ಕಿನ್ಶಾಸಾ (ಕಾಂಗೊ): ಕಾಂಗೊ ರಾಜಧಾನಿಯಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಭಾರೀ ದುರಂತ ಸಂಭವಿಸಿದೆ. ಕೈದಿಗಳು ತಪ್ಪಿಸಿಕೊಳ್ಳಲು ಯತ್ನಿಸುತ್ತಿರುವ ಕಾಲ್ತುಳಿತ ಮತ್ತು ಗುಂಡಿನ ದಾಳಿಗೆ 129 ಮಂದಿ ಮೃತಪಟ್ಟ ಘಟನೆ ಸೋಮವಾರ ನಸುಕಿನ ಜಾವದಲ್ಲಿ ನಡೆದಿದೆ.
ನಿಗದಿತ ಸಂಖ್ಯೆಗಿಂತಲೂ ಅಧಿಕ ಕೈದಿಗಳು ಈ ಜೈಲಿನಲ್ಲಿದ್ದು, ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಜೈಲಿನ ಕಂಬಿಗಳನ್ನು ಮುರಿದು ನೂರಾರು ಜನರು ಪರಾರಿಯಾಗಲು ಪ್ರಯತ್ನಿಸಿದ್ದಾರೆ. ಇದರಿಂದ ಭಾರಿ ಕಾಲ್ತುಳಿತ ಉಂಟಾಗಿದೆ. ಈ ವೇಳೆ ಹಲವು ಸಾವಿಗೀಡಾಗಿದ್ದಾರೆ. ಜೈಲಿನಿಂದ ಹೊರಬಂದು ತಪ್ಪಿಸಿಕೊಳ್ಳುತ್ತಿದ್ದಾಗ 24 ಮಂದಿಯನ್ನು ಪೊಲೀಸರು ಗುಂಡಿಕ್ಕಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಾಯಾಳುಗಳಿಗೆ ಸರ್ಕಾರದಿಂದ ಚಿಕಿತ್ಸೆ: ಈ ಬಗ್ಗೆ ಮಾಹಿತಿ ನೀಡಿರುವ ಕಾಂಗೊದ ಗೃಹ ಸಚಿವ ಜಾಕ್ವೆಮಿನ್ ಶಬಾನಿ, ಮಹಿಳಾ ಮತ್ತು ಪುರುಷ ಕೈದಿಗಳು ಜೈಲಿನಿಂದ ಪರಾರಿಯಾಗಲು ಯತ್ನಿಸಿದ್ದಾರೆ. ಸಾವಿರ ಸಂಖ್ಯೆಯಲ್ಲಿದ್ದರಿಂದ ಕಾಲ್ತುಳಿತ ಉಂಟಾಗಿದೆ. ಸದ್ಯದ ಮಾಹಿತಿಯ ಪ್ರಕಾರ 129 ಮಂದಿ ಸಾವಿಗೀಡಾಗಿದ್ದಾರೆ. 59 ಮಂದಿಗೆ ತೀವ್ರ ಗಾಯಗಳಾಗಿವೆ. ಎಲ್ಲರಿಗೆ ಸರ್ಕಾರವೇ ಚಿಕಿತ್ಸೆ ನೀಡುತ್ತಿದೆ ಎಂದಿದ್ದಾರೆ.
ಕೈದಿಗಳು ನಡೆಸಿದ ದಾಳಿಯಿಂದ ಜೈಲಿನ ಒಂದು ಭಾಗ ನಾಶವಾಗಿದೆ. ಬೆಂಕಿಯಿಂದ ಹೊತ್ತಿ ಉರಿದಿದೆ. ಅದನ್ನು ಭೇದಿಸಿ ಜೈಲಿನಿಂದ ಪರಾರಿಯಾಗಲು ಯತ್ನಿಸಿದ್ದಾರೆ. ಆದರೆ, ಪೊಲೀಸರ ಗುಂಡೇಟಿಗೆ ಹಲವರು ಸಾವನ್ನಪ್ಪಿದ್ದಾರೆ. ಪರಾರಿ ವೇಳೆ ಹಲವು ಮಹಿಳಾ ಕೈದಿಗಳು ಅತ್ಯಾಚಾರಕ್ಕೆ ತುತ್ತಾಗಿದ್ದಾರೆ. ಸದ್ಯ ಬಂಧೀಖಾನೆಯ ಸೌಲಭ್ಯಗಳನ್ನು ಮೊದಲಿನಂತೆ ಸರಿಪಡಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಪರಾರಿ ಇದೇ ಮೊದಲಲ್ಲ: 1500 ಜನರನ್ನು ಬಂಧಿಸಿಡುವ ಸಾಮರ್ಥ್ಯ ಈ ಕೇಂದ್ರ ಜೈಲಿಗಿದೆ. ಆದರೆ, ಇಲ್ಲಿ 12 ಸಾವಿರ ಕೈದಿಗಳನ್ನು ಇರಿಸಲಾಗಿದೆ. ಇದರಲ್ಲಿ ಹೆಚ್ಚಿನವರು ವಿಚಾರಣಾಧೀನ ಕೈದಿಗಳಾಗಿದ್ದಾರೆ ಎಂದು ಆಮ್ನೆಸ್ಟಿ ಇಂಟರ್ನ್ಯಾಷನಲ್ ವರದಿ ತಿಳಿಸಿದೆ. ಈ ಹಿಂದೆಯೂ ಹಲವು ಬಾರಿ ಪರಾರಿ ಯತ್ನಗಳು ನಡೆದಿದ್ದವು. 2017 ರಲ್ಲಿ ಧಾರ್ಮಿಕ ಪಂಥದವರು ದಾಳಿ ನಡೆಸಿ ಹಲವು ಕೈದಿಗಳನ್ನು ತಪ್ಪಿಸಿದ್ದರು. ಈ ಹಿಂದಿನ ಘಟನೆಗಳಿಗೆ ಹೋಲಿಸಿದರೆ, ಇದು ಭಾರೀ ಪ್ರಮಾಣದ್ದಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಕೈದಿಗಳ ಸಾವಿನ ವಿಡಿಯೋ ವೈರಲ್ ಆಗಿದ್ದು, ಜೈಲಿನ ಒಳಗೆ ಹೆಣಗಳು ಬಿದ್ದಿರುವುದು ಕಾಣಬಹುದು. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಮಾನವ ಹಕ್ಕುಗಳ ಸಂಘಟನೆ ಆಗ್ರಹಿಸಿದೆ.