ನವದೆಹಲಿ: ವಿಶ್ವ ಆರೋಗ್ಯ ಸಂಸ್ಥೆ(WHO) ವೈದ್ಯರು ಮತ್ತು ಜನಸಂಖ್ಯೆ ನಡುವಿನ ಅನುಪಾತ ದರ 1:1000 ಎಂದು ಶಿಫಾರಸು ಮಾಡಿದ್ದು, ಭಾರತದಲ್ಲಿ ಈ ಅನುಪಾತ 1:836 ರಷ್ಟಿದ್ದು, ಉತ್ತಮ ಬೆಳವಣಿಗೆ ಕಾಣುತ್ತಿದೆ ಎಂದು ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವರಾದ ಅನುಪ್ರಿಯ ಪಟೇಲ್ ಲೋಕಸಭೆಗೆ ಮಾಹಿತಿ ನೀಡಿದ್ದಾರೆ.
ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್ಎಂಸಿ) ಒದಗಿಸಿದ ಮಾಹಿತಿಯನುಸಾರ ರಾಜ್ಯ ವೈದ್ಯಕೀಯ ಮಂಡಳಿ ಮತ್ತು ರಾಷ್ಟ್ರೀಯ ವೈದ್ಯಕೀಯ ಮಂಡಳಿಗೆ ಜುಲೈ 2024ರ ವೇಳೆಗೆ 13,86,136 ಅಲೋಪತಿ ವೈದ್ಯರು ದಾಖಲಾಗಿದ್ದಾರೆ ಎಂದು ಅವರು ತಿಳಿಸಿದರು.
ದಾಖಲಾದ ಆಲೋಪತಿ ವೈದ್ಯರ ಲಭ್ಯತೆ ಶೇ 80ರಷ್ಟಿದೆ. ಆಯುಷ್ ವೈದ್ಯರ ಸಂಖ್ಯೆ 5.65ರಷ್ಟಿದ್ದು, ಈ ಮೂಲಕ ದೇಶದಲ್ಲಿ ವೈದ್ಯರ ದರ 1:836 ಇದೆ. ಇದು ವಿಶ್ವಸಂಸ್ಥೆ ಶಿಫಾರಸು ಮಾಡಿದ್ದಕ್ಕಿಂತ ಹೆಚ್ಚು ಎಂದರು. ಇದೇ ಸಂದರ್ಭದಲ್ಲಿ, ದೇಶದಲ್ಲಿ 731 ವೈದ್ಯಕೀಯ ಕಾಲೇಜುಗಳಿವೆ. ವಾರ್ಷಿಕವಾಗಿ 1,12,112 ಎಂಬಿಬಿಎಸ್ ಸೀಟುಗಳು ಲಭ್ಯವಿದ್ದು, 72,627 ಪಿಜಿ ಸೀಟುಗಳಿವೆ ಎಂದು ದತ್ತಾಂಶ ಒದಗಿಸಿದರು.
ವೈದ್ಯಕೀಯ ಕಾಲೇಜಿನ ಸೌಲಭ್ಯ ಮತ್ತು ಸಿಎಸ್ಎಸ್ (ಕೇಂದ್ರ ಪ್ರಯೋಜಿತ ಯೋಜನೆ) ಕಾಲೇಜುಗಳ ಗುಣಮಟ್ಟ ಸುಧಾರಣಾ ಕ್ರಮಗಳ ಮೂಲಕ ಹೊಸ ಕಾಲೇಜು ನಿರ್ಮಾಣ ಮತ್ತು ಹಾಲಿ ಇರುವ ಕಾಲೇಜುಗಳ ಉನ್ನತೀಕರಣ ಮಾಡಲಾಗುತ್ತಿದೆ. ಇದರಡಿ 157 ಕಾಲೇಜಿಗೆ ಅನುಮತಿ ನೀಡಿದ್ದು, ಈಗಾಗಲೇ 109 ಕಾಲೇಜು ಕಾರ್ಯಾಚರಣೆಗೆ ಅನುಮತಿ ನೀಡಲಾಗಿದೆ. ಸಿಎಸ್ಎಸ್ ಅಡಿಯಲ್ಲಿ ಮೆಡಿಕಲ್ ಕಾಲೇಜ್ಗಳನ್ನು ಎಂಬಿಬಿಎಸ್ (ಯುಜಿ) ಮತ್ತು ಪಿಜಿ ಸೀಟ್ಗಳನ್ನು ಹೆಚ್ಚಿಸಿ ಉನ್ನತೀಕರಿಸಲಾಗಿದೆ.
ಇದರ ಹೊರತಾಗಿ, ಪ್ರಧಾನಮಂತ್ರಿ ಸ್ವಾಸ್ಥ ಸುರಕ್ಷಾ ಯೋಜನೆಯೊಂದಿಗೆ ಸರ್ಕಾರಿ ವೈದ್ಯಕೀಯ ಕಾಲೇಜ್ ಅನ್ನು ಸೂಪರ್ಸ್ಪೆಷಾಲಿಟಿ ಬ್ಲಾಕ್ ಆಗಿ ಉನ್ನತೀಕರಿಸಲಾಗುತ್ತಿದೆ. 75 ಯೋಜನೆಗೆ ಅನುಮತಿ ನೀಡಿದ್ದು, 66 ಯೋಜನೆ ಪೂರ್ಣಗೊಂಡಿದೆ. ಕೇಂದ್ರ ವಲಯ ಯೋಜನೆಯಡಿ ಹೊಸ ಏಮ್ಸ್ ಸ್ಥಾಪನೆಗೆ ಮುಂದಾಗಿದ್ದು, 22 ಏಮ್ಸ್ಗಳಿಗೆ ಅನುಮತಿ ನೀಡಲಾಗಿದೆ. ಇದರಲ್ಲಿ 19ರಲ್ಲಿ ಯುಜಿ ಕೋರ್ಸ್ ಆರಂಭಿಸಲಾಗಿದೆ.
ವೈದ್ಯಕೀಯ ಉಪನ್ಯಾಸಕರ ಕೊರತೆ ನೀಗಿಸಲು ಡಿಎನ್ಬಿ ಪದವಿ ಹೊಂದಿರುವವರಿಗೆ ಮಾನ್ಯತೆ ನೀಡಿ, ಶಿಕ್ಷಕ ಸಿಬ್ಬಂದಿಯಾಗಿ ನೇಮಕಾತಿ ನೀಡಲಾಗುತ್ತಿದೆ. ಇದರ ಜೊತೆಗೆ, ವಯಸ್ಸಿನ ಮಿತಿ ವಿಸ್ತರಿಸಲಾಗುತ್ತಿದೆ. ಉಪನ್ಯಾಸಕರು, ಡೀನ್, ಪ್ರಿನ್ಸಿಪಾಲ್ ಮತ್ತು ಮೆಡಿಕಲ್ ಕಾಲೇಜ್ ನಿರ್ದೇಶಕರ ಹುದ್ದೆಗೆ ಮರು ನೇಮಕಾತಿಯೊಂದಿಗೆ 70 ವರ್ಷದವರೆಗೆ ಅವಕಾಶ ನೀಡಲಾಗುತ್ತಿದೆ ಎಂದು ಸಚಿವರು ವಿವರಿಸಿದರು.
ಇದನ್ನೂ ಓದಿ: ಜೀವ, ವೈದ್ಯಕೀಯ ವಿಮಾ ಕಂತುಗಳ ಮೇಲಿನ ಜಿಎಸ್‌ಟಿ ಹಿಂಪಡೆಯಿರಿ: ಗಡ್ಕರಿ ಜೊತೆ ಧ್ವನಿಗೂಡಿಸಿದ ಪ್ರತಿಪಕ್ಷಗಳು