ಮಹಿಳೆಯರಿಗೆ ವಯಸ್ಸಾದಂತೆ ಮೂತ್ರಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚುತ್ತವೆ. ಇದಕ್ಕೆ ಹಲವು ಕಾರಣಗಳಿವೆ ಎನ್ನುತ್ತಾರೆ ತಜ್ಞರು. ಮಧುಮೇಹದಿಂದ ಬಳಲುತ್ತಿರುವವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ. ಕೆಲವರಿಗೆ ಮೂತ್ರ ವಿಸರ್ಜನೆ ಮಾಡಬೇಕೆಂದೆನಿಸಿದ ಕೂಡಲೇ ಶೌಚಾಲಯಕ್ಕೆ ಹೋಗಬೇಕು. ಕೆಲವೊಮ್ಮೆ ವಾಶ್ರೂಮ್ಗೆ ಹೋಗುವ ಮುನ್ನವೇ ಬಟ್ಟೆಯಲ್ಲೇ ಆಗಿಬಿಡುತ್ತದೆ. ಇಂತಹ ಸಮಸ್ಯೆಯನ್ನು 'ಮೂತ್ರದ ಅಸಂಯಮ' ಎಂದು ಕರೆಯಲಾಗುತ್ತದೆ.
'ಮೂತ್ರ ಸೋರಿಕೆ'ಗೆ ಕಾರಣಗಳೇನು?
'ಮೂತ್ರದ ಅಸಂಯಮ'ವು ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರಲ್ಲಿ ಇರುತ್ತದೆ. ಇದಕ್ಕೆ ಹಲವು ಕಾರಣಗಳಿವೆ ಎನ್ನುತ್ತಾರೆ ತಜ್ಞರು.
- ಸಂತಾನೋತ್ಪತ್ತಿ, ಮೂತ್ರದ ಅಂಗಗಳ ರಚನೆ ಮೇಲೆ ಸಮಸ್ಯೆ ಪ್ರಮಾಣ ಏರಿಳಿತವಾಗುತ್ತದೆ. ಹೆರಿಗೆ ನಂತರ ಹಾರ್ಮೋನುಗಳ ಬದಲಾವಣೆಗಳು ಸಹ ಕಾರಣಗಳಲ್ಲೊಂದು.
- ಅಲ್ಲದೇ ಮಹಿಳೆಯರಲ್ಲಿ ಮೂತ್ರನಾಳ ಚಿಕ್ಕದಾಗಿದೆ. ಇದು ಮೂತ್ರ ಬೇಗನೆ ಹೊರಬರಲು ಕಾರಣವಾಗಬಹುದು.
- ವಯಸ್ಸು ಹೆಚ್ಚಾದಂತೆ ಮೂತ್ರಕೋಶದ ಸ್ನಾಯುಗಳು ಸಡಿಲಗೊಳ್ಳುತ್ತವೆ.
- ಹೆರಿಗೆಯ ಸಮಯದಲ್ಲಿ ಮಗು ಜನನಾಂಗದಿಂದ ಹೊರಬಂದಾಗ ಶ್ರೋಣಿಯ ಸ್ನಾಯುಗಳಲ್ಲಿನ ಬದಲಾವಣೆ ಸಹ ಈ ಸಮಸ್ಯೆಯನ್ನು ಹೆಚ್ಚಿಸಬಹುದು.
- ಮೂತ್ರಕೋಶ ಮತ್ತು ಗರ್ಭಾಶಯದ ಹಿಗ್ಗುವಿಕೆಯಿಂದಲೂ ಮೂತ್ರದ ಅಸಂಯಮ ಉಂಟಾಗುತ್ತದೆ.
- ಅಧಿಕ ತೂಕ ಹೊಂದಿದ್ದರೆ, ಹೊಟ್ಟೆಯಲ್ಲಿ ಕೊಬ್ಬು ಹೆಚ್ಚಾಗುತ್ತದೆ. ಮೂತ್ರಕೋಶದ ಮೇಲೆ ಭಾರ ಬೀರುತ್ತದೆ. ಇದರಿಂದ ಸೋರಿಕೆ ಸಮಸ್ಯೆ ಉಂಟಾಗುತ್ತದೆ ಎನ್ನುತ್ತಾರೆ ತಜ್ಞರು.
ಈ ಸಮಸ್ಯೆ ನಿಯಂತ್ರಿಸೋದೇಗೆ?
ಶ್ರೋಣಿಯ ಸ್ನಾಯುಗಳನ್ನು ಬಲಪಡಿಸುವ ಕೆಗೆಲ್ ವ್ಯಾಯಾಮವನ್ನು ಮಾಡುವುದರಿಂದ ಸಮಸ್ಯೆಯನ್ನು ನಿಯಂತ್ರಿಸಬಹುದು. ಒತ್ತಡದಿಂದ ಮೂತ್ರ ಸೋರಿಕೆಯಾಗುವವರಿಗೆ ಈ ವ್ಯಾಯಾಮ ಪ್ರಯೋಜನಕಾರಿ ಎಂದು ಡಾ. ಮಣಿ ಅಕ್ಕಿನೇನಿ ತಿಳಿಸಿದ್ದಾರೆ. ಮೂತ್ರವನ್ನು ಹಿಡಿದಿಟ್ಟುಕೊಳ್ಳಲು ಸಹಾಯ ಮಾಡುವ ಸ್ನಾಯುಗಳನ್ನು ಗುರುತಿಸಿ, ಕನಿಷ್ಠ ಹತ್ತು ಸೆಕೆಂಡುಗಳ ಕಾಲ ಅವುಗಳನ್ನು ಬಿಗಿಮಾಡಿ. ಹಾಗೆಯೇ ಮೂತ್ರ ಮಾಡುವಾಗ ನಡುವಲ್ಲಿ ಸ್ವಲ್ಪ ಹೊತ್ತು ನಿಲ್ಲಿಸಿ, ನಂತರ ಮೂತ್ರ ಮಾಡಿ ಮತ್ತೆ ಹಿಡಿದುಕೊಳ್ಳಿ. ಮೂತ್ರ ವಿಸರ್ಜನೆ ಪೂರ್ಣಗೊಳ್ಳುವವರೆಗೆ ಇದನ್ನು ಮೂರು ಅಥವಾ ನಾಲ್ಕು ಬಾರಿ ಮಾಡಬೇಕು. ಹೀಗೆ ವೈದ್ಯರ ಸಲಹೆ ಪಡೆದು ಕೆಲ ಕ್ರಮ ತೆಗೆದುಕೊಳ್ಳುವುದರಿಂದ 'ಮೂತ್ರದ ಅಸಂಯಮ' ಸಮಸ್ಯೆ ತಡೆಗಟ್ಟಬಹುದು, ಕನಿಷ್ಠ ನಿಯಂತ್ರಿಸಬಹುದು ಅಂತಾರೆ ಅವರು.
ಇದನ್ನೂ ಓದಿ: 'ಅಂತಾರಾಷ್ಟ್ರೀಯ ಸ್ನಾನ ದಿನ': ಇತಿಹಾಸ, ಪ್ರಯೋಜನ, ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶಗಳಿವು! - International Bath Day
ಸೂಚನೆ: ಇಲ್ಲಿ ನಾವು ಕೊಡುವ ಆರೋಗ್ಯ ಸಂಬಂಧಿತ ಮಾಹಿತಿ, ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೃತ್ತಿಪರರ ಸಲಹೆಯನ್ನು ಆಧರಿಸಿ ಈ ಸುದ್ದಿ ಬರೆದಿದ್ದೇವೆ. ಆದ್ರೆ ಇವುಗಳನ್ನು ಅನುಸರಿಸುವ ಮೊದಲು ನೀವು ನಿಮ್ಮ ವೈದ್ಯರ, ಪರಿಣತರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.