ಮಂಗಳೂರು(ದಕ್ಷಿಣ ಕನ್ನಡ): 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಇಂದು ಘೋಷಣೆಯಾಗಿದೆ. ಕಾಂತಾರ ಸ್ಟಾರ್ ರಿಷಬ್ ಶೆಟ್ಟಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಸ್ಯಾಂಡಲ್ವುಡ್ನ ಡಿವೈನ್ ಸ್ಟಾರ್ ಎಂಬ ಹಿರಿಮೆಗೆ ಪಾತ್ರರಾಗಿರುವ ರಿಷಬ್ ಶೆಟ್ಟಿ ಅವರಿಗೆ ಪ್ರತಿಷ್ಠಿತ ಪ್ರಶಸ್ತಿ ಒಲಿದು ಬಂದಿದ್ದು, ಕನ್ನಡಿಗರು ಸಂತಸ ವ್ಯಕ್ತಪಡಿಸಿದ್ದಾರೆ. ರಿಷಬ್ ಶೆಟ್ಟಿ ಅವರೊಂದಿಗೆ ಕಾಂತಾರ ಸಿನಿಮಾದಲ್ಲಿ ನಟಿಸಿದ್ದ ಮಂಗಳೂರಿನ ಮೈಮ್ ರಾಮ್ ದಾಸ್ ಅವರು ಡಿವೈನ್ ಸ್ಟಾರ್ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಮೈಮ್ ರಾಮ್ ದಾಸ್, ''ರಿಷಬ್ ಶೆಟ್ಟಿ ಹುಟ್ಟಿದ್ದು ಉಡುಪಿ ಜಿಲ್ಲೆಯ ಕುಂದಾಪುರದ ಕೆರಾಡಿಯಲ್ಲಿ. ಅಲ್ಲಿ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸಿದರು. ಆ ನಂತರ ಕುಂದಾಪುರದ ಭಂಡಾರ್ಕಾರ್ ಕಾಲೇಜಿನಲ್ಲಿ ಶಿಕ್ಷಣ ಪೂರೈಸಿದರು. ಆ ಸಂದರ್ಭ ಅವರು ಕಲೆ ಮತ್ತು ಸಂಸ್ಕೃತಿಯಲ್ಲಿ ಆಸಕ್ತಿ ಹೊಂದಿದ್ದರು. ಅನೇಕ ಸ್ಥಳೀಯ ನಾಟಕಗಳಲ್ಲಿ ಭಾಗವಹಿಸುತ್ತಿದ್ದರು. ಆ ಬಳಿಕ ಕೆಲಸದ ನಿಮಿತ್ತ ಬೆಂಗಳೂರಿಗೆ ಹೋಗಿದ್ದರು. ಅಲ್ಲಿ ಅವರು ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಆದರೆ, ಅವರು ಚಲನಚಿತ್ರಗಳಲ್ಲಿ ನಟಿಸಲು ಮತ್ತು ಕೆಲಸ ಮಾಡಲು ಆಸಕ್ತಿ ಹೊಂದಿದ್ದರು'' ಎಂದು ತಿಳಿಸಿದರು.
''ಹಾಗಾಗಿ ಅವರು ಚಲನಚಿತ್ರಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಮೊದಲು ತಂತ್ರಜ್ಞರಾಗಿ ಕೆಲಸ ಮಾಡಿದರು. ಅನೇಕ ಸಣ್ಣ ನಾಟಕಗಳಲ್ಲೂ ಭಾಗವಹಿಸಿದ್ದರು. ರಕ್ಷಿತ್ ಶೆಟ್ಟಿ ಜೊತೆ ಉಳಿದವರು ಕಂಡಂತೆ ಸಿನಿಮಾದಲ್ಲಿ ಅವರು ಸಂಗಡಿಗರ ಗುಂಪು ರಚಿಸಿಕೊಂಡು ನಟಿಸುತ್ತಾರೆ. ಅದರಲ್ಲಿ ಸಾಮಾನ್ಯ ವ್ಯಕ್ತಿಯ ಪಾತ್ರ ನಿರ್ವಹಿಸಿದ್ದರು. ಆ ಸಮಯದಲ್ಲಿ ಅವರು ಸಿನಿಮಾ ಮಾಡಲು ನಿರ್ಧರಿಸಿದರು. ರಿಕ್ಕಿ ಎಂಬ ಚಿತ್ರ ಮಾಡಿದರು. ಅದು ಚೆನ್ನಾಗಿ ಮೂಡಿಬಂತು ಕೂಡಾ. ಇದು ನಕ್ಸಲೀಯ ಚಳವಳಿಯ ಕಥೆಯನ್ನು ಆಧರಿಸಿದೆ. ಈ ಚಿತ್ರದ ಬಗ್ಗೆ ಹೆಚ್ಚಿನವರಿಗೆ ಗೊತ್ತಿಲ್ಲ. ಆ ನಂತರ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರವನ್ನು ನಿರ್ದೇಶಿಸಿದ್ದರು. ಆ ಚಿತ್ರ ಬಹಳ ಜನಪ್ರಿಯವಾಯಿತು. ಆ ಚಿತ್ರದ ಮೂಲಕ ನಿರ್ದೇಶಕರಾದರು. ನಂತರ ಕಿರಿಕ್ ಪಾರ್ಟಿ ಎಂಬ ಚಿತ್ರವನ್ನು ನಿರ್ದೇಶಿಸಿದರು. ಇದು ಕಾಲೇಜು ವಿದ್ಯಾರ್ಥಿಗಳ ಕುರಿತಾದ ಚಿತ್ರವಾಗಿದ್ದು, ಬಹಳ ಜನಪ್ರಿಯವಾಯಿತು. ಆ ಚಿತ್ರದ ಮೂಲಕ ರಿಷಬ್ ಶೆಟ್ಟಿ ದೊಡ್ಡ ನಿರ್ದೇಶಕರಾದರು. ಅವರ ಎಲ್ಲಾ ಸಿನಿಮಾಗಳು ಒಂದಕ್ಕೊಂದು ವಿಭಿನ್ನವಾಗಿವೆ. ಇದಾದ ನಂತರ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಬೆಲ್ ಬಾಟಮ್ ಎಂಬ ಚಿತ್ರದಲ್ಲಿ ನಟಿಸಿದ್ದು, ಒಳ್ಳೆಯ ನಟ ಎಂದು ಗುರುತಿಸಿಕೊಳ್ಳುತ್ತಾರೆ''.
ಇದನ್ನೂ ಓದಿ: 'ಪ್ರಶಸ್ತಿ ಜವಾಬ್ದಾರಿ ಹೆಚ್ಚಿಸಿದೆ'; ಯಶ್, ವಿಕ್ರಮ್ ಕರೆಮಾಡಿ ವಿಶ್ ಮಾಡಿದ್ರು: ರಿಷಬ್ ಶೆಟ್ಟಿ - Rishab Shetty
''ಆ ಚಿತ್ರದ ನಂತರ ಹೀರೋ ಎಂಬ ಚಿತ್ರವನ್ನು ನಿರ್ದೇಶಿಸಿದರು. ಬಳಿಕ ಕಾಂತಾರ ಚಿತ್ರವನ್ನು ನಿರ್ದೇಶಿಸಿದರು. ಕರಾವಳಿ ದೈವಾರಾಧನೆ ಬಗ್ಗೆ ಅವರಿಗೆ ಸಾಕಷ್ಟು ಚಿಂತನೆಗಳಿದ್ದವು. ಹಾಗಾಗಿ ಅನೇಕ ಜನರೊಂದಿಗೆ ಸಂವಹನ ನಡೆಸಿದರು. ಲಾಕ್‌ಡೌನ್ ಸಮಯದಲ್ಲಿ, ಒಂದು ಕಥೆಯನ್ನು ಹೆಣೆಯುತ್ತಾರೆ. ಚಿತ್ರದಲ್ಲಿ ನಟಿಸಲು ಅನೇಕರು ಒಪ್ಪಿಕೊಂಡರು. ಸಿನಿಮಾ ಎರಡು ವರ್ಷದಲ್ಲಿ ಪೂರ್ಣಗೊಂಡಿತು. ಕಾಂತಾರ ಒಂದು ವಿಭಿನ್ನ ಚಿತ್ರ. ರಿಷಬ್ ಚಿತ್ರವನ್ನು ನಿರ್ದೇಶಿಸಿ, ನಟಿಸಿದ್ದು, ಅವರ ಜೊತೆ ನಾನು ಕೆಲಸ ಮಾಡಿದ್ದೆ. ಅವರು ಕಠಿಣ ಕೆಲಸಗಾರರಾಗಿದ್ದರು. ಹಗಲು ರಾತ್ರಿ ಕೆಲಸ ಮಾಡಿದ್ದರು. ತಮ್ಮ ಸಂಸ್ಕೃತಿಯನ್ನು ವ್ಯಕ್ತಪಡಿಸಲು ಸಾಧ್ಯವಾಯಿತು. ಉತ್ತಮ ನಿರ್ದೇಶಕರು ಜೊತೆಗೆ ಅವರು ನಟಿಸಿದ ಎಲ್ಲಾ ಚಿತ್ರಗಳು ಬಹಳ ಜನಪ್ರಿಯವಾಗಿವೆ. ಅವರಿಗೆ ರಾಷ್ಟ್ರೀಯ ಪ್ರಶಸ್ತಿ ಸಿಗಬೇಕಿತ್ತು. ಅದಕ್ಕೆ ಅವರು ಅರ್ಹರಾದ ವ್ಯಕ್ತಿ'' ಎಂದು ಹೇಳಿದರು.