ಹೈದರಾಬಾದ್: ಪ್ರಸ್ತುತ ಅಲ್ಲು ಅರ್ಜುನ್ ಜೊತೆಗೆ ಪುಷ್ಪ 2 ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ನಟಿ ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ್ದಾರೆ. ಕಳೆದ ಕೆಲವು ದಿನಗಳಿಂದ ಇನ್ಸ್ಟಾಗ್ರಾಂಗೆ ಗೈರಾಗಿದ್ದ ರಶ್ಮಿಕಾ ಮಂದಣ್ಣ ಇದೀಗ ತಮ್ಮ ಎರಡು ಫೋಟೋಗಳನ್ನು ಹಂಚಿಕೊಂಡು, ಅಭಿಮಾನಿಗಳಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯವಾಗಿಲ್ಲದ ಕಾರಣವನ್ನು ಬಹಿರಂಗ ಪಡಿಸಿದ್ದಾರೆ. ಅಭಿಮಾನಿಗಳ ಮುಂದೆ ಬರದೇ ಇರುವುದಕ್ಕೂ ರಶ್ಮಿಕಾ ಕ್ಷಮೆ ಕೇಳಿದ್ದಾರೆ.
ಸಾಮಾಜಿಕ ಜಾಲತಾಣಗಳಾದ ಎಕ್ಸ್, ಇನ್ಸ್ಟಾಗ್ರಾಂ, ಹಾಗೂ ಫೇಸ್ಬುಕ್ಗಳಲ್ಲಿ ನಟಿ ರಶ್ಮಿಕಾ ಮಂದಣ್ಣ ಎರಡು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಸುದೀರ್ಘವಾದ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ಕೊಡಗಿನ ಕುವರಿ, ಅಭಿಮಾನಿಗಳು ಎಲ್ಲಿದ್ದೀರಾ? ವ್ಯಾಲೆಂಟೈನ್ಸ್ ಡೇ ಯೋಜನೆ ಏನು ಎಂದು ಹೇಳಿ ಎಂದು ಪೋಸ್ಟ್ ಹಾಕಿದ್ದಾರೆ. ಈ ಮೂಲಕ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಪೋಸ್ಟ್ನಲ್ಲಿ "ಕೆಲಕಾಲ ನಿಮ್ಮ ಮುಂದೆ ಬರದೇ ಇದ್ದದ್ದಕ್ಕೆ ಕ್ಷಮಿಸಿ. ಅತಿಯಾದ ಕೆಲಸದ ವೇಳಾಪಟ್ಟಿಯಿಂದಾಗಿ ಸ್ವಲ್ಪ ಅಸ್ವಸ್ಥಳಾಗಿದ್ದೇನೆ. ಆದರೆ ನಿಮ್ಮನ್ನೇ ಮಾತನಾಡಿಸಲೆಂದು ಬಂದಿದ್ದೇನೆ. ಅಭಿಮಾನಿಗಳೇ ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ." ಎಂದು ಟ್ವೀಟ್ನಲ್ಲಿ ಹೇಳಿಕೊಂಡಿದ್ದಾರೆ.
"ನಾವು ಕೊನೆಯದಾಗಿ ಮಾತನಾಡಿ, ಕೆಲವು ಸಮಯವೇ ಆಗಿದೆ ಅಲ್ವಾ? ನೀವೆಲ್ಲರೂ ಏನು ಮಾಡುತ್ತಿದ್ದೀರಿ ಹೇಳಿ? ನಾನು ಎಲ್ಲವನ್ನೂ ತಿಳಿದುಕೊಳ್ಳಲು ಬಯಸುತ್ತೇನೆ. ಮತ್ತು ನಿಮ್ಮ ವ್ಯಾಲೆಂಟೈನ್ಸ್ ಡೇ ಯೋಜನೆಗಳನ್ನು ನನಗೆ ತಿಳಿಸಿ. (ಹೌದು, ನಾನು ಕಾಮೆಂಟ್ಗಳ ಮೂಲಕ ಓದುತ್ತೇನೆ) ಮತ್ತೆ ಕೆಟ್ಟವರೆಲ್ಲಾ ದೂರವಿರಿ.. ಇದು ನನ್ನ ಪ್ರೀತಿಪಾತ್ರರಿಗೆ ಮಾತ್ರ" ಎಂದು ತಮ್ಮ ಎಕ್ಸ್ ಖಾತೆಯ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ರಶ್ಮಿಕಾ ಮಂದಣ್ಣ ಅವರ ಸಿನಿಮಾಗಳ ಬಗ್ಗೆ ಹೇಳುವುದಾದರೆ, ಇತ್ತೀಚೆಗಷ್ಟೇ ರಣಬೀರ್ ಕಪೂರ್ ಅವರ ಜೊತೆ ತೆರೆಹಂಚಿಕೊಂಡ ಅನಿಮಲ್ ಸಿನಿಮಾ ಬಿಡುಗಡೆಯಾಗಿದ್ದು, ಸಿನಿಮಾದ ಸಕ್ಸಸ್ ಅನ್ನು ಎಂಜಾಯ್ ಮಾಡುತ್ತಿದ್ದಾರೆ. ಸಿನಿಮಾ ಬಾಲಿವುಡ್ ಅಂಗಳದಲ್ಲಿ ಭಾರಿ ಸದ್ದು ಕೂಡಾ ಮಾಡುತ್ತಿದೆ. ಭರ್ಜರಿ ಕಲೆಕ್ಷನ್ ಮಾಡಿದ್ದು, ಸಿನಿ ಪ್ರಿಯರಿಗೆ ರಸದೌತಣ ನೀಡುತ್ತಿದೆ. ಸಂದೀಪ್ ರೆಡ್ಡಿ ವಂಗಾ ಅವರು ಆ್ಯಕ್ಷನ್ ಕಟ್ ಹೇಳಿರುವ ಈ ಸಿನಿಮಾದಲ್ಲಿ ರಣಬೀರ್ ಕಪೂರ್ ಹಾಗೂ ರಶ್ಮಿಕಾ ಜೊತೆಗೆ ಅನಿಲ್ ಕಪೂರ್, ಬಾಬಿ ಡಿಯೋಲ್ ಕೂಡ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇನ್ನೊಂದೆಡೆ ಬಹು ನಿರೀಕ್ಷಿತ ಪುಷ್ಪ: ದಿ ರೂಲ್ ಚಿತ್ರೀಕರಣದಲ್ಲಿ ರಶ್ಮಿಕಾ ಬ್ಯುಸಿಯಾಗಿದ್ದಾರೆ.
ಇದನ್ನೂ ಓದಿ: 'ಸೂರರೈ ಪೊಟ್ರು' ರೀಮೇಕ್: ಅಕ್ಷಯ್ ಕುಮಾರ್ ಮುಂದಿನ ಸಿನಿಮಾ ಶೀರ್ಷಿಕೆ ರಿವೀಲ್