ಖೈಬರ್ ಪಖ್ತುಂಖ್ವಾ(ಪಾಕಿಸ್ತಾನ): ಖೈಬರ್ ಪಖ್ತುಂಖ್ವಾದಲ್ಲಿ ಎರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ನಾಲ್ವರು ಭಯೋತ್ಪಾದಕರನ್ನು ಪಾಕಿಸ್ತಾನಿ ಭದ್ರತಾ ಪಡೆಗಳು ಹೊಡೆದುರುಳಿಸಿದ್ದಾರೆ ಎಂದು ಮಿಲಿಟರಿಯ ಮಾಧ್ಯಮ ವಿಭಾಗವಾದ ಇಂಟರ್ - ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ISPR) ಅನ್ನು ಉಲ್ಲೇಖಿಸಿ ಅಧಿಕೃತ ಮಾಧ್ಯಮ ಸಂಸ್ಥೆ ವರದಿ ಮಾಡಿದೆ.
ಒಂದು ದಿನದ ಹಿಂದೆ ಉತ್ತರ ವಜಿರಿಸ್ತಾನ್‌ನಲ್ಲಿ ನಡೆದ ಆತ್ಮಹತ್ಯಾ ಬಾಂಬ್ ದಾಳಿಗೆ ಪ್ರತಿಯಾಗಿ ಪಾಕಿಸ್ತಾನದ ಮಿಲಿಟರಿ ಹಾಗೂ ಪೊಲೀಸರು ಈ ಕಾರ್ಯಾಚರಣೆ ನಡೆಸಿ ಉಗ್ರರಿಗೆ ತಕ್ಕ ಪ್ರತ್ಯುತ್ತರ ನೀಡಲಾಗಿದೆ.
ಉತ್ತರ ವಜಿರಿಸ್ತಾನ್ ಜಿಲ್ಲೆಯಲ್ಲಿ ಗುಪ್ತಚರ ನೇತೃತ್ವದ ಮೊದಲ ಕಾರ್ಯಾಚರಣೆಯು ತೀವ್ರವಾದ ಗುಂಡಿನ ಚಕಮಕಿಯಲ್ಲಿ ಕೊನೆಗೊಂಡಿತು. ಈ ಕಾರ್ಯಾಚರಣೆಯಲ್ಲಿ ಖರ್ಜಿ ಇನ್ಸಾಫ್ ಉಲ್ಲಾ ಸೇರಿದಂತೆ ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ. ಬಳಿಕ ಖೈಬರ್ ಜಿಲ್ಲೆಯಲ್ಲಿ ಎರಡನೇ ಕಾರ್ಯಾಚರಣೆ ನಡೆದಿದೆ. ಇಲ್ಲಿ ಇಬ್ಬರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. ಇತರ ಮೂವರು ಗಾಯಗೊಂಡಿದ್ದಾರೆ ಎಂದು ಮಿಲಿಟರಿಯ ಮಾಧ್ಯಮ ವಿಭಾಗ ತಿಳಿಸಿದೆ.
ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ವಶಕ್ಕೆ: ಮೃತ ಭಯೋತ್ಪಾದಕರಿಂದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಉಗ್ರರು ಪಾಕಿಸ್ತಾನದ ಕಾನೂನು ಜಾರಿ ಸಂಸ್ಥೆಗಳು, ಅಮಾಯಕ ನಾಗರಿಕರ ವಿರುದ್ಧ ಹಲವಾರು ಭಯೋತ್ಪಾದಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು ಎಂದು ವರದಿ ತಿಳಿಸಿದೆ.
ಅ. 26ರಂದು ಉತ್ತರ ವಜಿರಿಸ್ತಾನ್‌ನಲ್ಲಿ ಭಯೋತ್ಪಾದಕರು ಆತ್ಮಹತ್ಯಾ ಬಾಂಬ್ ದಾಳಿ ನಡೆಸಿದ್ದರು. ಈ ಘಟನೆಯಲ್ಲಿ ನಾಲ್ವರು ಪೊಲೀಸ್ ಅಧಿಕಾರಿಗಳು ಸೇರಿದಂತೆ ಕನಿಷ್ಠ ಎಂಟು ಜನರು ಸಾವನ್ನಪ್ಪಿದ್ದರು. ಮೀರ್ ಅಲಿ ತೆಹಸಿಲ್‌ನ ಈಡಾಕ್ ಪ್ರದೇಶದಲ್ಲಿ ನಡೆದ ದಾಳಿಯು ನಿರ್ದಿಷ್ಟವಾಗಿ ಪೊಲೀಸರ ಗುಂಪನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ನಂತರ ತಕ್ಷಣವೇ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿ ಮತ್ತು ಗಾಯಾಳುಗಳನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಂದೇ ಭದ್ರತಾ ಪಡೆಗಳು ತ್ವರಿತವಾಗಿ ಘಟನಾ ಸ್ಥಳಕ್ಕೆ ಆಗಮಿಸಿ ತನಿಖೆಗಾಗಿ ಪ್ರದೇಶವನ್ನು ಸುತ್ತುವರಿದಿದ್ದವು. ಒಟ್ಟು ನಾಲ್ವರು ಉಗ್ರರನ್ನು ನಿನ್ನೆ ಹತ್ಯೆ ಮಾಡುವ ಮೂಲಕ ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ.
ಇನ್ನು ಜುಲೈ ತಿಂಗಳಿನಲ್ಲಿ ಪಾಕಿಸ್ತಾನ ಸರ್ಕಾರ ಅಧಿಕೃತವಾಗಿ ನಿಷೇಧಿತ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ)ವನ್ನು 'ಫಿತ್ನಾ ಅಲ್ ಖವಾರಿಜ್' ಎಂದು ಗುರುತಿಸಿ, ಭಯೋತ್ಪಾದಕ ಕೃತ್ಯಗಳಿಗೆ ಕಾರಣರಾದವರನ್ನು "ಖಾರಿಜಿಗಳು" (ಬಹಿಷ್ಕೃತರು) ಎಂದು ಉಲ್ಲೇಖಿಸಲು ಎಲ್ಲಾ ಸಂಸ್ಥೆಗಳಿಗೆ ಸೂಚನೆ ನೀಡಿತ್ತು.
ಇದನ್ನೂ ಓದಿ: ಪಾಕಿಸ್ತಾನದ ಚೆಕ್‌ಪೋಸ್ಟ್ ಮೇಲೆ ಉಗ್ರರ ದಾಳಿ: ನಾಲ್ವರು ಭದ್ರತಾ ಸಿಬ್ಬಂದಿ ಸಾವು
ಇದನ್ನೂ ಓದಿ:ಇಸ್ರೇಲ್ನಿಂದ ಭೀಕರ ಕ್ಷಿಪಣಿ ದಾಳಿ: ವಿಮಾನ ಸೇವೆ ಸಂಪೂರ್ಣ ನಿಲ್ಲಿಸಿದ ಇರಾನ್