ಕಠ್ಮಂಡು : ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಲ್ 'ಪ್ರಚಂಡ' ಅವರು 2022 ರ ಡಿಸೆಂಬರ್ ನಲ್ಲಿ ಮತ್ತೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ನಾಲ್ಕನೇ ಬಾರಿಗೆ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ನಲ್ಲಿ ಸೋಮವಾರ ವಿಶ್ವಾಸ ಮತ ಗೆದ್ದಿದ್ದಾರೆ.
ಸಹಕಾರಿ ಸಂಸ್ಥೆಗಳಲ್ಲಿನ ಠೇವಣಿಗಳ ದುರುಪಯೋಗದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಉಪ ಪ್ರಧಾನಿ ಮತ್ತು ಗೃಹ ವ್ಯವಹಾರಗಳ ಸಚಿವ ರಬಿ ಲಾಮಿಚಾನೆ ವಿರುದ್ಧ ತನಿಖಾ ಸಮಿತಿಯನ್ನು ರಚಿಸುವಂತೆ ಒತ್ತಾಯಿಸಿ ಪ್ರತಿಪಕ್ಷ ನೇಪಾಳಿ ಕಾಂಗ್ರೆಸ್ನ ಪ್ರತಿಭಟನೆಯ ಮಧ್ಯೆ ದಹಲ್ ವಿಶ್ವಾಸ ಮತ ಜಯಿಸಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮ ಸಂಸ್ಥೆ ವರದಿ ಮಾಡಿದೆ.
"158 ಶಾಸಕರು ವಿಶ್ವಾಸ ಮತದಲ್ಲಿ ಭಾಗವಹಿಸಿದ್ದರು, ಅದರಲ್ಲಿ 157 ಜನರು ವಿಶ್ವಾಸ ಮತದ ಪರವಾಗಿ ಮತ ಚಲಾಯಿಸಿದರು. ಇದು ಸದನದಲ್ಲಿ ಅಸ್ತಿತ್ವದಲ್ಲಿರುವ ಒಟ್ಟು ಶಾಸಕರ ಪೈಕಿ ಬಹುಮತವಾಗಿದೆ" ಎಂದು ಕೆಳಮನೆಯ ಸ್ಪೀಕರ್ ದೇವ್ ರಾಜ್ ಘಿಮಿರೆ ಘೋಷಿಸಿದರು. ಈ ಹಿಂದೆ ಲಾಮಿಚಾನೆ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸಲು ಸಂಸದೀಯ ತನಿಖಾ ಸಮಿತಿಯನ್ನು ರಚಿಸಬೇಕೆಂದು ನೇಪಾಳಿ ಕಾಂಗ್ರೆಸ್ ಒತ್ತಾಯಿಸಿದ್ದರಿಂದ ಮತದಾನ ವಿಳಂಬವಾಯಿತು.
275 ಸದಸ್ಯರ ಸದನದಲ್ಲಿ ವಿಶ್ವಾಸ ಮತ ಗೆಲ್ಲಲು 138 ಶಾಸಕರ ಬೆಂಬಲ ಸಾಕು. ಕಳೆದ ವಾರ ರಾಷ್ಟ್ರೀಯ ಜನತಾ ಪಕ್ಷ ನೇಪಾಳ ಸಮ್ಮಿಶ್ರ ಸರ್ಕಾರದಿಂದ ಹೊರಬಂದ ನಂತರ 30 ದಿನಗಳಲ್ಲಿ ವಿಶ್ವಾಸಮತದ ಮೇಲೆ ಮತದಾನ ನಡೆಯುವುದು ಅಗತ್ಯವಾಗಿತ್ತು. ನವೆಂಬರ್ 2022 ರಲ್ಲಿ ನಡೆದ ನೇಪಾಳದ ಸಾರ್ವತ್ರಿಕ ಚುನಾವಣೆ ಕೆಳಮನೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಸಿಕ್ಕಿರಲಿಲ್ಲ ಮತ್ತು ದಹಲ್ ಅದೇ ವರ್ಷದ ಡಿಸೆಂಬರ್ ನಲ್ಲಿ ಸಮ್ಮಿಶ್ರ ಸರ್ಕಾರದ ಮುಖ್ಯಸ್ಥರಾಗಿ ಮೂರನೇ ಬಾರಿಗೆ ಅಧಿಕಾರ ವಹಿಸಿಕೊಂಡಿದ್ದರು.
ಸಾಂವಿಧಾನಿಕ ನಿಬಂಧನೆಗಳ ಪ್ರಕಾರ, ಯಾವುದೇ ಒಂದು ಮಿತ್ರಪಕ್ಷವು ಆಡಳಿತಾರೂಢ ಮೈತ್ರಿಕೂಟಕ್ಕೆ ನೀಡಿದ ಬೆಂಬಲವನ್ನು ಹಿಂತೆಗೆದುಕೊಂಡ ಸಂದರ್ಭದಲ್ಲಿ ಪ್ರಧಾನಿಯು ವಿಶ್ವಾಸ ಮತ ಗೆಲ್ಲುವುದು ಕಡ್ಡಾಯವಾಗಿದೆ.
ಇದಕ್ಕೂ ಮುನ್ನ ಮಾರ್ಚ್ 13 ರಂದು ಪ್ರಧಾನಿ ದಹಲ್ ಅವರು ನೇಪಾಳಿ ಕಾಂಗ್ರೆಸ್ ಅನ್ನು ತ್ಯಜಿಸಿ ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ (ಯುನಿಫೈಡ್ ಮಾರ್ಕ್ಸಿಸ್ಟ್-ಲೆನಿನಿಸ್ಟ್) ನೊಂದಿಗೆ ಹೊಸ ಮೈತ್ರಿ ಮಾಡಿಕೊಂಡ ಕೆಲವೇ ದಿನಗಳಲ್ಲಿ ಸತತ ಮೂರನೇ ವಿಶ್ವಾಸ ಮತವನ್ನು ಜಯಿಸಿದ್ದರು. ಪ್ರಚಂಡ ಅವರು ಹಿಂದಿನ ಅಧಿಕಾರಾವಧಿಯಲ್ಲಿ ಪೂರ್ಣ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸದಿದ್ದರೂ ಮೂರನೇ ಬಾರಿಗೆ ಪ್ರಧಾನಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇದನ್ನೂ ಓದಿ : ಇರಾನ್ನ ಹಂಗಾಮಿ ಅಧ್ಯಕ್ಷರಾಗಿ ಮೊಹಮ್ಮದ್ ಮೊಖ್ಬರ್ ನೇಮಕ: ಯಾರಿವರು? ಹಿನ್ನೆಲೆ ಏನು? - Ebrahim Raisi Death