ಡಮಾಸ್ಕಸ್: ಸಿರಿಯಾದಲ್ಲಿ ಅಧ್ಯಕ್ಷ ಬಷರ್ ಅಲ್-ಅಸ್ಸಾದ್ ಅವರ ಆಡಳಿತ ಪತನಗೊಂಡಿದ್ದು, ಡಮಾಸ್ಕಸ್ ಅನ್ನು ವಶಪಡಿಸಿಕೊಂಡಿರುವ ಇಸ್ಲಾಮಿಕ್ ಬಂಡುಕೋರ ಗುಂಪು ಹಯಾತ್ ತಹ್ರಿರ್ ಅಲ್-ಶಾಮ್ (ಎಚ್ಟಿಎಸ್) ಸಿರಿಯಾದಲ್ಲಿ ಈಗ "ಹೊಸ ಯುಗದ ಆರಂಭ" ವಾಗಿದೆ ಎಂದು ಘೋಷಿಸಿದೆ.
ಈ ಹಿನ್ನೆಲೆಯಲ್ಲಿ ಈಗ ಎಚ್ಟಿಎಸ್ ನಾಯಕ ಅಬು ಮೊಹಮ್ಮದ್ ಅಲ್-ಜುಲಾನಿ ಮೇಲೆ ಇಡೀ ಜಗತ್ತಿನ ಕಣ್ಣು ನೆಟ್ಟಿವೆ. ಒಂದು ಕಾಲದಲ್ಲಿ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ (ಐಸಿಸ್) ಸ್ಥಾಪಕ ಮತ್ತು ಅದರ ನಾಯಕ ಅಬು ಬಕರ್ ಅಲ್-ಬಾಗ್ದಾದಿಯೊಂದಿಗೆ ಕೆಲಸ ಮಾಡಿರುವ ಅಬು ಮೊಹಮ್ಮದ್ ಅಲ್-ಜುಲಾನಿ ನಡೆ ಏನಿರಲಿದೆ ಎಂಬುದು ಕುತೂಹಲ ಮೂಡಿಸಿದೆ.
ಅಲ್-ಖೈದಾದೊಂದಿಗೆ ಸಂಯೋಜಿತವಾಗಿರುವ ಮತ್ತು ಈ ಹಿಂದೆ ನುಸ್ರಾ ಫ್ರಂಟ್ ಎಂದು ಕರೆಯಲ್ಪಡುತ್ತಿದ್ದ ಎಚ್ಟಿಎಸ್ ನವೆಂಬರ್ 27ರಂದು ಉತ್ತರ ಸಿರಿಯಾದಲ್ಲಿ ಬೃಹತ್ ದಾಳಿಯನ್ನು ಪ್ರಾರಂಭಿಸಿ ಬಂಡುಕೋರ ಗುಂಪುಗಳನ್ನು ಮುನ್ನಡೆಸಿತು. ಅಂತಿಮವಾಗಿ, ಡಮಾಸ್ಕಸ್ಗೆ ನುಗ್ಗುವ ಮೊದಲು ಅಲೆಪ್ಪೊ, ಹಮಾದಂತಹ ಪ್ರಮುಖ ನಗರಗಳನ್ನು ಅದು ವಶಪಡಿಸಿಕೊಂಡಿದೆ.
ಸಿರಿಯಾ ಅಧ್ಯಕ್ಷ ಬಷರ್ ಅಲ್-ಅಸ್ಸಾದ್ ಎಲ್ಲಿದ್ದಾರೆ ಎಂಬ ಬಗ್ಗೆ ಹಲವಾರು ವಿರೋಧಾಭಾಸ ಸುದ್ದಿಗಳು ಬಿತ್ತರವಾಗುತ್ತಿರುವ ಮಧ್ಯೆ ಅಮೆರಿಕದಿಂದ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಲ್ಪಟ್ಟಿರುವ ಎಚ್ಟಿಎಸ್ ಸಿರಿಯಾದಲ್ಲಿ ಸೃಷ್ಟಿಸಿರುವ ಬಿಕ್ಕಟ್ಟಿನ ಬಗ್ಗೆ ಜಗತ್ತು ಸೂಕ್ಷ್ಮವಾಗಿ ಗಮನಿಸುತ್ತಿದೆ. ಏತನ್ಮಧ್ಯೆ, 'ವಿಶೇಷ ಜಾಗತಿಕ ಭಯೋತ್ಪಾದಕ' ಎಂದು ಘೋಷಿಸಲ್ಪಟ್ಟ ಅಬು ಮೊಹಮ್ಮದ್ ಅಲ್-ಜುಲಾನಿ ತಲೆಗೆ 10 ಮಿಲಿಯನ್ ಡಾಲರ್ ಬಹುಮಾನವಿರುವುದು ಗಮನಾರ್ಹ.
ಅಹ್ಮದ್ ಹುಸೇನ್ ಅಲ್-ಶರಾ ಮೂಲ ಹೆಸರಿನ ಜುಲಾನಿಯನ್ನು ಮೊಹಮ್ಮದ್ ಅಲ್-ಜವ್ಲಾನಿ ಮತ್ತು ಅಬು ಮುಹಮ್ಮದ್ ಅಲ್-ಗೊಲಾನಿ ಎಂದೂ ಕರೆಯಲಾಗುತ್ತದೆ. ಇರಾಕಿನಲ್ಲಿ ಅಲ್ ಖೈದಾ ಪರ ಕೆಲಸ ಮಾಡಿದ್ದ ಆತ ಐದು ವರ್ಷಗಳ ಕಾಲ ಅಮೆರಿಕದ ಜೈಲಿನಲ್ಲಿ ಕಳೆದಿದ್ದ.
2012ರಲ್ಲೇ ಸಿರಿಯಾದ ಅಧ್ಯಕ್ಷ ಬಷರ್ ಅಲ್-ಅಸ್ಸಾದ್ ಅವರ ಆಡಳಿತವನ್ನು ಕಿತ್ತೊಗೆಯುವುದಾಗಿ ಅಲ್-ನುಸ್ರಾ ಫ್ರಂಟ್ ಪ್ರತಿಜ್ಞೆ ಮಾಡಿದ್ದರಿಂದ ಜುಲಾನಿ ಅಲ್-ಖೈದಾ ಮತ್ತು ಅದರ ನಾಯಕ ಅಯಮಾನ್ ಅಲ್-ಜವಾಹಿರಿಯೊಂದಿಗೆ ನಿಷ್ಠೆಯಿಂದ ಕೆಲಸ ಮಾಡಿದ್ದ.
ಸ್ಥಳೀಯ ಉಪಸ್ಥಿತಿ ಮತ್ತು ಹೋರಾಟವನ್ನು ಬೆಳೆಸುವ ಮೂಲಕ ಸಿರಿಯಾದಲ್ಲಿ ಅಲ್-ಖೈದಾಗೆ ನೆಲೆ ಸ್ಥಾಪಿಸಲು ಬಾಗ್ದಾದಿ ಜುಲಾನಿಗೆ ಸೂಚನೆ ನೀಡಿದ್ದ. ಇರಾಕ್ನಲ್ಲಿರುವ ಅಲ್-ಖೈದಾ ನುಸ್ರಾ ಫ್ರಂಟ್ಗೆ ಮಾನವಶಕ್ತಿ, ಹಣ, ಶಸ್ತ್ರಾಸ್ತ್ರಗಳು ಮತ್ತು ಸಲಹೆಗಳನ್ನು ಒದಗಿಸಿತ್ತು. ಮೇ 2013 ರಲ್ಲಿ, ಜುಲಾನಿಯನ್ನು ಯುಎಸ್ ಸ್ಟೇಟ್ ಡಿಪಾರ್ಟ್ ಮೆಂಟ್ 'ವಿಶೇಷ ನಿಯೋಜಿತ ಜಾಗತಿಕ ಭಯೋತ್ಪಾದಕ' ಎಂದು ಹೆಸರಿಸಿದೆ.
ಅಲ್ ನುಸ್ರಾ ಫ್ರಂಟ್ (ಎಎನ್ಎಫ್) ನಾಯಕತ್ವದ ಬಗ್ಗೆ ಎಫ್ಬಿಐ ಮಾಹಿತಿಗಳನ್ನು ಕಲೆ ಹಾಕುತ್ತಿದೆ ಮತ್ತು ಯುಎಸ್ ಡಿಪಾರ್ಟ್ ಮೆಂಟ್ ಆಫ್ ಸ್ಟೇಟ್ನ ರಿವಾರ್ಡ್ಸ್ ಫಾರ್ ಜಸ್ಟೀಸ್ ವಿಭಾಗವು ಜುಲಾನಿಯನ್ನು ಗುರುತಿಸುವ ಅಥವಾ ಆತನಿರುವ ಸ್ಥಳದ ಮಾಹಿತಿ ನೀಡಿದವರಿಗೆ 10 ಮಿಲಿಯನ್ ಡಾಲರ್ ಬಹುಮಾನ ಘೋಷಿಸಿದೆ.
ಜುಲೈ 24, 2013 ರಂದು, ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಐಎಸ್ಐಎಲ್ (Da'esh- ದಾಯಿಶ್) ಮತ್ತು ಅಲ್-ಖೈದಾ ನಿರ್ಬಂಧಗಳ ಸಮಿತಿಯು ಜುಲಾನಿಯನ್ನು ತನ್ನ ನಿರ್ಬಂಧಿತ ಭಯೋತ್ಪಾದಕರ ಪಟ್ಟಿಯಲ್ಲಿ ಸೇರಿಸಿತು. ಇದರಿಂದಾಗಿ ಆತನನ್ನು ಅಂತರರಾಷ್ಟ್ರೀಯ ಆಸ್ತಿ ಮುಟ್ಟುಗೋಲು, ಪ್ರಯಾಣ ನಿಷೇಧ ಮತ್ತು ಶಸ್ತ್ರಾಸ್ತ್ರ ನಿರ್ಬಂಧಕ್ಕೆ ಒಳಪಡಿಸಲಾಯಿತು.
ಸಿರಿಯಾದಲ್ಲಿ ಅಲ್-ಖೈದಾದ ಅಂಗಸಂಸ್ಥೆಯಾದ ಎಎನ್ಎಫ್ ತನ್ನ ಹೆಸರನ್ನು ಜಬತ್ ಫಾತ್ ಅಲ್ ಶಾಮ್ (ಲೆವಾಂಟ್ ಫ್ರಂಟ್ನ ವಿಜಯ) ಎಂದು ಬದಲಾಯಿಸಲಾಗಿದೆ ಎಂದು ಜುಲೈ 2016 ರಲ್ಲಿ ಘೋಷಿಸಿದ್ದ ಜುಲಾನಿ ಆನ್ ಲೈನ್ ವೀಡಿಯೊದಲ್ಲಿ ಅಲ್-ಖೈದಾ ಮತ್ತು ಜವಾಹಿರಿಯನ್ನು ಶ್ಲಾಘಿಸಿದ್ದ. ತದನಂತರ ಅದರ ಮುಂದಿನ ವರ್ಷ ಅದೇ ರೀತಿಯ ಹಲವಾರು ಬಂಡುಕೋರ ಗುಂಪುಗಳನ್ನು ಸೇರಿಸಿ ಹಯಾತ್ ತಹ್ರಿರ್ ಅಲ್-ಶಾಮ್ (ಎಚ್ಟಿಎಸ್) ಸಂಘಟನೆಯನ್ನು ರಚಿಸಲಾಯಿತು.
ಸಿರಿಯಾದ ಇದ್ಲಿಬ್ನಲ್ಲಿ 'ಸಾಲ್ವೇಶನ್ ಗವರ್ನಮೆಂಟ್' ರಚನೆ, ಕೋವಿಡ್ -19 ಸಾಂಕ್ರಾಮಿಕ ರೋಗ ಮತ್ತು ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ಎಚ್ಟಿಎಸ್ ಈ ಪ್ರದೇಶದಲ್ಲಿ ತನ್ನ ಶಕ್ತಿ ಮತ್ತು ನಿಯಂತ್ರಣವನ್ನು ಕಾಪಾಡಿಕೊಳ್ಳಲು ಸಾಧ್ಯವಾಯಿತು ಎಂದು ವರದಿಯೊಂದು ಹೇಳಿದೆ.
"ಜಬತ್ ಅಲ್-ನುಸ್ರಾ 2017 ರಲ್ಲಿ ಅಲ್-ಖೈದಾದೊಂದಿಗಿನ ಸಂಬಂಧವನ್ನು ಕಡಿದುಕೊಂಡಾಗಿನಿಂದ, ಅಬು ಮುಹಮ್ಮದ್ ಅಲ್-ಜುಲಾನಿ ತನ್ನ ಸಂಘಟನೆಯ ಮೂಲ ಸಿದ್ಧಾಂತವನ್ನು ಮಾರ್ಪಡಿಸಿ, 'ವಿಧಾನದಲ್ಲಿ ಜಿಹಾದಿಸಂ ಮತ್ತು ಭೌಗೋಳಿಕತೆಯಲ್ಲಿ ರಾಷ್ಟ್ರೀಯತೆ' ಆಧಾರದ ಮೇಲೆ ಹೊಸ ವಿಧಾನವೊಂದನ್ನು ಮುಂದಿಟ್ಟಿದ್ದಾನೆ.
ಏತನ್ಮಧ್ಯೆ, ದಶಕಗಳಷ್ಟು ಹಳೆಯದಾದ ಬಷರ್ ಅಲ್-ಅಸ್ಸಾದ್ ಆಡಳಿತದ ಪತನದ ಸಂಭ್ರಮಾಚರಣೆ ಮಾಡುತ್ತಿರುವವರು ಒಂದು ರೀತಿಯಲ್ಲಿ ಐಸಿಸ್ ಮತ್ತು ಅಲ್-ಖೈದಾ ಭಯೋತ್ಪಾದಕರನ್ನು ಬೆಂಬಲಿಸುತ್ತಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇದನ್ನೂ ಓದಿ : ಸಿರಿಯಾದಲ್ಲಿ ಅಸ್ಸಾದ್ ಆಡಳಿತ ಪತನ: ಗೋಲನ್ ಹೈಟ್ಸ್ನಲ್ಲಿ ಹೆಚ್ಚುವರಿ ಯೋಧರನ್ನು ನಿಯೋಜಿಸಿದ ಇಸ್ರೇಲ್