2023ರ ಯಶಸ್ವಿ ಚಿತ್ರಗಳಲ್ಲೊಂದಾದ '12th ಫೇಲ್'ನ ನಾಯಕ ನಟ ವಿಕ್ರಾಂತ್ ಮಾಸ್ಸೆ ಮತ್ತು ಶೀತಲ್ ಠಾಕೂರ್ 2022ರಲ್ಲಿ ದಾಂಪತ್ಯ ಜೀವನ ಆರಂಭಿಸಿದ್ದರೆ. ಅದಕ್ಕೂ ಮುನ್ನ ಕೆಲ ವರ್ಷಗಳ ಕಾಲ ಡೇಟಿಂಗ್ನಲ್ಲಿದ್ದರು. ಈ ವರ್ಷಾರಂಭದಲ್ಲಿ ಪೋಷಕರಾಗಿ ಭಡ್ತಿ ಪಡೆದಿದ್ದಾರೆ. ತಮ್ಮ ಗಂಡು ಮಗುವಿಗೆ 'ವರ್‌ದಾನ್' (Vardaan) ಎಂದು ಹೆಸರಿಟ್ಟಿದ್ದಾರೆ. ಇದೀಗ ತಂದೆ ವಿಕ್ರಾಂತ್ ಮಾಸ್ಸೆ ತಮ್ಮ ಮೊದಲ ಮಗುವಿನ ಹೆಸರಿನ ಟ್ಯಾಟೂ ಹಾಕಿಸಿಕೊಂಡು ಗಮನ ಸೆಳೆದಿದ್ದಾರೆ. ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲೀಗ ಈ ಟ್ಯಾಟೂವಿನದ್ದೇ ಸದ್ದು.
ಕಳೆದ ಫೆಬ್ರವರಿ 7ರಂದು ಮಗು ಜನಿಸಿದಾಗಿನಿಂದ ಮನೆಯಲ್ಲಿ ಸಂತಸವೋ ಸಂತಸ. ಪ್ರೀತಿ, ಉತ್ಸಾಹ ದುಪ್ಪಟ್ಟಾಗಿದೆ. 'ಮಿರ್ಜಾಪುರ್' ಸಿನಿಮಾ ನಟ ತಮ್ಮ ಮಗನ ಮೇಲಿನ ಪ್ರೀತಿಯನ್ನು ವಿಶೇಷವಾಗಿ ವ್ಯಕ್ತಪಡಿಸಿದ್ದಾರೆ. ಮಗುವಿನ ಹೆಸರನ್ನು ತಮ್ಮ ಮುಂದೋಳಿನ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ. ವಿಮರ್ಶಾತ್ಮಕವಾಗಿ ಮೆಚ್ಚುಗೆ ಸ್ವೀಕರಿಸಿರುವ '12th ಫೇಲ್' ಚಿತ್ರದಲ್ಲಿ ಅಮೋಘ ಅಭಿನಯದಿಂದ ಜನಪ್ರಿಯತೆ ಹೆಚ್ಚಿಸಿಕೊಂಡಿರುವ ವಿಕ್ರಾಂತ್ ಮಾಸ್ಸೆ, ಮಗನ ಹೆಸರನ್ನು ಟ್ಯಾಟೂ ಹಾಕಿಸಿಕೊಂಡಿರುವ ಚಿತ್ರವನ್ನು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಸ್ಟೋರಿ ಸೆಕ್ಷನ್ನಲ್ಲಿ ಶೇರ್ ಮಾಡಿದ್ದಾರೆ.
ವಿಕ್ರಾಂತ್ ಮಾಸ್ಸೆ ಶೇರ್ ಮಾಡಿರುವ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿರುವ ಫೋಟೋದಲ್ಲಿ, ಕೈ ಮೇಲೆ "ವರ್‌ದಾನ್ 7-2-2024" ಎಂದು ಬರೆದಿರುವುದನ್ನು ಕಾಣಬಹುದು. ಈ ಫೋಟೋಗೆ 'ಅಡಿಕ್ಷನ್ ಅಥವಾ ಆಡಿಶನ್? ನನಗೆ ಎರಡೂ ಇಷ್ಟ' ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಫ್ಯಾಮಿಲಿ ಮ್ಯಾನ್ ಆಗಲು ರೆಡಿ 'ಫ್ಯಾಮಿಲಿ ಸ್ಟಾರ್': ವಿಜಯ್ ದೇವರಕೊಂಡ ಆಗೋದು ಲವ್ ಮ್ಯಾರೇಜ್ ಅಂತೆ - VIJAY DEVERAKONDA
ಈ ಹಿಂದೆ, ತಂದೆಯಾದ ನಂತರದ ದಿನಗಳಲ್ಲಿ ಮಾತನಾಡಿದ್ದ ನಟ, ಜೀವನದ ಹೊಸ ಅಧ್ಯಾಯದ ಬಗ್ಗೆ ತಮ್ಮ ಖುಷಿ, ಉತ್ಸಾಹ ವ್ಯಕ್ತಪಡಿಸಿದ್ದರು. ಮಗುವಿನ ಡೈಪರ್ ಬದಲಾಯಿಸಲು ಸಮರ್ಥನಾಗಿದ್ದೇನೆ ಎಂದಿದ್ದರು. ತಂದೆಯಾಗುವ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದರು. ನಾನು ಯಾವಾಗಲೂ ಈ ಜೀವನವನ್ನು ಜೀವಿಸಲು ಬಯಸಿದ್ದೆ ಎಂದು ತಿಳಿಸಿದ್ದರು. ಈ ಬಗ್ಗೆ ನನ್ನ ಭಾವನೆಗಳನ್ನು ಸರಿಯಾಗಿ ವ್ಯಕ್ತಪಡಿಸುವುದು ಕಷ್ಟ. ನಾನು ಊಹಿಸಿದ್ದಕ್ಕಿಂತ ಹೆಚ್ಚು ಸಿಕ್ಕಿದೆ ಎಂದು ಖುಷಿ ಹಂಚಿಕೊಂಡಿದ್ದರು.
ಇದನ್ನೂ ಓದಿ: ದುಬೈನಲ್ಲಿ ಅಲ್ಲು ಅರ್ಜುನ್ ಮೇಣದ ಪ್ರತಿಮೆ: ವಿಶೇಷ ಗೌರವಕ್ಕೆ ಪಾತ್ರರಾದ ದಕ್ಷಿಣ ಭಾರತದ ಮೊದಲ ನಟ - Allu Arjun Wax Statue
'12th ಫೇಲ್' ಬಿಡುಗಡೆಯಾದ ಸಂದರ್ಭ ದೊಡ್ಡ ಮಟ್ಟದಲ್ಲಿ ಸದ್ದು ಮಾಡದೇ ಇದ್ದರೂ ನಂತರದ ದಿನಗಳಲ್ಲಿ ಸಿನಿಮಾ ಜನಪ್ರಿಯವಾಯಿತು. ಒಟಿಟಿ ವೇದಿಕೆಗೆ ಬಂದ ನಂತರವಂತೂ ಈ ಜನಪ್ರಿಯತೆ ಮತ್ತಷ್ಟು ಹೆಚ್ಚಿತು. ಖ್ಯಾತ ಸಿನಿ ಸೆಲೆಬ್ರಿಟಿಗಳು ಸಹ ಸಿನಿಮಾದ ಕಥೆ, ನಿರೂಪಣೆ ಮತ್ತು ಕಲಾವಿದರ ಅಮೋಘ ಅಭಿನಯವನ್ನು ಕೊಂಡಾಡಿದ್ದರು.
ನಟನ ಮುಂದಿನ ಪ್ರಾಜೆಕ್ಟ್ಗಳನ್ನು ಗಮನಿಸಿದರೆ, ಪ್ರಸ್ತುತ 'ಸೆಕ್ಟರ್ 36'ನಲ್ಲಿ ಕೆಲಸ ಮಾಡುತ್ತಿದ್ದಾರೆ. 'ಯಾರ್ ಜಿಗ್ರಿ' ಮತ್ತು 'ಫಿರ್ ಆಯಿ ಹಸೀನ್ ದಿಲ್ರುಬಾ' ಚಿತ್ರೀಕರಣವನ್ನು ಈಗಾಗಲೇ ಪೂರ್ಣಗೊಳಿಸಿದ್ದಾರೆ.