ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅವರು ಮತ್ತೊಮ್ಮೆ ಉತ್ತರಾಖಂಡಕ್ಕೆ ಭೇಟಿ ನೀಡಿದ್ದಾರೆ. ತಮ್ಮ ಮುಂದಿನ ಸಿನಿಮಾದ ಚಿತ್ರೀಕರಣಕ್ಕೂ ಮುನ್ನ ಆಧ್ಯಾತ್ಮಿಕ ಪ್ರವಾಸ ಕೈಗೊಂಡಿರುವ ತಲೈವಾ ಬುಧವಾರ ಸಂಜೆ ಜಾಲಿ ಗ್ರ್ಯಾಂಟ್ ವಿಮಾನ ನಿಲ್ದಾಣ ತಲುಪಿದರು. ಅಲ್ಲಿಂದ ರಸ್ತೆ ಮಾರ್ಗದ ಮೂಲಕ ಋಷಿಕೇಶದ ಶಿಶಮ್ ಝಾಡಿಯಲ್ಲಿರುವ ದಯಾನಂದ ಆಶ್ರಮವನ್ನು ತಲುಪಿದರು. ಋಷಿಕೇಶದಲ್ಲಿ ಬುಧವಾರ ರಾತ್ರಿ ಕಳೆದ ಅವರು, ನಂತರ ಬದ್ರಿನಾಥ್ ಮತ್ತು ಕೇದಾರನಾಥ ಧಾಮಕ್ಕೆ ತೆರಳಿದರು.
ಬುಧವಾರ ಸಂಜೆ ಋಷಿಕೇಶದ ದಯಾನಂದ ಸ್ವಾಮಿ ಆಶ್ರಮಕ್ಕೆ ತೆರಳಿದ್ದರು. ಸ್ವಾಮಿ ದಯಾನಂದರ ಶಿಷ್ಯರಾಗಿರುವ ರಜನಿ ಉತ್ತರಾಖಂಡಕ್ಕೆ ಬಂದಾಗಲೆಲ್ಲ ಈ ಆಶ್ರಮದಲ್ಲೇ ಇರುತ್ತಾರೆ. ಇಲ್ಲಿಗೆ ತಲುಪಿದ ನಂತರ ಧ್ಯಾನ ಮಾಡಿದರು. ಬಳಿಕ ಸಂಜೆಯ ಆರತಿಯಲ್ಲಿ ಪಾಲ್ಗೊಂಡರು.
ದಯಾನಂದ ಆಶ್ರಮಕ್ಕೆ ರಜನಿಕಾಂತ್ ಆಗಮಿಸಿದ್ದಾರೆ ಎಂಬುದನ್ನು ತಿಳಿದ ಅಭಿಮಾನಿಗಳು ಕೂಡಲೇ ಆಶ್ರಮದತ್ತ ಜಮಾಯಿಸಿದರು. ಅಭಿಮಾನಿಗಳು ಸೂಪರ್ ಸ್ಟಾರ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದರು. ಇಂದು ಬೆಳಗ್ಗೆ ಇಬ್ಬರು ಸ್ನೇಹಿತರ ಜೊತೆ ಬದ್ರಿನಾಥ್, ಕೇದಾರನಾಥಕ್ಕೆ ಭೇಟಿ ಕೊಡುವ ಸಲುವಾಗಿ ತೆರಳಿದರು. ದ್ವಾರಹತ್‌ನಲ್ಲಿರುವ ಆಶ್ರಮಕ್ಕೂ ಭೇಟಿ ನೀಡಲಿದ್ದಾರೆ.
ಋಷಿಕೇಶದಲ್ಲಿರುವ ದಯಾನಂದ ಆಶ್ರಮದೊಂದಿಗೆ ರಜನಿಕಾಂತ್ ಸಂಪರ್ಕ ಹೊಂದಿದ್ದಾರೆ. ಪ್ರತೀ ವರ್ಷ ಇಲ್ಲಿಗೆ ಬಂದು ಗುರುವಿನ ದರ್ಶನ ಪಡೆದು, ಗಂಗಾರತಿ ಮಾಡಿ ಪ್ರಯಾಣ ಬೆಳೆಸುತ್ತಾರೆ. ಕಳೆದ ಬಾರಿ ತಮ್ಮ ಜೈಲರ್ ಚಿತ್ರ ಬಿಡುಗಡೆಯಾದಾಗ, ಋಷಿಕೇಶದಲ್ಲಿರುವ ಸ್ವಾಮಿ ದಯಾನಂದ ಆಶ್ರಮಕ್ಕೆ ಭೇಟಿ ಕೊಟ್ಟಿದ್ದರು. ಇಲ್ಲಿಂದ ಬದ್ರಿನಾಥ್ ಮತ್ತು ಕೇದಾರನಾಥ ಧಾಮಕ್ಕೆ ಯಾತ್ರೆ ಕೈಗೊಂಡರು. ಈ ಬಾರಿಯೂ ರಜನಿ ಅದೇ ವೇಳಾಪಟ್ಟಿಯನ್ನು ಅನುಸರಿಸಿದ್ದಾರೆ.
ಇದನ್ನೂ ಓದಿ: 'ಮತ್ತೊಮ್ಮೆ ಮೋದಿ ಗೆಲ್ಲುತ್ತಾರಾ'? ತಲೈವಾ ರಜನಿಕಾಂತ್ ಪ್ರತಿಕ್ರಿಯೆ ಹೀಗಿತ್ತು! - Rajinikanth On Modi
ಇನ್ನು ನಾಲ್ಕು ದಶಕಗಳ ವೃತ್ತಿಜೀವನದಲ್ಲಿ ಕೋಟ್ಯಂತರ ಸಿನಿಪ್ರಿಯರನ್ನು ರಂಜಿಸಿರುವ ತಲೈವಾ ಅವರ ಸಿನಿಮಾ ವಿಚಾರ ಗಮನಿಸೋದಾದರೆ, ಕೊನೆಯದಾಗಿ ತೆರೆಕಂಡಿರುವ ಜೈಲರ್ ಸೂಪರ್ ಡೂಪರ್ ಹಿಟ್ ಆಗಿದೆ. 'ವೆಟ್ಟೈಯನ್' ಹಾಗೂ 'ಕೂಲಿ' ಮುಂದಿನ ಬಹುನಿರೀಕ್ಷಿತ ಚಿತ್ರಗಳು. ಟಿ.ಜೆ ಜ್ಞಾನವೆಲ್ ಆ್ಯಕ್ಷನ್ ಕಟ್ ಹೇಳಿರುವ 'ವೆಟ್ಟೈಯನ್' ಚಿತ್ರೀಕರಣ ಮುಕ್ತಾಯಗೊಂಡಿದ್ದು, ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಲೋಕೇಶ್ ಕನಕರಾಜ್ ನಿರ್ದೇಶನದ 'ಕೂಲಿ' ಶೂಟಿಂಗ್ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಅದಕ್ಕೂ ಮುನ್ನ ಆಧ್ಯಾತ್ಮಿಕ ಪ್ರವಾಸ ಕೈಗೊಂಡಿದ್ದಾರೆ.
ಪ್ರವಾಸ ಆರಂಭದಲ್ಲಿ ಚೆನ್ನೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಜನಪ್ರಿಯ ನಟನ ಬಳಿ ಹಲವು ಪ್ರಶ್ನೆಗಳನ್ನು ಕೇಳಲಾಯಿತು. ನರೇಂದ್ರ ಮೋದಿ ಅವರ ಮತ್ತೊಮ್ಮೆ ಗೆಲ್ಲುವ ಸಾಧ್ಯತೆಗಳ ಕುರಿತು ಪ್ರಶ್ನಿಸಿದಾಗ, "ಕ್ಷಮಿಸಿ, ರಾಜಕೀಯ ಪ್ರಶ್ನೆಗಳು ಬೇಡ" ಎಂದು ತಿಳಿಸಿದರು. ಉಳಿದ ಕೆಲ ಪ್ರಶ್ನೆಗಳಿಗೂ "ನೋ ಕಾಮೆಂಟ್ಸ್" ಎಂದು ನಾಜೂಕಾಗಿ ನಿರಾಕರಿಸಿದರು.