ಎನ್ಡಿಎ ಮತ್ತು ಇಂಡಿಯಾ ಒಕ್ಕೂಟಗಳ ರಾಜಕೀಯ ಸಭೆಗಳಿಗೂ ಮುನ್ನ ಸೂಪರ್ ಸ್ಟಾರ್ ರಜನಿಕಾಂತ್ ದೆಹಲಿಗೆ ಭೇಟಿ ಕೊಟ್ಟು ಅಚ್ಚರಿ ಮೂಡಿಸಿದ್ದಾರೆ. ಈ ಭೇಟಿಯನ್ನು ಭಾರತದ ರಾಜಕೀಯ ವಲಯದಲ್ಲಿ ಪ್ರಮುಖ ಕ್ಷಣವೆಂದು ಬಹುತೇಕರು ಅಭಿಪ್ರಾಯಪಟ್ಟಿದ್ದಾರೆ. ಎರಡೂ ಮೈತ್ರಿ ಒಕ್ಕೂಟಗಳು ರಾಷ್ಟ್ರ ರಾಜಧಾನಿಯಲ್ಲಿ ನಿರ್ಣಾಯಕ ಸಭೆಗೆ ಸಜ್ಜಾಗಿವೆ. ಇದರ ನಡುವೆ ಹೆಸರಾಂತ ನಟ ಕೂಡ ದೆಹಲಿಯಲ್ಲಿದ್ದಾರೆ. ಈ ಬಗ್ಗೆ ಹಲವು ಊಹಾಪೋಹಗಳು ಎದ್ದಿರೋದೊಂತು ನಿಜ. ಆದ್ರೆ ರಜನಿಕಾಂತ್ ಅವರ ಈ ಭೇಟಿಯು, ಸಿನಿಮಾ ಮೇಲಿನ ಅವರ ನಿರಂತರ ಬದ್ಧತೆಯನ್ನು ಗಮನಿಸಿದರೆ ಅವರ ಕೆಲಸಕ್ಕೆ ಸಂಬಂಧಿಸಿದಂತೆ ಇರಬಹುದು ಎಂದು ತೋರುತ್ತಿದೆ.
2024ರ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದ ನಂತರ, ಎನ್ಡಿಎ ಮತ್ತು ಇಂಡಿಯಾ ಎರಡೂ ಒಕ್ಕೂಟಗಳು ತಮ್ಮ ಮುಂದಿನ ಹೆಜ್ಜೆಗಾಗಿ ತಮ್ಮ ಉನ್ನತ ನಾಯಕರು ಹಾಗೂ ಮಿತ್ರಪಕ್ಷಗಳೊಂದಿಗೆ ಸಭೆಗಳನ್ನು ಕರೆದಿವೆ. ಬಿಜೆಪಿ ಬಹುಮತ ಸಾಧಿಸಲು ವಿಫಲವಾದ ಕಾರಣ ಸರ್ಕಾರ ರಚಿಸಲು ಇತರೆ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುಬೇಕಿದೆ.
ವಿರೋಧ ಪಕ್ಷದ ಮೈತ್ರಿಕೂಟವು ಬಿಜೆಪಿಯ ಕೆಲ ಮಿತ್ರಪಕ್ಷಗಳಿಂದ ಬೆಂಬಲ ಪಡೆದರೆ ಸ್ವತಂತ್ರವಾಗಿ ಸರ್ಕಾರ ರಚಿಸುವ ಸಾಧ್ಯತೆಯೂ ಇದೆ. ಬಿಜೆಪಿ ಸರಳ ಬಹುಮತಕ್ಕೆ ಬೇಕಾಗಿರುವ ಸ್ಥಾನಗಳನ್ನು ಕಳೆದುಕೊಂಡಿರುವ ಹಿನ್ನೆಲೆ, ಸಮ್ಮಿಶ್ರ ಸರ್ಕಾರ ರಚನೆಗಾಗಿ ನಿತೀಶ್ ಕುಮಾರ್, ಎನ್. ಚಂದ್ರಬಾಬು ನಾಯ್ಡು ಮತ್ತು ಏಕನಾಥ್ ಶಿಂಧೆ ಅವರಂತಹ ಮಿತ್ರಪಕ್ಷಗಳನ್ನು ಅವಲಂಬಿಸಿದೆ.
ಇನ್ನು ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಹೆಸರು ಸಂಪಾದಿಸಿರುವ ರಜನಿಕಾಂತ್, ಯಾವುದೇ ಪ್ರಮುಖ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದೇ, ಈ ಹಿಂದೆ ರಾಜಕೀಯಕ್ಕೆ ಕಾಲಿಟ್ಟಿದ್ದರು. ಸದ್ಯ ಅವರ ದೆಹಲಿ ಭೇಟಿ ಮೈತ್ರಿ ಬಗ್ಗೆ ಸಾಕಷ್ಟು ಊಹಾಪೋಹಗಳನ್ನು ಹುಟ್ಟುಹಾಕಿದೆ.
ರಜನಿಕಾಂತ್ ಅವರು 2017ರಲ್ಲಿ ತಮ್ಮ ರಜಿನಿ ಮಕ್ಕಳ್ ಮಂಡ್ರಮ್ (RMM) ಪಕ್ಷದೊಂದಿಗೆ ರಾಜಕೀಯ ಪ್ರವೇಶಿಸಿದರು. ಪಕ್ಷವನ್ನು ವಿಸರ್ಜಿಸದಿದ್ದರೂ 2021ರಲ್ಲಿ ರಾಜಕೀಯಕ್ಕೆ ಮರಳುವ ಉದ್ದೇಶವಿಲ್ಲ ಎಂದು ಘೋಷಿಸಿದರು. ಅದಾಗ್ಯೂ ಅವರು ರಾಜಕೀಯ ಪ್ರವೇಶಿಸುತ್ತಾರಾ ಎಂಬ ಚರ್ಚೆ ಮುಂದುವರಿದಿದೆ.
ಇದನ್ನೂ ಓದಿ: ಗೆದ್ದು ಬೀಗಿದ ತಾರೆಯರಿವರು; ಆನ್ಸ್ಕ್ರೀನ್ನಿಂದ ಸಂಸತ್ವರೆಗೆ - ಜನಸೇವೆಗೆ ಸಜ್ಜಾದ ಸೆಲೆಬ್ರಿಟಿಗಳು - Election Results
ಸಿನಿಮಾ ವಿಚಾರ ಗಮನಿಸುವುದಾದರೆ, ರಜನಿಕಾಂತ್ 'ವೆಟ್ಟೈಯನ್' ಮತ್ತು 'ಕೂಲಿ' ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಟಿ.ಜೆ ಜ್ಞಾನವೆಲ್ ನಿರ್ದೇಶನದ 'ವೆಟ್ಟೈಯನ್' ಚಿತ್ರೀಕರಣ ಪೂರ್ಣಗೊಂಡಿದ್ದು, ಶೀಘ್ರ ಬಿಡುಗಡೆಗೆ ಸಿದ್ಧತೆ ನಡೆಯುತ್ತಿದೆ. ಲೋಕೇಶ್ ಕನಕರಾಜ್ ನಿರ್ದೇಶನದಲ್ಲಿ 'ಕೂಲಿ' ಮೂಡಿಬರಲಿದೆ. ಶೀಘ್ರದಲ್ಲೇ ಶೂಟಿಂಗ್ ಕೂಡ ಪ್ರಾರಂಭವಾಗಲಿದೆ.
ಇದನ್ನೂ ಓದಿ: 'ಮತ್ತೊಮ್ಮೆ ಮೋದಿ ಗೆಲ್ಲುತ್ತಾರಾ'? ತಲೈವಾ ರಜನಿಕಾಂತ್ ಪ್ರತಿಕ್ರಿಯೆ ಹೀಗಿತ್ತು! - Rajinikanth On Modi
ಇದಕ್ಕೂ ಮುನ್ನ ನಟ ಆಧ್ಯಾತ್ಮಿಕ ಪ್ರವಾಸ ಕೈಗೊಂಡಿದ್ದರು. ಪಿಎಂ ಮೋದಿ ಮತ್ತೊಮ್ಮೆ ಗೆಲ್ಲುವ ಸಾಧ್ಯತೆಗಳ ಕುರಿತು ಪ್ರಶ್ನೆ ಎದುರಾದಾಗ, "ಕ್ಷಮಿಸಿ, ರಾಜಕೀಯ ಪ್ರಶ್ನೆಗಳು ಬೇಡ" ಎಂದು ಪ್ರತಿಕ್ರಿಯಿಸಿದ್ದರು.