸಿಬಿಗೆ ಭಾರತೀಯ ನಾಯಕ ಬೇಕು ಎಂದು ಅಭಿಮಾನಿಗಳು ಬಹಳ ದಿನಗಳಿಂದ ಕೇಳುತ್ತಿದ್ದಾರೆ. ಹೀಗಾಗಿ, ಕರ್ನಾಟಕದ ಆಟಗಾರ ಹಾಗೂ ಲಖನೌ ನಾಯಕ ಕೆ.ಎಲ್.ರಾಹುಲ್ ಅವರನ್ನು ಖರೀದಿಸಲು ಆರ್‌ಸಿಬಿ ಪ್ರಯತ್ನಿಸುತ್ತಿದೆ. ಡು ಪ್ಲೆಸಿಸ್ ನಾಯಕತ್ವದಲ್ಲಿ ಕಳೆದ ಮೂರು ಋತುಗಳಲ್ಲಿ ಆರ್‌ಸಿಬಿ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ.
ಅದಾನಿ ತೆಕ್ಕೆಗೆ ಗುಜರಾತ್ ಟೈಟಾನ್ಸ್: 2021ರಲ್ಲಿ ಸಿವಿಸಿ ಕ್ಯಾಪಿಟಲ್ ಪಾರ್ಟ್‌ನರ್ಸ್ 5,625 ಕೋಟಿ ರೂಪಾಯಿಗೆ ಗುಜರಾತ್ ಟೈಟಾನ್ಸ್‌ನಲ್ಲಿ ಬಹುಪಾಲು ಸ್ವಾಧೀನಪಡಿಸಿಕೊಂಡಿತ್ತು. ಈಗ ತಂಡವು ಮಾಲೀಕತ್ವವನ್ನು ಬಿಟ್ಟುಕೊಡಲು ಯೋಚಿಸುತ್ತಿದೆ. ಮೊದಲಿನಿಂದಲೂ ತಂಡ ಖರೀದಿಸಲು ಆಸಕ್ತಿ ತೋರಿರುವ ಅದಾನಿ ಗ್ರೂಪ್, ಗುಜರಾತ್ ಅನ್ನು ಸ್ವಾಧೀನಪಡಿಸಿಕೊಳ್ಳಲಿದೆ ಎಂದು ಹೇಳಲಾಗುತ್ತಿದೆ. 2025ರ ಫೆಬ್ರವರಿಯಲ್ಲಿ ಈ ಕುರಿತು ಸ್ಪಷ್ಟ ಚಿತ್ರಣ ಸಿಗಲಿದೆ.
ನಾಲ್ಕು ತಂಡಗಳ ನಾಯಕರು ಬದಲು?: ಮುಂದಿನ ಸೀಸನ್‌ನಲ್ಲಿ ನಾಲ್ಕು ಫ್ರಾಂಚೈಸಿಗಳು ತಮ್ಮ ತಂಡಗಳ ನಾಯಕರನ್ನು ಬದಲಿಸಲಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ. ಆರ್‌ಸಿಬಿ, ದೆಹಲಿ, ಲಖನೌ ಮತ್ತು ಪಂಜಾಬ್ ತಂಡಗಳಲ್ಲಿ ಈ ಬದಲಾವಣೆ ಕಾಣಬಹುದು ಎಂಬುದು ಕ್ರೀಡಾ ವಲಯದಲ್ಲಿ ನಡೆಯುತ್ತಿರುವ ಚರ್ಚೆ.
ಫ್ರಾಂಚೈಸಿಗಳೊಂದಿಗೆ ಬಿಸಿಸಿಐ ಮಹತ್ವದ ಸಭೆ: ಆಟಗಾರರ ಮೆಗಾ ಹರಾಜಿಗೆ ಐದು ತಿಂಗಳು ಬಾಕಿ ಉಳಿದಿವೆ. ಆದರೆ ಆಟಗಾರರ ಧಾರಣೆ ಮತ್ತು ಸಂಬಳದ ಮಿತಿಗಳ ಕುರಿತಾಗಿ ಈಗಾಗಲೇ ಚರ್ಚೆಗಳು ಪ್ರಾರಂಭವಾಗಿವೆ. ಈ ವಿಷಯಗಳಲ್ಲಿ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲು ಫ್ರಾಂಚೈಸಿ ಮಾಲೀಕರೊಂದಿಗೆ ಸಭೆ ನಡೆಸಲು ಬಿಸಿಸಿಐ ಯೋಜಿಸಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿರುವ ಬಿಸಿಸಿಐ ಕಚೇರಿಯಲ್ಲಿ ಜುಲೈ 30 ಅಥವಾ 31ರಂದು ಸಭೆ ನಡೆಯುವ ಸಾಧ್ಯತೆ ಇದೆ.
ಇದನ್ನೂ ಓದಿ: ಮಹಿಳಾ ಏಷ್ಯಾಕಪ್ 2024: ರಿಚಾ, ಕೌರ್ ಬ್ಯಾಟಿಂಗ್ ಅಬ್ಬರಕ್ಕೆ ಮಣಿದ ಯುಎಇ - IND Beat UAE