ಬೆಳಗ್ಗೆ ತಿಂಡಿಗೆ, ಕೆಲವೊಮ್ಮೆ ಮಧ್ಯಾಹ್ನ ಊಟದ ಜೊತೆ, ರಾತ್ರಿ ಭರ್ಜರಿ ಭೋಜನೊಂದಿಗೆ ಚಪಾತಿಯನ್ನು ಜನರು ಮಿಸ್ ಮಾಡಿಕೊಳ್ಳುವುದೇ ಇಲ್ಲ. ಕೆಲವೊಮ್ಮೆ ಚಪಾತಿ ನೋಡಲು ಗೋಳಾಕಾರದಲ್ಲಿದ್ದರೂ ತಿನ್ನುವಾಗ ಮಾತ್ರ ಕಲ್ಲಿನಂತೆ ಗಟ್ಟಿಯಾಗಿರುತ್ತದೆ. ಎಷ್ಟು ಬಾರಿ ಗೋಧಿ ಹಿಟ್ಟನ್ನು ನಾದಿದರೂ ಮೆದುವಾಗಿ ಬರುವುದೇ ಇಲ್ಲ? ಹೇಗಪ್ಪಾ ಬಾಯಲ್ಲಿ ಇಟ್ಟೊಡನೆ ಕರುಗುವಂತ ಸ್ಮೂಥ್ ಚಪಾತಿ ಮಾಡುವುದೆಂಬ ಪ್ರಶ್ನೆ ಪ್ರತಿನಿತ್ಯ ಮಹಿಳೆಯರಿಗೆ ಅಡುಗೆ ಮನೆಯಲ್ಲಿ ಕಾಡುತ್ತದೆ.
ಇಂದೇ ನಿಮ್ಮ ರೊಟ್ಟಿಯಂತ ಚಪಾತಿಗೆ ಬೈ ಬೈ ಹೇಳಿ. ಇಲ್ಲಿದೆ ನೋಡಿ ಮೆದು ಚಪಾತಿಯನ್ನು ಮಾಡುವ ಸರಳ ಹಾಗೂ ಸರಿಯಾದ ವಿಧಾನ.
ನೀವು ಯಾವ ಗೊಧಿ ಹಿಟ್ಟು ಬಳಸುತ್ತಿದ್ದೀರಾ?: ಮೆದು ಚಪಾತಿ ಬೇಕಾದರೆ ಮೊದಲು ನೀವು ಆರಿಸಿಕೊಳ್ಳುವ ಗೋಧಿ ಹುಡಿ ಪ್ರಮುಖ ಅಂಶವಾಗುತ್ತದೆ. ಹೆಚ್ಚಿನವರು ಚಪಾತಿ ಮಾಡಲು ಸಿಗುವ ಕೆಲವು ಲೋಕಲ್ ಕಂಪನಿ ಹಿಟ್ಟನ್ನು ಬಳಸುತ್ತಾರೆ. ಆದರೆ, ಚಪಾತಿ ಮಾಡಲು ಶುದ್ಧ ಗೋಧಿ ಹಿಟ್ಟು ಬೇಕು. ಸಾಧ್ಯವಾದರೆ ಅಂಥ ಗೋಧಿ ಹಿಟ್ಟನ್ನು ಖರೀದಿಸಿ, ಇಲ್ಲವಾದಲ್ಲಿ ಮಾರುಕಟ್ಟೆಯಲ್ಲಿ ಉತ್ತಮ ಬ್ರಾಂಡೆಡ್ ಗೋಧಿ ಹಿಟ್ಟಿನ ಪ್ಯಾಕೆಟ್ಗಳನ್ನು ಖರೀದಿಸಿ.
- ಹಂತ 1: ಗೋಧಿ ಹಿಟ್ಟನ್ನು ಮೊದಲು ನೀವು ಜರಡಿ ಹಿಡಿಬೇಕು. ಆಗ ನಿಮಗೆ ಗಂಟುಗಟ್ಟಿದ ಹುಡಿ ಬಾಕಿ ಉಳಿದು, ತೆಳುವಾದ ಹುಡಿ ಸಿಗುತ್ತದೆ. ಬಳಿಕ ಚಪಾತಿ ಮಾಡಲು ಬೇಕಾದಷ್ಟು ಹಿಟ್ಟು ತೆಗೆದುಕೊಂಡು ಸ್ವಲ್ಪ ಎಣ್ಣೆ, ಬೆಚ್ಚಗಿನ ನೀರು, ಸ್ವಲ್ಪ ಹಾಲು ಸೇರಿಸಿ ಮತ್ತು ನಿಧಾನವಾಗಿ ಮಿಶ್ರಣ ಮಾಡಿ. ಹಿಟ್ಟು ಗಟ್ಟಿಯಾಗಿದ್ದರೆ ಚಪಾತಿಯೂ ಗಟ್ಟಿಯಾಗುತ್ತದೆ. ಆದ್ದರಿಂದ ಹಿಟ್ಟನ್ನು ಮೃದುವಾಗಿಸಲು ಮಿಶ್ರಣ ಮಾಡಿ.
- ಹಂತ 2: ಚಪಾತಿ ಹಿಟ್ಟನ್ನು ಕಲಸಿ ಇಟ್ಟ ನಂತರ ಹಿಟ್ಟಿನ ಮೇಲೆ ಸ್ವಲ್ಪ ಎಣ್ಣೆಯನ್ನು ಹಚ್ಚಿ. ಅದನ್ನು ಒದ್ದೆಯಾದ ಬಟ್ಟೆಯಿಂದ ಮುಚ್ಚಿ ಮತ್ತು ಸುಮಾರು ಅರ್ಧ ಘಂಟೆಯವರೆಗೆ ಪಕ್ಕಕ್ಕೆ ಇರಿಸಿ. ಇದರಿಂದ ಚಪಾತಿ ಮೃದುವಾಗುತ್ತದೆ.
- ಹಂತ 3: ಈಗ ಆ ಹಿಟ್ಟನ್ನು ತೆಗೆದುಕೊಂಡು ಸಣ್ಣ ಉಂಡೆಗಳನ್ನು ಮಾಡಿ. ಉಂಡೆಗಳನ್ನು ಮಣೆ ಮೇಲೆ ಇರಿಸಿ ಒಣ ಹಿಟ್ಟಿನ ಬದಲು ಎಣ್ಣೆ ಹಚ್ಚಿ ಲಟ್ಟಿಸಿ. ನೀವು ಅಂಟು ಹಿಡಿಯಬಾರದೆಂದು ಹಿಟ್ಟನ್ನೇ ಚಪಾತಿ ಮೇಲ್ಭಾಗ ಹರಡಿ ಲಟ್ಟಿಸಿದರೆ ಚಪಾತಿ ಗಟ್ಟಿಯಾಗುತ್ತದೆ. ಆದಷ್ಟು ಕಡಿಮೆ ಒಣ ಹಿಟ್ಟು ಬಳಸಿ. ಎಣ್ಣೆ ಬಳಸಿ ಚಪಾತಿ ಲಟ್ಟಿಸುವುದರಿಂದ ಮತ್ತಷ್ಟು ಚಪಾತಿ ಮೃದುವಾಗುತ್ತದೆ. ಮುಖ್ಯವಾಗಿ ಚಪಾತಿಯನ್ನು ಒಂದು ಬಾರಿ ಲಟ್ಟಿಸಿ ಬಳಿಕ ಅದನ್ನು ಮಡಚಿ ಮತ್ತೆ ಲಟ್ಟಿಸಿ. ಇದರಿಂದ ಚಪಾತಿ ಬೇಯಿಸುವಾಗ ಚಪಾತಿ ಉಬ್ಬುವುದಲ್ಲದೇ ನಿಮಗೆ ಲೇಯರ್ ಚಪಾತಿ ಸಿಗುತ್ತದೆ.
- ಹಂತ 4: ಚಪಾತಿಯನ್ನು ಕಾದ ತವದ ಮೇಲೆ ಹಾಕಿದ ನಂತರ ತುಪ್ಪವನ್ನು ಬಳಸಿ ಇದರಿಂದ ಅದರ ರುಚಿಯ ಹೆಚ್ಚಾಗುವುದಲ್ಲದೇ ಮೃದು ಚಪಾತಿ ದೊರೆಯುತ್ತದೆ.
ಇದನ್ನೂ ಓದಿ: ತಲೆ ಬೋಳಿಸುವುದರಿಂದ ಕೂದಲು ಉದುರುವಿಕೆ ನಿಲ್ಲುತ್ತಾ?: ಸಂಶೋಧನೆಯಲ್ಲಿ ಬಯಲಾಯ್ತು ಈ ಸತ್ಯ! - Head Shaving Benefits
ಇವುಗಳನ್ನು ಮಾಡಲೇಬೇಡಿ: ಚಪಾತಿ ಲಟ್ಟಿಸಿ ಹಾಗೇ ಇಟ್ಟು ಸಮಯದ ಬಳಿಕ ಬೇಯಿಸಬೇಡಿ ಹೀಗೆ ಮಾಡಿದರೆ ಗಟ್ಟಿಯಾಗುತ್ತದೆ. ಲಟ್ಟಿಸುವ ಜೊತೆ ಜೊತೆಗೆ ಕಾವಲಿಗೆ ಹಾಕಿ ಬಿಸಿ ಮಾಡಿ. ಇನ್ನು ಚಪಾತಿಗಳನ್ನು ಕಡಿಮೆ ಉರಿಯಲ್ಲಿ ಬಿಸಿ ಮಾಡಬೇಕು. ಜ್ವಾಲೆಯು ತುಂಬಾ ಹೆಚ್ಚಿದ್ದರೆ, ಬೇಗನೆ ಹಿಟ್ಟು ಗಟ್ಟಿಯಾಗುತ್ತದೆ ಹೊರತು ಬೇಯುವುದಿಲ್ಲ. ಚಪಾತಿಯನ್ನು ತವಾ ಮೇಲೆ ಹಾಕಿ 10 ಸೆಕೆಂಡ್ಗಳಲ್ಲೇ ಅದನ್ನು ಮಗುಚಿ ಹಾಕಬೇಕು. ಒಂದು ಭಾಗವನ್ನೇ ನೀವು ಅರ್ಧ ನಿಮಿಷದ ತನಕ ಬೇಯಲು ಬಿಟ್ಟರೆ ಅದು ಅಲ್ಲೇ ಕಾದು ಗಟ್ಟಿ ರೊಟ್ಟಿಯಂತಾಗುತ್ತದೆ. ಚಪಾತಿಯಾದ ಕೂಟಲೇ ಬಿಸಿಬಿಸಿ ಹಾಟ್ ಬಾಕ್ಸ್ಗೆ ಹಾಕಿ ಇಡಿ. ಇದು ಅವುಗಳನ್ನು ದೀರ್ಘಕಾಲದವರೆಗೆ ಮೃದುಗೊಳಿಸುತ್ತದೆ.
ಇದನ್ನೂ ಓದಿ: ಒಂದು ತಿಂಗಳು ಮಾಂಸಾಹಾರ ತಿನ್ನದಿದ್ದರೆ ಏನಾಗುತ್ತೆ ಗೊತ್ತಾ? - Stop Eating Non Veg For A Month
ಇದನ್ನೂ ಓದಿ: ಈ ಮಹಿಳೆಯ ಕರುಳಿನಲ್ಲೇ ಉತ್ಪತ್ತಿಯಾಗುತ್ತಿದೆ ಆಲ್ಕೋಹಾಲ್; ಅಚ್ಚರಿಯಾದರೂ ಸತ್ಯ! - gut produces alcohol
ಇದನ್ನೂ ಓದಿ: ಎಲ್ಲೆಂದರಲ್ಲಿ ಸಿಗರೇಟ್ ಸೇದುತ್ತೀರಾ? ಈ ಆ್ಯಪ್ ಮೂಲಕ ಪಕ್ಕದಲ್ಲಿದ್ದವರೇ ದೂರು ಕೊಡ್ತಾರೆ ಹುಷಾರ್! - Stop Tobacco App