ಕೊಲಂಬೊ : ಶ್ರೀಲಂಕಾದ ಅಧ್ಯಕ್ಷೀಯ ಚುನಾವಣಾ ದಿನಾಂಕವನ್ನು ಚುನಾವಣಾ ಆಯೋಗ ಘೋಷಿಸಿದ ಕೆಲವೇ ಗಂಟೆಗಳ ನಂತರ, ಹಾಲಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ತಾವು ಈ ಬಾರಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಶುಕ್ರವಾರ ಘೋಷಿಸಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಅವರ ಉಮೇದುವಾರಿಕೆಗಾಗಿ ಅವರ ವಕೀಲರು ಚುನಾವಣಾ ಆಯುಕ್ತರ ಮುಂದೆ ಹಣಕಾಸು ಬಾಂಡ್ ಅನ್ನು ಸಲ್ಲಿಸಿದರು.
ಸೆಪ್ಟೆಂಬರ್ 21 ರಂದು ಶ್ರೀಲಂಕಾದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯುವುದಾಗಿ ಘೋಷಿಸಿದ ಚುನಾವಣಾ ಆಯೋಗವು, ಆಗಸ್ಟ್ 14 ರವರೆಗೆ ಉಮೇದುವಾರಿಕೆಗಾಗಿ ಬಾಂಡ್ ಸಲ್ಲಿಸುವಂತೆ ಅಭ್ಯರ್ಥಿಗಳಿಗೆ ಸೂಚಿಸಿದೆ. ಮಾನ್ಯತೆ ಪಡೆದ ರಾಜಕೀಯ ಪಕ್ಷದ ಅಭ್ಯರ್ಥಿ 50,000 ಶ್ರೀಲಂಕಾ ರೂಪಾಯಿಗಳನ್ನು ಮತ್ತು ಮತದಾರನಿಂದ ನಾಮ ನಿರ್ದೇಶನಗೊಂಡ ಅಭ್ಯರ್ಥಿಯು 75,000 ಶ್ರೀಲಂಕಾ ರೂಪಾಯಿಗಳನ್ನು ಠೇವಣಿ ಇಡಬೇಕು ಎಂದು ಚುನಾವಣಾ ಆಯೋಗ ತಿಳಿಸಿದೆ.
ವಿಕ್ರಮಸಿಂಘೆ ಅವರು ಜುಲೈ 2022 ರಲ್ಲಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಇವರ ಅಧಿಕಾರಾವಧಿ ನವೆಂಬರ್ 17ಕ್ಕೆ ಕೊನೆಗೊಳ್ಳಲಿದೆ. ಶ್ರೀಲಂಕಾದಲ್ಲಿ ಎದುರಾದ ತೀವ್ರ ಆರ್ಥಿಕ ಬಿಕ್ಕಟ್ಟಿನ ನಂತರ ಇವರಿಗೂ ಮುನ್ನ ಅಧ್ಯಕ್ಷರಾಗಿದ್ದ ಗೋಟಬಯ ರಾಜಪಕ್ಸೆ ದೇಶದಿಂದ ಪಲಾಯನ ಮಾಡಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಹಾಲಿ ಅಧ್ಯಕ್ಷರ ಅಧಿಕಾರಾವಧಿ ಮುಗಿದ ಒಂದು ತಿಂಗಳೊಳಗೆ ಮತ್ತು ಅಧಿಕಾರಾವಧಿ ಮುಗಿಯುವ ಎರಡು ತಿಂಗಳೊಳಗೆ ಅಧ್ಯಕ್ಷೀಯ ಚುನಾವಣೆಗಳನ್ನು ನಡೆಸಬೇಕೆಂದು ಚುನಾವಣಾ ಆಯೋಗವು ಗೆಜೆಟ್ ಅಧಿಸೂಚನೆಯನ್ನು ಪ್ರಕಟಿಸಿದೆ.
ರಾಜಪಕ್ಸೆಯವರ ಪಕ್ಷವಾದ ಶ್ರೀಲಂಕಾ ಪೊಡುಜನ ಪೆರಮುನಾ (ಎಸ್ಎಲ್ಪಿಪಿ) ಹೊಂದಿರುವ ಬಹುಮತದ ಮೇರೆಗೆ ವಿಕ್ರಮಸಿಂಘೆ ದೇಶದ ಅಧ್ಯಕ್ಷರಾಗಿದ್ದಾರೆ. ಆದರೆ ಸದ್ಯ ಹಲವಾರು ಬಣಗಳಾಗಿ ಒಡೆದು ಹೋಗಿರುವ ಎಸ್ಎಲ್ಪಿಪಿ, ವಿಕ್ರಮಸಿಂಘೆ ಅವರನ್ನು ಬೆಂಬಲಿಸಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಿಲ್ಲ.
ಕ್ಯಾಬಿನೆಟ್ ಖಾತೆಗಳನ್ನು ಹೊಂದಿರುವ ಕೆಲ ಸಚಿವರ ಗುಂಪು ವಿಕ್ರಮಸಿಂಘೆ ಅವರನ್ನು ಸಾಮಾನ್ಯ ಅಭ್ಯರ್ಥಿಯಾಗಿ ಬೆಂಬಲಿಸಬೇಕೆಂದು ಒತ್ತಾಯಿಸುತ್ತಿದ್ದರೆ, ರಾಜಪಕ್ಸೆ ರಾಜವಂಶದ ಉತ್ತರಾಧಿಕಾರಿ, ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅವರ ಹಿರಿಯ ಪುತ್ರ ನಮಲ್ ರಾಜಪಕ್ಸೆ ಅವರು ವಿಕ್ರಮಸಿಂಘೆ ತಮ್ಮ ತಂದೆಯ ಪಕ್ಷವನ್ನು ವಿಭಜಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಎಸ್ಎಲ್ಪಿಪಿ ಸೋಮವಾರ ತನ್ನ ನಿರ್ಧಾರವನ್ನು ಪ್ರಕಟಿಸುವ ಸಾಧ್ಯತೆಯಿದೆ.
ಚೀನಾ ಪರವಾಗಿರುವ ರಾಜಪಕ್ಸೆ ಕುಟುಂಬದವರು ಬೀಜಿಂಗ್ನೊಂದಿಗೆ ನಿಕಟವಾಗಿ ಆಡಳಿತ ನಡೆಸುತ್ತಿದ್ದರು. ಚೀನಾ ನೀಡಿದ ಸಾಲಗಳಿಂದ ಅವರು ದೇಶದಲ್ಲಿ ಕೆಲ ಮಲ್ಟಿ- ಮಿಲಿಯನ್ ಡಾಲರ್ ವೆಚ್ಚದ ನಿಷ್ಪ್ರಯೋಜಕ ಯೋಜನೆಗಳನ್ನು ಜಾರಿ ಮಾಡಿದ್ದರು. ಆದರೆ, ಇದಕ್ಕೆ ವ್ಯತಿರಿಕ್ತವಾಗಿ ವಿಕ್ರಮಸಿಂಘೆ ನೆರವಿಗಾಗಿ ನೆರೆಯ ಭಾರತ ಮತ್ತು ಜಪಾನ್ ದೇಶಗಳನ್ನು ಆಶ್ರಯಿಸಿದ್ದಾರೆ.
ಆಹಾರ, ಇಂಧನ ಮತ್ತು ಔಷಧಗಳಂತಹ ಯಾವುದೇ ಅಗತ್ಯ ವಸ್ತುಗಳಿಲ್ಲದೇ ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿದ್ದ ಶ್ರೀಲಂಕಾದ ರಕ್ಷಣೆಗೆ ಭಾರತವು 4 ಬಿಲಿಯನ್ ಡಾಲರ್ಗಿಂತ ಹೆಚ್ಚಿನ ಹಣಕಾಸು ನೆರವು ಒದಗಿಸಿತ್ತು. ಹಾಗೆಯೇ ಜಪಾನ್ ಕೂಡ ರಾಜಪಕ್ಸೆ ಆಡಳಿತದಲ್ಲಿ ಸ್ಥಗಿತಗೊಂಡ ಕೆಲ ಪ್ರಮುಖ ಧನಸಹಾಯ ಯೋಜನೆಗಳನ್ನು ಪ್ರಾರಂಭಿಸಿದೆ.