ಖ್ಯಾತ ನಿರ್ದೇಶಕ ಬರಗೂರು ರಾಮಚಂದ್ರಪ್ಪ ಅವರು ತಮ್ಮದೇ ಕಾದಂಬರಿಯನ್ನು ಆಧರಿಸಿ ನಿರ್ದೇಶನ ಮಾಡುತ್ತಿರುವ ಮುಂದಿನ ಬಹುನಿರೀಕ್ಷಿತ ಚಿತ್ರ ''ಸ್ವಪ್ನ ಮಂಟಪ''. ತಮ್ಮ ಈ ಸಿನಿಮಾದ ಚಿತ್ರಕಥೆ, ಸಂಭಾಷಣೆ, ಗೀತರಚನೆ ಹಾಗೂ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಹೀಗೆ ನಾನಾ ಜವಾಬ್ದಾರಿಗಳನ್ನು ಹೊತ್ತಿರುವ ಚಿತ್ರದ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದೆ.
ಸೆನ್ಸಾರ್ ಮಂಡಳಿಯಿಂದ 'ಯು' ಸರ್ಟಿಫಿಕೇಟ್: ಶೂಟಿಂಗ್ ಪೂರ್ಣಗೊಂಡಿರುವ 'ಸ್ವಪ್ನ ಮಂಟಪ' ಚಿತ್ರದಲ್ಲಿ ಕನ್ನಡದ ಖ್ಯಾತ ನಟ, ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಮತ್ತು ರಂಜಿನಿ ರಾಘವನ್ ತೆರೆಹಂಚಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಈ ಸಿನಿಮಾವನ್ನು ಸೆನ್ಸಾರ್ ಮಂಡಳಿ ವೀಕ್ಷಿಸಿ 'ಯು' ಸರ್ಟಿಫಿಕೇಟ್ ನೀಡಿದೆ.
ಸ್ವಪ್ನ ಮಂಟಪದ ಕಥಾಹಂದರವೇನು? ಸ್ವಪ್ನ ಮಂಟಪ ಚಿತ್ರ ಪಾರಂಪರಿಕ ಸ್ಥಳಗಳ ಮಹತ್ವ ಮತ್ತು ಸಂರಕ್ಷಣೆಯ ಅಗತ್ಯವನ್ನು ಪ್ರತಿಪಾದಿಸುವ ಕಥಾ ವಸ್ತುವನ್ನು ಒಳಗೊಂಡಿದೆ. ಒಂದು ಹಳ್ಳಿಯಲ್ಲಿ ರಾಜನೊಬ್ಬ ನಿರ್ಮಿಸಿದ್ದ ಸ್ವಪ್ನ ಮಂಟಪವನ್ನು ಕೆಡವಿ ಹಾಕುವ ಪ್ರಯತ್ನವನ್ನು ಕೆಲವರು ಮಾಡಿದಾಗ ಕಥಾ ನಾಯಕ ಮತ್ತು ನಾಯಕಿ ಒಂದಾಗಿ ಜನರನ್ನು ಸಂಘಟಿಸಿ ಪಾರಂಪರಿಕ ಚಾರಿತ್ರಿಕ ಮಂಟಪವನ್ನು ಉಳಿಸುತ್ತಾರೆ. ಈ ಕಥಾವಸ್ತು ಪಾರಂಪರಿಕ ಸ್ಥಳಗಳ ರಕ್ಷಣೆ ವಿಷಯದಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದೆ.
ಚಿತ್ರತಂಡದ ಕುರಿತು; ಕಥಾ ನಾಯಕನಾಗಿ ಜನಪ್ರಿಯ ನಟ ವಿಜಯ್ ರಾಘವೇಂದ್ರ ಮತ್ತು ನಾಯಕಿಯಾಗಿ ರಂಜಿನಿ ರಾಘವನ್ ಅಭಿನಯಿಸಿದ್ದಾರೆ. ಇಬ್ಬರೂ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿರುವುದು ಚಿತ್ರದ ವಿಶೇಷ. ಉಳಿದ ತಾರಾಗಣದಲ್ಲಿ ಸುಂದರರಾಜ್, ಶೋಭಾ ರಾಘವೇಂದ್ರ, ರಜಿನಿ, ಸುಂದರರಾಜ ಅರಸು, ಅಂಬರೀಶ್ ಸಾರಂಗಿ, ರಾಜಪ್ಪ ದಳವಾಯಿ, ವೆಂಕಟರಾಜು, ಮೈಸೂರು ಮಂಜುಳ, ಉಮ್ಮತ್ತೂರು ಬಸವರಾಜು, ಶಿವಲಿಂಗ ಪ್ರಸಾದ್, ಭಾರತಿ ರಮೇಶ್, ಗುಂಡಿ ರಮೇಶ್ ಮುಂತಾದವರು ಇದ್ದಾರೆ.
ಈ ಚಿತ್ರದ ಸಂಕಲದ ಜವಾಬ್ದಾರಿಯನ್ನು ಸುರೇಶ್ ಅರಸು ವಹಿಸಿಕೊಂಡಿದ್ದಾರೆ. ನಾಗರಾಜ್ ಆದವಾನಿ ಛಾಯಾಗ್ರಹಣ ನಿರ್ವಹಿಸಿದ್ದಾರೆ. ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನ ಮಾಡಿದ್ರೆ, ತ್ರಿಭುವನ್ ನೃತ್ಯ ಸಂಯೋಜನೆಯ ಹೊಣೆ ಹೊತ್ತಿದ್ದಾರೆ. ನಟರಾಜ್ ಶಿವು ಮತ್ತು ಪ್ರವೀಣ್ ಸಹ ನಿರ್ದೇಶಕರಾಗಿ, ಗೋಪಾಲಕೃಷ್ಣ ಸಹಾಯಕ ನಿರ್ದೇಶಕರಾಗಿ ಸ್ವಪ್ನ ಮಂಟಪ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಬಾಬು ನಾಯ್ಕ್ ಅವರು ತಮ್ಮ ಮಲೈ ಮಹದೇಶ್ವರ ಎಂಟರ್ ಪ್ರೈಸಸ್ ಸಂಸ್ಥೆಯಿಂದ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಸ್ವಪ್ನ ಮಂಟಪ ಸದ್ಯದಲ್ಲೇ ತೆರೆಗೆ ಬರಲಿದೆ.
ಇದನ್ನೂ ಓದಿ: ನಾಳೆ ಘೋಷಣೆಯಾಗಲಿದೆ ವಿನಯ್ ರಾಜ್ಕುಮಾರ್ ನಟನೆಯ 'ಪೆಪೆ' ರಿಲೀಸ್ ಡೇಟ್ - PEPE Release Date