ತುರ್ತು ವೈದ್ಯಕೀಯ ವೃತ್ತಿಪರರ ಪ್ರಮುಖ ಕೊಡುಗೆಗಳು, ಅವರು ಸಲ್ಲಿಸುವ ಅಗತ್ಯ ಸೇವೆಗಳ ಮಹತ್ವ ತಿಳಿಸಲು ಹಾಗು ಎದುರಿಸುತ್ತಿರುವ ಸವಾಲುಗಳು, ರೋಗಿಗಳ ಫಲಿತಾಂಶಗಳ ಮೇಲೆ ಬೀರುವ ನಿರ್ಣಾಯಕ ಪ್ರಭಾವದ ಕುರಿತು ಸಾರ್ವಜನಿಕರು ಮತ್ತು ಸರ್ಕಾರದಲ್ಲಿ ಜಾಗೃತಿ ಮೂಡಿಸಲು ಮೇ 27ರಂದು ತುರ್ತು ವೈದ್ಯಕೀಯ ದಿನವನ್ನಾಗಿ ಆಚರಿಸಲಾಗುತ್ತದೆ.
ತುರ್ತು ವೈದ್ಯಕೀಯ ದಿನವನ್ನು ಯುರೋಪಿಯನ್ ಸೊಸೈಟಿ ಫಾರ್ ಎಮರ್ಜೆನ್ಸಿ ಮೆಡಿಸಿನ್ ವತಿಯಿಂದ (EUSEM) ಪ್ರಾರಂಭಿಸಲಾಯಿತು. ಮೊದಲ ಬಾರಿಗೆ ಮೇ 27, 2019ರಂದು ಆಚರಿಸಲಾಗಿದೆ.
ತುರ್ತು ಔಷಧದ ನಿರ್ಣಾಯಕ ಪಾತ್ರದ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಉತ್ತಮ ಬೆಂಬಲ, ಸಂಪನ್ಮೂಲಗಳು ಮತ್ತು ತುರ್ತು ವೈದ್ಯಕೀಯ ವೃತ್ತಿಪರರಿಗೆ ತರಬೇತಿ ನೀಡುವುದು ಈ ದಿನಾಚಣೆಯ ಪ್ರಮುಖ ಉದ್ದೇಶಗಳು.
ಮಹತ್ವ: ಎಮರ್ಜೆನ್ಸಿ ಮೆಡಿಸಿನ್ ಡೇ ಮೂಲಕ ಉನ್ನತ ಗುಣಮಟ್ಟದ ನಿರಂತರ ತರಬೇತಿ ಮತ್ತು ತುರ್ತು ವೈದ್ಯಕೀಯ ಸೇವೆಗಳಿಗಾಗಿ ಸುಧಾರಿತ ಸಂಪನ್ಮೂಲಗಳನ್ನು ತಲುಪಿಸಲಾಗುತ್ತದೆ. ಇದು ತುರ್ತುಸ್ಥಿತಿ ಸನ್ನದ್ಧತೆಯಲ್ಲಿ ಸಾರ್ವಜನಿಕ ತೊಡಗಿಸಿಕೊಳ್ಳುವಿಕೆಯನ್ನು ಉತ್ತೇಜಿಸುತ್ತದೆ. ತುರ್ತು ಪರಿಸ್ಥಿತಿಗಳು ಮತ್ತು ವಿಪತ್ತುಗಳಿಗೆ ಸಂಘಟಿತ ಪ್ರತಿಕ್ರಿಯೆಗಳನ್ನು ಹೆಚ್ಚಿಸಲು ಆರೋಗ್ಯ ರಕ್ಷಣೆಯ ಮಧ್ಯಸ್ಥಗಾರರ ನಡುವೆ ಸಹಯೋಗವನ್ನೂ ಪ್ರೋತ್ಸಾಹಿಸುತ್ತದೆ.
ಭಾರತದ ದೃಷ್ಟಿಕೋನ: 2021ರಲ್ಲಿ ನೀತಿ ಆಯೋಗವು 'ದೇಶ ಮಟ್ಟದಲ್ಲಿ ಪ್ರಸ್ತುತ ಸ್ಥಿತಿಯ ಆಧಾರದ ಮೇಲೆ ದ್ವಿತೀಯ ಮತ್ತು ತೃತೀಯ ಹಂತ' ಮತ್ತು 'ಜಿಲ್ಲಾ ಮಟ್ಟದ ತುರ್ತು ಮತ್ತು ಗಾಯದ ಆರೈಕೆ' ಎಂಬ ಶೀರ್ಷಿಕೆಯಡಿ ಎರಡು ಸಮಗ್ರ ವರದಿಗಳನ್ನು ಪ್ರಕಟಿಸಿತು. ಈ ವರದಿಗಳು ದೇಶಾದ್ಯಂತ ತುರ್ತು ಪ್ರಕರಣಗಳ ಪ್ರಮಾಣವನ್ನು ತೋರಿಸುತ್ತಿವೆ. ಆಂಬ್ಯುಲೆನ್ಸ್ ಸೇವೆಗಳು, ಆರೋಗ್ಯ ಮೂಲಸೌಕರ್ಯ, ಮಾನವ ಸಂಪನ್ಮೂಲಗಳು ಮತ್ತು ಸೂಕ್ತ ಆರೈಕೆಯನ್ನು ಒದಗಿಸುವಲ್ಲಿ ಉಂಟಾಗಿರುವ ಗಮನಾರ್ಹ ಅಂತರವನ್ನು ವರದಿಗಳು ಬಹಿರಂಗಪಡಿಸಿವೆ.
ಡಾ.ತಮೋರಿಶ್ ಕೋಲೆ ಪ್ರತಿಕ್ರಿಯೆ: ಏಷ್ಯನ್ ಸೊಸೈಟಿ ಫಾರ್ ಎಮರ್ಜೆನ್ಸಿ ಮೆಡಿಸಿನ್‌ನ ಮಾಜಿ ಅಧ್ಯಕ್ಷ ಡಾ.ತಮೋರಿಶ್ ಕೋಲೆ ಪ್ರತಿಕ್ರಿಯಿಸಿ, ''ಭಾರತದಲ್ಲಿ, ಎಲ್ಲಾ ರೀತಿಯ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸುವ ಆಸ್ಪತ್ರೆಗಳ ಸಾಮರ್ಥ್ಯವು ಗಮನಾರ್ಹವಾಗಿ ಬದಲಾಗುತ್ತಿದೆ. ಟ್ರಾಮಾ ಕೇಂದ್ರಗಳು, ರಾಷ್ಟ್ರೀಯ ಆರೋಗ್ಯ ಮಿಷನ್ ಮತ್ತು ಟೆಲಿಮೆಡಿಸಿನ್ ಸೇವೆಗಳ ಸ್ಥಾಪನೆಯಂತಹ ಸರ್ಕಾರದ ಉಪಕ್ರಮಗಳು ತುರ್ತು ಆರೈಕೆಯನ್ನು ಹೆಚ್ಚಿಸುವ ಗುರಿ ಹೊಂದಿವೆ. ಆದರೆ ಹೆಚ್ಚು ದೃಢವಾದ ಅನುಷ್ಠಾನ ಮತ್ತು ಸ್ಕೇಲಿಂಗ್ ಅಗತ್ಯವಿದೆ" ಎಂದು ತಿಳಿಸಿದರು.
ಗೋಲ್ಡನ್ ಅವರ್: ಈ ವರ್ಷದ ಮಾರ್ಚ್‌ನಲ್ಲಿ, ಕೇಂದ್ರವು ಚಂಡೀಗಢ ನಗರದಲ್ಲಿ ಪ್ರಾಯೋಗಿಕ ಕಾರ್ಯಕ್ರಮ ಪ್ರಾರಂಭಿಸಿತು. ಈ ಮೂಲಕ ಮೋಟಾರು ವಾಹನ-ಸಂಬಂಧಿತ ರಸ್ತೆ ಅಪಘಾತಗಳಲ್ಲಿ ಗಾಯಗೊಂಡವರಿಗೆ ನಗದುರಹಿತ ಚಿಕಿತ್ಸೆ ಒದಗಿಸಲಾಗುತ್ತಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ನೇತೃತ್ವದಲ್ಲಿ ಮತ್ತು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದಿಂದ ಮೇಲ್ವಿಚಾರಣೆ ಮಾಡಲಾಗುತ್ತದೆ. ಈ ಉಪಕ್ರಮದಡಿಯಲ್ಲಿ ನಿರ್ಣಾಯಕ "ಗೋಲ್ಡನ್ ಅವರ್"ನಲ್ಲಿ ಸಮಯೋಚಿತ ತುರ್ತು ಆರೈಕೆಯನ್ನು ಖಚಿತಪಡಿಸಿಕೊಳ್ಳುವುದು ಮತ್ತು ಮೋಟಾರು ವಾಹನ ಅಪಘಾತ ನಿಧಿಯ ಮೂಲಕ ಆಸ್ಪತ್ರೆಗಳಿಗೆ ಮರುಪಾವತಿ ಮಾಡುವ ಗುರಿ ಹೊಂದಲಾಗಿದೆ" ಎಂದು ವಿವರಿಸಿದರು.
"ಒಟ್ಟಾರೆಯಾಗಿ, ಭಾರತದಲ್ಲಿನ ಕೆಲವು ಆಸ್ಪತ್ರೆಗಳು ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು ಸುಸಜ್ಜಿತವಾಗಿದ್ದರೂ, ತುರ್ತು ಆರೈಕೆ ಸಾಮರ್ಥ್ಯಗಳಲ್ಲಿ ಗಮನಾರ್ಹ ಅಸಮಾನತೆಗಳಿವೆ. ತುರ್ತು ವಿಭಾಗಗಳಲ್ಲಿ ನಡೆಯುತ್ತಿರುವ ಹೂಡಿಕೆ, ತರಬೇತಿ ಮತ್ತು ಎಲ್ಲಾ ನಾಗರಿಕರಿಗೆ ಪರಿಣಾಮಕಾರಿ ತುರ್ತು ವೈದ್ಯಕೀಯ ಆರೈಕೆಗೆ ಸಮಾನ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು ವ್ಯವಸ್ಥಿತ ಸುಧಾರಣೆಗಳ ಅಗತ್ಯವಿದೆ" ಎಂದು ಡಾ.ಕೋಲೆ ಅಭಿಪ್ರಾಯಪಟ್ಟಿದ್ದಾರೆ.
ತುರ್ತು ವೈದ್ಯಕೀಯ ಆರೈಕೆ ಕೊರತೆಯಿಂದ ಸಾವು: ಮೇ 30, 2019ರ 72ನೇ ವಿಶ್ವ ಆರೋಗ್ಯ ಅಸೆಂಬ್ಲಿಯಲ್ಲಿ ಪ್ರತಿನಿಧಿಗಳು, ತುರ್ತು ಮತ್ತು ಆಘಾತ ಆರೈಕೆಯ ಕುರಿತು ನಿರ್ಣಯ ಅಂಗೀಕರಿಸಿದ್ದರು. ತೀವ್ರವಾಗಿ ಅನಾರೋಗ್ಯ ಮತ್ತು ಗಾಯಗೊಂಡವರಿಗೆ ಸಮಯೋಚಿತ ಚಿಕಿತ್ಸೆಯನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಇದು ಹೊಂದಿದೆ.
"ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ಗಮನಾರ್ಹ ಸಂಖ್ಯೆಯ ಸಾವುಗಳು ವರದಿಯಾಗುತ್ತಿವೆ. ತುರ್ತು ಆರೈಕೆ ಮಾಡುವುದರೊಂದಿಗೆ ಸಾವಿನ ಪ್ರಕರಣಗಳನ್ನು ತಡೆಗಟ್ಟಬಹುದು. ಡಬ್ಲ್ಯುಎಚ್‌ಒ ವರದಿ ಮಾಡಿದಂತೆ, ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡವರು ವಾರ್ಷಿಕವಾಗಿ ಸುಮಾರು 1.35 ಮಿಲಿಯನ್ ಜನರು ಸಾವನ್ನಪ್ಪುತ್ತಿದ್ದಾರೆ. ಅವರಿಗೆ ತುರ್ತು ಸಂದರ್ಭದಲ್ಲಿ ವೈದ್ಯಕೀಯ ಆರೈಕೆ ಮಾಡುವುದು ಅತ್ಯಗತ್ಯ" ಎಂದು ಡಾ.ಕೋಲೆ ಸಲಹೆ ನೀಡಿದರು.
ಹವಾಮಾನ ಬದಲಾವಣೆ ಮತ್ತು ಆರೋಗ್ಯ ತುರ್ತು ಪರಿಸ್ಥಿತಿ: "ಹವಾಮಾನ ಬದಲಾವಣೆಯು ಸಾರ್ವಜನಿಕ ಆರೋಗ್ಯಕ್ಕೆ ಗಂಭೀರವಾದ ಪರಿಣಾಮಗಳನ್ನು ಉಂಟುಮಾಡುತ್ತದೆ. ಹವಾಮಾನ ವೈಪರೀತ್ಯ, ಪರಿಸರ ಹಾನಿಗೊಳಿಸುವಿಕೆ ಆರೋಗ್ಯ ಬಿಕ್ಕಟ್ಟು ಸೃಷ್ಟಿಸುತ್ತದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಹವಾಮಾನ ಸಂಬಂಧಿತ ಅಂಶಗಳಿಂದ, ವಿಶೇಷವಾಗಿ ಶಾಖದ ಒತ್ತಡ, ಅಪೌಷ್ಟಿಕತೆ ಮತ್ತು ಸಾಂಕ್ರಾಮಿಕ ಕಾಯಿಲೆಗಳಿಂದಾಗಿ 2030 ಮತ್ತು 2050ರ ನಡುವೆ ವಾರ್ಷಿಕವಾಗಿ 2,50,000 ಸಾವುಗಳು ಸಂಭವಿಸಲಿದೆ ಎಂದು ಅಂದಾಜಿಸಲಾಗಿದೆ. ಶಾಖ ಸಂಬಂಧಿತ ಕಾಯಿಲೆಗಳು ಮತ್ತು ಸಾವುಗಳ ಅಪಾಯಗಳನ್ನು ಇದು ಹೆಚ್ಚಿಸುತ್ತವೆ. ಆದರೆ, ಚಂಡಮಾರುತಗಳು ಮತ್ತು ಪ್ರವಾಹಗಳಂತಹ ತೀವ್ರ ಹವಾಮಾನ ಘಟನೆಗಳಿಂದ ಸಾಂಕ್ರಾಮಿಕ ರೋಗಗಳು ಹೆಚ್ಚುತ್ತದೆ. ಇದಲ್ಲದೆ, ಹವಾಮಾನದ ಏರಿಳಿತಗಳು ಪರಿಸರ ವ್ಯವಸ್ಥೆಗಳನ್ನು ಅಡ್ಡಿಪಡಿಸುತ್ತವೆ. ಆಹಾರ ಮತ್ತು ನೀರಿನ ಭದ್ರತೆಗೆ ಸಂಬಂಧಿಸಿದ ಸವಾಲುಗಳನ್ನು ಹೆಚ್ಚಿಸುತ್ತವೆ" ಎಂದು ಡಾ.ಕೋಲೆ ಹೇಳಿದರು.
"ಈ ವರ್ಷದ ಮಾರ್ಚ್ 1ರಿಂದ ಭಾರತದಲ್ಲಿ 16,000ಕ್ಕೂ ಹೆಚ್ಚು ಜನರು ಶಾಖ ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಮತ್ತು 60 ಸಾವಿನ ಪ್ರಕರಣಗಳು ವರದಿಯಾಗಿದೆ. ಇದು ಶಾಖ ಸಂಬಂಧಿತ ಕಾಯಿಲೆಗಳ ಹೆಚ್ಚಳವನ್ನು ಸೂಚಿಸುತ್ತದೆ. ದೇಶದಾದ್ಯಂತ ಹೆಚ್ಚುತ್ತಿರುವ ತಾಪಮಾನದೊಂದಿಗೆ, ವಿಶೇಷವಾಗಿ ದುರ್ಬಲ ಜನಸಂಖ್ಯೆಯ (ಮಹಿಳೆಯರು, ಮಕ್ಕಳು, ವೃದ್ಧರು) ಮೇಲೆ ಪರಿಣಾಮ ಬೀರುತ್ತದೆ. ಶಾಖದ ಅಲೆಗಳ ಪ್ರಭಾವವನ್ನು ತಗ್ಗಿಸಲು ಸಾರ್ವಜನಿಕ ಆರೋಗ್ಯ ಸಲಹೆಗಳು ಮತ್ತು ಕೂಲಿಂಗ್ ಶೆಲ್ಟರ್‌ಗಳಂತಹ ಪೂರ್ವಭಾವಿ ಕ್ರಮಗಳು ನಿರ್ಣಾಯಕವಾಗಿವೆ" ಎಂದು ಡಾ.ಕೋಲೆ ತಿಳಿಸಿದರು.
ಜರ್ನಲ್ ಆಫ್ ದಿ ಅಮೆರಿಕನ್ ಹಾರ್ಟ್ ಅಸೋಸಿಯೇಷನ್‌ನಲ್ಲಿ ಪ್ರಕಟವಾದ ಅಧ್ಯಯನವು 2015 ಮತ್ತು 2017ರ ನಡುವೆ ಕ್ಯಾಲಿಫೋರ್ನಿಯಾದಲ್ಲಿ ಕಾಡ್ಗಿಚ್ಚಿನ ಹೊಗೆಗೆ ಒಡ್ಡಿಕೊಳ್ಳುವುದರಿಂದ ಹೃದಯ ಸ್ತಂಭನಗಳ ಪ್ರಕರಣಗಳು 6 ಪ್ರತಿಶತದಷ್ಟು ಹೆಚ್ಚಳವಾಗಿದೆ ಎಂದು ಕಂಡುಹಿಡಿದಿದೆ.
ಇದನ್ನೂ ಓದಿ: ಹಕ್ಕಿಜ್ವರಕ್ಕೂ ಬರಲಿದೆ ಲಸಿಕೆ: ಕೋವಿಡ್ ತಂತ್ರಜ್ಞಾನ ಆಧಾರಿತ ಹಕ್ಕಿ ಜ್ವರ ಲಸಿಕೆ ಅಭಿವೃದ್ಧಿ - experimental mRNA vaccine