ನವದೆಹಲಿ: ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ಸಿಪಿಆರ್ (ಹೃದಯ ಶ್ವಾಸಕೋಶದ ಪುನರುಜ್ಜೀವನ) ಉಪಯೋಗಿಸುವುದನ್ನು ಜನರು ಕಲಿಯುವುದು ಅವಶ್ಯವಾಗಿದೆ ಎಂದು ಖ್ಯಾತ ಹೃದ್ರೋಗ ತಜ್ಞ ಡಾ ದೇವಿ ಶೆಟ್ಟಿ ತಿಳಿಸಿದ್ದಾರೆ. ವ್ಯಕ್ತಿಯ ಜೀವನ ಉಳಿಸುವಲ್ಲಿ ಗೋಲ್ಡನ್ ಅವರ್ ಪ್ರಮುಖವಾಗಿದೆ. ಈ ಸಮಯದಲ್ಲಿ ಶೀಘ್ರ ತುರ್ತು ಪ್ರತಿಕ್ರಿಯೆ ನಡೆಸುವ ಮೂಲಕ ವ್ಯಕ್ತಿಯನ್ನು ಸಾವು ಮತ್ತು ಬದುಕಿನ ಹೋರಾಟದಿಂದ ಪಾರು ಮಾಡಬಹುದು ಎಂದು ತಿಳಿಸಿದ್ದಾರೆ.
ಏನಿದು ಗೋಲ್ಡನ್ ಅವರ್: ವೈದ್ಯಕೀಯ ಪರಿಭಾಷೆಯಲ್ಲಿ ಆಘಾತವಾದ 60 ನಿಮಿಷದಲ್ಲಿ ನೀಡುವ ತುರ್ತು ವೈದ್ಯಕೀಯ ಚಿಕಿತ್ಸೆ ಗೋಲ್ಡನ್ ಅವರ್ ಆಗಿರುತ್ತದೆ. ಆದಾಗ್ಯೂ, ಈ ಸಮಯವು ಪ್ರಕರಣದ ಗಂಭೀರತೆಯ ಮೇಲೆ ನಿರ್ಧಾರವಾಗುತ್ತದೆ. ಉದಾಹರಣೆ ಕೆಲವು ಬ್ರೈನ್ ಸ್ಟ್ರೋಕ್ನಲ್ಲಿ ಮೊದಲ ಒಂದು ಗಂಟೆ ಕ್ರಿಟಿಕಲ್ ಆಗಿರುತ್ತದೆ. ಆದರೆ, ಹೃದಯಾಘಾತದಂತಹ ಪ್ರಕರಣದಲ್ಲಿ ಈ ಗೋಲ್ಡನ್ ಅವರ್ ನಾಲ್ಕರಿಂದ ಆರುಗಂಟೆ ಆಗಿರುತ್ತದೆ ಎಂದು ನಾರಾಯಣ ಹೆಲ್ತ್ನ ಸಂಸ್ಥಾಪಕ ಮತ್ತು ಮುಖ್ಯಸ್ಥರಾದ ಡಾ ಶೆಟ್ಟಿ ತಿಳಿಸಿದ್ದಾರೆ.
ಜನರು ಸ್ಟ್ರೋಕ್ ಅಥವಾ ಜೀವ ಬೆದರಿಕೆಯಂತಹ ಅಪಘಾತದಲ್ಲಿ ಗೋಲ್ಡನ್ ಅವರ್ನ ಪ್ರಾಮುಖ್ಯತೆ ಅರಿತುಕೊಳ್ಳುವುದು ಅಗತ್ಯವಾಗಿದೆ. ಅವರು ಕೇವಲ ಸರಿಯಾದ ತುರ್ತು ಕೋಣೆಯನ್ನು ಮಾತ್ರವಲ್ಲ, ಸರಿಯಾದ ಆಸ್ಪತ್ರೆಗೆ ದಾಖಲಾಗುವುದು ಕೂಡ ಅವಶ್ಯವಾಗಿದೆ.
ತಪ್ಪಾಗಿ ಬೇರೆ ಆಸ್ಪತ್ರೆಗಳಲ್ಲಿ, ತುರ್ತು ನಿಗಾದ ವ್ಯಕ್ತಿಗಳನ್ನು ದಾಖಲಿಸುವುದು ಕೂಡ ಸಮಸ್ಯೆಗೆ ಕಾರಣವಾಗುತ್ತದೆ. ಕಾರಣ ಅವರು ಸಮಸ್ಯೆ ಏನು ಎಂಬುದನ್ನು ಅರಿಯಲು ಎರಡು ಗಂಟೆ ತೆಗೆದುಕೊಳ್ಳಬಹುದು. ಈ ಗೋಲ್ಡನ್ ಅವರ್ ಮುಗಿದ ಮೇಲೆ ಲಕ್ಷಾಂತರ ರೂ ಖರ್ಚು ಮಾಡಿದರೂ ಕೂಡ ಪ್ರಯೋಜನಕ್ಕೆ ಬರುವುದಿಲ್ಲ ಎಂದು ಅವರು ಹೇಳಿದರು.
ಸಾಮಾನ್ಯ ಜನರಿಗೆ ಗೋಲ್ಡನ್ ಅವರ್ ಕುರಿತು ಶಿಕ್ಷಣ ನೀಡುವುದು ಅಗತ್ಯ. ಈ ಹಿನ್ನೆಲೆ ಇನ್ಸೈಡರ್ ಎಂಬ ಮೊದಲ ಡಾಕ್ಯುಮೆಂಟ್ ಸಿರೀಸ್ ಅನ್ನು ನಮ್ಮ ಸಂಸ್ಥೆ ಹೊರ ತರುತ್ತಿದೆ ಎಂದರು. ಇದೇ ವೇಳೆ, ಜನರಿಗೆ ಸಿಪಿಆರ್ ಕುರಿತು ಕಲಿಯಲು ಮುಂದಾಗಬೇಕು. ಸಿಪಿಆರ್ ಜೀವ ರಕ್ಷಕವಾಗಿದ್ದು, ಜನರು ಈ ಬಗ್ಗೆ ಮಾಹಿತಿ ಹೊಂದಿರಬೇಕು ಎಂದರು.
ಸಿಪಿಆರ್ ಪ್ರಯೋಜನ: ಹೃದಯ ಸ್ತಂಭನದಲ್ಲಿ ಹೃದಯವು ಸಂಪೂರ್ಣವಾಗಿ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಸಿಪಿಆರ್ ನೀಡುವ ಮೂಲಕ ಮಾತ್ರ ಅವನನ್ನು ಉಳಿಸಬಹುದು. ಆದರೆ, ಅದು ಕೂಡ ತಕ್ಷಣಕ್ಕೆ ಮಾಡದಿದ್ದರೆ, ವ್ಯಕ್ತಿ ಬದುಕುವುದು ಕಷ್ಟ. ಸಿಪಿಆರ್ ನಾಲ್ಕು ಸಂದರ್ಭಗಳಲ್ಲಿ ವ್ಯಕ್ತಿಯನ್ನು ಉಳಿಸಬಹುದು. ಹೃದಯ ಸ್ತಂಭನದ ಸಂದರ್ಭದಲ್ಲಿ, ನೀರಿನಲ್ಲಿ ಮುಳುಗಿದ ವ್ಯಕ್ತಿಯನ್ನು ಹೊರ ತೆಗೆದಾಗ, ವಿದ್ಯುತ್ ಪ್ರವಾಹದ ನಂತರ ಪ್ರಜ್ಞಾಹೀನರಾದಾಗ ವ್ಯಕ್ತಿಯ ಎದೆಯ ಮಧ್ಯಭಾಗದಲ್ಲಿ ಒತ್ತುವುದರ ಮೂಲಕ ಹೃದಯ ಮತ್ತು ಮೆದುಳಿನಲ್ಲಿ ರಕ್ತ ಪರಿಚಲನೆಗೆ ಸಹಾಯ ಮಾಡುತ್ತದೆ.
ಇದನ್ನೂ ಓದಿ: ಭಾರತದಲ್ಲಿ ಕುಸಿದ ಫಲವತ್ತತೆ ದರ: 2050ರಲ್ಲಿ ಚಿತ್ರಣ ಹೇಗಿರಲಿದೆ?