ಕೋಟ್ಯಂತರ ಸಿನಿ ಅಭಿಮಾನಿಗಳ ಕಾಯುವಿಕೆ ಕೊನೆಗೊಂಡಿದೆ. ದಕ್ಷಿಣ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ 'ಭೈರತಿ ರಣಗಲ್' ಚಿತ್ರದ ಅಧಿಕೃತ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಅಭಿಮಾನಿಗಳ ಕಾಯುವಿಕೆ ಅಂತ್ಯವಾಗಿದ್ದು, ಕೊನೆಗೂ, ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಪ್ರೇಕ್ಷಕರು ಸಿನಿಮಾ ವೀಕ್ಷಿಸಲು ಎದುರು ನೋಡುತ್ತಿದ್ದಾರೆ.
ನವೆಂಬರ್ 15ಕ್ಕೆ ಸಿನಿಮಾ ಬಿಡುಗಡೆ: ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಸರಣಿ ಸಿನಿಮಾಗಳಲ್ಲಿ ನಿರತರಾಗಿದ್ದಾರೆ. ಶಿವಣ್ಣನ ಬಳಿ ಮೂರ್ನಾಲ್ಕು ಬಹುನಿರೀಕ್ಷಿತ ಚಿತ್ರಗಳಿವೆ. ಮುಂದಿನ ಸಿನಿಮಾಗಳಿಗಾಗಿ ಅಪಾರ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. 'ಭೈರತಿ ರಣಗಲ್' ಕೂಡ ಶಿವರಾಜ್ಕುಮಾರ್ ಅವರ ಬಹು ನಿರೀಕ್ಷಿತ ಸಿನಿಮಾಳಲ್ಲೊಂದು. ಈ ಸಿನಿಮಾವು 2024ರ ನವೆಂಬರ್ 15ಕ್ಕೆ ತೆರೆಗಪ್ಪಳಿಸಲಿದೆ. ಯಲಹಂಕದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಿತ್ರತಂಡ ವಿಭಿನ್ನವಾಗಿ ಸಿನಿಮಾದ ಅಧಿಕೃತ ಬಿಡುಗಡೆ ದಿನಾಂಕವನ್ನು ಘೋಷಿಸಿದೆ.
ಸಿನಿಮಾ ಹಿಂದಿರುವ ಗೀತಾ ಪಿಕ್ಚರ್ಸ್ ವಿಶೇಷ ವಿಡಿಯೋ ಹಂಚಿಕೊಂಡಿದೆ. 3550sq.ft ಗೋಡೆ ಮೇಲೆ ಪೇಂಟ್ ಮಾಡೋ ಮೂಲಕ ರಿಲೀಸ್ ಡೇಟ್ ಅನೌನ್ಸ್ ಆಗಿರುವುದು ಈ ವಿಡಿಯೋದಲ್ಲಿ ಗೊತ್ತಾಗುತ್ತಿದೆ. ಪೋಸ್ಟ್ಗೆ ನವೆಂಬರ್ 15ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ ಎಂಬ ಕ್ಯಾಪ್ಷನ್ ಕೊಟ್ಟಿದ್ದಾರೆ.
ಮಫ್ತಿ ನಿರ್ದೇಶಕ ನರ್ತನ್ ಆ್ಯಕ್ಷನ್ ಕಟ್ ಹೇಳುತ್ತಿರುವ 'ಭೈರತಿ ರಣಗಲ್' ಚಿತ್ರವನ್ನು ಗೀತಾ ಪಿಕ್ಚರ್ಸ್ ಮೂಲಕ ಗೀತಾ ಶಿವರಾಜ್ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ. ಅದ್ಧೂರಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣಗೊಳ್ಳುತ್ತಿದೆ. ಶಿವರಾಜ್ಕುಮಾರ್ ಮತ್ತು ರುಕ್ಮಿಣಿ ವಸಂತ್ ತೆರೆ ಹಂಚಿಕೊಂಡಿದ್ದಾರೆ. ನವೀನ್ ಕುಮಾರ್ ಛಾಯಾಗ್ರಹಣ ನಿರ್ವಹಿಸಿದ್ದರೆ, ಆಕಾಶ್ ಹಿರೇಮಠ ಎಡಿಟಿಂಗ್ ಮಾಡಿದ್ದಾರೆ. ಗುಣ ಅವರ ಕಲಾ ನಿರ್ದೇಶನ, ದಿಲೀಪ್ ಸುಬ್ರಹ್ಮಣ್ಯ ಹಾಗೂ ಚೇತನ್ ಡಿಸೋಜ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.
ಇದನ್ನೂ ಓದಿ: ಕೆಲವೇ ಕ್ಷಣಗಳಲ್ಲಿ ಶಿವಣ್ಣನಿಂದ ಬಿಗ್ ಅನೌನ್ಸ್ಮೆಂಟ್: ಅಭಿಮಾನಿಗಳಲ್ಲಿ ಕುತೂಹಲ - Shiva Rajkumar
2017ರ ಡಿಸೆಂಬರ್ 1ರಂದು ತೆರೆಕಂಡು ಸೂಪರ್ ಹಿಟ್ ಆಗಿದ್ದ ಮಫ್ತಿ ಸಿನಿಮಾದ ಪ್ರೀಕ್ವೆಲ್ ಈ ಭೈರತಿ ರಣಗಲ್. ಸಿನಿಮಾ ಸ್ಯಾಂಡಲ್ವುಡ್ ಮಾತ್ರವಲ್ಲದೇ, ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಕುತೂಹಲ ಹುಟ್ಟುಹಾಕಿದೆ. ಶಿವರಾಜ್ಕುಮಾರ್ ಪಾತ್ರದ ಮೇಲೆ ನಿರೀಕ್ಷೆ, ಕುತೂಹಲ ಕೂಡಾ ಜೋರಾಗಿದೆ. ಶೀರ್ಷಿಕೆ, ಟೀಸರ್, ಆಕರ್ಷಕ ಪೋಸ್ಟರ್ನಿಂದಲೇ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದ ಚಿತ್ರದ ಹಾಡೊಂದು ಇತ್ತೀಚೆಗೆ ಅನಾವರಣಗೊಂಡಿತ್ತು.
ಶಿವರಾಜ್ಕುಮಾರ್ ಅವರ 131ನೇ ಸಿನಿಮಾ ವರಮಹಾಲಕ್ಷ್ಮಿ ಹಬ್ಬದ ಸಂದರ್ಭ ಸೆಟ್ಟೇರಿದೆ. ಶೂಟಿಂಗ್ ಪ್ರಾರಂಭವಾಗಿದ್ದು, ಅಭಿಮಾನಿಗಳು ಕುತೂಹಲ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ರಾಕಿಂಗ್ ಸ್ಟಾರ್ ಯಶ್ ಕೂಡ ಶೂಟಿಂಗ್ ಸೆಟ್ಗೆ ಭೇಟಿ ಕೊಡುವ ಮೂಲಕ ದೊಡ್ಡಮಟ್ಟದಲ್ಲಿ ಸದ್ದು ಮಾಡಿದ್ದರು. ಹೆಸರಾಂತ ನಟರ ಭೇಟಿಯ ಫೋಟೋ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಕಾರ್ತಿಕ್ ಅದ್ವೈತ್ ನಿರ್ದೇಶನದ ಈ ಚಿತ್ರವನ್ನು ಭುವನೇಶ್ವರಿ ಪ್ರೊಡಕ್ಷನ್ನಡಿ ಎಸ್. ಎನ್. ರೆಡ್ಡಿ ಹಾಗೂ ಸುಧೀರ್ ಪಿ. ನಿರ್ಮಾಣ ಮಾಡುತ್ತಿದ್ದು, ಅಧಿಕೃತ ಶೀರ್ಷಿಕೆ ಇನ್ನಷ್ಟೇ ಘೋಷಣೆ ಆಗಬೇಕಿದೆ.