ಹೈದರಾಬಾದ್: ಕಾಫಿ ಕೇವಲ ಮನತಣಿಸುವ ಪಾನೀಯವಲ್ಲ. ಇದು ಮನಸ್ಥಿತಿ ನಿಭಾಯಿಸುವ, ಒತ್ತಡ ತಗ್ಗಿಸುವ ಉತ್ಸಾಹ ಹೆಚ್ಚಿಸುವ ಪೇಯವಾಗಿದೆ. ಇದೇ ಕಾರಣಕ್ಕೆ ಕಾಫಿ ಪ್ರಿಯರ ಸಂಖ್ಯೆ ಹೆಚ್ಚಿದೆ. ಸಾಮಾನ್ಯವಾಗಿ ಬೆಳಗ್ಗೆ ಮತ್ತು ಸಂಜೆ ಕಾಫಿ ಸೇವಿಸುವುದು ಸಹಜ. ಆದರೆ, ಇಂದಿನ ಪೀಳಿಗೆ ಜನ ಅವರಿಗೆ ಬೇಕಾದ ಸಮಯದಲ್ಲಿ ಕಾಫಿ ಹೀರುತ್ತಾರೆ. ಅದರಲ್ಲಂತೂ ಕೆಲವರು ಕಾಫಿ ಇಲ್ಲದೇ ದಿನವೇ ಆರಂಭಿಸುವುದಿಲ್ಲ. ಹಾಗಾದರೆ, ಈ ಕಾಫಿ ಕುಡಿಯಲು ಸರಿಯಾದ ಹೊತ್ತು ಯಾವುದು? ಯಾವಾಗ ಕುಡಿದ್ರೆ ಇದರಿಂದ ಪ್ರಯೋಜನ ಎಂದು ಯೋಚಿಸಿದ್ದೀರಾ?
ಈ ಸಮಯ ಅಪಾಯ: ತಜ್ಞರ ಪ್ರಕಾರ, ಬೆಳಗ್ಗೆ ಎದ್ದಾಕ್ಷಣ ಮೊದಲು ಕಾಫಿ ಸೇವಿಸುವುದು ಉತ್ತಮವಲ್ಲ. ಕಾರಣ ಈ ಬೆಳಗಿನ ಹೊತ್ತು ನಮ್ಮ ದೇಹದಲ್ಲಿ ಕಾರ್ಟಿಸೋಲ್ ಮಟ್ಟ ಅಧಿಕವಾಗಿರುತ್ತದೆ. ಈ ಸಮಯದಲ್ಲಿ ಕಾಫಿ ಸೇವಿಸುವುದರಿಂದ ಅದು ಕಾರ್ಟಿಸೋಲ್ ಉತ್ಪಾದನೆ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಕಾರ್ಟಿಸೋಲ್ ವ್ಯಕ್ತಿಯನ್ನು ಎಚ್ಚರ ಮತ್ತು ಉತ್ಸಾಹದಿಂದ ಇರುಸುತ್ತದೆ. ಈ ಹಿನ್ನೆಲೆಯಲ್ಲಿ ಬೆಳಗಿನ ಕಾಫಿ ಕಾರ್ಟಿಸೋಲ್ ಉತ್ಪಾದನೆ ಕಡಿಮೆ ಮಾಡಬಹುದು. ಅಷ್ಟೇ ಅಲ್ಲದೇ, ದಿನವಿಡಿ ಕಾಫಿ ಕುಡಿಯಬೇಕು ಹಂಬಲವನ್ನು ಇದು ಹೆಚ್ಚಿಸುತ್ತದೆ.
ಇದು ಬೆಸ್ಟ್ ಟೈಮ್: ಬೆಳಗಿನ ದೈಹಿಕ ಮತ್ತು ಮಾನಸಿಕ ವ್ಯಾಯಾಮದ ಬಳಿಕ ಕಾಫಿ ಸೇವಿಸುವುದು ಉತ್ತಮ. ಇಲ್ಲ ಬೆಳಗ್ಗೆ ಎದ್ದು ಕನಿಷ್ಠ 90 ನಿಮಿಷವಾದ ಬಳಿಕ ಸವಿಯಿರಿ. ಬೆಳಗ್ಗೆ ಎದ್ದ 2 ಗಂಟೆ ಅವಧಿಯೊಳಗೆ ಕಾಫಿ ಸೇವಿಸದಿರುವುದು ಒಳ್ಳೆಯದು. ಇದಾದ ಬಳಿಕ ಸೇವನೆ ಮಾಡುವುದರಿಂದ ಮಧ್ಯಾಹ್ನದವರೆಗೆ ನೀವು ಕ್ರಿಯಾಶೀಲವಾಗಿರಬಹುದು. ಆದಾಗ್ಯೂ, ಕೆಲವು ತಜ್ಞರು ಹೇಳುವಂತೆ ವ್ಯಾಯಾಮಕ್ಕೆ ಮುನ್ನ ಕಾಫಿ ಸೇವನೆ ವರ್ಕೌಟ್ ಅನ್ನು ಮತ್ತಷ್ಟು ತೀವ್ರಗೊಳಿಸುತ್ತದೆ.
2013ರಲ್ಲಿ ಪ್ರಕಟವಾದ ಜರ್ನಲ್ ಆಫ್ ಅಪ್ಲೈಡ್ ಫಿಸಿಯೊಲಾಜಿ ಲೇಖನದ ಪ್ರಕಾರ, ಬೆಳಗ್ಗೆ ಎದ್ದ 90 ನಿಮಿಷದ ಬಳಿಕ ಸೇವನೆ ದೈಹಿಕ ಮತ್ತು ಮಾನಸಿಕ ಅಭಿವೃದ್ಧಿಗೆ ಸಹಾಯ ಮಾಡುವುದರ ಜೊತೆ ತಲೆ ಸುತ್ತುವಿಕೆ ತಪ್ಪಿಸುತ್ತದೆ. ಈ ಅಧ್ಯಯನದಲ್ಲಿ ಚಿಕಾಗೋದ ಇಲ್ಲಿನೊಯ್ಸ್ ಯುನಿವರ್ಸಿಟಿ ಪ್ರೊ ಡಾ ಡೇವಿಡ್ ಸ್ಪೆನ್ಸರ್ ಭಾಗಿಯಾಗಿದ್ದರು.
ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನ: ಕೆಲವು ಮಂದಿಗೆ ಖಾಲಿ ಹೊಟ್ಟೆಯಲ್ಲಿ ಕಾಫಿ ಜೀರ್ಣವಾಗುವುದಿಲ್ಲ. ಮತ್ತೆ ಕೆಲವರು ಕಾಫಿ ಇಲ್ಲದೇ ಕಾರ್ಯಚಾರಣೆ ಆರಂಭಿಸುವುದಿಲ್ಲ. ಈ ರೀತಿ ವ್ಯಕ್ತಿ ವ್ಯತ್ಯಾಸಗಳ ನಡುವೆ ಕಾಫಿಯನ್ನು ಬೆಳಗ್ಗೆ 9.30 ರಿಂದ 11ರ ಒಳಗೆ ಸೇವಿಸುವುದು ಉತ್ತಮ ಎನ್ನಲಾಗಿದೆ.
ಸೂಚನೆ: ಈ ವರದಿಯಲ್ಲಿ ನೀಡಲಾದ ಎಲ್ಲ ಆರೋಗ್ಯ ಮಾಹಿತಿ ಮತ್ತು ವೈದ್ಯಕೀಯ ಸಲಹೆಗಳು ನಿಮ್ಮ ಮಾಹಿತಿಗಾಗಿ ಮಾತ್ರ. ಇವುಗಳನ್ನು ಅನುಸರಿಸುವ ಮುನ್ನ ನೀವು ನಿಮ್ಮ ಕುಟುಂಬದ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ಇದನ್ನೂ ಓದಿ: ಮಳೆಗಾಲದಲ್ಲಿ ಟೀ ಕುಡಿಯಿರಿ.. ಆದರೆ, ಈ ತಪ್ಪುಗಳನ್ನು ಮಾಡಿದ್ರೆ ಎಷ್ಟೆಲ್ಲ ಸಮಸ್ಯೆಗಳು ಗೊತ್ತಾ?