ಕಾಲೇಜ್, ಮಾಲ್ ಎಲ್ ನೋಡಿದ್ರೂ 'ಗೌರಿ'ಯದ್ದೇ ಹವಾ. ಕನ್ನಡದ ಕ್ರಿಯೇಟಿವ್ ಡೈರೆಕ್ಟರ್ ಇಂದ್ರಜಿತ್ ಲಂಕೇಶ್ ನಿರ್ದೇಶನದ ಬಹುನಿರೀಕ್ಷಿತ ಚಿತ್ರ. ಪಿ ಲಂಕೇಶ್ ಕುಟುಂಬದ ಮೂರನೇ ತಲೆಮಾರು ಅಂದ್ರೆ ಇಂದ್ರಜಿತ್ ಲಂಕೇಶ್ ಅವರ ಮಗ ಸಮರ್ಜಿತ್ ಲಂಕೇಶ್ ಈ ಚಿತ್ರದ ಮೂಲಕ ಸ್ಯಾಂಡಲ್ವುಡ್ ಪ್ರವೇಶಿಸಲು ಸಜ್ಜಾಗಿದ್ದಾರೆ. ಈ ಹಿನ್ನೆಲೆ, ಚಿತ್ರದ ನಿರ್ದೇಶಕ-ನಿರ್ಮಾಪಕ ಇಂದ್ರಜಿತ್ ಲಂಕೇಶ್ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಚಿತ್ರದ ಪ್ರಮೋಷನ್ ಮಾಡುತ್ತಿದ್ದಾರೆ.
ಅದರಂತೆ ಇತ್ತೀಚೆಗೆ ಮಾಲ್ ಒಂದರಲ್ಲಿ "ಗೌರಿ" ಚಿತ್ರದ ಪ್ರೀ ರಿಲೀಸ್ ಇವೆಂಟ್ ಅನ್ನು ಅದ್ಧೂರಿಯಾಗಿ ಹಮ್ಮಿಕೊಳ್ಳಲಾಗಿತ್ತು. ಸ್ಯಾಂಡಲ್ವುಡ್ನ ರಿಯಲ್ ಸ್ಟಾರ್ ಉಪೇಂದ್ರ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ "ಗೌರಿ" ಚಿತ್ರಕ್ಕೆ ಸಾಥ್ ನೀಡಿದ್ದಾರೆ. ಈ ಸಂದರ್ಭ ನಾಯಕ ನಾಯಕಿ ಸೇರಿದಂತೆ ಇಡೀ ಗೌರಿ ತಂಡ ಉಪಸ್ಥಿತವಿತ್ತು.
ಕಾರ್ಯಕ್ರಮದಲ್ಲಿ ಮೊದಲು ಮಾತನಾಡಿದ ರಿಯಲ್ ಸ್ಟಾರ್ ಉಪೇಂದ್ರ, ಇಂದ್ರಜಿತ್ ಅವರದ್ದು ಗೋಲ್ಡನ್ ಹ್ಯಾಂಡ್. ದೀಪಿಕಾ ಪಡುಕೋಣೆ ಅವರನ್ನು ಇಲ್ಲಿಗೆ ಕರೆದುಕೊಂಡು ಬಂದು ಬ್ರೇಕ್ ಕೊಟ್ಟರು. ಅವರೀಗ ಇಂಟರ್‌ನ್ಯಾಷನಲ್ ಸ್ಟಾರ್. ಇವರ ಮಗ ಯಾವುದಾದರೂ ದೃಷ್ಟಿಯಲ್ಲಿ ಇಲ್ಲಿರುತ್ತಾರೆ ಅನಿಸುತ್ತಾ?. ಬಾಲಿವುಡ್ಗೋ, ಹಾಲಿವುಡ್ಗೋ ಹೋಗೋ ತರ ಇದ್ದಾರೆ. ಅವರನ್ನು ಇಲ್ಲೇ ಇರಿಸಿಕೊಳ್ಳೋ ಶಕ್ತಿ ನಿಮ್ಮ ಕೈಲಿದೆ. ಹೊಸ ತಲೆಮಾರಿನವರನ್ನು ನಮ್ಮ ಕನ್ನಡ ಚಿತ್ರರಂಗದಲ್ಲಿ ಉಳಿದುಕೊಳ್ಳೋದು ನಿಮ್ಮ ಕೈಯಲ್ಲಿ ಮಾತ್ರ ಸಾಧ್ಯ. ಹಾಗಾಗಿ ನೀವು ಸಿನಿಮಾ ವೀಕ್ಷಿಸಬೇಕು ಎಂದು ಕೇಳಿಕೊಂಡರು.
ಈ ಬ್ಯೂಟಿ ಮತ್ತು ಬುದ್ಧಿವಂತಿಕೆ ಮುಗ್ಧತೆಯಿಂದ ಬರುತ್ತದೆ. ಮುಗ್ಧತೆಯೇ ಬ್ಯೂಟಿ. ಇವರ ಮುಖ ನೋಡಿ. ಇವರಿಗೆ ನಾನು ಹಾರೈಸುವುದು ಮುಖ್ಯವಲ್ಲ. ನೀವು ಹಾರೈಸಬೇಕು. ಫಸ್ಟ್ ಡೇ, ಫಸ್ಟ್ ಶೋ ಅನ್ನು ಎಲ್ಲರೂ ನೋಡಿ. ಇವರ ಸಿನಿಮಾ ನೋಡಿದ್ರೆ ನಮಗೂ ಖುಷಿಯಾಗುತ್ತದೆ. ಇಂದ್ರಜಿತ್ ಅವರು ಶೋಮ್ಯಾನ್. ಇಂತಹ ಕಾರ್ಯಕ್ರಮ ಆಯೋಜಿಸಲು ಅವರಿಂದಲೇ ಸಾಧ್ಯ. ಸಿನಿಮಾ ಸಹ ಅದೇ ರೀತಿ ಮಾಡಿರುತ್ತಾರೆ. ಕಾರ್ಯಕ್ರಮವನ್ನೇ ಹೀಗೆ ಮಾಡಿದ್ದಾರೆ, ಇನ್ನೂ ಸಿನಿಮಾ ಹೇಗೆ ಮಾಡಿರಬಹುದು ಯೋಚಿಸಿ ಎಂದು ಪ್ರಶಂಸಿಸಿದರು.
ಅಷ್ಟೇ ಅಲ್ಲ, ಸಮರ್ಜಿತ್ ಲವ್‍ಸ್ಟೋರಿಗಳಿಗೂ ಸೂಟ್ ಆಗುತ್ತಾರೆ. ಆ್ಯಕ್ಷನ್ ಚಿತ್ರಗಳಿಗೂ ಹೊಂದುತ್ತಾರೆ. ಫಿಟ್ನೆಸ್ ಕಾಪಾಡಿಕೊಂಡಿದ್ದಾರೆ, ಜೊತೆಗೆ ಡ್ಯಾನ್ಸ್ ಅನ್ನೂ ಬಹಳ ಚೆನ್ನಾಗಿ ಮಾಡುತ್ತಾರೆ. ಜನರು ಈಗಾಗಲೇ ಹೃತಿಕ್ ರೋಶನ್ ಅಂತ ಹೇಳೋಕೆ ಶುರು ಮಾಡಿದ್ದಾರೆ. ನೀವು ನಿಮ್ಮ ಈ ಮುಗ್ಧತೆಯನ್ನು ಉಳಿಸಿಕೊಳ್ಳಿ. ಎಷ್ಟು ಮುಗ್ಧನಪ್ಪಾ ನೀನು. ಇಲ್ಲಿ ಮುಗ್ಧತೆ ಉಳಿಸಿಕೊಳ್ಳೋದು ಬಹಳ ಕಷ್ಟ. ಸ್ವಲ್ಪ ದಿನ ಚಿತ್ರರಂಗದಲ್ಲಿ ಇದ್ದರೆ ಸಾಕು, ನಾವೆಲ್ಲಾ ಬಹಳ ಕಿಲಾಡಿಗಳಾಗಿಬಿಡುತ್ತೇವೆ. ಚಿಕ್ಕವರಾಗಿದ್ದಾಗ ಬಹಳ ಮುಗ್ಧರಾಗಿರುತ್ತೇವೆ. ಕೆಲವರು ವಯಸ್ಸಾದ ಮೇಲೂ ಹಾಗೇ ಇರುತ್ತಾರೆ. ಕೆಲವರು ಮಾತ್ರ ತಮಗೆ ಎಲ್ಲಾ ಗೊತ್ತು ಎಂದು ಮುಗ್ಧತೆ ಕಳೆದುಕೊಂಡುಬಿಡುತ್ತಾರೆ ಎಂದು ರಿಯಲ್ ಸ್ಟಾರ್ ಉಪೇಂದ್ರ ಅವರು ಸಮರ್ಜಿತ್ ಲಂಕೇಶ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.
ಬಳಿಕ ನಿರ್ದೇಶಕ ಇಂದ್ರಜಿತ್ ಲಂಕೇಶ್ ಮಾತನಾಡಿ, ಸಿನಿಮಾ ಒಂದು ಕ್ರಿಯಾಶೀಲ ಮಾಧ್ಯಮ. ಪ್ರತೀ ಕ್ಷಣ ಯೋಚನೆ ಮಾಡಿ, ಏನಾದರೂ ಹೊಸತನ ತರುತ್ತಾರೆ ಎಂದರೆ ಅದು ಉಪೇಂದ್ರ. ಅವರು ಕನ್ನಡ ಚಿತ್ರರಂಗದಲ್ಲಿರುವುದು ನಮ್ಮ ಅದೃಷ್ಟ. ಉಪ್ಪಿ ಸರ್ ತಮ್ಮ ಬುದ್ಧಿವಂತಿಕೆಯಿಂದ ಮತ್ತು ಕ್ರಿಯಾಶೀಲತೆಯಿಂದ ಕನ್ನಡ ಚಿತ್ರರಂಗಕ್ಕೆ ದೊಡ್ಡ ಹೆಸರು ತಂದಿದ್ದಾರೆ. ಕನ್ನಡ ಚಿತ್ರರಂಗವನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಎ, ಉಪೇಂದ್ರ ಮತ್ತು ಸೂಪರ್ ಚಿತ್ರಗಳನ್ನು ನಾವು ಯೋಚನೆ ಮಾಡೋಕೂ ಸಾಧ್ಯವಿಲ್ಲ.
ಇದನ್ನೂ ಓದಿ: ಮೌಂಟ್ ಕಾರ್ಮೆಲ್ ಕಾಲೇಜ್ ಹುಡುಗಿ ಜೊತೆ ಪುಶ್ ಅಪ್ಸ್ ಮಾಡಿದ ಸಮರ್ಜಿತ್ ಲಂಕೇಶ್ - Gowri Promotions
ಒಮ್ಮೆ ನನ್ನ ಮಗ ಉಪೇಂದ್ರ ಸಿನಿಮಾ ಕ್ಲೈಮ್ಯಾಕ್ಸ್ ನೋಡಿದೆ. ಅವರು ಆಗಿನ ಕಾಲಕ್ಕೆ ಟೊರೋಂಟಿನೋ ಶೈಲಿಯ ಸಿನಿಮಾ ಮಾಡಿದ್ದರು ಎಂದು ಹೇಳುತ್ತಿದ್ದ. ಆ ರೀತಿಯ ಯೋಚನೆ ಮಾಡೋದು ಅಸಾಧ್ಯ. ಅವರು ನಮ್ಮ ನಡುವೆ ಇದ್ದಾರೆ ಅನ್ನೋದೇ ನಮ್ಮ ಹೆಮ್ಮೆ ಎಂದು ಹೇಳಿದ ಇಂದ್ರಜಿತ್ ಅವರು ಉಪೇಂದ್ರರಿಗೆ ಧನ್ಯವಾದ ಅರ್ಪಿಸಿದರು. ಆಗಸ್ಟ್ 15ರಂದು ಬಿಡುಗಡೆ ಆಗುತ್ತಿರುವ ಗೌರಿ ಚಿತ್ರವನ್ನು ಎಲ್ಲರೂ ಚಿತ್ರಮಂದಿರಗಳಲ್ಲೇ ನೋಡಿ ಎಂದು ಕೇಳಿಕೊಂಡರು.
ಇದನ್ನೂ ಓದಿ: 'ನೂರು ಜನ್ಮಕೂ ನೀವೇ ನನ್ನ ಆಯ್ಕೆ': ಯಶ್ ರಾಧಿಕಾ ನಿರ್ಶ್ಚಿತಾರ್ಥಕ್ಕೆ 8 ವರ್ಷಗಳ ಸಂಭ್ರಮ - Yash Radhika Pandit
ಈ ಸಂದರ್ಭ ನಾಯಕ ಸಮರ್ಜಿತ್ ಲಂಕೇಶ್ ಹಾಗೂ ನಾಯಕಿ ಸಾನ್ಯಾ ಅಯ್ಯರ್ ತಮ್ಮ ಸಿನಿಮಾ ವೀಕ್ಷಿಸಿ ಆಶೀರ್ವದಿಸಿ ಎಂದು ಅಭಿಮಾನಿಗಳಲ್ಲಿ ಕೇಳಿಕೊಂಡರು. ಇವರಿಬ್ಬರ ಕೆಮಿಸ್ಟ್ರಿ ಚೆನ್ನಾಗಿ ವರ್ಕ್ ಔಟ್ ಆಗಿದೆ. ಇವರ ಜೊತೆ ನೀನಾಸಂ ಅಶ್ವಥ್, ಮಾನಸೀ ಸುಧೀರ್, ಸಂಪತ್ ಮೈತ್ರೇಯಾ ಸೇರಿದಂತೆ ಸಾಕಷ್ಟು ಜನರು ಅಭಿನಯಿಸಿದ್ದಾರೆ. ಚಿತ್ರಕ್ಕೆ ಎ.ಜೆ ಶೆಟ್ಟಿ ಹಾಗೂ ಕೃಷ್ಣಕುಮಾರ್ ಛಾಯಾಗ್ರಹಣ ನಿರ್ವಹಿಸಿದ್ದಾರೆ. ಮಾಸ್ತಿ ಮಂಜು, ರಾಜಶೇಖರ್ ಹಾಗೂ ಮಧು ಸಂಭಾಷಣೆ ಬರೆದಿದ್ದಾರೆ. ರವಿವರ್ಮಾ, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಮಾಡಿದ್ದಾರೆ. ಸ್ವಾತಂತ್ರ್ಯ ದಿನದೊಂದು ಗೌರಿ ಚಿತ್ರ ಪ್ರೇಕ್ಷಕರಿಗೆ ದರ್ಶನ ಕೊಡಲಿದೆ.