ಹೈದರಾಬಾದ್: ಮಲಯಾಳಂನ ಬಹುನಿರೀಕ್ಷಿತ ಸಿನಿಮಾ 'ಆಡುಜೀವಿತಂ' ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ತೆರೆ ಕಂಡಿದೆ. ನಟ ಪೃಥ್ವಿರಾಜ್ ಸುಕುಮಾರನ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.
2008ರಲ್ಲಿಯೇ ಚಿತ್ರ ನಿರ್ಮಾಣ ಪ್ರಕ್ರಿಯೆ ಪ್ರಾರಂಭವಾದರೂ, ಮಾರ್ಚ್ 2018ರಿಂದ ಜುಲೈ 2022ರವರೆಗೆ ಚಿತ್ರೀಕರಣವನ್ನು ವಿವಿಧ ಹಂತಗಳಲ್ಲಿ ಪ್ರಾರಂಭಿಸಿ ಮುಗಿಸಲಾಗಿದೆ. ವಾಡಿ ರಮ್, ಜೋರ್ಡನ್ ಮತ್ತು ಅಲ್ಜೀರಿಯಾದ ಸಹಾರಾ ಮರುಭೂಮಿಗಳು ಹಾಗು ಹೆಚ್ಚುವರಿ ದೃಶ್ಯಗಳನ್ನು ಕೇರಳದಲ್ಲಿಯೂ ಚಿತ್ರೀಕರಿಸಲಾಗಿದೆ. ಒಟ್ಟಾರೆ ಇಡೀ ಚಿತ್ರ ತಂಡ 16 ವರ್ಷಗಳ ಕಾಲ ಚಿತ್ರಕ್ಕಾಗಿ ಶ್ರಮಿಸಿರುವುದು ವಿಶೇಷ.
'ಆಡುಜೀವತಂ'ಗಾಗಿ ಪೃಥ್ವಿರಾಜ್ ಸುಕುಮಾರನ್ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿಯೇ ಚಿತ್ರ ಪ್ರೇಕ್ಷಕಪ್ರಭುಗಳ ಮನಸ್ಸು ಗೆದ್ದಿದೆ ಎಂದು ಗುಣಗಾನ ಮಾಡಲಾಗುತ್ತಿದೆ. ಸ್ವತಃ ಚಿತ್ರಕ್ಕೆ ಕಥೆ ಬರೆದಿರುವ ರಾಷ್ಟ್ರೀಯ ಪ್ರಶಸ್ತಿ ವಿಜೇತ ಬ್ಲೆಸ್ಸಿ ನಿರ್ದೇಶನದ ಜೊತೆಗೆ ಸಹ-ನಿರ್ಮಾಣವನ್ನೂ ಮಾಡಿದ್ದಾರೆ. ಸಹ-ನಿರ್ಮಾಣ ಕೆಲಸ ಭಾರತ ಮತ್ತು ಅಮೆರಿಕದ ಕಂಪನಿಗಳನ್ನು ಒಳಗೊಂಡಿದೆ.
ಮಲಯಾಳಂ ಸಾಹಿತ್ಯ ಪ್ರಪಂಚದಲ್ಲಿ ಅತ್ಯಂತ ಜನಪ್ರಿಯವಾದ ಬೆಸ್ಟ್ ಸೆಲ್ಲರ್‌ಗಳಲ್ಲಿ ಒಂದಾದ, ಹೆಸರಾಂತ ಬರಹಗಾರ ಬೆನ್ಯಾಮಿನ್ ಬರೆದಿರುವ 'ಆಡುಜೀವಿತಂ' ಕಾದಂಬರಿ ಆಧಾರಿತ ಈ ಚಿತ್ರ 90ರ ದಶಕದ ಆರಂಭದಲ್ಲಿ ಕೇರಳದಿಂದ ವಿದೇಶದಲ್ಲಿ ಅದೃಷ್ಟ ಅರಸುತ್ತಾ ವಲಸೆ ಹೋದ ಯುವಕ ನಜೀಬ್ ಎಂಬಾತನ ಜೀವನಕಥೆ ಹೇಳುತ್ತದೆ.
ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್, ಸೌದಿ ಅರೇಬಿಯಾದ ದೂರದ ಜಮೀನಿನಲ್ಲಿ ಮೇಕೆ ಮೇಯಿಸುವುದಕ್ಕೆ ಬಲವಂತದಿಂದ ಜೀತದಾಳಾಗಿ ಒಳಗಾಗುವ ಮಲಯಾಳಿ ವಲಸೆ ಕಾರ್ಮಿಕ ನಜೀಬ್ ಪಾತ್ರ ಮಾಡಿದ್ದಾರೆ. ನಜೀಬ್ ಅನುಭವಿಸುವ ಸಂಕಷ್ಟ, ನೋವು, ಹತಾಶೆ ಮತ್ತು ಬಂಧನದಿಂದ ತಪ್ಪಿಸಿಕೊಳ್ಳಲು ಮಾಡುವ ಹೋರಾಟದ ಕಥೆ ಕಣ್ಣೀಗೆ ಕಟ್ಟುವಂತೆ ಬ್ಲೆಸ್ಸಿ ಹೆಣೆದಿದ್ದಾರೆ. ಇಂತಹ ಅದ್ಭುತ ಸಾಹಸಕ್ಕೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಚಿತ್ರತಂಡವನ್ನು ಹಾಡಿ ಹೊಗಳುತ್ತಿದ್ದಾರೆ. ಅಲ್ಲದೆ, ಅನೇಕ ಸ್ಟಾರ್ ನಟ-ನಟಿರಿಂದಲೂ 'ಆಡುಜೀವತಂ' ಮೆಚ್ಚುಗೆ ಗಳಿಸಿದೆ.
ಸೈನು (ನಜೀಬ್ ಪತ್ನಿ) ಆಗಿ ಅಮಲಾ ಪೌಲ್, ಇಬ್ರಾಹಿಂ ಖಾದರಿಯಾಗಿ ಹಾಲಿವುಡ್ ನಟ ಜಿಮ್ಮಿ ಜೀನ್ ಲೂಯಿಸ್, ಉಮ್ಮಾ (ನಜೀಬ್ ತಾಯಿ) ಆಗಿ ಶೋಭಾ ಮೋಹನ್, ಹಕೀಮ್ ಆಗಿ ಕೆ.ಆರ್.ಗೋಕುಲ್, ಖಫೀಲ್ ಆಗಿ ತಾಲಿಬ್ ಅಲ್ ಬಲೂಶಿ, ರಿಕ್ ಅಬಿ ನಟಿಸಿದ್ದಾರೆ. ಆಸ್ಕರ್ ವಿಜೇತ ಎ.ಆರ್.ರೆಹಮಾನ್ ಸಂಗೀತ ನಿರ್ದೇಶನ ಮಾಡಿರುವುದು ಮತ್ತೊಂದು ವಿಶೇಷ. ರೆಸುಲ್ ಪೂಕುಟ್ಟಿ ಮತ್ತು ಸುನಿಲ್ ಕೆ.ಎಸ್., ಚಿತ್ರದ ಅದ್ಭುತ ದೃಶ್ಯಗಳನ್ನು ಸೆರೆ ಹಿಡಿದಿದ್ದು, ಶ್ರೀಕರ್ ಪ್ರಸಾದ್ ಸಂಕಲನ ಮಾಡಿದ್ದಾರೆ.
ಇದನ್ನೂ ಓದಿ: ರಗಡ್ ಯಂಗ್ ಹೀರೋಗಳ ಖಾಲಿತನ 'ಯುವ' ನೀಗಿಸ್ತಾರೆ: ನಿರ್ದೇಶಕ ಸಂತೋಷ್ ಆನಂದ್ ರಾಮ್ - Yuva Film