ನೈರೋಬಿ(ಕೀನ್ಯಾ): ಆಫ್ರಿಕಾ ಖಂಡದಲ್ಲಿರುವ ಕೀನ್ಯಾ ದೇಶದ ಪಶ್ಚಿಮ ಭಾಗದ ಪ್ರದೇಶದಲ್ಲಿ ಅಣೆಕಟ್ಟು ಕುಸಿದು ಕನಿಷ್ಠ 40 ಜನರು ಸಾವನ್ನಪ್ಪಿದ್ದಾರೆ. "ಅಪಾರ ಪ್ರಮಾಣದ ನೀರು ಮನೆಗಳಿಗೆ ನುಗ್ಗಿದೆ. ಹಲವು ಪ್ರದೇಶಗಳಲ್ಲಿ ಸಂಪರ್ಕ ಕಡಿತಗೊಂಡಿದೆ" ಎಂದು ಪೊಲೀಸ್ ಅಧಿಕಾರಿ ಸ್ಟೀಫನ್ ಕಿರುಯಿ ಎಂಬವರು ಅಸೋಸಿಯೇಟೆಡ್ ಪ್ರೆಸ್ ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ್ದಾರೆ.
ಗ್ರೇಟ್ ರಿಫ್ಟ್ ವ್ಯಾಲಿ ಪ್ರದೇಶದ ಮೈ ಮಹಿಯು ಪ್ರದೇಶದಲ್ಲಿರುವ ಹಳೆಯ ಕಿಜಾಬೆ ಅಣೆಕಟ್ಟು ಸೋಮವಾರ ಬೆಳಗ್ಗೆ ಕುಸಿಯಿತು. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆ ಇದೆ.
ಕೀನ್ಯಾದಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ರಣಮಳೆಯಿಂದಾಗಿ ಹಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಪ್ರವಾಹದಿಂದಾಗಿ ಇಲ್ಲಿಯವರೆಗೆ ಸುಮಾರು 100 ಜನರು ಸಾವನ್ನಪ್ಪಿದ್ದಾರೆ. ಶಾಲೆಗಳಿಗೆ ರಜೆ ನೀಡಲಾಗಿದೆ. ಮಾರ್ಚ್ ಮಧ್ಯದಿಂದ ದೇಶಾದ್ಯಂತ ಮಳೆ ಸುರಿಯುತ್ತಿದ್ದು, ಭಾರೀ ಮಳೆಯಾಗುವ ಬಗ್ಗೆ ಈಗಾಗಲೇ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕೀನ್ಯಾದ ಮುಖ್ಯ ವಿಮಾನ ನಿಲ್ದಾಣ ಶನಿವಾರ ಜಲಾವೃತಗೊಂಡಿತ್ತು. ಕೆಲವು ವಿಮಾನಗಳ ಮಾರ್ಗ ಬದಲಾಯಿಸಲಾಗಿದೆ. ಪ್ರವಾಹಕ್ಕೊಳಗಾದ ರನ್‌ವೇ, ಟರ್ಮಿನಲ್‌ಗಳು ಮತ್ತು ಕಾರ್ಗೋ ವಿಭಾಗದ ವಿಡಿಯೋಗಳು ಆನ್‌ಲೈನ್‌ನಲ್ಲಿ ವೈರಲ್ ಆಗಿವೆ.
ದೇಶದ ಅಧ್ಯಕ್ಷ ವಿಲಿಯಂ ರುಟೊ ಅವರು ಸಂತ್ರಸ್ತರು ತಾತ್ಕಾಲಿಕ ಶಿಬಿರಗಳನ್ನು ಬಳಸುವಂತೆ ಸೂಚನೆ ನೀಡಿದ್ದಾರೆ.
ಜೋರು ಮಳೆಯಿಂದಾಗಿ ಪೂರ್ವ ಆಫ್ರಿಕಾದ ಹಲವು ಪ್ರದೇಶಗಳು ಪ್ರವಾಹ ಭೀತಿ ಎದುರಿಸುತ್ತಿವೆ. ಟಾಂಜಾನಿಯಾದಲ್ಲಿ ಈಗಾಗಲೇ 155 ಜನರು ಸಾವನ್ನಪ್ಪಿದ್ದಾರೆ. ಬುರುಂಡಿಯಲ್ಲಿ 2,00,000ಕ್ಕೂ ಹೆಚ್ಚು ಜನರು ಬಾಧಿತರಾಗಿದ್ದಾರೆ.