70ನೇ ಪ್ರತಿಷ್ಠಿತ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಇತ್ತೀಚೆಗಷ್ಟೇ ಘೋಷಣೆಯಾಗಿವೆ. ಕನ್ನಡದ ಮೂರು ಸಿನಿಮಾಗಳು ಆರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿವೆ. ಇದು ಸ್ಯಾಂಡಲ್ವುಡ್ ಮತ್ತು ಕನ್ನಡಿಗರಿಗೆ ಬಹಳ ಸಂತಸದ ವಿಚಾರ. ಕಾಂತಾರ ಸಿನಿಮಾದಲ್ಲಿನ ಅಮೋಘ ಅಭಿನಯಕ್ಕೆ ಅತ್ಯುತ್ತಮ ನಟ ಪ್ರಶಸ್ತಿಯನ್ನು ರಿಷಬ್ ಶೆಟ್ಟಿ ಗೆದ್ದುಕೊಂಡಿದ್ದಾರೆ. ಜೊತೆಗೆ ಕಾಂತಾರ ಅತ್ಯುತ್ತಮ ಮನರಂಜನಾ ಸಿನಿಮಾವಾಗಿ ಹೊರಹೊಮ್ಮಿದೆ. ಬ್ಲಾಕ್ಬಸ್ಟರ್ ಕೆಜಿಎಫ್ 2 ಚಿತ್ರಕ್ಕೆ ಅತ್ಯುತ್ತಮ ಆ್ಯಕ್ಷನ್ ಡೈರೆಕ್ಷನ್, ಮಧ್ಯಂತರ ಸಿನಿಮಾಗೆ ಚೊಚ್ಚಲ ಚಿತ್ರದಲ್ಲಿ ಅತ್ಯುತ್ತಮ ನಿರ್ದೇಶನ ಮತ್ತು ಅತ್ಯುತ್ತಮ ಸಂಕಲನ ರಾಷ್ಟ್ರ ಪ್ರಶಸ್ತಿಗಳು ಬಂದಿವೆ.
ನಟಸಾರ್ವಭೌಮನಿಗೆ ದಕ್ಕದ ಪ್ರತಿಷ್ಠಿತ ಪ್ರಶಸ್ತಿ: ಪ್ರತೀ ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಘೋಷಣೆಯಾದಾಗ ಕನ್ನಡ ಚಿತ್ರರಂಗದ ವಿಚಾರದಲ್ಲೊಂದು ಪ್ರಶ್ನೆ ಮೂಡುತ್ತದೆ. ನಟಸಾರ್ವಭೌಮ ಡಾ.ರಾಜ್ಕುಮಾರ್ ಅವರಿಗೆ ಈ ಪ್ರತಿಷ್ಠಿತ ಪ್ರಶಸ್ತಿ ಲಭಿಸಿಲ್ಲ. ರಾಜ್ಕುಮಾರ್ ಅವರಿಗಿಂತ ಅತ್ಯುತ್ತಮ ನಟ ಇನ್ಯಾರು? ಅವರ ಅಮೋಘ ಅಭಿನಯಕ್ಕೆ ಅದ್ಯಾಕೆ ರಾಷ್ಟ್ರಪ್ರಶಸ್ತಿ ಘೋಷಣೆಯಾಗಲಿಲ್ಲ ಅನ್ನೋ ಪ್ರಶ್ನೆ ಕನ್ನಡಿಗರಲ್ಲಿದೆ.
ಕನ್ನಡ ಚಿತ್ರರಂಗಕ್ಕೆ ಸಿಕ್ಕ ರಾಷ್ಟ್ರ ಪ್ರಶಸ್ತಿಗಳು: ಈ ಬಾರಿ ಕನ್ನಡದ ಡಿವೈನ್ ಸ್ಟಾರ್ ಖ್ಯಾತಿಯ ರಿಷಬ್ ಶೆಟ್ಟಿ ಅವರಿಗೆ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ಘೋಷಣೆಯಾಗಿದೆ. ಸಹಜವಾಗಿ ಇದು ಕನ್ನಡಿಗರಿಗೆ ಖುಷಿ ತಂದಿದೆ. ಕನ್ನಡದ ಮಟ್ಟಿಗೆ ಅತ್ಯುತ್ತಮ ನಟ ನ್ಯಾಷನಲ್ ಅವಾರ್ಡ್ ಬಂದಿರೋದು 4 ಬಾರಿ ಮಾತ್ರ. ಚೋಮನದುಡಿ ಸಿನಿಮಾಗೆ ವಾಸುದೇವರಾಯರಿಗೆ, ತಬರನ ಕಥೆ ಸಿನಿಮಾದ ನಟನೆಗೆ ಚಾರುಹಾಸನ್ ಅವರಿಗೆ ಮತ್ತು 2014ರಲ್ಲಿನ ನಾನು ಅವನಲ್ಲ ಅವಳು ಸಿನಿಮಾದ ಅಭಿನಯಕ್ಕೆ ಸಂಚಾರಿ ವಿಜಯ್ ಅವರಿಗೆ ಈ ಪ್ರಶಸ್ತಿ ಸಿಕ್ಕಿತ್ತು. ಇದೀಗ ರಿಷಬ್ ಶೆಟ್ಟಿ ಅತ್ಯುತ್ತಮ ನಟ ವಿಚಾರದಲ್ಲಿ 4ನೇ ರಾಷ್ಟ್ರ ಪ್ರಶಸ್ತಿಯನ್ನು ಚಂದನವನಕ್ಕೆ ತಂದುಕೊಟ್ಟಿದ್ದಾರೆ.
ಹಾಗಾದ್ರೆ, 90 ವರ್ಷಗಳ ಇತಿಹಾಸವಿರುವ ಕನ್ನಡ ಚಿತ್ರರಂಗದಲ್ಲಿ ಇವರುಗಳಷ್ಟೇ ಶ್ರೇಷ್ಟ ನಟರಾ? ನೂರಾರು ಚಿತ್ರಗಳನ್ನು ಮಾಡಿರುವ ಅದ್ಭುತ ನಟರುಗಳಿಗೇಕೆ ರಾಷ್ಟ್ರಪ್ರಶಸ್ತಿ ಸಿಗಲಿಲ್ಲ? ನಮ್ಮ ವರನಟ ಡಾ.ರಾಜ್ಕುಮಾರ್ ಅವರಿಗೇಕೆ ಈ ಪ್ರಶಸ್ತಿ ದಕ್ಕಲಿಲ್ಲ ಅನ್ನೋ ಪ್ರಶ್ನೆ ಕನ್ನಡ ಸಿನಿಪ್ರಿಯರನ್ನು ಕಾಡದೇ ಇರುವುದಿಲ್ಲ.
ಅಣ್ಣಾವ್ರಿಗೇಕೆ ಸಿಗಲಿಲ್ಲ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ?: 5 ದಶಕಗಳ ಕಾಲ ಬಣ್ಣದ ಜಗತ್ತಿನಲ್ಲಿ ನಟಸಾರ್ವಭೌಮನಾಗಿ ಮರೆದು 205 ಸಿನಿಮಾಗಳಲ್ಲಿ ಅಮೋಘ ಅಭಿನಯದ ಮೂಲಕ ಜನಮನ ತಲುಪಿದ ಅಣ್ಣಾವ್ರ ಕಲಾಸೇವೆಗೆ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಬಂದಿದೆ. ಜೀವನಚೈತ್ರ ಸಿನಿಮಾದ ಗಾಯನಕ್ಕೆ ಅತ್ಯುತ್ತಮ ಗಾಯಕ ರಾಷ್ಟ್ರಪ್ರಶಸ್ತಿ ಬಂದಿದೆ. ಆದ್ರೆ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ಮಾತ್ರ ಅಣ್ಣಾವ್ರಿಗೆ ಸಿಗಲೇ ಇಲ್ಲ. ಈ ಬಗ್ಗೆ ಡಿಎನ್ಎ ಸಿನಿಮಾ ನಿರ್ದೇಶಕ ಪ್ರಕಾಶ್ ರಾಜ್ ಮೇಹು 'ಈಟಿವಿ ಭಾರತ'ದ ಜೊತೆ ಮಾತನಾಡಿದ್ದಾರೆ.
ನಿರ್ದೇಶಕ ಪ್ರಕಾಶ್ ರಾಜ್ ಮೇಹು ಹೇಳಿದ್ದಿಷ್ಟು: ನಿರ್ದೇಶಕ ಪ್ರಕಾಶ್ ರಾಜ್ ಮೇಹು ಹೇಳುವ ಹಾಗೆ, ಈ ರಾಷ್ಟ್ರ ಪ್ರಶಸ್ತಿಗಳನ್ನು ಕಲಾತ್ಮಕ ಜೊತೆಗೆ ಉತ್ತಮ, ನ್ಯಾಚುರಲ್ ಅಭಿನಯಕ್ಕಾಗಿ ಕೊಡುತ್ತಿದ್ದರು. ಆದ್ರೆ ರಾಷ್ಟ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ನಟ ಹಾಗೂ ಅತ್ಯುತ್ತಮ ನಿರ್ದೇಶಕ ಅನ್ನೋ ಕಾನ್ಸೆಪ್ಟ್ ಇರಲಿಲ್ಲ. ಇಂಥದ್ದೊಂದು ವಾಡಿಕೆ ಶುರುವಾಗಿದ್ದು 1967ರಿಂದ. ಅಷ್ಟರ ಹೊತ್ತಿಗೆ ಅಣ್ಣಾವ್ರು 100ಕ್ಕೂ ಹೆಚ್ಚು ಸಿನಿಮಾಗಳನ್ನು ಮಾಡಿದ್ದರು.
ಹಾಗೆ ನೋಡಿದ್ರೆ ಎರಡು ಬಾರಿ ಡಾ.ರಾಜ್ಕುಮಾರ್ ಅತ್ಯುತ್ತಮ ನಟ ರಾಷ್ಟ್ರೀಯ ಪ್ರಶಸ್ತಿ ರೇಸ್ನಲ್ಲಿ ಕೊನೆ ಹಂತಕ್ಕೆ ಹೋಗಿದ್ರು. 1971ರಲ್ಲಿ ಕಸ್ತೂರಿ ನಿವಾಸ ಸಿನಿಮಾಗೆ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ಬರುತ್ತದೆ ಎಂದೇ ಹೇಳಲಾಯ್ತು. ಆದ್ರೆ ಹಾಗಾಗಲಿಲ್ಲ. ಇದಕ್ಕೆ ರಾಜಕೀಯ ಪ್ರಭಾವವೂ ಒಂದು ಕಾರಣವಿರಬಹುದೆಂದು ತಿಳಿಸಿದರು.
ಇದರ ಜೊತೆಗೆ 1977ರಲ್ಲೂ ಸನಾದಿ ಅಪ್ಪಣ್ಣ ಸಿನಿಮಾದ ನಟನೆಗೆ ಅಣ್ಣಾವ್ರಿಗೆ ರಾಷ್ಟ್ರಪ್ರಶಸ್ತಿ ಸಿಗುವುದಿತ್ತು. ಆದ್ರೆ ಆಗ ಈ ಸಿನಿಮಾದಲ್ಲಿ ಹಾಡುಗಳಿವೆ. ಇದೊಂದು ಕಮರ್ಷಿಯಲ್ ಸಿನಿಮಾ. ಈ ಸಿನಿಮಾಗೆ ಪ್ರಶಸ್ತಿ ಕೊಡೋದು ಬೇಡ ಎಂದು ಅವಾರ್ಡ್ ಕಮಿಟಿ ಮೆಂಬರ್ಸ್ ಪಟ್ಟು ಹಿಡಿದಿದ್ದರು. ಹೀಗಾಗಿ ಮತ್ತೆ ಅಣ್ಣಾವ್ರಿಗೆ ಪ್ರಶಸ್ತಿ ತಪ್ಪಿಹೋಯಿತು ಎಂದು ತಿಳಿಸಿದರು.
ಅಣ್ಣಾವ್ರು ಪೌರಾಣಿಕ, ಸಮಾಜಿಕ ಕಳಕಳಿಯ ಪಾತ್ರಗಳಲ್ಲೇ ಹೆಚ್ಚು ನಟಿಸಿದ್ದಾರೆ. ಆ ರೀತಿಯ ಪಾತ್ರಗಳಿಗೆ ಈ ಪ್ರಶಸ್ತಿ ಕೊಡುವುದಕ್ಕೆ ಬರುವುದಿಲ್ಲ ಎಂಬ ನಿಯಮ ಇದೆ. ಕಲಾತ್ಮಕ ಚಿತ್ರ ಹಾಗೂ ಅಭಿನಯ ಈ ಪ್ರಶಸ್ತಿಗೆ ಅರ್ಹ ಎಂದಿದೆ. ಹಾಗೇ ನೋಡುವುದಾದರೆ ಅಣ್ಣಾವ್ರು ನಾಂದಿ, ಉಯ್ಯಾಲೆ ಅಂತಹ ಸಿನಿಮಾಗಳು ಕಲಾತ್ಮಕವಾಗಿ ಮೂಡಿ ಬಂದಿವೆ. ಬಂಗಾರದ ಮನುಷ್ಯ ಸಿನಿಮಾದಲ್ಲಿನ ಅಣ್ಣಾವ್ರ ಅಭಿನಯ ಅಮೋಘ. ಅಲ್ಲಿ ಕಿರುಚಾಟ ಇಲ್ಲ, ಬಡಿದಾಟ ಇಲ್ಲ. ಪಾತ್ರದಲ್ಲಿ ಜೀವಿಸಿದ್ದಾರೆ. ಜೊತೆಗೆ ಸಾಕ್ಷಾತ್ಕಾರ ಸಿನಿಮಾದಲ್ಲಿನ ಅಭಿನಯಕ್ಕೂ ಅತ್ಯುತ್ತಮ ನಟ ಪ್ರಶಸ್ತಿ ಕೊಡಬಹುದಿತ್ತು. ಇದೆನೆಲ್ಲಾ ನೋಡಿದ್ರೆ ರಾಜ್ಕುಮಾರ್ ಅವರಿಗೆ 10 ರಾಷ್ಟ್ರೀಯ ಪ್ರಶಸ್ತಿಗಳು ಬರಬೇಕಿತ್ತು ಎಂದರು ನಿರ್ದೇಶಕ ಪ್ರಕಾಶ್ ರಾಜ್ ಮೇಹು.
ಇದನ್ನೂ ಓದಿ: ನಂಜುಂಡೇಶ್ವರನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್ಕುಮಾರ್, ಶಾಸಕ ಜಿ.ಟಿ.ದೇವೇಗೌಡ: ವಿಡಿಯೋ - Nanjundeshwara Temple
ಚೋಮನದುಡಿ ಸಿನಿಮಾಗೆ ವಾಸುದೇವರಾಯರಿಗೆ, ತಬರನ ಕಥೆ ಸಿನಿಮಾದ ನಟನೆಗೆ ಚಾರುಹಾಸನ್ಗೆ ಮತ್ತು ನಾನು ಅವನಲ್ಲ ಅವಳು ಸಿನಿಮಾದ ಅಭಿನಯಕ್ಕೆ ಸಂಚಾರಿ ವಿಜಯ್ಗೆ ಈ ಪ್ರಶಸ್ತಿ ದಕ್ಕಿದೆ. ಇದೀಗ ರಿಷಬ್ ಅವರಿಗೆ ಅವಾರ್ಡ್ ಬಂದಿದ್ದು, ಈ ಬಗ್ಗೆ ನನ್ನ ಆಕ್ಷೇಪ ಇಲ್ಲ. ಹಾಗೆ ನೋಡುವುದಾದರೆ ನಮ್ಮ ಚಿತ್ರರಂಗದ ಅಣ್ಣಾವ್ರಿಂದ ಹಿಡಿದು ಬಾಲಕೃಷ್ಣ, ನರಸಿಂಹ ರಾಜ್, ವಿಷ್ಣುವರ್ಧನ್, ಅನಂತ್ ನಾಗ್, ಲೋಕೇಶ್ ಅಂತಹ ನಟರಿಗೆ ಈ ರಾಷ್ಟ್ರ ಪ್ರಶಸ್ತಿಗಳು ಬರಬೇಕಿತ್ತು. ಚೋಮನದುಡಿ ಚಿತ್ರದಲ್ಲಿ ವಾಸುದೇವರಾಯರು ಮಾಡಿರೋ ಪಾತ್ರದಂತೆ ಅಣ್ಣಾವ್ರು ಭೂದಾನ ಚಿತ್ರದಲ್ಲಿ ಮಾಡಿದ್ದಾರೆ. ಹಾಗೆ ನೋಡುವುದಾದರೆ ಅಣ್ಣಾವ್ರಿಗೂ ಈ ಪ್ರಶಸ್ತಿ ಕೊಡಬೇಕಿತ್ತು. ಇದೆನೆಲ್ಲಾ ನೋಡುವುದಾದರೆ ಈ ಪ್ರಶಸ್ತಿಯ ಹಿಂದೆ ರಾಜಕೀಯ ಒತ್ತಡ, ಜಾತಿ ರಾಜಕಾರಣ ಸೇರಿದಂತೆ ಆಯಾ ಕಾಲಕ್ಕೆ ಎಲ್ಲವೂ ಕೆಲಸ ಮಾಡುತ್ತದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ರಕ್ಷಿತ್ ಶೆಟ್ಟಿ ನಿರ್ಮಾಣದ 'ಇಬ್ಬನಿ ತಬ್ಬಿದ ಇಳೆಯಲಿ' ಟ್ರೇಲರ್ ಅನಾವರಣಕ್ಕೆ ದಿನ ನಿಗದಿ - Rakshit Shetty movie
ಒಟ್ಟಾರೆ ಕನ್ನಡದ ವರನಟನಿಗೆ ಕೊನೆವರೆಗೂ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ಕೊಡಲಿಲ್ಲ ಅನ್ನೋ ಬೇಸರ ಇದ್ದೇ ಇದೆ. ಅಣ್ಣಾವ್ರಿಗೆ ಕನ್ನಡಿಗರ ಹೃದಯದಲ್ಲಿ ಶ್ರೇಷ್ಟನಟ ಎಂಬ ಸ್ಥಾನ ಕೊಟ್ಟಿರೋದು ಒಂದು ದೊಡ್ಡ ಪ್ರಶಸ್ತಿಗೆ ಸಮಾನ ಎನ್ನಬಹುದು.