ನ್ಯೂಯಾರ್ಕ್: ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮುಂದಿನ ತಿಂಗಳು ನಡೆಯಲಿರುವ ತಮ್ಮ ಪದಗ್ರಹಣ ಸಮಾರಂಭಕ್ಕೆ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರನ್ನು ಆಹ್ವಾನಿಸಿ ಅಚ್ಚರಿ ಮೂಡಿಸಿದ್ದಾರೆ. ಜಿನ್ ಪಿಂಗ್ ಅವರಿಗೆ ಆಹ್ವಾನ ನೀಡಿರುವುದನ್ನು ಟ್ರಂಪ್ ಅವರ ವಕ್ತಾರೆ ಕರೋಲಿನ್ ಲೀವಿಟ್ ಗುರುವಾರ ದೃಢಪಡಿಸಿದ್ದಾರೆ.
ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಭೇಟಿಯಾಗಿದ್ದ ಟ್ರಂಪ್: ಪ್ರಚಾರದ ಸಮಯದಲ್ಲಿ ಮತ್ತು ನಂತರ ಜಿನ್ ಪಿಂಗ್ ಅವರನ್ನು ಟೀಕೆ ಮಾಡುತ್ತಿದ್ದರೂ ಅವರನ್ನು ಪದಗ್ರಹಣ ಸಮಾರಂಭಕ್ಕೆ ಆಹ್ವಾನಿಸಿರುವುದು ಟ್ರಂಪ್ ಅವರ ಅಸಾಂಪ್ರದಾಯಿಕ ರಾಜತಾಂತ್ರಿಕತೆಗೆ ಅನುಗುಣವಾಗಿದೆ. ಹಿಂದಿನ ಅವಧಿಯಲ್ಲಿ ಟ್ರಂಪ್ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರನ್ನು ಭೇಟಿಯಾಗಿ ಅಸಾಂಪ್ರದಾಯಿಕ ರಾಜತಾಂತ್ರಿಕತೆಗೆ ನಾಂದಿ ಹಾಡಿದ್ದರು.
ಕ್ಸಿ ಅವರ ಹೆಸರನ್ನು ಹೇಳದೆ ಕಳುಹಿಸಲಾಗುತ್ತಿರುವ ಆಹ್ವಾನಗಳ ಬಗ್ಗೆ ಟ್ರಂಪ್ ಮಾತನಾಡಿದ್ದು, "ಆಹ್ವಾನ ಕಳುಹಿಸಿರುವುದಕ್ಕೆ ಕೆಲವರು 'ವಾಹ್, ಆದರೆ ಅದು ಸ್ವಲ್ಪ ಅಪಾಯಕಾರಿ ಅಲ್ಲವೇ' ಎಂದು ಹೇಳಿದರು. ಅದಕ್ಕೆ ನಾನು, 'ಇರಬಹುದು. ಏನಾಗುತ್ತದೆ ಎಂದು ನೋಡೋಣ'. ಆದರೆ ನಾವು ಸಣ್ಣ ಪ್ರಮಾಣದ ರಿಸ್ಕ್ ತೆಗೆದುಕೊಳ್ಳಲು ಇಷ್ಟಪಡುತ್ತೇವೆ" ಎಂದು ಹೇಳಿದ್ದಾಗಿ ತಿಳಿಸಿದ್ದಾರೆ.
ಫಾಕ್ಸ್ ನ್ಯೂಸ್ಗೆ ನೀಡಿದ ಸಂದರ್ಶನದಲ್ಲಿ ಲೀವಿಟ್, "ಅಧ್ಯಕ್ಷ ಟ್ರಂಪ್ ಮಿತ್ರರಾಷ್ಟ್ರಗಳು ಮಾತ್ರವಲ್ಲದೆ ನಮ್ಮ ವಿರೋಧಿಗಳು ಮತ್ತು ನಮ್ಮ ಪ್ರತಿಸ್ಪರ್ಧಿಗಳೂ ಆಗಿರುವ ದೇಶಗಳ ನಾಯಕರೊಂದಿಗೆ ಮುಕ್ತ ಸಂವಾದ ನಡೆಸುವುದಕ್ಕೆ ಇದೊಂದು ಉದಾಹರಣೆಯಾಗಿದೆ" ಎಂದು ಹೇಳಿದರು.
"ಅವರು ತಮ್ಮ ಮೊದಲ ಅವಧಿಯಲ್ಲಿ ಇದೇ ರೀತಿ ಮಾಡಿದ್ದರು ಮತ್ತು ಅದಕ್ಕಾಗಿ ಅವರ ವಿರುದ್ಧ ಸಾಕಷ್ಟು ಟೀಕೆಗಳು ಕೇಳಿ ಬಂದವು. ಆದರೆ ಇದು ವಿಶ್ವದಾದ್ಯಂತ ಶಾಂತಿ ಮೂಡಲು ಕಾರಣವಾಯಿತು. ಟ್ರಂಪ್ ಯಾರ ಜೊತೆಗೆ ಬೇಕಾದರೂ ಮಾತನಾಡಲು ಸಿದ್ಧರಿದ್ದಾರೆ. ಅವರು ಯಾವಾಗಲೂ ಅಮೆರಿಕದ ಹಿತಾಸಕ್ತಿಗೆ ಮೊದಲ ಆದ್ಯತೆ ನೀಡುತ್ತಾರೆ" ಎಂದು ಅವರು ತಿಳಿಸಿದರು. ಆದರೆ ಗುರುವಾರ ರಾತ್ರಿಯವರೆಗೂ ಬೀಜಿಂಗ್ ಟ್ರಂಪ್ ಅವರ ಆಹ್ವಾನಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಚೀನಾ ಲೂಟಿಕೋರ ವ್ಯಾಪಾರ ಕ್ರಮಗಳನ್ನು ಅನುಸರಿಸುತ್ತಿದೆ ಮತ್ತು ಸಾವಿರಾರು ಅಮೆರಿಕನ್ನರ ಸಾವಿಗೆ ಕಾರಣವಾದ ಮಾದಕವಸ್ತು ಜಾಲದಲ್ಲಿ ಅದರ ಪಾತ್ರವಿದೆ ಎಂದು ಅಧ್ಯಕ್ಷೀಯ ಚುನಾವಣೆಯ ಪ್ರಚಾರದ ಸಮಯದಲ್ಲಿ ಮತ್ತು ತಾವು ಆಯ್ಕೆಯಾದ ನಂತರ ಟ್ರಂಪ್ ಟೀಕಿಸಿದ್ದರು. ಸಂಶ್ಲೇಷಿತ ಮಾದಕವಸ್ತುಗಳನ್ನು ತಯಾರಿಸಲು ಬಳಸುವ ವಸ್ತುಗಳ ರಫ್ತನ್ನು ನಿಲ್ಲಿಸದಿದ್ದರೆ ಚೀನಾದ ಆಮದಿನ ಮೇಲೆ ಸುಂಕವನ್ನು ಹೆಚ್ಚಿಸುವುದಾಗಿ ಕೂಡ ಅವರು ಬೆದರಿಕೆ ಹಾಕಿದ್ದಾರೆ.
ವಿಶ್ವ ವ್ಯಾಪಾರ ಸಂಸ್ಥೆಯಲ್ಲಿ ಚೀನಾ "ಅಭಿವೃದ್ಧಿಶೀಲ ದೇಶ" ಸ್ಥಾನಮಾನವನ್ನು ಮುಂದುವರಿಸಿಕೊಂಡು ಅನುಕೂಲಕರ ರಫ್ತು ಸ್ಥಾನಮಾನ ಪಡೆಯುವುದನ್ನು ಮುಂದುವರಿಸಿದೆ ಎಂದು ಅವರು ದೂರಿದ್ದಾರೆ.
ಇದನ್ನೂ ಓದಿ : ಗಾಜಾದಲ್ಲಿ ಕದನ ವಿರಾಮಕ್ಕೆ ಕರೆ: ವಿಶ್ವಸಂಸ್ಥೆಯಲ್ಲಿ ನಿರ್ಣಯದ ಪರ ಭಾರತ ಮತ - UNGA RESOLUTION