'ಯುವ' ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ದೊಡ್ಮನೆ ಕುಟುಂಬದ ಕುಡಿ ಯುವ ರಾಜ್‍ಕುಮಾರ್ ಅವರ ಎರಡನೇ ಚಿತ್ರ ಘೋಷಣೆಯಾಗಿದೆ. ಯುವ ಚಿತ್ರ ಆದ ಬಳಿಕ ಯುವ ರಾಜ್‍ಕುಮಾರ್ ಯಾವ ಸಿನಿಮಾ ಮಾಡಲಿದ್ದಾರೆ? ಯಾವ ನಿರ್ದೇಶಕ ಆ್ಯಕ್ಷನ್ ಕಟ್ ಹೇಳಲಿದ್ದಾರೆ? ಹಾಗೂ ಯಾವ ಚಲನಚಿತ್ರ ನಿರ್ಮಾಣ ಸಂಸ್ಥೆಯಿಂದ ಸಿನಿಮಾ ನಿರ್ಮಾಣಗೊಳ್ಳಲಿದೆಯೆಂದು ಅಭಿಮಾನಿಗಳು ಎದುರು ನೋಡುತ್ತಿದ್ದರು. ಕೆಲ ದಿನಗಳ ಹಿಂದೆ ಪವರ್ ಸ್ಟಾರ್ ಹುಟ್ಟು ಹಾಕಿರುವ ಪಿಆರ್ಕೆ ಪ್ರೊಡಕ್ಷನ್ನಲ್ಲಿ ಯುವನ ಎರಡನೇ ಚಿತ್ರ ಮೂಡಿ ಬರೋದು ಕನ್ಫರ್ಮ್ ಆಗಿತ್ತು. ಆದ್ರೆ ನಿರ್ದೇಶಕರಾರು ಎಂಬ ಕುತೂಹಲ ಮೂಡಿತ್ತು. ಪಿಆರ್ಕೆ ಬ್ಯಾನರ್ನ ಅಶ್ವಿನಿ ಪುನೀತ್ ರಾಜ್‍ಕುಮಾರ್ ಜೊತೆ ಯಾರೆಲ್ಲಾ ಕೈ ಜೋಡಿಸಿದ್ದಾರೆಂಬುದರ ಮಾಹಿತಿ ಇಲ್ಲಿದೆ.
ದೇಶಾದ್ಯಂತ ನವರಾತ್ರಿ ಸಂಭ್ರಮ ಜೋರಾಗಿದೆ. ಆಯುಧ ಪೂಜೆಯ ಶುಭ ಸಂದರ್ಭ ಯುವ ರಾಜ್‍ಕುಮಾರ್ ಎರಡನೇ ಸಿನಿಮಾದ ಅಪ್ಡೇಟ್ ಹೊರ ಬಿದ್ದಿದೆ. ಫಸ್ಟ್ ಲುಕ್ ಅನಾವರಣಗೊಂಡಿದ್ದು, ಸಿನಿಮಾ ಮಾಹಿತಿ ಸಿಕ್ಕಿದೆ. ಪಿಆರ್ಕೆ ಬ್ಯಾನರ್ ಜೊತೆಗೆ ಕೆ.ಆರ್.ಜಿ ಸ್ಟುಡಿಯೋದವರರಾದ ಕಾರ್ತಿಕ್, ಯೋಗಿ ಜಿ.ರಾಜ್ ಹಾಗೂ ಹಲವು ಹಿಟ್ ಸಿನಿಮಾಗಳ ನಿರ್ಮಾಪಕ ಜಯಣ್ಣ ಅವರುಗಳು ಈ ಸಿನಿಮಾಗೆ ಕೈ ಜೋಡಿಸಿದ್ದಾರೆ.
ಆಯುಧ ಪೂಜೆ ಅಂಗವಾಗಿ ಯುವ 2 ಎಂಬ ಹೆಸರಿನಲ್ಲಿ ಫಸ್ಟ್ ಲುಕ್ ಜೊತೆಗೆ ನಿರ್ದೇಶಕರು ಯಾರು ಅನ್ನೋದನ್ನು ಅನೌನ್ಸ್ ಮಾಡಲಾಗಿದೆ. ರತ್ನನ್ ಪ್ರಪಂಚ ಮೂಲಕ ಭರವಸೆ ಮೂಡಿಸಿರುವ ರೋಹಿತ್ ಪದಕಿ ಯುವ 2 ಚಿತ್ರದ ಸಾರಥಿಯೆಂದು ಘೋಷಣೆ ಮಾಡಿದ್ದಾರೆ. ಚಿತ್ರದ ಪೋಸ್ಟರ್ ನೋಡಿದ್ರೆ ರಕ್ತಚರಿತ್ರೆ ಕಥೆ ಹೇಳ್ತಾರಾ ಎಂಬ ಪ್ರಶ್ನೆ ಮೂಡುತ್ತಿದೆ.
ಇದನ್ನೂ ಓದಿ: 'ವೆಟ್ಟೈಯನ್' ಕಲೆಕ್ಷನ್: ಅಮಿತಾಭ್ ಬಚ್ಚನ್, ರಜನಿಕಾಂತ್ ಸಿನಿಮಾ ಗಳಿಸಿದ್ದಿಷ್ಟು
ಈಗಾಗಲೇ ಯುವ ಸಿನಿಮಾ ಮೂಲಕ ಭರವಸೆ ಹುಟ್ಟಿಸಿರುವ ನಟ ತಮ್ಮ ಎರಡನೇ ಚಿತ್ರದಲ್ಲಿ ಯಾವ ರೀತಿಯ ಪಾತ್ರ ನಿರ್ವಹಿಸಲಿದ್ದಾರೆ ಅನ್ನೋ ಕುತೂಹಲ ಸಹಜವಾಗಿ ಮೂಡಿದೆ. ಚೊಚ್ಚಲ ಚಿತ್ರದಲ್ಲಿ ಬೊಂಬಾಟ್ ಆ್ಯಕ್ಷನ್, ಪಂಚಿಂಗ್ ಡೈಲಾಗ್ಸ್, ಉತ್ತಮ ಅಭಿನಯದಿಂದ ಅಭಿಮಾನಿಗಳ ಮನಸ್ಸು ಕದ್ದಿದ್ದರು. ಇದೀಗ ರಕ್ತಸಿಕ್ತ ಲಾಂಗ್ ಹಿಡಿಯಲು ರೆಡಿಯಾಗಿದ್ದಾರೆ. ಪೋಸ್ಟರ್ ಹಂಚಿಕೊಂಡಿರುವ ನಟ, ಆಯುಧ ಪೂಜೆ ಹಾಗೂ ದಸರಾ ಹಬ್ಬದ ಶುಭಾಶಯಗಳು! ಮನುಷ್ಯತ್ವ ನಮ್ಮೊಳಗಿರೋ ಮೃಗದ ಮುಖವಾಡ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ನವೆಂಬರ್ 1ಕ್ಕೆ ಫಸ್ಟ್ ಲುಕ್, ಟೈಟಲ್ ಅನಾವರಣಗೊಳಿಸುವುದಾಗಿಯೂ ತಿಳಿಸಲಾಗಿದೆ.
ಇದನ್ನೂ ಓದಿ: 'ಮಾರ್ಟಿನ್' ಬಿಡುಗಡೆ: ಚಿತ್ರಮಂದಿರಗಳ ನಿರ್ವಹಣೆ ಕೊರತೆಗೆ ಅಭಿಮಾನಿಗಳ ಆಕ್ರೋಶ
ಇನ್ನೂ ಈ ಸಿನಿಮಾದಲ್ಲಿ ಯಾರೆಲ್ಲಾ ನಟಿಸಲಿದ್ದಾರೆ? ಯುವನಿಗೆ ನಾಯಕಿ ಯಾರು? ಅನ್ನೋದು ಗೊತ್ತಾಗಬೇಕಿದೆ. ಪಿಆರ್ಕೆ, ಕೆಆರ್ಜಿ ಸ್ಟುಡಿಯೋ ಜೊತೆ ಸಾಕಷ್ಟು ಸಿನಿಮಾಗಳನ್ನು ಪ್ರೊಡ್ಯೂಸ್ ಮಾಡಿರುವ ಜಯಣ್ಣ ಈ ತಂಡದಲ್ಲಿದ್ದಾರೆ. ಹಾಗಾಗಿ ಕಥೆ, ಚಿತ್ರಕಥೆಗೆ ಹೆಚ್ಚು ಒತ್ತು ಕೊಡಲಿದ್ದಾರೆ? ಹಾಡುಗಳು ಮತ್ತು ಸಿನಿಮಾ ಕ್ವಾಲಿಟಿಯಲ್ಲಿ ಯಾವುದೇ ಕಾಂಪ್ರಮೈಸ್ ಆಗದೇ ಒಂದೊಳ್ಳೆ ಸಿನಿಮಾ ನಿರ್ಮಾಣ ಮಾಡ್ತಾರೆ ಎಂಬುದು ಸಿನಿಮಂದಿಯ ನಿರೀಕ್ಷೆ.