ಬಲೂಚಿಸ್ತಾನ್, ಪಾಕಿಸ್ತಾನ: ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಭಯಾನಕ ಭಯೋತ್ಪಾದಕ ದಾಳಿ ನಡೆದಿದ್ದು, ಈ ಘಟನೆಯಲ್ಲಿ ಸುಮಾರು 70ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎಂದು ಅಲ್ಲಿನ ಮಿಲಿಟರಿ ಮತ್ತು ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ಅಲ್ ಜಜೀರಾ ವರದಿ ಮಾಡಿದೆ.
14 ಸೈನಿಕರು ಮತ್ತು ಪೊಲೀಸರು ಉಗ್ರರ ದಾಳಿಯಲ್ಲಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪಾಕ್ ಮಿಲಿಟರಿ ತಿಳಿಸಿದೆ. ಲಾಸ್ಬೆಲಾ ಜಿಲ್ಲೆಯ ಬೇಲಾ ಪಟ್ಟಣದ ಪ್ರಮುಖ ಹೆದ್ದಾರಿಯಲ್ಲಿ ವಾಹನಗಳನ್ನು ಗುರಿಯಾಗಿಸಿಕೊಂಡು ನಡೆಸಿದ ಪ್ರಮುಖ ದಾಳಿಯಲ್ಲಿ 21 ಮಂದಿಯನ್ನು ಕೊಂದು ಹಾಕಲಾಗಿದೆ. ಘಟನೆಯಲ್ಲಿ 35 ವಾಹನಗಳು ಸುಟ್ಟು ಹಾಕಲಾಗಿದೆ. ಪೊಲೀಸ್ ಪೋಸ್ಟ್ ಮತ್ತು ಹೆದ್ದಾರಿಯ ಮೇಲೆ ನಡೆದ ದಾಳಿಯಲ್ಲಿ 10 ಜನರು ಮೃತಪಟ್ಟಿದ್ದಾರೆ. ಇದರಲ್ಲಿ ಐವರು ಪೊಲೀಸರು ಸೇರಿದ್ದಾರೆ. ಕ್ವೆಟ್ಟಾದೊಂದಿಗೆ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಬೋಲನ್ ಪಟ್ಟಣದ ರೈಲು ಸೇತುವೆಯನ್ನು ಉಗ್ರರು ಸ್ಫೋಟಿಸಿದ ಬಳಿಕ ಪಾಕಿಸ್ತಾನದ ಉಳಿದ ಭಾಗಗಳಿಗೆ ಮತ್ತು ನೆರೆಯ ಇರಾನ್‌ಗೆ ರೈಲು ಸಂಪರ್ಕವನ್ನು ಸ್ಥಗಿತಗೊಳಿಸಲಾಗಿದೆ ಎಂದು ರೈಲ್ವೆ ಅಧಿಕಾರಿ ಮುಹಮ್ಮದ್ ಕಾಶಿಫ್ ಹೇಳಿದ್ದಾರೆ.
ರೈಲ್ವೇ ಸೇತುವೆಯ ಮೇಲೆ ನಡೆದ ದಾಳಿಯಲ್ಲಿ ಆರು ಅಪರಿಚಿತ ಶವಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಬಲೂಚಿಸ್ತಾನ್ ಪ್ರಾಂತ್ಯವು ಹಲವಾರು ಶಸ್ತ್ರಸಜ್ಜಿತ ಗುಂಪುಗಳನ್ನು ಹೊಂದಿದ್ದು, ಈ ಪ್ರದೇಶ ಉದ್ವಿಗ್ನತೆ ಮತ್ತು ದಂಗೆಗಳಿಂದ ಆಗಾಗ ಸದ್ದು ಮಾಡುತ್ತದೆ.
ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (BLA) ಪ್ರಾಂತ್ಯದಲ್ಲಿ ಹೆದ್ದಾರಿಗಳಿಂದ ದೂರ ಇರುವಂತೆ ಅಲ್ಲಿನ ಜನರಿಗೆ ಎಚ್ಚರಿಕೆ ನೀಡಿದ ಕೆಲ ಸಮಯದ ನಂತರ ಈ ದಾಳಿಗಳು ನಡೆದಿವೆ ಎಂದು ವರದಿಯಾಗಿದೆ.
ದಾಳಿ ಖಂಡಿಸಿದ ಪಾಕ್ ಅಧ್ಯಕ್ಷ: ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಮತ್ತು ಅಲ್ಲಿನ ಆಂತರಿಕ ವ್ಯವಹಾರಗಳ ಸಚಿವ ಮೊಹ್ಸಿನ್ ನಖ್ವಿ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಮುಸಾಖೈಲ್ ದಾಳಿಯನ್ನು "ಅನಾಗರಿಕ" ಎಂದು ಕರೆದಿದ್ದಾರೆ. ದಾಳಿಕೋರರನ್ನು ನಾವು ಬಿಡುವುದಿಲ್ಲ ಎಂದು ಅವರು ಇದೇ ವೇಳೆ ಎಚ್ಚರಿಕೆ ನೀಡಿದ್ದಾರೆ. ಬಲೂಚಿಸ್ತಾನ ಮುಖ್ಯಮಂತ್ರಿ ಸರ್ಫ್ರಾಜ್ ಬುಗ್ತಿ ಕೂಡ ದಾಳಿಕೋರರರನ್ನು ಬಂಧಿಸಿ ಶಿಕ್ಷೆಗೆ ಒಳಪಡಿಸಲಾಗುವುದು ಎಂದು ಹೇಳಿದ್ದಾರೆ.
ಇದನ್ನು ಓದಿ: ಪಾಕಿಸ್ತಾನದಲ್ಲಿ ಬಾಂಬ್ ಸ್ಫೋಟ: ನಾಲ್ವರು ಸಾವು, 10 ಮಂದಿ ಗಾಯ - Bomb Blast