ಕನ್ನಡ ಚಿತ್ರರಂಗದಲ್ಲಿ ಕಂಟೆಂಟ್ ಜೊತೆಗೆ ಅದ್ಧೂರಿ ಮೇಕಿಂಗ್ ಉಳ್ಳ ಸಿನಿಮಾಗಳು ನಿರ್ಮಾಣ ಆಗುತ್ತಿವೆ. ಈ ಮಧ್ಯೆ ಸಿನಿಮಾದ ಗಂಧಗಾಳಿ ಗೊತ್ತಿಲ್ಲದೇ ಇದ್ದ ಆರ್ ಚಂದ್ರು ಅವರೀಗ ಸ್ಟಾರ್ ಫಿಲ್ಮ್ ಮೇಕರ್ ಆಗಿದ್ದು, ಅವರ ಪ್ರತಿಭೆಯನ್ನು ಸಾಬೀತುಪಡಿಸಿದೆ. ಇಡೀ ಭಾರತೀಯ ಚಿತ್ರರಂಗದಲ್ಲೇ ಯಾರೂ ಮಾಡಿರದ ಒಂದು ಸಾಹಸವನ್ನು ಮಾಡಿದ್ದಾರೆ.
'ಆರ್.ಸಿ ಸ್ಟುಡಿಯೋಸ್'.... ಹೌದು, ಇತ್ತೀಚೆಗಷ್ಟೇ ಖಾಸಗಿ ಹೋಟೆಲ್ನಲ್ಲಿ ನಿರ್ದೇಶಕ ಆರ್. ಚಂದ್ರ ಅವರು ತಮ್ಮ ಚಲನಚಿತ್ರ ನಿರ್ಮಾಣ ಸಂಸ್ಥೆಯನ್ನು ಘೋಷಿಸಿದರು. 'ಆರ್.ಸಿ ಸ್ಟುಡಿಯೋಸ್' ಅಡಿಯಲ್ಲಿ ಒಟ್ಟಿಗೆ ಐದು ಸಿನಿಮಾಗಳನ್ನು ಘೋಷಿಸಿದರು. ಆರ್.ಸಿ ಸ್ಟುಡಿಯೋಸ್ ಲೋಗೋವನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈಯಲ್ಲಿ ಅನಾವರಣ ಮಾಡಿಸುವ ಮೂಲಕ ಗಮನ ಸೆಳೆದಿದ್ದರು. ಆ ಸಂದರ್ಭದಲ್ಲಿ ಉಪೇಂದ್ರ, ಮಾಜಿ ಸಚಿವ ಹೆಚ್.ಎಂ ರೇವಣ್ಣ, ನಿರ್ಮಾಪಕ ಮತ್ತು ವಿತರಕರಾದ ಆನಂದ್ ಪಂಡಿತ್, ಜಾಕ್ ಮಂಜು, ಅಲಂಕಾರ್ ಪಾಂಡಿಯನ್ ಸೇರಿ ಹಲವರು ಹಾಜರಿದ್ದರು.
ಒಟ್ಟಿಗೆ ಐದು ಸಿನಿಮಾ ಘೋಷಣೆ: ಈ ಕಾರ್ಯಕ್ರಮದ ಅವಿಸ್ಮರಣೀಯ ಕ್ಷಣಗಳ ವಿಡಿಯೋವನ್ನು 'ಆರ್.ಸಿ ಸ್ಟುಡಿಯೋಸ್' ರಿವೀಲ್ ಮಾಡಿದೆ. ಶ್ರೀರಾಮಬಾಣ, ಕಬ್ಜ 2, ಪಿಓಕೆ, ಫಾದರ್ ಮತ್ತು ಡಾಗ್ ಎಂಬ ಐದು ಚಿತ್ರಗಳ ಅನೌನ್ಸ್ಮೆಂಟ್ ಕ್ಷಣಗಳೂ ಕೂಡ ಈ ವಿಡಿಯೋದಲ್ಲಿದೆ. ಈ ಪೈಕಿ ಕಬ್ಜ 2 ಚಿತ್ರವನ್ನು ಚಂದ್ರು ಅವರೇ ನಿರ್ದೇಶಿಸುತ್ತಿದ್ದು, ಮಿಕ್ಕಂತೆ ಹೊಸ ನಿರ್ದೇಶಕರು ಉಳಿದ ಸಿನಿಮಾಗಳನ್ನು ನಿರ್ದೇಶಿಸಲಿದ್ದಾರೆ. ಈ ಎಲ್ಲಾ ಚಿತ್ರಗಳನ್ನು ಆರ್.ಸಿ ಸ್ಟುಡಿಯೋಸ್ ಅಡಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕ ಆರ್. ಚಂದ್ರು, ಭಾರತ ಚಂದ್ರನ ಮೇಲೆ ಕಾಲಿಟ್ಟಿದೆ. ನಾನು ಸಹ ಕಬ್ಜ ಮೂಲಕ ಅದೇ ರೀತಿ ಪ್ರಯತ್ನಪಟ್ಟೆ. ನಾನು ನನ್ನದೇ ಹಣದಿಂದ ಪ್ರಯತ್ನಪಟ್ಟೆ. ಲ್ಯಾಂಡಿಂಗ್ ವೇಳೆ ಚಿಕ್ಕ ಕ್ರಾಶ್ ಆಯ್ತು. ಅದ್ರೆ ಸೋಲಲಿಲ್ಲ. ಮಿಕ್ಕಂತೆ ಎಲ್ಲವೂ ಸಕ್ಸಸ್ ಆಯಿತು. ಇಂದು ನನ್ನ ಚಲನಚಿತ್ರ ನಿರ್ಮಾಣ ಸಂಸ್ಥೆಯಡಿ ಐದು ಸಿನಿಮಾಗಳನ್ನು ಘೋಷಿಸಿದ್ದೇನೆ. ನಾನು ಸಹ ದುಡ್ಡನ್ನು ರಿಯಲ್ ಎಸ್ಟೇಟ್‍ಗೆ ಹಾಕಬಹುದಿತ್ತು. ಆದರೆ, ದೇವರು ನನ್ನನ್ನು ಇಲ್ಲಿ ತಂದು ನಿಲ್ಲಿಸಿದ್ದಾರೆ. ಸಿನಿಮಾ ಮಾಡಿದರೆ, ಚಿತ್ರರಂಗದ ಎಲ್ಲಾ ವಲಯದವರು ಊಟ ಮಾಡುತ್ತಾರೆ ಎಂದು ತಿಳಿಸಿದರು.
ಇದನ್ನೂ ಓದಿ: 9 ವರ್ಷಗಳ ಬಳಿಕ ಅಸ್ಸಾಂನಲ್ಲಿ ಕೋಣ ಮತ್ತು ಪಕ್ಷಿಗಳ ಕಾಳಗ: ಫೋಟೋಗಳಿಲ್ಲಿವೆ
ಚಿತ್ರರಂಗವನ್ನು ಗೌರವಿಸುವುದನ್ನು ಕಲಿಯಬೇಕು. ಮೊದಲು ನಾವು ಒಳ್ಳೆ ಸಿನಿಮಾ ಮಾಡೋದಕ್ಕೆ ಪ್ರಯತ್ನ ಮಾಡೋಣ. ಮಾಡಿದ ಸಿನಿಮಾಗಳೆಲ್ಲವೂ ಹಿಟ್ ಆಗುವುದಿಲ್ಲ. ಸ್ಟಾರ್ ನಟರ ಸಿನಿಮಾಗಳು ಸಹ ಹಿನ್ನೆಡೆ ಕಂಡಿವೆ. ನಮ್ಮದು ಸಹ ಸಣ್ಣ ಕ್ರಾಶ್ ಆಗಿರಬಹುದು. ಚಿತ್ರ ಹಿನ್ನೆಡೆ ಕಂಡಿರಬಹುದು. ಆದ್ರೆ ಸರ್ಕಾರಕ್ಕೆ ನಾನು 20 ಕೋಟಿ ರೂ. ಟ್ಯಾಕ್ಸ್ ಕಟ್ಟಿದ್ದೇನೆ. ಅದು ಕೂಡ 'ಕಬ್ಜ'ದಿಂದ. ಇದನ್ನು ಯಾರೂ ಕೂಡ ಬಹಿರಂಗವಾಗಿ ಹೇಳುವುದಿಲ್ಲ. ನಾನು ಹೇಳುತ್ತೇನೆ. ಅದರಿಂದ ಎಷ್ಟು ಜನ ಊಟ ಮಾಡಿರುತ್ತಾರೆ. ಅದರಿಂದ ಚಿತ್ರರಂಗದಲ್ಲಿ ಎಷ್ಟು ಜನ ಬದುಕಬಹುದು? ಇದೆಲ್ಲವನ್ನೂ ಯೋಚಿಸಬೇಕು. ಸುಮ್ಮನೆ ಚಿತ್ರ ಸೋಲು ಕಂಡಿತು ಎಂದು ಮಾತನಾಡಬಾರದು ಎಂದು ಹೇಳಿದರು.
ಇದನ್ನೂ ಓದಿ: ಹೊಸ ನಿರ್ಮಾಣ ಸಂಸ್ಥೆ ತೆರೆದ 'ಕಬ್ಜ' ನಿರ್ದೇಶಕ ಆರ್.ಚಂದ್ರು; 5 ಪ್ಯಾನ್ ಇಂಡಿಯಾ ಸಿನಿಮಾ ಘೋಷಣೆ
ಎಲ್ಲರೂ ಚಿತ್ರವನ್ನು ಗೆಲ್ಲಿಸಬೇಕು ಅಂತಲೇ ಮಾಡುತ್ತಾರೆ. ಸೋಲಬೇಕು ಅಂತ ಯಾರೂ ಸಿನಿಮಾ ಮಾಡುವುದಿಲ್ಲ ಎಂದ ಚಂದ್ರು, ಚಿತ್ರ ಸೋತಿರಬಹುದು. ಇಲ್ಲಿಯವರೆಗೂ ಬಂದಿದ್ದೇನೆಂಬ ಸಂತೋಷವಿದೆ. ಕನ್ನಡ ನಿರ್ದೇಶಕರಿಗೆ ಅವಕಾಶ ಕೊಡಬೇಕು ಎಂದು ಈ ಸಂಸ್ಥೆ ಕಟ್ಟಿದ್ದೇನೆ. ನಾನು ಬೇರೆ ಯಾವುದೋ ಭಾಷೆಗೆ ಹೋಗಿ ಬ್ಯಾನರ್ ಶುರು ಮಾಡಿಲ್ಲ. ಬೆಂಗಳೂರಿನಲ್ಲಿ ನಿಂತು 'ಆರ್.ಸಿ. ಸ್ಟುಡಿಯೋಸ್' ಪ್ರಾರಂಭಿಸಿದ್ದೇನೆ. ಈ ಸಂಸ್ಥೆಯ ಮೂಲಕ ನಿರಂತರವಾಗಿ ಚಿತ್ರ ಮಾಡುತ್ತೇನೆಂದು ನಿರ್ದೇಶಕ ಆರ್ ಚಂದ್ರು ತಿಳಿಸಿದರು.