ಬೆಂಗಳೂರು: ರಸ್ತೆ ಅಪಘಾತದಲ್ಲಿ ಕರುಳಿಗೆ ಹೊಡೆತ ಬಿದ್ದ ಕಾರಣ ಕರುಳಿನಲ್ಲಿ ರಂಧ್ರ ಉಂಟಾಗಿ ಗಂಭೀರವಾಗಿದ್ದ 10 ವರ್ಷದ ಬಾಲಕನಿಗೆ ಫೋರ್ಟಿಸ್ ಆಸ್ಪತ್ರೆಯಲ್ಲಿ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ. ಬನ್ನೇರುಘಟ್ಟ ರಸ್ತೆ ಫೋರ್ಟಿಸ್ ಆಸ್ಪತ್ರೆಯ ಶಿಶುವೈದ್ಯ ಮತ್ತು ತೀವ್ರ ನಿಗಾ ವಿಭಾಗದ ಸಲಹೆಗಾರ ಡಾ. ಯೋಗೇಶ್ ಕುಮಾರ್ ಗುಪ್ತಾ ಮತ್ತು ಮಕ್ಕಳ ಶಸ್ತ್ರಚಿಕಿತ್ಸಾ ವಿಭಾಗದ ಸಲಹೆಗಾರ ಡಾ.ಶ್ರೀಧರ ಮೂರ್ತಿ ಅವರ ತಂಡ ಶಸ್ತ್ರಚಿಕಿತ್ಸೆ ನಡೆಸಿದೆ.
ವೈದ್ಯರ ಮಾತು: ಈ ಕುರಿತು ಮಾತನಾಡಿದ ಡಾ. ಶ್ರೀಧರ ಮೂರ್ತಿ, ಮೋಹನ್ ಎಂಬ 10 ವರ್ಷದ ಬಾಲಕನು ರಸ್ತೆ ಅಪಘಾತದಲ್ಲಿ ಗಾಯಗೊಂಡು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆದು ಮನೆಗೆ ಮರಳಿದ್ದರು. ಆದರೆ, ಒಂದು ವಾರದಲ್ಲಿ ಆ ಬಾಲಕನಿಗೆ ಹೊಟ್ಟೆಯಲ್ಲಿ ತೀವ್ರ ನೋವು, ವಾಂತಿ ಕಾಣಿಸಿಕೊಂಡಿತ್ತು. ಬಳಿಕ ಬಾಲಕನನ್ನು ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಿ, ಸಂಪೂರ್ಣ ತಪಾಸಣೆ ಮಾಡಲಾಯಿತು. ಅಪಘಾತದಿಂದ ಆತನ ಹೊಟ್ಟೆಯಲ್ಲಿನ ಅಂಗಾಂಗಗಳು ಅಂಟಿಕೊಂಡ ಸ್ಥಿತಿಗೆ ತಲುಪಿದ್ದವು.
ಇದರಿಂದ ಕರುಳಿನಲ್ಲಿ ರಂಧ್ರ ಉಂಟಾಗಿ, ಧ್ರವ ಸೋರಿಕೆಯಾಗಿರುವುದು ಕಂಡು ಬಂದಿತು. ಹೀಗಾಗಿ ಬಾಲಕನ ಜೀರ್ಣಕ್ರಿಯೆ ಏರುಪೇರಾಗಿ ಅಪಾಯದ ಹಂತ ತಲುಪಿತ್ತು. ಕೂಡಲೇ ಬಾಲಕನಿಗೆ ಶಸ್ತ್ರಚಿಕಿತ್ಸೆಯ ಅನಿವಾರ್ಯತೆ ಕಂಡು ಬಂದಿತು. ಬಾಲಕನಿಗೆ ರಂಧ್ರವಾಗಿದ್ದ ಕರುಳಿನ ಭಾಗವನ್ನು ಕತ್ತರಿಸಿ ತೆಗೆದು, ಅನಾಸ್ಟೊಮೊನಿಸಿಸ್ ಎಂಬ ಶಸ್ತ್ರಚಿಕಿತ್ಸೆಯನ್ನು ನಡೆಸಲಾಯಿತು. ಅನಾಸ್ಟೊಮೊನಿಯಾ ಶಸ್ತ್ರಚಿಕಿತ್ಸೆಯು ಕತ್ತರಿಸಿದ ಅಂಗವನ್ನು ಮತ್ತೊಂದು ಅಂಗದೊಂದಿಗೆ ಹೊಂದಾಣಿಕೆ ಮಾಡುವ ಕ್ರಿಯೆಯಾಗಿದೆ. ಇದರಿಂದ ಕರುಳಿನ ಕ್ರಿಯೆ ಎಂದಿನಂತೆ ನಡೆಯಲಿದೆ. ಇದೊಂದು ಅಪರೂಪದ ಪ್ರಕರಣವಾಗಿದ್ದು, ಈ ಶಸ್ತ್ರಚಿಕಿತ್ಸೆಯಿಂದ ಬಾಲಕನ ಜೀವ ಉಳಿದಿದೆ'' ಎಂದು ವಿವರಿಸಿದರು.
ಈ ಕುರಿತು ಡಾ .ಯೋಗೇಶ್ ಕುಮಾರ್ ಗುಪ್ತಾ ಮಾತನಾಡಿ, ಬಾಲಕನಿಗೆ ಅಪಘಾತವಾದ ಸಂದರ್ಭದಲ್ಲಿ ದೇಹದ ಮೇಲೆ ಅಷ್ಟಾಗಿ ಗಾಯಗಳಾಗದೇ ಇದ್ದರೂ ಒಳಭಾಗದಲ್ಲಿ ಹೆಚ್ಚು ಗಾಯವಾಗಿತ್ತು. ಇದರಿಂದ ಕರುಳಿನ ಕೆಲವು ಭಾಗವನ್ನು ಕತ್ತರಿಸಿ, ಉಳಿದಂತೆ ಕರುಳಿನ ಭಾಗವನ್ನು ಹೊಂದಿಸ ಲಾಗಿದೆ. ಇದೀಗ ಬಾಲಕ ಸಂಪೂರ್ಣ ಚೇತರಿಕೆಯ ಹಾದಿಯಲ್ಲಿದ್ದಾನೆ ಎಂದು ಹೇಳಿದರು.
ಇದನ್ನೂ ಓದಿ: ರಾಜ್ಯದಲ್ಲಿ ಮುಂದುವರೆದ ಮಳೆ ಅಬ್ಬರ; ಈ ಜಿಲ್ಲೆಗೆ ರೆಡ್ ಅಲರ್ಟ್ ಘೋಷಣೆ - Karnataka Rain Forecast