ಮಧುರೈ (ತಮಿಳುನಾಡು): ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಮಣಿಕಂದನ್ ಅವರ ಮನೆಯಲ್ಲಿ ಇತ್ತೀಚೆಗೆ ನಡೆದಿದ್ದ ದರೋಡೆ ಘಟನೆ ಅನಿರೀಕ್ಷಿತ ತಿರುವು ಪಡೆದುಕೊಂಡಿದ್ದು, ಕಳ್ಳರು ಕ್ಷಮಾಪಣಾ ಪತ್ರದ ಜೊತೆ ಕದ್ದೊಯ್ದಿದ್ದ ಎರಡು ರಾಷ್ಟ್ರಪ್ರಶಸ್ತಿ ಬೆಳ್ಳಿ ಪದಕಗಳನ್ನು ಹಿಂತಿರುಗಿಸಿದ್ದಾರೆ. "ಸರ್ ನಮ್ಮನ್ನು ಕ್ಷಮಿಸಿ. ನಿಮ್ಮ ಶ್ರಮ ನಿಮ್ಮದು" ಎಂದು ತಮಿಳಿನಲ್ಲಿ ಕ್ಷಮಾಪಣಾ ಪತ್ರ ಬರೆದಿಟ್ಟು, ಕಳ್ಳರು ಪರಾರಿಯಾಗಿದ್ದಾರೆ. ರಾಷ್ಟ್ರಪ್ರಶಸ್ತಿಯ ಬೆಳ್ಳಿ ಪದಕಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.
ತಮಿಳು ಚಿತ್ರರಂಗದ 'ಕಾಕ ಮುಟ್ಟೈ' ಸಿನಿಮಾ ಖ್ಯಾತಿಯ ನಿರ್ದೇಶಕ ಮಣಿಕಂದನ್ ಅವರ ಮಧುರೈ ಜಿಲ್ಲೆಯ ಉಸಿಲಂಪಟ್ಟಿಯಲ್ಲಿರುವ ಮನೆಯಲ್ಲಿ ಫೆಬ್ರವರಿ 8 ರಂದು ಕಳ್ಳತನ ನಡೆದಿತ್ತು. ಸಿನಿಮಾ ಸಂಬಂಧ ಕೆಲಸದ ನಿಮಿತ್ತ ಮಣಿಕಂದನ್ ಅವರು ತಮ್ಮ ಕುಟುಂಬದೊಂದಿಗೆ ಕಳೆದ ಎರಡು ತಿಂಗಳುಗಳಿಂದ ಚೆನ್ನೈನಲ್ಲಿ ವಾಸಿಸುತ್ತಿದ್ದರು. ಬೀಗ ಜಡಿದ ಮನೆಯೊಳಗೆ ನುಗ್ಗಿದ್ದ ಕಳ್ಳರು, ಮನೆಯಲ್ಲಿದ್ದ 1 ಲಕ್ಷ ರೂಪಾಯಿ ನಗದು, ಐದು ಪೌಂಡ್ ಚಿನ್ನಾಭರಣಗಳ ಜೊತೆಗೆ ಮಣಿಕಂದನ್ ಅವರು ತಮ್ಮ ಸಿನಿಮಾಗಳಿಗಾಗಿ ಪಡೆದಿದ್ದ ರಾಷ್ಟ್ರೀಯ ಪ್ರಶಸ್ತಿಯ ಬೆಳ್ಳಿ ಪದಕಗಳನ್ನೂ ಕದ್ದು ಪರಾರಿಯಾಗಿದ್ದರು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಉಸಿಲಂಪಟ್ಟಿ ನಗರ ಠಾಣೆ ಪೊಲೀಸರು ತನಿಖೆ ಪ್ರಾರಂಭಿಸಿದ್ದರು. ಆದರೆ,ಇದೀಗ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಕಳ್ಳರು ತಾವು ಕದ್ದೊಯ್ದಿದ್ದ ವಸ್ತುಗಳಲ್ಲಿ ರಾಷ್ಟ್ರೀಯ ಪ್ರಶಸ್ತಿಯ ಪದಕಗಳನ್ನು ಮಾತ್ರ ಕ್ಷಮಾಪಣಾ ಪತ್ರದೊಂದಿಗೆ ವಾಪಸ್ ನೀಡಿದ್ದಾರೆ. ಪದಕಗಳನ್ನು ಹಾಗೂ ಕ್ಷಮಾಪಣಾ ಪತ್ರವನ್ನು ಕ್ಯಾರಿ ಬ್ಯಾಗ್ನಲ್ಲಿ ಕಟ್ಟಿ, ಮನೆಯ ಮುಂದಿನ ಗೇಟ್ನಲ್ಲಿರಿಸಿ ಪರಾರಿಯಾಗಿದ್ದಾರೆ.
ತಮಿಳು ಚಿತ್ರರಂಗಕ್ಕೆ ಸಹಾಯಕ ಸಿನಿಮಾಟೋಗ್ರಾಫರ್ ಆಗಿ ಪದಾರ್ಪಣೆ ಮಾಡಿದ್ದ ಮಣಿಕಂದನ್ ಅವರು ನಂತರ ನಿರ್ದೇಶಕರಾದರು. ಕಾಕ ಮುಟ್ಟೈ, ಕುಟ್ರಮೆ ತಂದನೈ, ಆಂಡವನ್ ಕಟ್ಟಲೈ, ಮತ್ತು ಕಡೈಸಿ ವಿವಸಾಯಿ ಮುಂತಾದ ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಅವುಗಳಲ್ಲಿ ಕಾಕ ಮುಟ್ಟೈ ಹಾಗೂ ಕಡೈಸಿ ವಿವಸಾಯಿ ಸಿನಿಮಾಗಳು ಕೇಂದ್ರ ಸರ್ಕಾರದಿಂದ ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿವೆ.
ಸದ್ಯ ಮಣಿಕಂದನ್ ಅವರು ಡಿಸ್ನಿ + ಹಾಟ್ಸ್ಟಾರ್ನಲ್ಲಿ ನಟ ವಿಜಯ್ ಸೇತುಪತಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಹೊಸ ವೆಬ್ ಸಿರೀಸ್ ಬಿಡುಗಡೆ ಮಾಡಲು ಸಿದ್ಧವಾಗಿದ್ದಾರೆ. 'ಆಂಡವನ್ ಕಟ್ಟಲೈ', 'ಕಡೈಸಿ ವಿವಸಾಯಿ' ಸಿನಿಮಾಗಳ ನಂತರ ವಿಜಯ್ ಸೇತುಪತಿ ಹಾಗೂ ಮಣಿಕಂದನ್ ಅವರ ಕಾಂಬಿನೇಷನ್ನಲ್ಲಿ ಮೂರನೇ ಪ್ರಾಜೆಕ್ಟ್ ಇದಾಗಿದೆ. ಈ ವೆಬ್ ಸಿರೀಸ್ಗೆ 7ಸಿ ನ ಎಂಟರ್ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್ನ ಪಿ. ಅರುಮುಗ ಕುಮಾರ್ ಬಂಡವಾಳ ಹೂಡಿದ್ದಾರೆ. ರಾಜೇಶ್ ಮುರುಗೇಶನ್ ಅವರ ಸಂಗೀತ ಹಾಗೂ ಷಣ್ಮುಗ ಸುಂದರಂ ಅವರ ಛಾಯಾಗ್ರಹಣ ವೆಬ್ ಸಿರೀಸ್ಗಿದೆ.
ಇದನ್ನೂ ಓದಿ: 'ಫೋಟೋ' ಜೊತೆಗೆ ಪ್ರಕಾಶ್ ರಾಜ್: ಲಾಕ್ಡೌನ್ ಸಂಕಷ್ಟದ ಕಥೆ ಪ್ರಸೆಂಟ್ ಮಾಡ್ತಿದ್ದಾರೆ ಬಹುಭಾಷಾ ನಟ