ನವದೆಹಲಿ: ಮೈಗ್ರೇನ್ (ಅರೆತಲೆ ನೋವು) ಹೊಂದಿರುವ ಜನರಲ್ಲಿ ಪದೇ ಪದೆ ವಿಪರೀತ ಯಾತನೆ ಕಾಣಿಸಿಕೊಳ್ಳಲು ಕಾರಣ ಬಿಸಿ ತಾಪಮಾನವೂ ಆಗಿರಬಹುದು ಎಂದು ಅಧ್ಯಯನ ತಿಳಿಸಿದೆ. ತಾಪಮಾನ ಹೆಚ್ಚಳ ಕೂಡ ಮೈಗ್ರೇನ್ಗೆ ಸಂಬಂಧ ಹೊಂದಿದ್ದು, ಇದು ಕೂಡ ಇದರ ಪರಿಣಾಮವನ್ನು ಹೆಚ್ಚಿಸಲಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಮೈಗ್ರೇನ್ ಪ್ರಚೋದಕ ಅಂಶಗಳಲ್ಲಿ ತಾಪಮಾನ ಬದಲಾವಣೆ ಕೂಡ ಸಾಮಾನ್ಯ ಅಂಶವಾಗಿದೆ ಎಂದು ಯುಎಸ್ ಮೂಲದ ಸಿನ್ಸಿನಾಟಿ ವಿಶ್ವವಿದ್ಯಾಲಯದಲ್ಲಿ ತಲೆನೋವು ಮತ್ತು ಮುಖದ ನೋವು ಕೇಂದ್ರದ ನಿರ್ದೇಶಕರಾಗಿರುವ ವಿನ್ಸೆಂಟ್ ಮಾರ್ಟಿನ್ ತಿಳಿಸಿದ್ದಾರೆ.
ಇದೇ ವೇಳೆ ಬಿಸಿಯಾದ ತಾಪಮಾನದಿಂದ ಉಂಟಾಗುವ ತಲೆನೋವನ್ನು ತಡೆಯಲು ಫ್ರೆಮೆನೆಜುಮಾಬ್ ಔಷಧದ ಬಳಕೆ ಸಹಾಯಕವಾಗಲಿದ್ಯಾ ಎಂಬುದನ್ನು ಅಧ್ಯಯನದಲ್ಲಿ ಗಮನಿಸಲಾಗಿದೆ.
ಫ್ರೆಮೆನೆಜುಮಾಬ್ ಚರ್ಮದ ಅಡಿಯಲ್ಲಿ ನೀಡುವ ಇಂಜೆಕ್ಷನ್ ಆಗಿದ್ದು, ರೋಗಿಗಳಲ್ಲಿ ಮೈಗ್ರೇನ್ ಚಿಕಿತ್ಸೆಗಾಗಿ ನೀಡಲಾಗುವುದು. ಇದು ಮೊನೊಕ್ಲೋನಲ್ ಪ್ರತಿಕಾಯಗಳ ಒಂದು ಭಾಗವಾಗಿದೆ. ಕಳೆದ ಆರು ವರ್ಷಗಳಿಂದ ಮಾರುಕಟ್ಟೆಯಲ್ಲಿ ಇದು ಲಭ್ಯವಿದೆ.
ಪ್ರಾದೇಶಿಕ ಹವಾಮಾನ ದತ್ತಾಂಶದೊಂದಿಗೆ 660 ಮೈಗ್ರೇನ್ ರೋಗಿಗಳ 71,030 ದೈನಂದಿನ ಡೈರಿ ರೆಕಾರ್ಡ್ ಅನ್ನು ಸಂಶೋಧಕರು ಅಧ್ಯಯನ ನಡೆಸಿದ್ದಾರೆ. ಈ ವೇಳೆ ಬಿಸಿಲ ತಾಪಮಾನ 0.12 ಡಿಗ್ರಿ ಸೆಲ್ಸಿಯಸ್ ಹೆಚ್ಚಳವಾದರೂ ಯಾವುದೇ ತಲೆನೋವಿನ ಸಂಭವದಲ್ಲಿ ಶೇ 6ರಷ್ಟು ಹೆಚ್ಚಳವಿದೆ ಎಂದು ಕಂಡುಹಿಡಿದಿದ್ದಾರೆ.
ಫ್ರೆಮೆನೆಜಯಮಾಬ್ ಚಿಕಿತ್ಸೆ ಅವಧಿಯಲ್ಲಿ ಬಿಸಿಲು ಮತ್ತು ತಲೆನೋವು ಸಂಪೂರ್ಣವಾಗಿ ಕಣ್ಮರೆಯಾಗಿದೆ.
ಈ ಅಧ್ಯಯನವು ಕ್ಯಾಲ್ಸಿಟೋನಿನ್ ಜೀನ್ ಸಂಬಂಧಿತ ಪೆಪ್ಟೈಡ್ಅನ್ನು ನಿರ್ಬಂಧಿಸುವ ಮೈಗ್ರೇನ್-ನಿರ್ದಿಷ್ಟ ಚಿಕಿತ್ಸೆಗಳು ಹವಾಮಾನ-ಸಂಬಂಧಿತ ತಲೆನೋವುಗಳಿಗೆ ಚಿಕಿತ್ಸೆ ನೀಡಬಹುದು ಎಂಬ ಕುರಿತು ಮೊದಲ ಬಾರಿಗೆ ಉಲ್ಲೇಖಿಸಲಾಗಿದೆ ಎಂದು ನ್ಯೂಯಾರ್ಕ್ನಲ್ಲಿನ ಮೌಂಟ್ ಸಿನೈನಲ್ಲಿ ಇಕಾನ್ ಸ್ಕೂಲ್ ಆಫ್ ಮೆಡಿಸಿನ್ನ ಸಹಾಯಕ ಪ್ರೊಫೆಸರ್ ಮತ್ತು ಅಧ್ಯಯನದ ಸಹ ಲೇಖಕರಾಗಿರುವ ಫ್ರೆಡ್ ಕೊಹೆನ್ ತಿಳಿಸಿದ್ದಾರೆ.
ಫಲಿತಾಂಶದಲ್ಲಿ ಈ ಔಷಧವೂ ಬಿಸಿಲಿನ ತಾಪಮಾನ ಸಂಬಂಧ ಪ್ರಚೋದಿತ ಮೈಗ್ರೇನ್ಗೆ ಸಾಮರ್ಥ್ಯದಾಯಕ ಚಿಕಿತ್ಸೆಯಾಗಿದೆ ಎಂದು ದೃಢೀಕರಿಸಿದೆ.
ಔಷಧದ ಪಿತಾಮಹ ಹಿಪ್ಪೊಕ್ರೇಟ್ಸ್, ಹವಾಮಾನ ಮತ್ತು ಔಷಧವು ನಿಕಟ ಸಂಬಂಧ ಹೊಂದಿದೆ ಎಂದು ನಂಬಿದ್ದರು. ಮಾನವನ ಆರೋಗ್ಯದಲ್ಲಿ ಹವಾಮಾನವು ಮುಖ್ಯವಾಗಿದೆ ಎಂದು ನಾವು ಸಾಬೀತುಪಡಿಸುತ್ತಿದ್ದೇವೆ ಎಂದು ಅಮೆರಿಕದ ಕೃಷಿ ಇಲಾಖೆಯ ಮುಖ್ಯ ಹವಾಮಾನಶಾಸ್ತ್ರಜ್ಞ ಮತ್ತು ಅಧ್ಯಯನದ ಸಹ-ಲೇಖಕರಾಗಿ ನಿವೃತ್ತರಾದ ಅಲ್ ಪೀಟರ್ಲಿನ್ ತಿಳಿಸಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ಮೈಗ್ರೇನ್ಗೆ ಕಾರಣವಾಗುವ ಪ್ರಚೋದನಾ ಅಂಶಗಳನ್ನು ಪತ್ತೆ ಮಾಡಿದ ಸಂಶೋಧಕರು