ನ್ಯೂಯಾರ್ಕ್: ಅಮೆರಿಕದಲ್ಲಿ ಖಲಿಸ್ತಾನಿ ನಾಯಕನನ್ನು ಕೊಲ್ಲುವ ಸಂಚಿನಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ಭಾರತೀಯ ಉದ್ಯಮಿ ನಿಖಿಲ್ ಗುಪ್ತಾ ಸೋಮವಾರ ಇಲ್ಲಿನ ಫೆಡರಲ್ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಈ ವೇಳೆ ತಮ್ಮ ವಕೀಲರ ಮೂಲಕ ತಾನು ನಿರ್ದೋಷಿ ಎಂದು ನಿಖಿಲ್ ಮನವಿ ಹೇಳಿಕೊಂಡಿದ್ದಾರೆ.
ಕಲಿಸ್ತಾನಿ ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್ ಪನ್ನೂ ಅವರ ಹತ್ಯೆಯ ಸಂಚಿನಲ್ಲಿ ಈತ ಭಾಗಿಯಾಗಿದ್ದ ಎನ್ನುವ ಆರೋಪಗಳಿವೆ. ವಿಚಾರಣೆ ನಡೆಸಿದ ಸದರ್ನ್ ನ್ಯೂಯಾರ್ಕ್‌ನ ಫೆಡರಲ್ ನ್ಯಾಯಾಲಯದ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶ ಜೇಮ್ಸ್ ಕೋಟ್ ಅವರು, ಜೂನ್ 28ಕ್ಕೆ ವಿಚಾರಣೆಯನ್ನು ಮುಂದೂಡಿ, ಗುಪ್ತಾನನ್ನು ಕಸ್ಟಡಿಯಲ್ಲಿರಿಸುವಂತೆ ಆದೇಶಿಸಿದರು.
ಆದರೆ, ಈ ವೇಳೆ ಗುಪ್ತಾ ಪರ ವಕೀಲ ಜೆಫ್ರಿ ಚಾಬ್ರೋವ್ ಅವರು ಜಾಮೀನಿಗೆ ಯಾವುದೇ ಅರ್ಜಿ ಸಲ್ಲಿಸಲಿಲ್ಲ. ನ್ಯಾಯಾಲಯದ ಹೊರಗೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಚಾರ್ಬ್ರೋವ್, "ಇದು ಭಾರತ ಮತ್ತು ಯುಎಸ್ಗೆ 'ಸಂಕೀರ್ಣ ವಿಷಯ' ಮತ್ತು ತೀರ್ಪಿಗಾಗಿ ಯಾವುದೇ ಆತುರ ಇಲ್ಲ" ಎಂದು ಹೇಳಿದರು.
"ಗುಪ್ತಾ ಅವರು ಸಸ್ಯಾಹಾರಿ ಆಗಿರುವ ಕಾರಣ ಅವರಿಗೆ ಸರಿಯಾಗಿ ಆಹಾರ ತಿನ್ನಲು ಸಾಧ್ಯವಾಗುತ್ತಿಲ್ಲ ಮತ್ತು ಸೂಕ್ತ ಆಹಾರ ಕೂಡ ಲಭ್ಯವಿಲ್ಲ. ಜೊತೆಗೆ ಅವರಿಗೆ ಪ್ರಾರ್ಥನೆ ಮಾಡಲು ಸೌಲಭ್ಯಗಳ ಅಗತ್ಯವಿದೆ" ಎಂದು ಅವರು ಮ್ಯಾಜಿಸ್ಟ್ರೇಟ್‌ಗೆ ತಿಳಿಸಿದರು.
ಅಮೆರಿಕದ ಮನವಿ ಮೇರೆಗೆ ಕಳೆದ ವರ್ಷ ಜೆಕ್ ಗಣರಾಜ್ಯದಲ್ಲಿ ನಿಖಿಲ್ ಗುಪ್ತಾ ಅವರನ್ನು ಬಂಧಿಸಲಾಗಿತ್ತು. ತಮ್ಮನ್ನು ಅಮೆರಿಕಕ್ಕೆ ಹಸ್ತಾಂತರ ಮಾಡಬಾರದು ಎಂದು ಮನವಿ ಮಾಡಿ ಜೆಕ್ ಕೋರ್ಟ್ಗೆ ಮನವಿ ಮಾಡಿದ್ದರು. ಆದರೆ, ಕಳೆದ ತಿಂಗಳು ಜೆಕ್ ಕೋರ್ಟ್ ನಿಖಿಲ್ ಗುಪ್ತಾ ಅವರು ಸಲ್ಲಿಸಿದ್ದ ಹಸ್ತಾಂತರ ವಿರುದ್ಧದ ಆಕ್ಷೇಪಣಾ ಅರ್ಜಿಯನ್ನು ವಜಾ ಮಾಡಿತ್ತು. ಈ ಹಿನ್ನೆಲೆ ನಿನ್ನೆ ಭಾರತೀಯ ಪ್ರಜೆ ನಿಖಿಲ್ ಗುಪ್ತಾನನ್ನು ಜೆಕ್ ಗಣರಾಜ್ಯ ಅಮೆರಿಕಕ್ಕೆ ಹಸ್ತಾಂತರ ಮಾಡಿತ್ತು.
ಇದನ್ನೂ ಓದಿ: ಸಿಖ್ ಉಗ್ರ ಹತ್ಯೆ ಸಂಚು ಕೇಸ್: ಆರೋಪಿ ನಿಖಿಲ್ ಗುಪ್ತಾ ಅಮೆರಿಕಕ್ಕೆ ಹಸ್ತಾಂತರ ಸಾಧ್ಯತೆ - nikhil gupta extradition