22 ಜನವರಿ 2024 ರಾಮನ ಭಕ್ತರಿಗೆ 500 ವರ್ಷಗಳ ಹೋರಾಟದ ವಿಜಯೋತ್ಸವದ ಶುಭದಿನ. ಅಯೋಧ್ಯೆಯ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆಗೊಂಡ 'ರಾಮಲಲ್ಲಾ' ವಿಶ್ವದಲ್ಲೇ ಹೊಸ ಇತಿಹಾಸವನ್ನೇ ಸೃಷ್ಟಿಸಿದ್ದಾನೆ. ಈ ಸಂಭ್ರಮಕ್ಕೆ ನಿನ್ನೆ (ಜ. 22) ಅಯೋಧ್ಯೆಯಲ್ಲಿ ರಾಮಭಕ್ತರು, ಗಣ್ಯಾತಿಗಣ್ಯರು ಸಾಕ್ಷಿಯಾದರು.
ಅಯೋಧ್ಯೆಗೆ ಒಂದು ದಿನದ ಮುಂಚೆಯೇ ಆಗಮಿಸಿದ್ದ ಬಾಲಿವುಡ್ ನಟಿ ಕಂಗನಾ ರಣಾವತ್ ಅಂತೂ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ವೇಳೆ ಇಡೀ ಪ್ರಪಂಚವನ್ನೇ ಮರೆತು ಜೈ ಶ್ರೀರಾಮ್ ಎಂದು ಹರ್ಷದಿಂದ ಘೋಷಣೆ ಕೂಗಿದ್ದಾರೆ. ಬಿಳಿ ಸೀರೆಗೆ ಕೇಸರಿ ಬಣ್ಣದ ರವಿಕೆ ತೊಟ್ಟು, ಹಣೆಯಲ್ಲಿ ಕೇಸರಿ ಬಣ್ಣದ ಬಿಂದಿ ಇಟ್ಟು, ಹೆಗಲಿಗೆ ಪಿಂಕ್ ಮತ್ತು ಕೆಂಪು ಬಣ್ಣದ ಶಾಲು ಹಾಕಿ, ಹಸಿರು ಬಣ್ಣದ ಒಡವೆ ಧರಿಸಿ ಅಪ್ಪಟ ಭಾರತೀಯ ನಾರಿಯಂತೆ ಕಂಗೊಳಿಸಿದ್ದಾರೆ.
ಬಾಲರಾಮನ ಪ್ರತಿಷ್ಠಾಪನೆಯಾಗುತ್ತಿದ್ದಂತೆ ಶಂಖ ಮೊಳಗಿ, ಮೇಲಿನಿಂದ ಹೆಲಿಕಾಪ್ಟರ್ ಮೂಲಕ ನೆರೆದಿದ್ದ ಭಕ್ತರ ಮೇಲೆ ಹೂವಿನ ಸುರಿಮಳೆ ಸುರಿಸಲಾಯಿತು. ಇದೇ ಸಂದರ್ಭ ಎಲ್ಲವನ್ನೂ ಸಂಭ್ರಮಿಸಿದ್ದ ಕಂಗನಾ ಬಹುದೊಡ್ಡ ಯುದ್ಧದಲ್ಲಿ ಶತ್ರುಗಳ ವಿರುದ್ಧ ವಿಜಯ ಸಾಧಿಸಿದಷ್ಟೇ ಖುಷಿಯಲ್ಲಿ ತನ್ನ ಎರಡೂ ಕೈಗಳನ್ನೂ ಬೀಸುತ್ತಾ ಜೈ ಶ್ರೀರಾಮ್.. ಜೈ ಶ್ರೀರಾಮ್ ಎಂದು ಮುಗಿಲು ಮುಟ್ಟುವಂತೆ ಹಷೋದ್ಗಾರದಿಂದ ಕೂಗಿದರು. ನೆರೆದಿದ್ದ ಎಲ್ಲರಿಗೂ ಹಾರೈಸಿ ಸುರಿಯುತ್ತಿದ್ದ ಹೂವಿನ ದಳದ ಜೊತೆ ನಲಿದಾಡಿದರು.
ಈ ಸಾರ್ಥಕ ಸಂಭ್ರಮದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೇಗವಾಗಿ ಹರಿದಾಡುತ್ತಿದೆ. ವೈರಲ್ ಆಗುತ್ತಿರುವ ಈ ವಿಡಿಯೋಗೆ 26 ಲಕ್ಷಕ್ಕೂ ಅಧಿಕ ಲೈಕ್ ಹಾಗೂ 40 ಸಾವಿರಕ್ಕೂ ಅಧಿಕ ಕಾಮೆಂಟ್ಗಳು ಬಂದಿವೆ. ನಟಿಯ ಸಲೆಬ್ರೇಷನ್ಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕಂಗನಾ ಅಭಿಮಾನಿಗಳಂತು 'ಈ ಓರ್ವ ನಟಿ ಮಾತ್ರ ನಿಜವಾಗಿಯೂ ಪ್ರಾಣ ಪ್ರತಿಷ್ಠಾಪನೆಯನ್ನು ಆನಂದಿಸಿದ್ದಾರೆ. ಕಂಗನಾ ನಿಜವಾದ ಸನಾತನಿಯಾಗಿದ್ದಾರೆ. ನಟಿ ಉಳಿದವರಂತೆ ತೋರ್ಪಡಿಕೆಯ ಭಕ್ತಿ ಅಲ್ಲ. ನಿಮ್ಮ ಈ ಸಂಭ್ರಮ ನನ್ನಂತಹ ಲಕ್ಷಾಂತರ ಜನರ ಭಾವನೆಯಾಗಿದೆ. ಇದನ್ನೂ ನೀವು ಪ್ರತಿನಿಧಿಸಿದ್ದಕ್ಕಾಗಿ ಧನ್ಯವಾದಗಳು ಕಂಗನಾ' ಎಂದು ಬರೆದಿದ್ದಾರೆ.
ತಾನು ಸಂಭ್ರಮಿಸಿರುವ ಈ ವಿಡಿಯೋವನ್ನು ನಟಿ ಸ್ವತಃ ತನ್ನ ಅಧಿಕೃತ ಎಕ್ಸ್ ಹಾಗೂ ಇನ್ಸ್ಟ್ಗ್ರಾಮ್ನಲ್ಲಿ "ರಾಮ್ ಆಗಯೇ"(ರಾಮ ಬಂದಿದ್ದಾನೆ)ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡುವ ಪ್ರತಿಯೊಬ್ಬ ರಾಮನ ಭಕ್ತರಂತೂ ಕಂಗನಾರಲ್ಲೇ ತಮ್ಮ ಸಂತೋಷವನ್ನು ಕಾಣುವಂತಿದೆ. ಪ್ರಾಣಪ್ರತಿಷ್ಠಾಪನೆಯ ಸಂತಸದಲ್ಲಿ ಕಂಗನಾ ತಾನು ನಟಿ ಎಂಬುದನ್ನು ಮರೆತು ಮಗುವಿನಂತೆ ಸಂಭ್ರಮಿಸಿರುವುದು ಎದ್ದು ಕಾಣುತ್ತಿದೆ.
ಇದನ್ನೂ ಓದಿ: ರಾಮನ ಸ್ಮರಿಸಿದ ಮಹೇಶ್ಬಾಬು, ದೀಪಿಕಾ ಸೇರಿ ಹಲವು ಸೆಲೆಬ್ರಿಟಿಗಳು