Finger millets health benefits: ಬಹುತೇಕ ಎಲ್ಲರಿಗೂ ಬೆಳಗ್ಗೆ ಚಹಾ ಅಥವಾ ಕಾಫಿ ಕುಡಿಯುವ ಅಭ್ಯಾಸವಿದೆ. ಆದರೆ, ಅದರ ಬದಲಾಗಿ ಈ ಆರೋಗ್ಯಕರ ಪಾನೀಯವನ್ನು ನಿಮ್ಮ ದಿನಚರಿಯಲ್ಲಿ ಸೇರಿಸಿದರೆ, ನೀವು ಇನ್ನೂ ಅತ್ಯುತ್ತಮ ಆರೋಗ್ಯವನ್ನು ಹೊಂದಬಹುದು ಎನ್ನುತ್ತಾರೆ ತಜ್ಞರು. ಪ್ರತಿದಿನ ಬೆಳಗಿನ ಜಾವ ಒಂದು ಲೋಟ ರಾಗಿ ಗಂಜಿಯನ್ನು ಸೇವಿಸಿದರೆ ದೇಹಕ್ಕೆ ಬೇಕಾದ ಪೋಷಕಾಂಶಗಳು ಸಿಗುತ್ತವೆ ಮತ್ತು ನೀವು ಆರೋಗ್ಯವಂತರಾಗಿ ಮತ್ತು ಚೈತನ್ಯದಿಂದ ಇರಲು ಸಹಕಾರಿ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ರಾಗಿ ಸಂಗಟಿ: ಇದು ತೆಲುಗು ರಾಜ್ಯಗಳಲ್ಲಿ ಬಹಳ ಪ್ರಸಿದ್ಧವಾಗಿದೆ. ಬೆಳಗಿನ ಉಪಹಾರ ಅಥವಾ ಮಧ್ಯಾಹ್ನದ ಊಟವಾಗಿ ಸೇವಿಸಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನಮ್ಮ ರಾಜ್ಯದಲ್ಲಿ ಅದರಲ್ಲೂ ದಕ್ಷಿಣ ಕರ್ನಾಟಕ ಭಾಗದ ಮೈಸೂರು ಪ್ರಾಂತ್ಯದಲ್ಲಿ ರಾಗಿ ಮುದ್ದೆ ಜನಪ್ರಿಯ ಹಾಗೂ ಆಹಾರದ ಪ್ರಮುಖ ಭಾಗವಾಗಿದೆ. ಮುದ್ದೆಯೇ ಇವರ ಪ್ರಮುಖ ಆಹಾರ. ರಾಗಿ ಸಂಗಟಿ ಮಾತ್ರವಲ್ಲದೇ ರಾಗಿ ದೋಸೆ, ಇಡ್ಲಿ, ಲಡ್ಡು, ಹಲ್ವಾ, ಪರೋಟಾ ಇತ್ಯಾದಿಗಳನ್ನು ಸಹ ತಯಾರಿಸಬಹುದು. ರಾಗಿಯಿಂದ ವಿವಿಧ ರೀತಿಯ ಭಕ್ಷ್ಯ ತಯಾರಿಸಬಹುದು. ಇದರಿಂದ ದೇಹಕ್ಕೆ ಬೇಕಾದ ಪೋಷಕಾಂಶಗಳು ದೊರೆಯುತ್ತವೆ.
ತೂಕ ನಿಯಂತ್ರಣ: ಅಧಿಕ ತೂಕ ಹೊಂದಿರುವವರು ರಾಗಿಯನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ತೂಕವನ್ನು ನಿಯಂತ್ರಣದಲ್ಲಿಡಬಹುದು. ಏಕೆಂದರೆ 100 ಗ್ರಾಂ ರಾಗಿ ಕೇವಲ 1.9 ಗ್ರಾಂ ಕೊಬ್ಬನ್ನು ಹೊಂದಿರುತ್ತದೆ. ಇದರಲ್ಲಿ ಫೈಬರ್ ಕೂಡ ಸಮೃದ್ಧವಾಗಿದೆ. ಆದ್ದರಿಂದ ಅವುಗಳನ್ನು ಕಡಿಮೆ ಪ್ರಮಾಣದಲ್ಲಿ ತೆಗೆದುಕೊಂಡರೂ ಹೊಟ್ಟೆ ತುಂಬಿದ ಭಾವನೆ ಉಂಟಾಗುತ್ತದೆ. ರಾಗಿ ಹಾಗೂ ರಾಗಿಯ ಇತರ ಉತ್ಪನ್ನಗಳ ಸೇವೆನೆಯಿಂದ ಅತಿಯಾದ ತಿನ್ನುವಿಕೆಯಿಂದ ಪಾರಾಗಬಹುದು.
ಮೂಳೆಗಳ ಬಲವರ್ದನೆಗೆ ಸಹಕಾರಿ: ಇದರಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದೆ. 100 ಗ್ರಾಂ ರಾಗಿಯಲ್ಲಿ 364 ಮಿಲಿಗ್ರಾಂ ಕ್ಯಾಲ್ಸಿಯಂ ಇದೆ ಅಂತಾರೆ ತಜ್ಞರು. ಹಾಗಾಗಿ, ರಾಗಿಯನ್ನು ಆಹಾರದ ಪ್ರಮುಖ ಭಾಗವಾಗಿ ಮಾಡಿಕೊಳ್ಳುವುದರಿಂದ ಇದರಲ್ಲಿನ ಕ್ಯಾಲ್ಸಿಯಂ ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಹಲ್ಲುಗಳನ್ನೂ ಸಹ ಬಲಗೊಳಿಸುತ್ತದೆ ಎಂದು ಹೇಳಲಾಗುತ್ತದೆ.
2018 ರಲ್ಲಿ ಜರ್ನಲ್ ಆಫ್ ಫುಡ್ ಸೈನ್ಸ್ ಅಂಡ್ ಟೆಕ್ನಾಲಜಿಯಲ್ಲಿ ಪ್ರಕಟವಾದ ವರದಿಯ ಪ್ರಕಾರ, ರಾಗಿಯಿಂದ ಮಾಡಿದ ಬ್ರೆಡ್ಗಳು ಮೂಳೆಗಳ ಸಾಂದ್ರತೆಯನ್ನು ಹೆಚ್ಚಿಸುತ್ತವೆ ಮತ್ತು ಅವು ಬಲಗೊಳ್ಳಲು ಸಹಾಯ ಮಾಡುತ್ತದೆ ಎಂದು ಕಂಡುಬಂದಿದೆ. ಈ ಸಂಶೋಧನೆಯಲ್ಲಿ ಹೈದರಾಬಾದ್ ನ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ ನ ಖ್ಯಾತ ಪೌಷ್ಟಿಕತಜ್ಞ ಡಾ.ಎಸ್. ವೆಂಕಟೇಶ್ ಬಾಬು ಭಾಗವಹಿಸಿದ್ದರು. ರಾಗಿಯಲ್ಲಿ ಇರುವ ಕ್ಯಾಲ್ಸಿಯಂ ಮೂಳೆಗಳನ್ನು ಗಟ್ಟಿಯಾಗಿಸಲು ತುಂಬಾ ಸಹಾಯಕವಾಗಿದೆ ಎಂದು ಅವರು ಹೇಳುತ್ತಾರೆ.
ಮಧುಮೇಹಕ್ಕೆ ದಿವ್ಯ ಔಷಧ: ಮಧುಮೇಹಕ್ಕೆ ರಾಗಿ ದಿವ್ಯ ಔಷಧ. ಏಕೆಂದರೆ ಅಕ್ಕಿ ಮತ್ತು ಗೋಧಿಗೆ ಹೋಲಿಸಿದರೆ ಇವುಗಳಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ಮಟ್ಟ ಬಹಳ ಕಡಿಮೆ. ಪರಿಣಾಮವಾಗಿ, ರಕ್ತದಲ್ಲಿನ ಗ್ಲೂಕೋಸ್ ಮಟ್ಟವು ನಿಯಂತ್ರಣದಲ್ಲಿದೆ ಎಂದು ಹೇಳಲಾಗುತ್ತದೆ. ಇದಲ್ಲದೇ, ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಆತಂಕ ಮತ್ತು ಖಿನ್ನತೆಯನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ.
ಸೌಂದರ್ಯ ಹೆಚ್ಚಿಸುತ್ತದೆ : ರಾಗಿ ಆರೋಗ್ಯಕ್ಕೆ ಮಾತ್ರವಲ್ಲ.. ಸೌಂದರ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಅವು ಉತ್ಕರ್ಷಣ ನಿರೋಧಕಗಳು ಮತ್ತು ಫೀನಾಲಿಕ್ ಆಮ್ಲಗಳಿಂದ ಸಮೃದ್ಧವಾಗಿವೆ. ಅಲ್ಲದೇ ಇವುಗಳಲ್ಲಿರುವ ವಿಟಮಿನ್ ಬಿ3 ಮತ್ತು ಅಮೈನೋ ಆಮ್ಲಗಳು ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸಿ ತ್ವಚೆಯಲ್ಲಿ ಸುಕ್ಕುಗಳನ್ನು ತಡೆಯುತ್ತದೆ.
ವಿಶೇಷ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲಾ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಇವುಗಳನ್ನು ಅನುಸರಿಸುವ ಮೊದಲು ನಿಮ್ಮ ಕುಟುಂಬದ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.