ಸಮಂತಾ ನಟನೆಯ 'ಸಿಟಾಡೆಲ್ ಹನಿ ಬನ್ನಿ' ವೆಬ್ ಸಿರೀಸ್ ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರತಂಡ ಪ್ರಚಾರ ಕೈಗೊಂಡಿದೆ. ಈ ಕುರಿತು ಸರಣಿ ಸಂದರ್ಶನಗಳನ್ನು ನೀಡುತ್ತಿರುವ ನಟಿ ಸಮಂತಾ, ಹಲವು ಇಂಟ್ರೆಸ್ಟಿಂಗ್ ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಮಯೋಸಿಟಿಸ್ ಕಾಯಿಲೆಯಿಂದ ಬಳಲುತ್ತಿರುವ ಸಮಂತಾ ಈ ವೆಬ್ ಸೀರೀಸ್ ತಿರಸ್ಕರಿಸಲು ನಿರ್ಧರಿಸಿದ್ದರಂತೆ. ಈ ಬಗ್ಗೆ ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಇದರ ಜೊತೆಗೆ, ಚಿತ್ರೀಕರಣದ ಕೆಲವು ಘಟನಾವಳಿಗಳನ್ನು ಹೇಳಿದ್ದಾರೆ.
"ಸ್ಕ್ರಿಪ್ಟ್ ಓದಿದ ತಕ್ಷಣ ನಾನು ಅದನ್ನು ಮಾಡಬಾರದೆಂದು ಅಂದುಕೊಂಡಿದ್ದೆ. ಆದರೆ, ಅದು ಅಷ್ಟು ಸರಳ ಕೆಲಸವಾಗಿರಲಿಲ್ಲ. ಈ ಸರಣಿಯಲ್ಲಿ ನಟಿಸಿದ್ದು ನಾನೇನಾ ಎಂಬ ಪ್ರಶ್ನೆ ಈಗಲೂ ನನ್ನನ್ನು ಕಾಡುತ್ತಿದೆ. ನನಗಿನ್ನೂ ಇದನ್ನು ನಂಬಲಾಗುತ್ತಿಲ್ಲ. ನನ್ನ ಆರೋಗ್ಯ ಸಹಕರಿಸದಿದ್ದರೂ ಪ್ರತಿದಿನ ನಾನು ಬೆಳಗ್ಗೆ 4 ಗಂಟೆಗೆ ಚಿತ್ರೀಕರಣಕ್ಕೆ ಹೋಗುತ್ತಿದ್ದೆ. ಎಷ್ಟೋ ಆ್ಯಕ್ಷನ್ ದೃಶ್ಯಗಳನ್ನು ಬೆಳಗ್ಗೆಯೇ ಚಿತ್ರಿಸಲಾಗಿದ್ದು, ಎಲ್ಲ ಚಿತ್ರೀಕರಣದಲ್ಲೂ ಭಾಗವಹಿಸಿದ್ದೇನೆ. ಆರೋಗ್ಯ ಸಮಸ್ಯೆಯ ನಡುವೆ ಅಷ್ಟು ಬೆಳಗ್ಗೆ ಏಳುವ ಬಗ್ಗೆ ಕೆಲವರು ನನ್ನನ್ನು ಪ್ರಶ್ನೆ ಮಾಡಿದ್ದುಂಟು. ನೀವು ಅದನ್ನು ಮಾಡಲು ಸಾಧ್ಯವಿಲ್ಲವೆಂದು ಹೇಳಿದವರೂ ಇದ್ದಾರೆ. ಆದರೆ, ಎಲ್ಲ ಸಮಸ್ಯೆಗಳ ನಡುವೆ ಈ ಸರಣಿಯನ್ನು ಪೂರ್ಣಗೊಳಿಸಿದೆ. ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದು, ನಟಿಸಿದ್ದು, ವೆಬ್ ಸಿರೀಸ್ ಪೂರ್ಣಗೊಂಡಿದ್ದು, ಎಲ್ಲವೂ ಆಶ್ಚರ್ಯವೆನ್ನಿಸುತ್ತಿದೆ. ವೆಬ್ ಸಿರೀಸ್ ನೋಡಿದಾಗಲೆಲ್ಲ ನಾನು ನಿಜವಾಗಿಯೂ ಹೀಗೆ ಮಾಡಿದ್ದೇನಾ ಎಂದು ಶಾಕ್ ಆಗುತ್ತದೆ'' ಎಂದು ಸಮಂತಾ ಶೂಟಿಂಗ್ ದಿನಗಳನ್ನು ವಿವರಿಸಿದರು.
'ಸಿಟಾಡೆಲ್ ಹನಿ ಬನ್ನಿ' ಆ್ಯಕ್ಷನ್ ಥ್ರಿಲ್ಲರ್ ವೆಬ್ ಸಿರೀಸ್ ಆಗಿದ್ದು, ಶೀಘ್ರದಲ್ಲಿಯೇ ಒಟಿಟಿ ಅಂಗಳಕ್ಕೆ ಬರಲಿದೆ. ಈಗಾಗಲೇ ಸಿರೀಸ್‌ನ ಟ್ರೇಲರ್ ಬಿಡುಗಡೆಯಾಗಿದೆ. ವೆಬ್ ಸಿರೀಸ್ನಲ್ಲಿ ಸಮಂತಾ ಜೊತೆ ವರುಣ್ ಧವನ್ ನಾಯಕ ನಟರಾಗಿ ಅಭಿನಯಿಸಿದ್ದಾರೆ. ಸಮಂತಾ ಗೂಢಚಾರ ಏಜೆಂಟ್ ಹನಿ ಪಾತ್ರದಲ್ಲಿ ನಡೆಸಿದ್ದಾರೆ.
ಇದನ್ನೂ ಓದಿ: ಶಾರುಖ್ ಖಾನ್ ನಟಿಸಿದ 1989ರ 'ಫೌಜಿ' ಸೀರಿಯಲ್ ದೂರದರ್ಶನದಲ್ಲಿ ಮರುಪ್ರಸಾರ