ಥಿಂಪು(ಭೂತಾನ್): ಎರಡು ದಿನಗಳ ಪ್ರವಾಸದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಭೂತಾನ್‌ಗೆ ಆಗಮಿಸಿದರು. ಬೆಳಗ್ಗೆ 9 ಗಂಟೆಗೆ ರಾಜಧಾನಿ ಥಿಂಪುವಿನಲ್ಲಿ ಪಾರೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ತ್ಶೆರಿಂಗ್ ಟೋಬ್ಗೆ ಅವರು ಮೋದಿ ಅವರನ್ನು ಸ್ವಾಗತಿಸಿದರು. ಬಳಿಕ ಭೂತಾನ್ ರಕ್ಷಣಾ ಪಡೆಗಳಿಂದ ಮೋದಿ ಗೌರವ ವಂದನೆ ಸ್ವೀಕರಿಸಿದರು. ಹೊಸ ಸರ್ಕಾರ ರಚನೆಯಾದ ನಂತರ ಮೋದಿ ಮೊದಲ ಬಾರಿಗೆ ಭೂತಾನ್‌ಗೆ ಭೇಟಿ ನೀಡಿದ್ದಾರೆ.
ಭಾರತ-ಭೂತಾನ್ ಸಹಭಾಗಿತ್ವ ಬಲಪಡಿಸುವ ಉದ್ದೇಶದಿಂದ ಈ ಭೇಟಿಯ ಸಮಯದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಾಗಿ ಮೋದಿ ಈ ಹಿಂದೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು. ಭೂತಾನ್‌ನ ನಾಲ್ಕನೇ ದೊರೆ ಡ್ರುಕ್ ಗ್ಯಾಲ್ಪೊ ಅವರು ಪ್ರಧಾನಿ ತ್ಶೆರಿಂಗ್ ಟೋಬ್ಗೆ ಅವರೊಂದಿಗೆ ಮಾತುಕತೆ ನಡೆಸಲು ಎದುರು ನೋಡುತ್ತಿರುವುದಾಗಿ ಹೇಳಿದರು. ಆದರೆ, ಭೂತಾನ್‌ನಲ್ಲಿ ಪ್ರತಿಕೂಲ ಹವಾಮಾನದಿಂದಾಗಿ ಗುರುವಾರ ತೆರಳಬೇಕಿದ್ದ ಪ್ರಧಾನಿ ಪ್ರವಾಸವನ್ನು ಮುಂದೂಡಲಾಯಿತು. ಈ ಭೇಟಿಯ ಉದ್ದೇಶ 'ನೆರೆಹೊರೆಯ ಮೊದಲ ನೀತಿ' ಕುರಿತು ಭಾರತದ ನಿಲುವನ್ನು ಪುನರುಚ್ಚರಿಸುವುದಾಗಿದೆ.
ಭೂತಾನ್ ಪ್ರಧಾನಿ ತ್ಶೆರಿಂಗ್ ಟೋಬ್ಗೆ ಇತ್ತೀಚೆಗೆ ದೆಹಲಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಮೋದಿ ಅವರನ್ನು ಭೇಟಿಯಾಗಿ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ಬಗ್ಗೆ ವ್ಯಾಪಕ ಚರ್ಚೆ ನಡೆಸಿದ್ದರು. ಟೋಬ್ಗೆ ಅವರೊಂದಿಗಿನ ಮಾತುಕತೆ ಫಲಪ್ರದವಾಗಿದೆ ಎಂದು ಮೋದಿ ಎಕ್ಸ್‌ನಲ್ಲಿ ಬಹಿರಂಗಪಡಿಸಿದ್ದರು.
ಮೋದಿ-ಟೋಬ್ಗೆ ಭೇಟಿಯ ಎರಡು ದಿನಗಳ ನಂತರ, ಶನಿವಾರ ಬಿಡುಗಡೆ ಮಾಡಿದ ಜಂಟಿ ಹೇಳಿಕೆಯಲ್ಲಿ, ಸೌರ, ಪವನ ಶಕ್ತಿ ಮತ್ತು ಗ್ರೀನ್ ಹೈಡ್ರೋಜನ್ ಕ್ಷೇತ್ರಗಳಲ್ಲಿ ಭಾರತ ಮತ್ತು ಭೂತಾನ್ ನಡುವೆ ಪಾಲುದಾರಿಕೆ ಹೆಚ್ಚಿಸಲು ಎರಡೂ ದೇಶಗಳ ಪ್ರಧಾನ ಮಂತ್ರಿಗಳು ಒಪ್ಪಿಕೊಂಡಿದ್ದೇವೆ ಎಂದು ಹೇಳಿದರು. ಭೂತಾನ್ ಅನ್ನು ಹೆಚ್ಚು ಆದಾಯದ ದೇಶವನ್ನಾಗಿ ಮಾಡಲು ಭಾರತ ಬದ್ಧವಾಗಿದೆ. ಭೂತಾನ್‌ನ 12 ನೇ ಪಂಚವಾರ್ಷಿಕ ಯೋಜನೆಗೆ ಭಾರತವು 5000 ಕೋಟಿ ರೂಪಾಯಿಗಳ ಸಹಾಯ ಮಾಡಿದಕ್ಕೆ ಟೋಬ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.
ಈ ನಿಧಿ ಕೃಷಿ, ಆರೋಗ್ಯ, ಶಿಕ್ಷಣ, ಕೌಶಲ್ಯ ಕ್ಷೇತ್ರಗಳು ಮತ್ತು ಮೂಲಸೌಕರ್ಯ ಸೃಷ್ಟಿಗೆ ಬೆಂಬಲ ನೀಡಲಿವೆ ಎಂದು ಟೋಬ್ಗೆ ತಿಳಿಸಿದ್ದಾರೆ. ಉಭಯ ದೇಶಗಳ ನಡುವೆ ರೈಲು ಮಾರ್ಗಗಳ ನಿರ್ಮಾಣದಲ್ಲಿನ ಬೆಳವಣಿಗೆಯನ್ನು ಪ್ರಧಾನಿ ಸ್ವಾಗತಿಸಿದರು ಎಂದು ಹೇಳಲಾಗಿದೆ. 1020 ಮೆಗಾವ್ಯಾಟ್ ಸಾಮರ್ಥ್ಯದ ಜಲವಿದ್ಯುತ್ ಯೋಜನೆ ‘ಪುನತ್‌ಶಾಂಗ್ಚು-2’ಗೆ ಎರಡೂ ದೇಶಗಳು ತೃಪ್ತಿ ವ್ಯಕ್ತಪಡಿಸಿವೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ: ಇಸ್ರೋದ 'ಪುಷ್ಪಕ್' ವಿಮಾನ ಲ್ಯಾಂಡಿಂಗ್ ಯಶಸ್ವಿ; ಚಳ್ಳಕೆರೆಯಲ್ಲಿ ಪ್ರಯೋಗ - Pushpak