ಸಿಡ್ನಿ: ಆಸ್ಟ್ರೇಲಿಯಾದ ಲಕ್ಷಾಂತರ ಕುಟುಂಬಗಳು ತೀವ್ರ ಸ್ವರೂಪದ ಆಹಾರ ಅಭದ್ರತೆ ಅನುಭವಿಸುತ್ತಿವೆ ಎಂದು ಹಂಗರ್ ರಿಲೀಫ್ ಚಾರಿಟಿ ಫುಡ್ಬ್ಯಾಂಕ್ ಆಸ್ಟ್ರೇಲಿಯಾ ವರದಿ ಮಾಡಿದೆ.
ದೇಶದಲ್ಲಿ 3.4 ಮಿಲಿಯನ್ ಕುಟುಂಬಗಳು ಕಳೆದ 12 ತಿಂಗಳು ಅಂದರೆ ಒಂದು ವರ್ಷದಿಂದ ಆಹಾರ ಅಭದ್ರತೆ ಎದುರಿಸುತ್ತಿದ್ದರೆ, 2 ಮಿಲಿಯನ್ ಕುಟುಂಬಗಳು ತೀವ್ರ ಆಹಾರದ ಕೊರತೆ ಎದುರಿಸುತ್ತಿವೆ. ಸರ್ಕಾರದ ಪ್ರಕಾರ, ಆಹಾರ ಅಭದ್ರತೆ ಎಂದರೆ ಪೌಷ್ಟಿಕಾಂಶಯುಕ್ತ, ಸುರಕ್ಷಿತ ಆಹಾರದ ಅಲಭ್ಯತೆ ಅಥವಾ ಸಾಮಾಜಿಕವಾಗಿ ಆಹಾರ ಪಡೆಯುವ ಸಾಮರ್ಥ್ಯ ಪಡೆಯದೇ ಇರುವುದಾಗಿದೆ.
ದುಬಾರಿ ಜೀವನಶೈಲಿಯೇ ಶೇ 80ರಷ್ಟು ಕುಟುಂಬಗಳು ಈ ಸಮಸ್ಯೆ ಎದುರಿಸಲು ಪ್ರಮುಖ ಕಾರಣ. ಇದರ ಪರಿಣಾಮ, ಜೀವನ ನಿರ್ವಹಣೆಯ ಬಿಕ್ಕಟ್ಟಿನಿಂದ ಕಡಿಮೆ ಆದಾಯದ ಕುಟುಂಬಗಳು ಹೆಚ್ಚು ಬಳಲುತ್ತಿವೆ.
ಆಹಾರದ ಅಭದ್ರತೆ ಎದುರಿಸುತ್ತಿರುವ ಅರ್ಧಕ್ಕಿಂತಲೂ ಹೆಚ್ಚು ಕುಟುಂಬಗಳು ಇದೀಗ ತೀವ್ರ ಆಹಾರ ಅಭದ್ರತೆ ಹೊಂದಿವೆ. ಈ ಕುಟುಂಬಗಳು ಕೇವಲ ಆಹಾರ ಕಡಿತ ಮಾಡುತ್ತಿಲ್ಲ, ಇದಕ್ಕೆ ಬದಲಾಗಿ, ದಿನವಿಡೀ ಆಹಾರ ತ್ಯಜಿಸಲು ಮುಂದಾಗಿದ್ದಾರೆ ಎಂದು ಫುಡ್ಬ್ಯಾಂಕ್ ಆಸ್ಟ್ರೇಲಿಯಾದ ಮುಖ್ಯ ಕಾರ್ಯದರ್ಶಿ ಬ್ರಿಯನ್ನಾ ಕ್ಯಾಸೆ ತಿಳಿಸಿದ್ದಾರೆ.
ಇದು ದೀರ್ಘಾವಧಿಯ ವ್ಯವಸ್ಥಿತ ಸಮಸ್ಯೆಯಾಗಿದ್ದು ಮಿಲಿಯಾಂತರ ಆಸ್ಟ್ರೇಲಿಯನ್ನರ ಮೇಲೆ ಗಂಭೀರ ಪರಿಣಾಮ ಬೀರಿದೆ. ಅನೇಕ ಕುಟುಂಬಗಳು ಮುಂದಿನ ಹೊತ್ತಿನ ಆಹಾರದ ಬಗ್ಗೆ ಆತಂಕದಲ್ಲಿವೆ. ಜೀವನ ನಿರ್ವಹಣೆ ವೆಚ್ಚದಿಂದಾಗಿ ಜನರು ಆಹಾರದ ಅಗತ್ಯತೆಗಳ ಪೂರೈಕೆಗಾಗಿ ಅಧಿಕ ವೆಚ್ಚದ ಮನೆ, ತರಕಾರಿಗಳನ್ನು ಕಡಿತಗೊಳಿಸಿದ್ದಾರೆ ಎಂದು ವರದಿಯಾಗಿದೆ. (ಐಎಎನ್ಎಸ್)
ಇದನ್ನೂ ಓದಿ: ಬಿಷ್ಣೋಯ್ ಗ್ಯಾಂಗ್ನಿಂದ ಖಲಿಸ್ತಾನಿಗಳ ಹತ್ಯೆಗೆ ಭಾರತ ಸರ್ಕಾರದ ಸಂಚು: ಕೆನಡಾ ಆರೋಪ