ಬೆಂಗಳೂರು: ನಟ ಪ್ರಭಾಸ್ ಬರ್ತ್ ಡೇ ಸಂಭ್ರಮದಲ್ಲಿದ್ದಾರೆ. ನಾಳೆ ಅವರು 43ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಪ್ರಭಾಸ್ ಕೇವಲ ತೆಲುಗು ನಟನಾಗಿ ಮಾತ್ರ ಗುರುತಿಸಿಕೊಳ್ಳದೇ ಪ್ಯಾನ್ ಇಂಡಿಯಾ ನಟರಾಗಿದ್ದಾರೆ. ವಿಭಿನ್ನ ಅಭಿರುಚಿಯ ಚಿತ್ರದಲ್ಲಿ ನಟಿಸುವ ಮೂಲಕ ಹಲವು ದಾಖಲೆಗಳನ್ನೂ ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ. ನಟನ ಸಿನಿ ಜರ್ನಿಯ ಕುರಿತ ಆಸಕ್ತಿಕರ ಸಂಗತಿಗಳು ಇಲ್ಲಿವೆ.
ಪ್ರಭಾಸ್ ಸಿನಿಮಾಗಳು ಹಲವು ದಾಖಲೆಗಳನ್ನು ಬರೆದಿವೆ. 'ಬಾಹುಬಲಿ: ದಿ ಬಿಗಿನಿಂಗ್' ರಿಲೀಸ್ ಆದ ಮೊದಲ ದಿನವೇ ₹75 ಕೋಟಿ ಗಳಿಸಿ ಇತಿಹಾಸ ನಿರ್ಮಿಸಿತ್ತು. ಇದರ ನಂತರ 'ಬಾಹುಬಲಿ: ದಿ ಕನ್‌ಕ್ಲೂಷನ್' ಬಾಕ್ಸ್ ಆಫೀಸ್‌ನಲ್ಲಿ ಮೊದಲ ದಿನ ₹200 ಕೋಟಿ ಗಳಿಸಿತ್ತು. ಇನ್ನು 'ಸಾಹೋ' ಮೊದಲ ದಿನ ₹130 ಕೋಟಿ ಗಳಿಸಿದರೆ, 'ಸಲಾರ್' ₹178 ಕೋಟಿ ಕಲೆಕ್ಷನ್ ಮಾಡಿದೆ. 'ಕಲ್ಕಿ 2898 AD' ಸಿನಿಮಾ ₹180 ಕೋಟಿ ಗಳಿಸಿ ಗಲ್ಲಾಪೆಟ್ಟಿಗೆಯಲ್ಲಿ ಸೂಪರ್ ಹಿಟ್ ಆಗಿತ್ತು.
ಇತ್ತೀಚೆಗೆ ಬಿಡುಗಡೆಯಾದ ನಾಗ್ ಅಶ್ವಿನ್ ನಿರ್ದೇಶನದ 'ಕಲ್ಕಿ 2898 AD' ಸಿನಿಮಾ, ದೊಡ್ಡ ಮಟ್ಟದ ಯಶಸ್ಸು ಕಂಡಿದೆ. ವಿಶ್ವಾದ್ಯಂತ ₹1,100 ಕೋಟಿ ಗಳಿಸಿ, ಜಾಗತಿಕ ಸಿನಿಮೀಯ ಐಕಾನ್ ಆಗಿ ಪ್ರಭಾಸ್ ಸ್ಥಾನವನ್ನು ಭದ್ರಪಡಿಸಿತು. ಈ ಚಿತ್ರ ಮೊದಲ ವಾರಾಂತ್ಯದಲ್ಲೇ ₹500 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ, ಹೊಸ ದಾಖಲೆಯನ್ನೂ ಬರೆದಿದೆ.
ದೇಶೀಯ ಮಾರುಕಟ್ಟೆಯಲ್ಲಿ ಮಾತ್ರವಲ್ಲದೆ, ವಿದೇಶದಲ್ಲಿಯೂ ಪ್ರಭಾಸ್ ಸಿನಿಮಾಗಳಿಗೆ ಬೇಡಿಕೆ ಇದೆ. 'ಬಾಹುಬಲಿ 2: ದಿ ಕನ್‌ಕ್ಲೂಷನ್' ಸಿನಿಮಾ ವಿದೇಶದಲ್ಲಿ ₹396.5 ಕೋಟಿ ಕಲೆಕ್ಷನ್ ಮಾಡಿದ್ದರೆ, 'ಕಲ್ಕಿ' ಅಂತಾರಾಷ್ಟ್ರೀಯ ಮಟ್ಟದಲ್ಲಿ ₹275.4 ಕೋಟಿ ಬಾಚಿಕೊಂಡಿದೆ. 'ಸಲಾರ್: ಭಾಗ 1 -ಸೀಸ್ ಫೈರ್' ₹137.8 ಕೋಟಿ ಕಲೆಕ್ಷನ್ ಮಾಡಿದೆ. ಅದೇ ರೀತಿ ಸಾಹೋ ₹78.5 ಕೋಟಿ ಸಂಗ್ರಹಿಸಿದೆ.
ಪ್ರಭಾಸ್ ಮುಂದಿನ ಸಿನಿಮಾಗಳು: 'ಸಲಾರ್ 2: ಶೌರ್ಯಾಂಗ ಪರ್ವಂ' ಪ್ರಶಾಂತ್ ನೀಲ್ ಬರೆದು ನಿರ್ದೇಶಿಸಲಿರುವ ಈ ಹೈ-ವೋಲ್ಟೇಜ್ ಆ್ಯಕ್ಷನ್ ಡ್ರಾಮಾವನ್ನು ಹೊಂಬಾಳೆ ಫಿಲಂಸ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್ ಮತ್ತು ಜಗಪತಿ ಬಾಬು ನಟಿಸುತ್ತಿದ್ದಾರೆ. ಸಿನಿಮಾದ ಒಟ್ಟಾರೆ ಬಜೆಟ್ 360 ಕೋಟಿ ರೂ ಎಂದು ಹೇಳಲಾಗುತ್ತಿದೆ.
'ಸ್ಪಿರಿಟ್' ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದು. ಏಕೆಂದರೆ, ಪ್ರಭಾಸ್ ತಮ್ಮ ವೃತ್ತಿಜೀವನದಲ್ಲೇ ಮೊದಲ ಬಾರಿಗೆ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರೊಂದಿಗೆ ಕೈ ಜೋಡಿಸಿದ್ದಾರೆ. ಈ ಸಿನಿಮಾ ಸಹ ಬಹು ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಲಿದೆ.
1940ರ ದಶಕದ ಐತಿಹಾಸಿಕ ಕಾಲ್ಪನಿಕ ಕಥೆಯಲ್ಲೂ ಪ್ರಭಾಸ್ ನಟಿಸುತ್ತಿದ್ದಾರೆ. ಹನು ರಾಘವ್ ಪುಡಿ ಈ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ವಿಶಾಲ್ ಚಂದ್ರಶೇಖರ್ ಸಂಗೀತ ಸಂಯೋಜಿಸಲಿದ್ದು, ಚಿತ್ರಕ್ಕೆ ಸುದೀಪ್ ಚಟರ್ಜಿ ಛಾಯಾಗ್ರಹಣ ಮತ್ತು ಕೋಟಗಿರಿ ವೆಂಕಟೇಶ್ವರ ರಾವ್ ಸಂಕಲನವಿದೆ.
ಸದ್ಯ ಪ್ರಭಾಸ್ ಮಾರುತಿ ನಿರ್ದೇಶನದ 'ದಿ ರಾಜಾಸಾಬ್' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾವನ್ನು ಪೀಪಲ್ ಮೀಡಿಯಾ ಫ್ಯಾಕ್ಟರಿ ನಿರ್ಮಿಸುತ್ತಿದೆ. ಪ್ರಭಾಸ್ ಪ್ರಧಾನ ಪಾತ್ರದಲ್ಲಿ ನಟಿಸಿದರೆ, ನಿಧಿ ಅಗರ್ವಾಲ್ ಮತ್ತು ಮಾಳವಿಕಾ ಮೋಹನನ್ ತಾರಾಗಣದಲ್ಲಿದ್ದಾರೆ.
'ಕಲ್ಕಿ 2898 AD' ಜೂನ್ 27ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಯಿತು. ಈ ಚಿತ್ರದ ಮುಂದುವರೆದ ಭಾಗ 'ಕಲ್ಕಿ 2' ಫೆಬ್ರವರಿ 2025ರಲ್ಲಿ ಚಿತ್ರೀಕರಣ ಪ್ರಾರಂಭಿಸಲಿದೆ. ಎರಡನೇ ಭಾಗದ ಸಿನಿಮಾದ ಬಜೆಟ್ ಸಹ ಅಷ್ಟೇ ದೊಡ್ಡದಾಗಿದೆ. 700 ಕೋಟಿ ರೂ ಬಜೆಟ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಡಾರ್ಲಿಂಗ್ ಪ್ರಭಾಸ್ ಹೊಸ ಸಿನಿಮಾಗೆ ಸ್ಟಾರ್ ಡೈರೆಕ್ಟರ್ ಪ್ರಶಾಂತ್ ನೀಲ್ ಸಾಥ್