ಡಮಾಸ್ಕಸ್ನ ಪತನವು ಕಾಬೂಲ್, ಢಾಕಾ ಮತ್ತು ಕೊಲಂಬೊಗಳಲ್ಲಿ ನಡೆದ ಘಟನೆಗಳನ್ನು ನೆನಪಿಸುತ್ತದೆ. ಸಿರಿಯಾದಲ್ಲಿ ಬಷರ್ ಅಲ್ ಅಸ್ಸಾದ್ ಸಿರಿಯಾದಿಂದ ಪಲಾಯನ ಮಾಡಿ ರಷ್ಯಾದಲ್ಲಿ ಆಶ್ರಯ ಪಡೆದಂತೆಯೇ ಆ ಮೂರು ರಾಷ್ಟ್ರಗಳ ಮುಖ್ಯಸ್ಥರು ತಮ್ಮ ದೇಶಗಳನ್ನು ತೊರೆಯಬೇಕಾಯಿತು.
ಡಿಸೆಂಬರ್ 8ರಂದು ಸಶಸ್ತ್ರ ಪ್ರತಿರೋಧ ಗುಂಪುಗಳು ಡಮಾಸ್ಕಸ್ ಸ್ವಾಧೀನಪಡಿಸಿಕೊಳ್ಳುತ್ತಿದ್ದಂತೆ ಸಿರಿಯನ್ ಸರ್ಕಾರದ ಪತನದೊಂದಿಗೆ ಅಸ್ಸಾದ್ ಆಡಳಿತ ಮತ್ತು ಸಶಸ್ತ್ರ ಗುಂಪುಗಳ ನಡುವಿನ ದೀರ್ಘ ಮತ್ತು ರಕ್ತಸಿಕ್ತ ಸಂಘರ್ಷ ಕೊನೆಗೊಂಡಿದೆ. ಅಸ್ಸಾದ್ ಗತ್ಯಂತರವಿದೇ ರಷ್ಯಾಕ್ಕೆ ಪಲಾಯನ ಮಾಡಿದ್ದಾರೆ. ದೀರ್ಘಕಾಲದ ಮಿತ್ರ ವ್ಲಾದಿಮಿರ್ ಪುಟಿನ್ ರಷ್ಯಾದಲ್ಲಿ ಅವರಿಗೆ ಆಶ್ರಯ ನೀಡಿದ್ದಾರೆ.
ಪರಿಸ್ಥಿತಿ ತೀವ್ರ ವಿಕೋಪಕ್ಕೆ: ಸಿರಿಯಾದಲ್ಲಿನ ಪ್ರಸ್ತುತ ಪರಿಸ್ಥಿತಿಯನ್ನು ಶ್ರೀಲಂಕಾ ಮತ್ತು ಬಾಂಗ್ಲಾದೇಶಕ್ಕೆ ಹೋಲಿಸಬಹುದು. ಈ ಎರಡೂ ದೇಶಗಳಲ್ಲಿ ದೊಡ್ಡ ಪ್ರಮಾಣದ ರ‍್ಯಾಲಿಗಳ ಮೂಲಕ ಸರ್ಕಾರಗಳು ಪತನಗೊಂಡವು ಮತ್ತು ವಿದ್ಯಾರ್ಥಿ ನಾಯಕರು ದೇಶದ ನಿಯಂತ್ರಣವನ್ನು ವಹಿಸಿಕೊಂಡರು. ಇನ್ನು ದೋಹಾ ಒಪ್ಪಂದದಂತೆ ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡಿದ್ದು ಕೂಡ ಅದೇ ರೀತಿಯಾಗಿದೆ.
ಆದಾಗ್ಯೂ, ಸೂಕ್ಷ್ಮವಾಗಿ ಗಮನಿಸಿದರೆ ಸಂಘರ್ಷವು ಹೇಗೆ ವಿಶಾಲವಾದ ಬಾಹ್ಯ ಅಂಶಗಳನ್ನು ಹೊಂದಿದೆ ಮತ್ತು ಇದು ಕೇವಲ 'ನಿರಂಕುಶ' ಆಡಳಿತಗಾರನ ವಿರುದ್ಧದ ಜನರ ಹೋರಾಟವಲ್ಲ ಎಂಬುದು ಕಂಡು ಬರುತ್ತದೆ. ಸಿರಿಯನ್ ಪ್ರತಿರೋಧವು 2011ರ ಸಾಮೂಹಿಕ ದಂಗೆಯ ನಂತರದ ಪರಿಣಾಮವಾಗಿದ್ದು, ಅಸ್ಸಾದ್ ಆಡಳಿತವು ದಂಗೆಯನ್ನು ಬಲಪ್ರಯೋಗದಿಂದ ಹತ್ತಿಕ್ಕಿದ ನಂತರ ಹಿಂಸಾತ್ಮಕವಾಗಿ ಮಾರ್ಪಟ್ಟಿತು. ಸಿರಿಯಾದಲ್ಲಿ ಪ್ರತಿಭಟನಾಕಾರರನ್ನು ಜೈಲಿಗೆ ಕಳುಹಿಸಲಾಯಿತು ಮತ್ತು ಚಿತ್ರಹಿಂಸೆ ನೀಡಲಾಯಿತು. ಇದರಲ್ಲಿ ಅನೇಕರು ಏನಾದರೆಂಬುದೇ ಗೊತ್ತಾಗಿಲ್ಲ.
ನೆರೆಯ ದೇಶಗಳಿಂದ ಸಿಗಲಿಲ್ಲ ಬೆಂಬಲ: ಅನೇಕ ಆಂದೋಲನಕಾರರು ಆಡಳಿತದ ವಿರುದ್ಧ ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಂಡರು. ಇವರಲ್ಲಿ ಬಹುತೇಕರು ಮಾಜಿ ಸೈನಿಕರು. ಪ್ರತಿರೋಧ ಪಡೆಗಳಿಗೆ ಹಲವಾರು ಅಲ್-ಖೈದಾ ಸದಸ್ಯರು ಸೇರಿಕೊಂಡಿದ್ದರಿಂದ ಈ ಹೋರಾಟವು ಭಯೋತ್ಪಾದನೆಯ ರೀತಿಯಾಗಿ ಮಾರ್ಪಟ್ಟಿತು. ಹೀಗಾಗಿ ಈ ಸರ್ಕಾರ ವಿರೋಧಿ ಹೋರಾಟಗಾರರಿಗೆ ಯಾವುದೇ ನೆರೆಯ ದೇಶಗಳು ಮುಕ್ತ ಬೆಂಬಲ ನೀಡಲಿಲ್ಲ. ಇದರ ನಡುವೆ, ಹಲವಾರು ಶಕ್ತಿಶಾಲಿ ರಾಷ್ಟ್ರಗಳು ಮಧ್ಯಪ್ರಾಚ್ಯದಲ್ಲಿ ತಮ್ಮ ಪ್ರಾಬಲ್ಯವನ್ನು ಪ್ರದರ್ಶಿಸಲು ಪ್ರಯತ್ನಿಸಿದವು.
ಅಸ್ಸಾದ್ ತನ್ನ ಮಿಲಿಟರಿ ಪಡೆಗಳಿಗೆ ಸಂಬಳ ನೀಡಲು ಸಾಧ್ಯವಾಗದ ಕಾರಣ ವಿರೋಧಿ ಗುಂಪುಗಳು ಬಲ ಪಡೆದುಕೊಂಡವು ಮತ್ತು ಸಂಘಟಿತ ದಾಳಿಯನ್ನು ಪ್ರಾರಂಭಿಸಿದವು. ಇದ್ಲಿಬ್ನ ಅಲೆಪ್ಪೊದಿಂದ ಪ್ರಾರಂಭವಾಗಿ, ಸಾಮಾ ಮೂಲಕ ಮುಂದುವರೆದು ಅಂತಿಮವಾಗಿ ಡಮಾಸ್ಕಸ್ ಅನ್ನು ನಿಯಂತ್ರಿಸಿದ ಎಲ್ಲಾ ಕಡೆಯಿಂದಲೂ ಏಕೀಕೃತ ಆಕ್ರಮಣದಿಂದಾಗಿ ಅಸ್ಸಾದ್ ದೇಶದಿಂದ ಪಲಾಯನ ಮಾಡಬೇಕಾಯಿತು. ಕಳೆದ ವಾರ ಸಿರಿಯಾವನ್ನು ಸ್ವಾಧೀನಪಡಿಸಿಕೊಳ್ಳುವಾಗ ವಿರೋಧಿ ಪಡೆಗಳಿಗೆ ಯಾವುದೇ ಪ್ರತಿರೋಧವೇ ಕಂಡು ಬರಲಿಲ್ಲ. ಡಮಾಸ್ಕಸ್ ಸೇರಿದಂತೆ ರಾಷ್ಟ್ರದ ಪ್ರಮುಖ ಮಿಲಿಟರಿ ನೆಲೆಗಳ ನಿಯಂತ್ರಣ ತೆಗೆದುಕೊಂಡ ಎಚ್ಟಿಎಸ್ (ಹಯಾತ್ ತಹ್ರಿರ್ ಅಲ್ ಶಾಮ್) ಈಗ ದೇಶದ ಅತಿದೊಡ್ಡ ಸಶಸ್ತ್ರ ಗುಂಪಾಗಿ ಗುರುತಿಸಿಕೊಂಡಿದೆ.
ಸಿರಿಯಾದಲ್ಲಿ ವಿಷಯಗಳು ಹೇಗೆ ತಿರುವು ಪಡೆದುಕೊಂಡವು ಮತ್ತು ಅದಕ್ಕೆ ಪಾಶ್ಚಿಮಾತ್ಯರ ಪ್ರತಿಕ್ರಿಯೆಯನ್ನು ಗಮನಿಸಿದರೆ, ಈ ಪರಿಸ್ಥಿತಿಯು ಮಧ್ಯಪ್ರಾಚ್ಯದಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ವ್ಯೂಹಾತ್ಮಕ ಅನುಕೂಲ ಮಾಡಿಕೊಡುವಂತಿದೆ ಎಂದು ಕಾಣಿಸುತ್ತದೆ. ಅಸ್ಸಾದ್ ಆಡಳಿತದ ಪತನವು ಈ ಪ್ರದೇಶದ ಸುತ್ತಲೂ ಉಗ್ರಗಾಮಿ ಗುಂಪುಗಳು ಮತ್ತು ಪ್ರಾಕ್ಸಿಗಳನ್ನು ಬೆಂಬಲಿಸುವ ಟೆಹ್ರಾನ್‌ನ ದಶಕಗಳ ಕಾರ್ಯತಂತ್ರವಾದ ಆಕ್ಸಿಸ್ ಆಫ್ ರೆಸಿಸ್ಟೆನ್ಸ್‌ಗೆ ದೊಡ್ಡ ಹೊಡೆತವಾಗಿದೆ. ಇಡೀ ಪಶ್ಚಿಮ ಏಷ್ಯಾದಲ್ಲಿ ಇಸ್ರೇಲ್ ವಿರುದ್ಧದ ಪ್ರತಿರೋಧವನ್ನು ತಡೆಯಲು ಅಗತ್ಯವಿರುವ ಎಲ್ಲವನ್ನೂ ಬೆಂಬಲಿಸುವಲ್ಲಿ ಅಸ್ಸಾದ್ ನೇತೃತ್ವದ ಸಿರಿಯಾ ಪ್ರಮುಖ ಪಾತ್ರ ವಹಿಸಿತ್ತು.
ಅಸ್ಸಾದ್ ಸರ್ವಾಧಿಕಾರ, ಲೆಬನಾನ್ನ ಹಜ್ಬುಲ್ಲಾ ಮತ್ತು ಇರಾನಿನ ರೆವಲ್ಯೂಷನರಿ ಗಾರ್ಡ್ಸ್ ಇಸ್ರೇಲ್ ವಿರುದ್ಧದ ಹೋರಾಟಕ್ಕೆ ತುಪ್ಪ ಸುರಿದಿದ್ದವು. ಅಸ್ಸಾದ್ ಆಡಳಿತದ ಅಡಿ ಸಿರಿಯಾದಲ್ಲಿನ ಪರಿಸ್ಥಿತಿಗಳು ವಿಷಮವಾಗಿದ್ದವು. ವಿಶೇಷವಾಗಿ ಇಸ್ರೇಲ್-ಹಮಾಸ್ ಸಂಘರ್ಷದ ನಂತರ, ಇದು ಲೆಬನಾನ್ ಆರ್ಥಿಕತೆ ಮತ್ತು ಪಶ್ಚಿಮ ಏಷ್ಯಾದಲ್ಲಿ ಇಸ್ರೇಲ್ ವಿರೋಧಿ ಪ್ರತಿರೋಧದ ಪ್ರಮುಖ ಬೆಂಬಲಿಗರಾದ ಇರಾನ್ ನ ಆರ್ಥಿಕತೆಯ ಮೇಲೆ ತೀವ್ರ ಪರಿಣಾಮ ಬೀರಿತು.
ಡಮಾಸ್ಕಸ್ ಐಆರ್ಜಿಸಿ, ಹಿಜ್ಬುಲ್ಲಾ ಮತ್ತು ಅಸ್ಸಾದ್ ಆಡಳಿತದ ನಡುವಿನ ಪ್ರಮುಖ ಸಂಪರ್ಕ ಕೊಂಡಿಯಾಗಿತ್ತು. ಅಸ್ಸಾದ್ ಅವರ ನಿರಂಕುಶ ಆಡಳಿತದಿಂದ ಜನ ಬೇಸತ್ತಿದ್ದಾರೆ ಎಂಬುದು ಗೊತ್ತಿದ್ದರೂ ಜನರ ದಂಗೆಯ ವಿರುದ್ಧ ಅಸ್ಸಾದ್ ಅವರನ್ನೇ ಬೆಂಬಲಿಸುವ ಇರಾನ್ ನಿರ್ಧಾರವು ಅದಕ್ಕೆ ತಿರುಗುಬಾಣವಾಯಿತು. ಜನರ ಪ್ರತಿರೋಧವನ್ನು ಹತ್ತಿಕ್ಕಲು ಅಸ್ಸಾದ್ ಆಡಳಿತವು ಇರಾನ್ ಮತ್ತು ಹಿಜ್ಬುಲ್ಲಾಗಳನ್ನು ಬಳಸಿಕೊಂಡಿದೆ ಎಂಬ ಗ್ರಹಿಕೆ ಬಲವಾಗಿತ್ತು. ಇದು ಈ ಹಿಂದೆ ಪಶ್ಚಿಮ ಏಷ್ಯಾದ ಪ್ರತಿರೋಧ ಹೋರಾಟಗಾರರ 'ರಕ್ಷಕರು' ಎಂದು ಪರಿಗಣಿಸಲ್ಪಟ್ಟಿದ್ದ ಐಆರ್ಜಿಸಿಯ ವಿಶ್ವಾಸಾರ್ಹತೆಗೆ ಧಕ್ಕೆ ತಂದಿತು.
ಸುನ್ನಿ ಮತ್ತು ಶಿಯಾ ರಾಷ್ಟ್ರಗಳ ನಡುವೆ ವಿಭಜನೆ: ಅಸ್ಸಾದ್ ಸರ್ವಾಧಿಕಾರಕ್ಕೆ ಇರಾನ್ ಅಗಾಧ ಮತ್ತು ಬೇಷರತ್ತಾದ ಬೆಂಬಲ ನೀಡಿದ ನಂತರ ಪ್ಯಾಲೆಸ್ಟೈನ್ ವಿಷಯವು ಸುನ್ನಿ ಮತ್ತು ಶಿಯಾ ರಾಷ್ಟ್ರಗಳ ನಡುವೆ ವಿಭಜನೆಯಾಗಿದೆ ಎನಿಸುತ್ತದೆ. ಇಸ್ರೇಲ್ ಸುತ್ತಲಿನ ಶಿಯಾ ರಾಷ್ಟ್ರಗಳು ಇಸ್ರೇಲಿ ಪಡೆಗಳ ವಿರುದ್ಧ ಸಕ್ರಿಯವಾಗಿದ್ದರೆ, ಅರಬ್ಬರು, ವಿಶೇಷವಾಗಿ ಸುನ್ನಿ ದೇಶಗಳು ಪ್ಯಾಲೆಸ್ಟೈನ್ ಗೆ ಸೀಮಿತ ಬೆಂಬಲ ಪ್ರದರ್ಶಿಸಿದವು. ಇಸ್ರೇಲ್ ಮತ್ತು ಯುಎಸ್ ಪರಿಸ್ಥಿತಿಯನ್ನು ಅಳೆಯುತ್ತವೆ ಮತ್ತು ತಾಲಿಬಾನ್ ನಾಯಕತ್ವದೊಂದಿಗೆ ಮಾಡಿದಂತೆಯೇ ಎಚ್ಟಿಎಸ್ ನಾಯಕತ್ವದ ಕಡೆಗೆ ಹೊಂದಿಕೊಳ್ಳುವ ವಿಧಾನವನ್ನು ಆರಿಸಿಕೊಂಡವು. ತಾಲಿಬಾನ್ ಮತ್ತು ಎಚ್ಟಿಎಸ್ ಈ ಹಿಂದೆ ಮೋಸ್ಟ್ ವಾಂಟೆಡ್ ಭಯೋತ್ಪಾದನೆಯ ಪಟ್ಟಿಯಲ್ಲಿದ್ದವು ಎಂಬುದು ಗಮನಾರ್ಹ.
ಡಮಾಸ್ಕಸ್ ಪತನದ ನಂತರ ಮಾತನಾಡಿದ ಜೋ ಬೈಡನ್, ಯುಎಸ್ ಸಿರಿಯಾದಲ್ಲಿನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಹೇಳಿದರು. ಇಸ್ರೇಲ್ ನೊಂದಿಗಿನ ಗಡಿಯಲ್ಲಿ ಬದಲಾಗುತ್ತಿರುವ ಪರಿಸ್ಥಿತಿಗಳನ್ನು ನೋಡಿದರೆ ಅಸ್ಸಾದ್ ಆಡಳಿತದ ವಿರುದ್ಧ ಸಂಘಟಿತ ದಾಳಿಯ ಮೊದಲು ಹಿನ್ನೆಲೆಯಲ್ಲಿ ಚರ್ಚೆಗಳು ನಡೆದಿರಬಹುದು ಅನಿಸುತ್ತದೆ. ಈಗಾಗಲೇ ಎಂಜಿನಿಯರ್ ಕಮ್ ರಾಜಕಾರಣಿಯೊಬ್ಬರನ್ನು ಮಧ್ಯಂತರ ಪ್ರಧಾನಿಯಾಗಿ ಹೆಸರಿಸಿರುವ ಸಿರಿಯಾದಲ್ಲಿ ಏಕೀಕೃತ ಶಕ್ತಿಗಳ ಹೊರಹೊಮ್ಮುವಿಕೆಯು ಇಸ್ರೇಲ್, ಟರ್ಕಿ, ರಷ್ಯಾ, ಇರಾನ್ ಮತ್ತು ಯುಎಸ್ ನಿಂದ ನೇರವಾಗಿ ಪ್ರಭಾವಿತವಾಗಿದೆ ಮತ್ತು ತಮ್ಮ ಸುತ್ತಲಿನ ಪ್ರಬಲ ರಾಷ್ಟ್ರಗಳ ನಡುವೆ ಸಿಲುಕುವ ಮೊದಲು ಅವರು ಬದುಕುಳಿಯುವ ಕಾರ್ಯತಂತ್ರವನ್ನು ಹೊಂದಿರಬೇಕು. ರಷ್ಯಾ ಮತ್ತು ಇರಾನ್ ಎರಡೂ ಒಂದೇ ಕಲ್ಲಿನಿಂದ ಹೊಡೆಯಲ್ಪಟ್ಟರೆ, ಇಸ್ರೇಲ್ ಸಿರಿಯಾ ಗಡಿಯಲ್ಲಿ ಈಗ ಮುಕ್ತ ಹಸ್ತವನ್ನು ಹೊಂದಿದೆ.
ಸಿರಿಯಾವನ್ನು ವಶಪಡಿಸಿಕೊಂಡಿರುವ ಪಡೆಗಳು ತಾವು ಈ ಪ್ರದೇಶದಲ್ಲಿ ಸ್ಥಿರತೆಯನ್ನು ಮರಳಿ ತರಬಹುದು ಎಂದು ಅಂತಾರಾಷ್ಟ್ರೀಯ ಸಮುದಾಯವನ್ನು ಮನವೊಲಿಸಲು ತಮ್ಮ ಜಾಣ್ಮೆಯನ್ನು ಪ್ರದರ್ಶಿಸಬೇಕಾಗಿದೆ. ಆದಾಗ್ಯೂ, ಸಿರಿಯಾ ಅಫ್ಘಾನಿಸ್ತಾನದ ಹಾದಿಯಲ್ಲಿ ಹೋಗುತ್ತದೆಯೇ ಅಥವಾ ಸರ್ಕಾರ ರಚಿಸುವ ಪ್ರಜಾಪ್ರಭುತ್ವ ಮಾರ್ಗವನ್ನು ಅನುಸರಿಸಲು ನಿರ್ಧರಿಸುತ್ತದೆಯೇ ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ: ಸಿರಿಯಾದಲ್ಲಿ ಸರ್ಕಾರ ರಚನೆಗೆ ತಹ್ರಿರ್ ಅಲ್-ಶಾಮ್ ಸಿದ್ಧತೆ: ಅಲ್-ಬಶೀರ್ ಪ್ರಧಾನಿಯಾಗುವ ಸಾಧ್ಯತೆ