ಭಾರತೀಯ ಚಿತ್ರರಂಗದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆಯಾದ 'ಯಶ್ ರಾಜ್ ಫಿಲ್ಮ್ಸ್'ನ ಸ್ಪೈ ಯೂನಿವರ್ಸ್‌ನ ಮುಂದಿನ ಭಾಗಕ್ಕೆ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಆಲಿಯಾ ಭಟ್ ಅವರನ್ನು ಆಯ್ಕೆ ಮಾಡಲಾಗಿದೆ. ಮುಂಬರುವ ಬಹುನಿರೀಕ್ಷಿತ ಸ್ಪೈ ಥ್ರಿಲ್ಲರ್‌ನಲ್ಲಿ ಶಾರ್ವರಿ ವಾಘ್ ಕೂಡ ಇರಲಿದ್ದಾರೆ. ವೈಆರ್ಎಫ್ (ಯಶ್ ರಾಜ್ ಫಿಲ್ಮ್ಸ್)ನ ಆದಿತ್ಯ ಚೋಪ್ರಾ ಅವರು, ಮಹಿಳೆ ಮುಖ್ಯಭೂಮಿಕೆ ವಹಿಸೋ ಮೊದಲ ಸ್ಪೈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಲು ಶಿವ್ ರಾವೈಲ್ ಅವರನ್ನು ಆಯ್ಕೆ ಮಾಡಿದ್ದಾರೆ.
'ಯಶ್ ರಾಜ್ ಫಿಲ್ಮ್ಸ್'ನ ಸ್ಪೈ-ಆಧಾರಿತ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾಗಳಲ್ಲಿ ಸಲ್ಮಾನ್ ಖಾನ್, ಹೃತಿಕ್ ರೋಷನ್ ಮತ್ತು ಟೈಗರ್ ಶ್ರಾಫ್ ಕಾಣಿಸಿಕೊಂಡಿದ್ದಾರೆ. ಕತ್ರಿನಾ ಕೈಫ್, ದೀಪಿಕಾ ಪಡುಕೋಣೆಯವರಂತಹ ನಟಿಯರು ಈ ಚಿತ್ರಗಳಲ್ಲಿ ಕಾಣಿಸಿಕೊಂಡರಾದರೂ ಗೂಢಾಚಾರಿ ಪಾತ್ರಗಳಲ್ಲಿ ನಾಯಕರೇ ಕಾಣಿಸಿಕೊಂಡಿದ್ದರು. ನಾಯಕ ನಟರೇ ಮುಖ್ಯಭೂಮಿಕೆಯಲ್ಲಿದ್ದರು. ಇದೀಗ ವೈಆರ್ಎಫ್ನ ಸ್ಪೈ ಯೂನಿವರ್ಸ್ನಲ್ಲಿ ಭಾರತದ ಮೊದಲ ಮಹಿಳಾ ಏಜೆಂಟ್ ಆಗಲು ಆಲಿಯಾ ಭಟ್ ಸಜ್ಜಾಗಿದ್ದಾರೆ. ಈ ಚಿತ್ರದಲ್ಲಿ ಶಾರ್ವರಿ ವಾಘ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪಠಾಣ್, ವಾರ್ ಮತ್ತು ಟೈಗರ್ ಯಶಸ್ಸಿನ ನಂತರ, ಯಶ್ ರಾಜ್ ಫಿಲ್ಮ್ಸ್ ಪತ್ತೇದಾರಿ ಸಿನಿ ಜಗತ್ತಿನಲ್ಲಿ, ಮೊದಲ ಮಹಿಳಾ-ನೇತೃತ್ವದ ಸಿನಿಮಾಗೆ ಸಜ್ಜಾಗುತ್ತಿದೆ.
ಆಲಿಯಾ ಮತ್ತು ಶಾರ್ವರಿ ಮುಖ್ಯಭೂಮಿಕೆಯ ಚಿತ್ರಕ್ಕೆ 'ದಿ ರೈಲ್ವೆ ಮೆನ್' ಖ್ಯಾತಿಯ ಶಿವ್ ರಾವೈಲ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ವರದಿಗಳ ಪ್ರಕಾರ, ಆಲಿಯಾ ಮತ್ತು ಶಾರ್ವರಿ ಚಿತ್ರದಲ್ಲಿ 'ಸೂಪರ್ ಏಜೆಂಟ್'ಗಳ ಪಾತ್ರ ನಿರ್ವಹಿಸಲಿದ್ದಾರೆ. ಈಗಾಗಲೇ ಪಠಾಣ್ ಮತ್ತು ಟೈಗರ್‌ನಿಂದ ದೀಪಿಕಾ ಪಡುಕೋಣೆ ಮತ್ತು ಕತ್ರಿನಾ ಕೈಫ್ ಸದ್ದು ಮಾಡಿದ್ದರೂ, ಈ ಚಿತ್ರಗಳಲ್ಲಿ ನಾಯಕ ನಟರು ಸ್ಪೈ ಪಾತ್ರ ನಿರ್ವಹಿಸಿದ್ದರು. ಆದ್ರೆ ಮುಂದಿನ ಸ್ಪೈ ಸಿನಿಮಾದಲ್ಲಿ ಆಲಿಯಾ ಮತ್ತು ಶಾರ್ವರಿ 'ಸೂಪರ್ ಏಜೆಂಟ್'ಗಳಾಗಿ ಕಾಣಿಸಿಕೊಳ್ಳಲಿದ್ದಾರೆ.
ಜೋಯಾ ಅಖ್ತರ್ ಅವರು ಈ ಹಿಂದೆ ಆಲಿಯಾ ಮತ್ತು ವೈಆರ್ಎಫ್ ಕಾಂಬಿನೇಶನ್ನ ಬಗ್ಗೆ ಸುಳಿವು ನೀಡಿದ್ದರು. ಮಹಿಳಾ ಕಲಾವಿದರು ಆ್ಯಕ್ಷನ್-ಪ್ಯಾಕ್ಡ್ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿರುವುದು ಗಮನಾರ್ಹ ಬದಲಾವಣೆಯನ್ನು ಸೂಚಿಸುತ್ತದೆ.
ಗಂಗೂಬಾಯಿ ಕಥಿಯಾವಾಡಿ ಮತ್ತು ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಯಂತಹ ಸಿನಿಮಾಗಳಿಗೆ ಪ್ರಶಂಸೆ ಗಳಿಸಿರುವ ಆಲಿಯಾಗೆ ಇದು ದೊಡ್ಡ ಪ್ರಾಜೆಕ್ಟ್. 2023 ರಲ್ಲಿ 'ಹಾರ್ಟ್ ಆಫ್ ಸ್ಟೋನ್' ಮೂಲಕ ಹಾಲಿವುಡ್‌ಗೂ ಪದಾರ್ಪಣೆ ಮಾಡಿದ್ದಾರೆ. ಗಾಲ್ ಗಡೋಟ್ ಅವರ ಪತ್ತೇದಾರಿ ಪಾತ್ರದ ಎದುರು ಹ್ಯಾಕರ್ ಆಗಿ ಕಾಣಿಸಿಕೊಂಡಿದ್ದರು. ಆದರೆ ನಟಿಯ ಪಾತ್ರ, ಹೆಚ್ಚಿನ ಆ್ಯಕ್ಷನ್ ಸೀಕ್ವೆನ್ಸ್‌ಗಳನ್ನು ಒಳಗೊಂಡಿರಲಿಲ್ಲ.
ಇದನ್ನೂ ಓದಿ: ನಗ್ನಳಾಗುವ ಆಫರ್ to ರಾಜ್ ಕುಂದ್ರಾ ಕೇಸ್: ಪೂನಂ ಪಾಂಡೆ ವಿವಾದಗಳಿವು!
ಇನ್ನೂ ಶಾರ್ವರಿ ವಾಘ್ ಅವರಿಗೆ ಈ ಚಿತ್ರ ಅವರ ವೃತ್ತಿಜೀವನದಲ್ಲಿ ಒಂದು ಮೈಲಿಗಲ್ಲು ಎಂದೇ ಹೇಳಬಹುದು. ಯಶ್ ರಾಜ್ ಫಿಲ್ಮ್ಸ್ನ ಬಂಟಿ ಔರ್ ಬಬ್ಲಿ 2 ಮತ್ತು ಕಬೀರ್ ಖಾನ್ ಅವರ ಪ್ರೈಮ್ ವಿಡಿಯೋ ಸೀರಿಸ್ 'ದಿ ಫರ್ಗಾಟನ್ ಆರ್ಮಿ'ಯಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಆಲಿಯಾ ಮತ್ತು ವೈಆರ್ಎಫ್ ಜೊತೆಗಿನ ಈ ಯೋಜನೆಯು ಈವರೆಗಿನ ಅತ್ಯಂತ ಬಿಗ್ ಪ್ರೊಜೆಕ್ಟ್ ಆಗಿ ಗುರುತಿಸಿಕೊಳ್ಳುತ್ತದೆ.
ಇದನ್ನೂ ಓದಿ: ಮಾರ್ಚ್ 29ಕ್ಕೆ ತೆರೆಗಪ್ಪಳಿಸಲಿದೆ ಕರೀನಾ, ಟಬು, ಕೃತಿ ಸಿನಿಮಾ: 'ದಿ ಕ್ರ್ಯೂ' ಟೀಸರ್ ನೋಡಿ
ಲವ್ ಸ್ಟೋರಿ ಮತ್ತು ಬೇತಾಬ್‌ನಂತಹ ಪ್ರೊಜೆಕ್ಟ್ಗಳಿಗೆ ಹೆಸರುವಾಸಿಯಾದ ನಿರ್ದೇಶಕ ರಾಹುಲ್ ರಾವೈಲ್ ಅವರ ಪುತ್ರ ಶಿವ್ ರಾವೈಲ್ ಈ ಸ್ಪೈ ಸಿನಿಮಾ ಮೂಲಕ ಚೊಚ್ಚಲ ನಿರ್ದೇಶನ ಸಾಹಸಕ್ಕೆ ಕೈ ಹಾಕಿದ್ದಾರೆ. 1984ರ ಭೋಪಾಲ್ ಅನಿಲ ದುರಂತವನ್ನು ಆಧರಿಸಿದ ಅವರ ನೆಟ್‌ಫ್ಲಿಕ್ಸ್ ಸರಣಿ ದಿ ರೈಲ್ವೆ ಮೆನ್ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿದೆ..