ವಿಭಿನ್ನ ಪಾತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಬೇಡಿಕೆ ಹೊಂದಿದ್ದ ನಟ ಪ್ರಮೋದ್ ಶೆಟ್ಟಿ ಅವರು ಇತ್ತೀಚೆಗೆ ತೆರೆಕಂಡ 'ಲಾಫಿಂಗ್ ಬುದ್ಧ' ಸಿನಿಮಾ ಮೂಲಕ ಪೂರ್ಣ ಪ್ರಮಾಣದ ನಾಯಕ ನಟನಾಗಿ ಬೆಳ್ಳಿ ತೆರೆ ಮೇಲೆ ಮಿಂಚಿದರು. ಈ ಸಿನಿಮಾ ಅಷ್ಟು ದೊಡ್ಡ ಮಟ್ಟದಲ್ಲಿ ಕಮರ್ಷಿಯಲಿ ಸಕ್ಸಸ್ ಕಾಣದೇ ಇದ್ರೂ, ಚಿತ್ರ ಪೊಲೀಸ್ ಇಲಾಖೆಯ ಕಷ್ಟ ಸುಖದ ಕಥೆಯನ್ನು ಹೇಳಿ ಪ್ರೇಕ್ಷಕರ ಗಮನ ಸೆಳೆದಿತ್ತು.
ಇದೀಗ 'ಜಲಂಧರ' ಸಿನಿಮಾ ಮೂಲಕ ಪ್ರಮೋದ್ ಶೆಟ್ಟಿ ಮತ್ತೆ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿಸಿರುವ 'ಜಲಂಧರ' ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಚಿತ್ರದ ಆಡಿಯೋವನ್ನು ಜಂಕಾರ್ ಆಡಿಯೋ ಸಂಸ್ಥೆ ಖರೀದಿಸಿದೆ.
ಪ್ರಮೋದ್ ಶೆಟ್ಟಿ ನಾಯಕನಾಗಿ ನಟಿಸಿರುವ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ರಂಗಭೂಮಿಯ ಹಿನ್ನೆಲೆ ಇರುವ ಸ್ಟೆಪ್ ಅಪ್ ಲೋಕಿ ಅಭಿನಯಿಸಿದ್ದಾರೆ. ಲೋಕಿ ಅವರೇ ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಜೊತೆಗೆ ಟಗರು ಚಿತ್ರದಲ್ಲಿ ಕಾನ್ಸ್ಟೇಬಲ್ ಪಾತ್ರದ ಮೂಲಕ ಗಮನ ಸೆಳೆದಿದ್ದ ಸರೋಜಾ ಖ್ಯಾತಿಯ ನಟಿ ಋಷಿಕಾ ರಾಜ್, ಅಧ್ಯಕ್ಷ ಖ್ಯಾತಿಯ ನಟಿ ಆರೋಹಿತಾ ಗೌಡ ನಟಿಸಿದ್ದಾರೆ.
ಇವರ ಜೊತೆ ಬಲರಾಜ್ ವಾಡಿ, ರಘು ರಾಮನಕೊಪ್ಪ , ನವೀನ್ ಸಾಗರ್, ಪ್ರತಾಪ್ ನನಸು, ಆದಿ ಕೇಶವರೆಡ್ಡಿ, ಭೀಷ್ಮಾ ರಾಮಯ್ಯ , ವಿಜಯರಾಜ್ , ಪ್ರಸಾದ್ ಮತ್ತು ಅಂಬು ಹೀಗೆ ಸಾಕಷ್ಟು ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಇದನ್ನೂ ಓದಿ: 'ನಾನು ಅನ್ಫಿಟ್ ಅನಿಸ್ತಿದೆ': ಬಿಗ್ ಬಾಸ್ ಮನೆಯಲ್ಲಿ ಧನರಾಜ್ ಕಣ್ಣೀರು; ಬ್ಯಾಗ್ ಪ್ಯಾಕ್ ಮಾಡಲು ಸಲಹೆ
ಇನ್ನೂ ಹಲವು ಚಿತ್ರಗಳಲ್ಲಿ ಕ್ರಿಯೇಟಿವ್ ಹೆಡ್ ಹಾಗೂ ಸಹ ನಿರ್ದೇಶಕರಾಗಿ ಕೆಲಸ ಮಾಡಿ ಅನುಭವವಿರುವ ವಿಷ್ಣು ವಿ ಪ್ರಸನ್ನ ಅವರು ಈ ಜಲಂಧರ ಚಿತ್ರಕ್ಕೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರಕಥೆಯಲ್ಲಿ ಶ್ಯಾಮ್ ಸುಂದರ್ ಮತ್ತು ಅಕ್ಷಯ್ ಕುಮಾರ್ ಸಹಾಯ ಮಾಡಿದ್ದಾರೆ. ಕೇರಳ ಮೂಲದ ಸರಿನ್ ರವೀಂದ್ರನ್ ಮತ್ತು ವಿದ್ಯಾ ಶಂಕರ್ ಪಿ.ಎಸ್ ಛಾಯಾಗ್ರಹಣ ನಿರ್ವಹಿಸಿದ್ದರೆ, ಯುವ ಸಂಗೀತ ನಿರ್ದೇಶಕ ಜಿ. ಜತಿನ್ ದರ್ಶನ್ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಅನುಭವಿ ಫಿಲಂ ಎಡಿಟರ್ ವೆಂಕಿ ಯು ಡಿ ವಿ ಕತ್ತರಿ ಪ್ರಯೋಗ ಮಾಡಿದ್ದಾರೆ.
ಇದನ್ನೂ ಓದಿ: ಅಪ್ಪ ಇದ್ದಾಗ 'ಅನುಭವ 2' ಮಾಡಬೇಕೆಂಬ ಯೋಚನೆ ಬಂದಿತ್ತು ಆದ್ರೆ.., ಅಭಿಮನ್ಯು ಸನ್ ಆಫ್ ಕಾಶೀನಾಥ್
ಸ್ಟೆಪ್ ಅಪ್ ಪಿಕ್ಚರ್ಸ್ ಲಾಂಛನದಲ್ಲಿ ಮದನ್ ಎಸ್ ಅವರು ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಹೂಡಿ ಚಂದ್ರಮೋಹನ್, ಸಿ ಎಲ್ ರಮೇಶ್ ರಾಮಚಂದ್ರ, ಪದ್ಮನಾಭನ್ ಮಂಗುದೊಡ್ಡಿ ಸಹ ನಿರ್ಮಾಪಕರಾಗಿದ್ದಾರೆ. ಸದ್ಯ ಆಡಿಯೋ ರೈಟ್ಸ್ ಮಾರಾಟದ ಜೋಷ್ನಲ್ಲಿರುವ ಜಲಂಧರ ಚಿತ್ರತಂಡ ಶೀಘ್ರದಲ್ಲೇ ಟ್ರೇಲರ್ ಬಿಡುಗಡೆ ಮಾಡಿಕೊಂಡು, ಸದ್ಯದಲ್ಲೇ ಪ್ರೇಕ್ಷಕರ ಮುಂದೆ ಬರಲು ತಯಾರಿ ನಡೆಸಿದೆ. ಜನಪ್ರಿಯ ನಟ ಪ್ರಮೋದ್ ಶೆಟ್ಟಿ ಅವರಿಗೆ ಈ 'ಜಲಂಧರ' ಚಿತ್ರ ಎಷ್ಟರ ಮಟ್ಟಿಗೆ ಗೆಲುವು ತಂದುಕೊಡಲಿದೆ ಎಂಬುದನ್ನು ಕಾದು ನೋಡಬೇಕಿದೆ.