ನಿತೇಶ್ ತಿವಾರಿ ನಿರ್ದೇಶನದಲ್ಲಿ ಮೂಡಿಬರಲಿದೆ ಎನ್ನಲಾದ 'ರಾಮಾಯಣ' ಸಿನಿಪ್ರಿಯರಲ್ಲಿ ಸಾಕಷ್ಟು ಕುತೂಹಲ ಹುಟ್ಟಿಸಿದೆ. ಭಾರತೀಯ ಚಿತ್ರರಂಗದ ಬಹುಬೇಡಿಕೆಯ ತಾರೆಯರಾದ ರಣ್ಬೀರ್ ಕಪೂರ್, ಸಾಯಿ ಪಲ್ಲವಿ, ಯಶ್ ಸೇರಿದಂತೆ ಬಹುತಾರೆಯರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿರುವ ಈ ಚಿತ್ರ ಇನ್ನೂ ಅಧಿಕೃತವಾಗಿ ಘೋಷಣೆಯಾಗದಿದ್ದರೂ, ಆನ್ಲೈನ್ನಲ್ಲಿ ಹರಿದಾಡಿರುವ ಫೋಟೋಗಳು ಸಿನಿಮಾ ನಿರ್ಮಾಣವಾಗಲಿದೆ ಎಂಬ ಸುಳಿವು ನೀಡಿವೆ.
ಬಾಲಿವುಡ್ ಸೂಪರ್ ಸ್ಟಾರ್ ರಣ್ಬೀರ್ ಕಪೂರ್ ಭಗವಾನ್ ಶ್ರೀರಾಮನ ಪಾತ್ರ ನಿರ್ವಹಿಸಲಿದ್ದಾರೆ. ಸೌತ್ ಸಿನಿಮಾ ಇಂಡಸ್ಟ್ರಿಯ ಟಾಪ್ ಹೀರೋಯಿನ್ ಸಾಯಿ ಪಲ್ಲವಿ ಸೀತಾದೇವಿ ಪಾತ್ರ ಮಾಡಲಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸನ್ನಿ ಡಿಯೋಲ್ ಹನುಮಂತನಾಗಿ ನಟಿಸಲಿದ್ದಾರೆ ಎಂದು ಹೇಳಲಾಗಿದೆ. 2025ರಲ್ಲಿ ಸಿನಿಮಾ ಬಿಡುಗಡೆ ಆಗುವ ಸಾಧ್ಯತೆಗಳಿವೆ ಎಂದು ಹಲವು ವರದಿಗಳು ಸುಳಿವು ಬಿಟ್ಟುಕೊಟ್ಟಿದ್ದು, ಚಿತ್ರೀಕರಣ ಕುರಿತ ಹಲವು ಅಂತೆಕಂತೆಗಳೀಗ ಸದ್ದು ಮಾಡುತ್ತಿವೆ. ಯಾವುದಕ್ಕೂ ಚಿತ್ರತಂಡ ಅಧಿಕೃತ ಘೋಷಣೆ ಮಾಡಬೇಕಿದೆ.
ಮುಂಬೈನಲ್ಲಿ ಏಪ್ರಿಲ್ 2ರಂದು (ಮಂಗಳವಾರ) ರಾಮಾಯಣದ ಚಿತ್ರೀಕರಣ ಪ್ರಾರಂಭವಾಗಲಿದೆ. ಫಿಲ್ಮ್ ಸಿಟಿಯಲ್ಲಿ ವಿಶೇಷವಾಗಿ ನಿರ್ಮಿಸಲಾದ ಸೆಟ್ನಲ್ಲಿ ಈ ಆಧ್ಯಾತ್ಮಿಕ ಪ್ರಯಾಣ ಶುರುವಾಗಲಿದೆ ಎಂದು ಮೂಲವೊಂದು ಬಹಿರಂಗಪಡಿಸಿದೆ. ಶೂಟಿಂಗ್ ಸೆಟಪ್ ಗುರುಕುಲವನ್ನು ಹೋಲುತ್ತದೆ. ಸ್ಕ್ರೀನ್ ಪ್ರೆಸೆಂಟೇಶನ್ ಹೆಚ್ಚಿಸಲು ಗ್ರೀನ್ ಸ್ಕ್ರೀನ್ ಅನ್ನು ಅವಲಂಬಿಸಲಾಗುತ್ತದೆ. ಆರಂಭಿಕ ಶೂಟಿಂಗ್ ವೇಳಾಪಟ್ಟಿ, ರಾಮ, ಲಕ್ಷ್ಮಣ ಮತ್ತು ಭರತ ಅವರ ಬಾಲ್ಯಾವಸ್ಥೆ ಮೇಲೆ ಕೇಂದ್ರೀಕರಿಸುತ್ತದೆ. ಗುರು ವಸಿಷ್ಠನ ಪಾತ್ರಕ್ಕೆ ಶಿಶಿರ್ ಶರ್ಮಾ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ: '12th ಫೇಲ್' ನಟ ವಿಕ್ರಾಂತ್ ತಮಗೆ ಸಿಕ್ಕ 'ವರ್‌ದಾನ್'ಗೆ ಖುಷಿ ವ್ಯಕ್ತಪಡಿಸಿದ್ದು ಹೀಗೆ - Vikrant Massey Tattoo
ನಿರ್ದೇಶಕ ನಿತೇಶ್ ತಿವಾರಿ ಅವರು ಮಹಾಕಾವ್ಯವನ್ನು ಅಚ್ಚುಕಟ್ಟಾಗಿ ಪ್ರಸ್ತುತಪಡಿಸುವ ನಿಟ್ಟಿನಲ್ಲಿ ತಮ್ಮ ಸಂಪೂರ್ಣ ಸಮಯವನ್ನು ಈ ಪ್ರಾಜೆಕ್ಟ್ಗಾಗಿ ಮೀಸಲಿಟ್ಟಿದ್ದಾರೆ. ಸಿನಿಮಾ ಕೇವಲ ಮನರಂಜನೆ ಮಾತ್ರವಲ್ಲದೇ ಮುಂದಿನ ಪೀಳಿಗೆಗೆ ಬೆಳಕಾಗುವ ಗುರಿ ಹೊಂದಿದೆ. ರಣ್ಬೀರ್ ಕಪೂರ್ ಆರಂಭಿಕ ಚಿತ್ರೀಕರಣದ ಸಮಯದಲ್ಲಿ ಇರುವುದಿಲ್ಲ. ಅವರು ಪೋಸ್ಟ್-ಪ್ರೊಡಕ್ಷನ್ ಪ್ರಕ್ರಿಯೆಗೆ ಅಗತ್ಯವಾದ ಫೈನಲರ್ 3D ಸ್ಕ್ಯಾನ್‌ಗಾಗಿ ಲಾಸ್ ಏಂಜಲೀಸ್‌ಗೆ ತೆರಳಲಿದ್ದಾರೆ.
ಇದನ್ನೂ ಓದಿ: ಸ್ವಂತ ಜೆಟ್ನಲ್ಲಿ ಪ್ರವಾಸ ಕೈಗೊಂಡ ಸೂಪರ್ ಸ್ಟಾರ್ ರಾಮ್ ಚರಣ್ - Ram Charan
ರಾಮಾಯಣವನ್ನು ನಮಿತ್ ಮಲ್ಹೋತ್ರಾ ನಿರ್ಮಿಸಲಿದ್ದಾರೆ. ರಾಮ ನವಮಿ (ಏಪ್ರಿಲ್ 17)ಯಂದು ಚಿತ್ರದ ಅಧಿಕೃತ ಘೋಷಣೆಗಾಗಿ ಸಿದ್ಧತೆ ನಡೆದಿದೆ. ತಂಡ ಏಪ್ರಿಲ್‌ನಲ್ಲಿ ಚಿತ್ರೀಕರಣ ಪ್ರಾರಂಭಿಸಿ, ಜುಲೈ ವೇಳೆಗೆ ಮುಕ್ತಾಯಗೊಳಿಸುವ ಗುರಿಯನ್ನು ಹೊಂದಿದೆ. 2025ರ ದೀಪಾವಳಿ ಸಂದರ್ಭ ಬಿಡುಗಡೆಗೊಳಿಸುವ ಯೋಜನೆ ಚಿತ್ರತಂಡದ್ದು. ಸಿನಿಮಾ ಸುತ್ತ ಸಾಕಷ್ಟು ನಿರೀಕ್ಷೆ, ಕುತೂಹಲಗಳಿದ್ದು, ಅಧಿಕೃತ ಘೋಷಣೆ ನಿರೀಕ್ಷಿಸಲಾಗಿದೆ.