ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವಾಕ್ಚಾತುರ್ಯ ಮತ್ತು ಅವರ ಆಕರ್ಷಣೆ ಬಗ್ಗೆ ಬಾಲಿವುಡ್ ಸ್ಟಾರ್ ಹೀರೋ ರಣ್ಬೀರ್ ಕಪೂರ್ ಮಾತನಾಡಿ, ಪ್ರಧಾನಿಯನ್ನು ಹಾಡಿ ಹೊಗಳಿದ್ದಾರೆ. "ಪೀಪಲ್ ಬೈ ಡಬ್ಲ್ಯುಟಿಎಫ್" ಪಾಡ್‌ಕಾಸ್ಟ್‌ನಲ್ಲಿ ಝೆರೊದಾ ಸಹ ಸಂಸ್ಥಾಪಕ ನಿಖಿಲ್ ಕಾಮತ್ ಅವರೊಂದಿಗೆ ಮಾತನಾಡಿದ ಜನಪ್ರಿಯ ನಟ ಪ್ರಧಾನಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜಕೀಯದ ಬಗ್ಗೆ ಹೆಚ್ಚು ಮಾತನಾಡಲಿಲ್ಲವಾದರೂ, 2019ರಲ್ಲಿ ಪ್ರಧಾನಿಯೊಂದಿಗಿನ ಮೊದಲ ಭೇಟಿಯನ್ನು ನೆನಪಿಸಿಕೊಂಡರು. ಪತ್ನಿ - ನಟಿ ಆಲಿಯಾ ಭಟ್, ಸಂಜು ಸಹ-ನಟ ವಿಕ್ಕಿ ಕೌಶಲ್ ಮತ್ತು ನಿರ್ಮಾಪಕ ಕರಣ್ ಜೋಹರ್ ಜೊತೆ ರಣ್ಬೀರ್ ನವದೆಹಲಿಯಲ್ಲಿ ಪ್ರಧಾನಿ ಮೋದಿ ಅವರನ್ನು ಮೊದಲ ಬಾರಿ ಭೇಟಿ ಮಾಡಿದ್ದರು.
ನಾಲ್ಕೈದು ವರ್ಷಗಳ ಹಿಂದೆ ನಾನು ಇತರೆ ನಟರು ಮತ್ತು ನಿರ್ದೇಶಕರೊಂದಿಗೆ ನಮ್ಮ ಪ್ರಧಾನಿಯನ್ನು ಭೇಟಿಯಾಗಿದ್ದೆ. ನೀವು ಅವರನ್ನು ಟಿವಿಯಲ್ಲಿ ನೋಡುತ್ತೀರಿ, ಅವರು ಹೇಗೆ ಮಾತನಾಡುತ್ತಾರೆ ಎಂಬುದನ್ನು ನೀವು ನೋಡುತ್ತೀರ. ಅವರು ಮಹಾನ್ ವಾಗ್ಮಿ. ನಾವು ಮೊದಲ ಬಾರಿ ಅವರನ್ನು ಭೇಟಿಯಾಗಲು ಹೋದ ಕ್ಷಣ ನಮಗೆ ನೆನಪಿದೆ. ನಾವು ಕುಳಿತಿದ್ದೆವು. ಅವರು ಒಳಗೆ ಬಂದರು. ಅವರಲ್ಲಿ ಅದೊಂದು ಮ್ಯಾಗ್ನೆಟಿಕ್ ಚಾರ್ಮ್ ಇತ್ತು ಎಂದು ಶನಿವಾರ ಪ್ರಸಾರವಾದ ಪಾಡ್‌ಕಾಸ್ಟ್‌ನಲ್ಲಿ ಹೇಳಿದರು.
ರಣ್ಬೀರ್ ಕಪೂರ್ 2019ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಸ್ಟಾರ್ ಡೆಲಿಗೇಶನ್ನ ಭಾಗವಾಗಿದ್ದರು. ರಣ್ವೀರ್ ಸಿಂಗ್, ಭೂಮಿ ಪೆಡ್ನೇಕರ್, ಆಯುಷ್ಮಾನ್ ಖುರಾನಾ, ಸಿದ್ಧಾರ್ಥ್ ಮಲ್ಹೋತ್ರಾ, ಏಕ್ತಾ ಕಪೂರ್, ರಾಜ್‌ಕುಮಾರ್ ರಾವ್, ವರುಣ್ ಧವನ್, ಅಶ್ವಿನಿ ಅಯ್ಯರ್ ತಿವಾರಿ ಮತ್ತು ರೋಹಿತ್ ಶೆಟ್ಟಿ ಸಹ ಜೊತೆಗಿದ್ದರು. ಈ ಸಭೆಯನ್ನು 'ಕರ್ಟಸಿ ಮೀಟಿಂಗ್' ಎಂದು ಉಲ್ಲೇಖಿಸಲಾಗಿತ್ತು. ಪ್ರಧಾನ ಮಂತ್ರಿಯೊಂದಿಗೆ ಕ್ಲಿಕ್ಕಿಸಿಕೊಂಡಿದ್ದ ಗ್ರೂಪ್ ಸೆಲ್ಫಿ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆಗಿತ್ತು..
ರಣ್ಬೀರ್ ಅವರ ತಂದೆ ರಿಷಿ ಕಪೂರ್ (ದಿ. ನಟ) ಅವರು ಆ ಸಂದರ್ಭ ಲ್ಯುಕೇಮಿಯಾಗೆ ಚಿಕಿತ್ಸೆ ಪಡೆಯುತ್ತಿದ್ದರು. ಅಂದು ಪ್ರಧಾನಿ ನಮ್ಮ ನಿಯೋಗದ ಪ್ರತೀ ಸದಸ್ಯರೊಂದಿಗೆ "ವೈಯಕ್ತಿಕ" ವಿಷಯಗಳ ಬಗ್ಗೆಯೂ ಮಾತನಾಡಿದ್ದರು ಎಂದು ನಟ ಪಾಡ್‌ಕಾಸ್ಟ್‌ನಲ್ಲಿ ತಿಳಿಸಿದ್ದಾರೆ.
ಆ ಸಂದರ್ಭ ನನ್ನ ತಂದೆ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಹೇಗೆ ನಡೆಯುತ್ತಿದೆ ಸೇರಿದಂತೆ ಎಲ್ಲದರ ಬಗ್ಗೆ ಪ್ರಧಾನಿ ಕೇಳಿದ್ದರು. ವಿಕ್ಕಿ ಕೌಶಲ್, ಕರಣ್ ಜೋಹರ್, ಆಲಿಯಾರ ಜೊತೆ ಬೇರೆ ಬೇರೆ ವಿಷಯಗಳ ಬಗ್ಗೆ ಮಾತನಾಡಿದ್ದರು. ಎಲ್ಲವೂ ತುಂಬಾನೇ ವೈಯಕ್ತಿಕವಾಗಿತ್ತು. ಅಂತಹ ಒಂದು ನಡೆ-ನುಡಿ, ಪ್ರಯತ್ನವನ್ನು ನೀವು ಮಹಾನ್ ಪುರುಷರಲ್ಲಿ ನೋಡುತ್ತೀರಿ. ಅವರಿಗೆ ಅದರ ಅಗತ್ಯವಿಲ್ಲ. ಈಗಾಗಲೇ ಅಂತಹ ಗುಣ ಅವರಲ್ಲಿದೆ. ಅವು ಆ ವ್ಯಕ್ತಿಯ ಬಗ್ಗೆ ಬಹಳಷ್ಟು ಹೇಳುತ್ತವೆ ಎಂದು ತಿಳಿಸಿದರು. ಸೂಪರ್ ಸ್ಟಾರ್ ಶಾರುಖ್ ಖಾನ್ ಅಂತಹ 'ಸಾಧಕರಲ್ಲಿ' ಒಬ್ಬರು ಎಂದು ಸಹ ತಿಳಿಸಿದರು.
ರಾಜಕೀಯಕ್ಕೆ ಸೇರಲು ಬಯಸುತ್ತೀರೇ? ಎಂಬ ಪ್ರಶ್ನೆಯೂ ನಟನಿಗೆ ಎದುರಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ನಟ, "ರಾಜಕೀಯವೇ? ಇಲ್ಲ. ನಾನು ಕಲಾವಿದನಾಗಿರಲು ಇಚ್ಛಿಸುತ್ತೇನೆ. ರಾಜಕಾರಣಿಯಾಗಲು ಅಂತಹ ಕೌಶಲ್ಯವಿಲ್ಲ'' ಎಂದು ತಿಳಿಸಿದರು. ಸಿನಿಮಾವನ್ನು ನಿರ್ದೇಶಿಸಲು ಇಚ್ಛಿಸುತ್ತೇನೆ ಎಂದು ಕೂಡ ತಿಳಿಸಿದ್ದಾರೆ.
ಇದನ್ನೂ ಓದಿ: ಧನುಷ್ ಜನ್ಮದಿನ: 'ಕುಬೇರ'ನ ಪೋಸ್ಟರ್ ಅನಾವರಣ, ಪ್ರೇಕ್ಷಕರಲ್ಲಿ ಹೆಚ್ಚಿದ ಕುತೂಹಲ - Dhanush Kubera Poster
ಇನ್ನೂ, ನಾನು ನಿರ್ಮಾಪಕನಾಗಲ್ಲ ಎಂಬುದು ನನಗೆ ತಿಳಿದಿದೆ. 'ಜಗ್ಗಾ ಜಾಸೂಸ್' ಎಂಬ ಚಿತ್ರವನ್ನು ನಿರ್ಮಿಸಿದ್ದೆ. ಅದು ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ. ಅದಕ್ಕೆ ಬೇಕಾದ ಕೌಶಲ್ಯ ನನ್ನಲ್ಲಿಲ್ಲ ಎಂಬುದನ್ನು ನಾನು ಅರಿತುಕೊಂಡೆ. ನೀವು ರಾಜಕೀಯಕ್ಕೆ ಅಥವಾ ಇನ್ನಾವುದೇ ವೃತ್ತಿಗೆ ಸೇರಬಹುದೆಂಬುದನ್ನು ಹೇಳೋದು ಬಹಳಾನೇ ಸುಲಭ. ಏಕೆಂದರೆ ನೀವು ಇರುವ ಕ್ಷೇತ್ರದಲ್ಲಿ ನೀವು ಯಶಸ್ವಿಯಾಗಿದ್ದೀರಿ. ಆದರೆ ಎಲ್ಲದಕ್ಕೂ ಕೌಶಲ್ಯದ ಅಗತ್ಯವಿದೆ. ಆದ್ರೆ ನಾನು ಪೀಪಲ್ ಪರ್ಸನ್ ಅಲ್ಲ. ರಾಜಕೀಯದಲ್ಲಿ, ನೀವು ಜನರ ವ್ಯಕ್ತಿಯಾಗಿರಬೇಕು, ನಾನು ಹಾಗಲ್ಲ ಎಂದು ಹೇಳೋ ಮೂಲಕ ರಾಜಕೀಯಕ್ಕೆ ಎಂಟ್ರಿ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದರು.