ತಲೆಬುರುಡೆಯ ಮೇಲಿನ ಸೆಬಾಸಿಯಸ್ ಗ್ರಂಥಿಗಳಿಂದ 'ಸೀಬಮ್' ಎಂಬ ಎಣ್ಣೆಯಂತಹ ವಸ್ತು ಹೆಚ್ಚು ಬಿಡುಗಡೆಯಾಗುತ್ತದೆ. ಇದರಿಂದ ಕೂದಲು ಎಣ್ಣೆಯುಕ್ತವಾಗುತ್ತದೆ. ಧೂಳು, ಕೊಳೆ, ಬೆವರು ಸೇರಿಕೊಂಡರೆ ಇನ್ನೂ ಜಿಡ್ಡಾಗುತ್ತದೆ. ಇದರಿಂದ ತುರಿಕೆ, ತಲೆಹೊಟ್ಟು ಸೇರಿದಂತೆ ಹಲವು ಸಮಸ್ಯೆಗಳು ಸಾಮಾನ್ಯ.
ಇದರಿಂದ ಕೆಲವರಿಗೆ ಹಣೆಯಲ್ಲಿ ಮೊಡವೆಗಳು ಮೂಡುತ್ತವೆ. ಇದರ ಜೊತೆಗೆ ಮಾಲಿನ್ಯ, ಶಾಂಪೂ ಮತ್ತು ಉತ್ಪನ್ನಗಳ ಬಳಕೆಯಿಂದಲೂ ಕೂದಲು ಶುಷ್ಕ ಮತ್ತು ಅಲರ್ಜಿಯ ಜೊತೆಗೆ ವಿಪರೀತ ಉದುರಲು ಆರಂಭವಾಗುತ್ತದೆ. ಇಂಥ ಸಮಸ್ಯೆಗಳನ್ನು ನೈಸರ್ಗಿಕವಾಗಿಯೇ ಸುಲಭವಾಗಿ ಹೋಗಲಾಡಿಸಬಹುದು ಎನ್ನುತ್ತಾರೆ ತಜ್ಞರಾದ ಡಾ.ಶೈಲಜಾ ಸೂರಪನೇನಿ.
- ಎಣ್ಣೆ ಅಂಶವನ್ನು ಕಡಿಮೆ ಮಾಡಲು ಅಲೋವೆರಾ ಸಹಕಾರಿ. ಇದಕ್ಕಾಗಿ ಸ್ವಲ್ಪ ಅಲೋ ತಿರುಳನ್ನು ತೆಗೆದುಕೊಂಡು ತಲೆಗೆ ಹಚ್ಚಿಕೊಳ್ಳಿ. ಸ್ವಲ್ಪ ಹೊತ್ತು ಬಿಟ್ಟು ಸ್ನಾನ ಮಾಡಿ.
- 2015ರಲ್ಲಿ 'ಜರ್ನಲ್ ಆಫ್ ಡರ್ಮಟಾಲಜಿ'ಯಲ್ಲಿ ಪ್ರಕಟವಾದ ವರದಿಯು ಅಲೋವೆರಾ ಜೆಲ್ ಅನ್ನು 8 ವಾರಗಳ ಕಾಲ ನೆತ್ತಿಗೆ ಅನ್ವಯಿಸುವುದರಿಂದ ಎಣ್ಣೆಯುಕ್ತ ಚರ್ಮ ಹೊಂದಿರುವವರಲ್ಲಿ ಮೇದೋಗ್ರಂಥಿಗಳ ಸ್ರಾವ ಉತ್ಪಾದನೆ ಗಮನಾರ್ಹವಾಗಿ ತಗ್ಗಿದೆ ಎಂದು ತಿಳಿದುಬಂದಿದೆ.
- ನಿಮ್ಮ ಕೂದಲು ಎಣ್ಣೆಯುಕ್ತವಾಗಿದ್ದರೆ, ಟೀ ಟ್ರೀ ಎಣ್ಣೆ ಅಥವಾ ನಿಂಬೆ ರಸದೊಂದಿಗೆ ಕೆಲವು ಹನಿ ತೆಂಗಿನ ಎಣ್ಣೆ ಸೇರಿಸುವುದು ಉತ್ತಮ ಫಲಿತಾಂಶ ನೀಡುತ್ತದೆ.
- ಸ್ನಾನದ ನಂತರ, ಉಗುರು ಬೆಚ್ಚಗಿನ ನೀರಿನಲ್ಲಿ ಒಂದು ಚಮಚ ಆ್ಯಪಲ್ ಸೈಡರ್ ವಿನೆಗರ್ ಬೆರೆಸಿ ಮತ್ತು ತಲೆಗೆ ಹಚ್ಚಿ. ಕೆಲವು ನಿಮಿಷ ಕಾದು ನೀರಿನಿಂದ ತೊಳೆಯಿರಿ. ಇದು ನೆತ್ತಿಯ ಮೇಲೆ ಬಿಡುಗಡೆಯಾಗುವ ಹೆಚ್ಚುವರಿ ಮೇದೋಗ್ರಂಥಿಗಳ ಸ್ರವಿಸುವಿಕೆಯನ್ನು ನಿಯಂತ್ರಿಸುತ್ತದೆ. ಕೂದಲಿನ ಎಣ್ಣೆಯುಕ್ತತೆಯನ್ನು ಕಡಿಮೆ ಮಾಡುತ್ತದೆ.
- ಇಲ್ಲವಾದರೆ ನಿಂಬೆರಸ ಮತ್ತು ಆಲಿವ್ ಎಣ್ಣೆ ಸೇರಿಸಿ ನೆತ್ತಿಗೆ ಮಸಾಜ್ ಮಾಡುವುದರಿಂದ ಉತ್ತಮ ಪರಿಹಾರ ದೊರೆಯುತ್ತದೆ. ನಿರ್ದಿಷ್ಟವಾಗಿ ನಿಂಬೆಯಲ್ಲಿರುವ ಸಿಟ್ರಿಕ್ ಆಮ್ಲ ಮೆದೋಗ್ರಂಥಿಗಳ ಸ್ರಾವ ಉತ್ಪಾದನೆಯನ್ನು ಕಡಿಮೆ ಮಾಡಲು ಬಹಳ ಸಹಾಯಕ.
- ಒದ್ದೆ ಕೂದಲಿಗೆ ಅಡುಗೆ ಸೋಡಾ ಹಚ್ಚಿ, ಚೆನ್ನಾಗಿ ಮಸಾಜ್ ಮಾಡಿ ಮತ್ತು ಶಾಂಪೂವಿನಿಂದ ತಲೆ ಸ್ನಾನ ಮಾಡುವುದರಿಂದ ಎಣ್ಣೆಯುಕ್ತ ಕೂದಲಿನ ಸಮಸ್ಯೆ ಕಡಿಮೆಯಾಗುತ್ತದೆ.
- ಬೇವಿನ ಮರದ ಎಲೆಯನ್ನು ನೀರಿನಲ್ಲಿ ಕುದಿಸಿ. ಆ ನೀರಿನಿಂದ ಸ್ನಾನ ಮಾಡಿದರೆ ಒಳ್ಳೆಯ ಪ್ರತಿಫಲ ಸಿಗುತ್ತದೆ. ಈ ಸಲಹೆಗಳನ್ನು ವಾರಕ್ಕೆರಡು ಬಾರಿ ಪ್ರಯತ್ನಿಸಿದರೆ ಉರಿ, ಎಣ್ಣೆಯುಕ್ತ ಕೂದಲು, ತಲೆಹೊಟ್ಟು, ತುರಿಕೆ ಸಮಸ್ಯೆಗಳು ಮಾಯ ಮತ್ತು ಕೂದಲು ಹೊಳೆಯಲು ಆರಂಭಿಸುತ್ತವೆ.
- ಇವುಗಳನ್ನು ಅನುಸರಿಸುವುದರ ಹೊರತಾಗಿ ನೀರು ಆಧರಿತ ಶಾಂಪೂಗಳನ್ನು ಬಳಸಲು ಸೂಚಿಸಲಾಗುತ್ತದೆ. ಶಾಂಪೂ ಹಾಕಿದ ನಂತರ ನಿಮ್ಮ ಕೂದಲನ್ನು ನೀರಿನಿಂದ ತೊಳೆಯಿರಿ. ಕಂಡೀಷನರ್ ಬಳಸುವಾಗ ಹೇರ್ ಡ್ರೈಯರ್ ಮತ್ತು ಇಸ್ತ್ರಿ ಮಾಡುವಂತಹ ವಸ್ತುಗಳಿಂದ ದೂರವಿರಿ.
- ಬಾಚಣಿಗೆಯನ್ನು ಆಗಾಗ ಸ್ವಚ್ಛಗೊಳಿಸುತ್ತಿರಬೇಕು. ಬಿಸಿಲಿಗೆ ಹೋದ ನಂತರ ಅಥವಾ ವ್ಯಾಯಾಮದ ನಂತರ ನೀವು ಹೆಚ್ಚು ಬೆವರುತ್ತಿದ್ದರೆ, ಸ್ನಾನ ಮಾಡಿ. ಹೆಣ್ಮಕ್ಕಳು ಕೂದಲು ಒಣಗಿದ ನಂತರವೇ ಜಡೆ ಹಾಕಿಕೊಳ್ಳಬೇಕು.
ಗಮನಿಸಿ: ಇಲ್ಲಿ ನೀಡಲಾದ ಎಲ್ಲಾ ಆರೋಗ್ಯ ಮಾಹಿತಿ ಮತ್ತು ಸೂಚನೆಗಳು ನಿಮ್ಮ ಮಾಹಿತಿಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಇವುಗಳನ್ನು ಅನುಸರಿಸುವ ಮೊದಲು ನಿಮ್ಮ ವೈಯಕ್ತಿಕ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.