ಕಿನ್ಶಾಸಾ (ಕಾಂಗೋ) : ಭಾರಿ ಮಳೆಯಿಂದಾಗಿ ನೈಋತ್ಯ ಕಾಂಗೋದಲ್ಲಿ ಭೂಕುಸಿತ ಸಂಭವಿಸಿದೆ. ಪರಿಣಾಮ ಕನಿಷ್ಠ 15 ಮಂದಿ ಸಾವನ್ನಪ್ಪಿದ್ದು, 60 ಮಂದಿ ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಇಡಿಯೋಫಾ ಪಟ್ಟಣದ ಬಳಿಯ ಬಂದರಿನ ಬಳಿ ಶನಿವಾರ ಭೂಕುಸಿತದ ನಂತರ ಏಳು ಜನರು ಜೀವಂತವಾಗಿ ಪತ್ತೆಯಾಗಿದ್ದಾರೆ.
ಬಂದರಿನ ಮೇಲೆ ಬೆಟ್ಟವಿದ್ದು, ಮಳೆಯಿಂದಾಗಿ ಬೆಟ್ಟದ ಮೇಲಿನ ಭೂಮಿ ಕುಸಿದಿದೆ ಎಂದು ಸ್ಥಳೀಯ ಉಪ ಚುನಾಯಿತ ಅಧಿಕಾರಿ ಧೆಡೆ ಮುಪಾಸಾ ಭಾನುವಾರ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.
ಬದುಕುಳಿದವರನ್ನು ಹುಡುಕಲು ಹಾಗೂ ಅವರಿಗೆ ಸಹಾಯ ಮಾಡಲು ತಂಡವನ್ನು ಕಳುಹಿಸಲಾಗಿದೆ ಮತ್ತು ಏಳು ಜನರು ಜೀವಂತವಾಗಿ ಪತ್ತೆಯಾಗಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಧ್ಯಂತರ ಪ್ರಾಂತೀಯ ಗವರ್ನರ್ ಫ್ಲಿಸಿಯನ್ ಕಿವೇ ಸುದ್ದಿಗಾರರಿಗೆ ತಿಳಿಸಿದ್ದಾರೆ. ಅಲ್ಲದೇ, 60 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಈ ಪ್ರದೇಶವನ್ನು ಪ್ರತಿ ಶನಿವಾರ ಮಾರುಕಟ್ಟೆಯಾಗಿ ಬಳಸುತ್ತಿದ್ದರಿಂದ ಕಾಣೆಯಾದವರ ಸಂಖ್ಯೆಯನ್ನು ನಿಖರವಾಗಿ ಕಂಡುಹಿಡಿಯುವುದು ಕಷ್ಟಕರವಾಗಿದೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಬಂದರು ಪ್ರದೇಶದಲ್ಲಿ ಮೀನುಗಾರರು ಮೀನು ಮಾರಾಟ ಮಾಡುತ್ತಿದ್ದರು ಎಂದು ಹೇಳಿದ್ದಾರೆ.
ಇದನ್ನೂ ಓದಿ : ಉತ್ತರಕಾಶಿಯ ಗಂಗೋತ್ರಿ ಹೆದ್ದಾರಿಯಲ್ಲಿ ಭೂಕುಸಿತ: ವಿಡಿಯೋ