ಬಹುತಾರಾಗಣದ ಬಹುನಿರೀಕ್ಷಿತ ಚಿತ್ರ 'ಕಲ್ಕಿ 2898 ಎಡಿ'. ಇತ್ತೀಚೆಗಷ್ಟೇ ಚಿತ್ರದ ಟ್ರೇಲರ್ ಅನಾವರಣಗೊಂಡು ಸಿನಿಪ್ರಿಯರ ಕುತೂಹಲ ಕೆರಳಿಸಿತ್ತು. ಕಳೆದ ದಿನ ಚಿತ್ರದ ಮತ್ತೊಂದು ಟ್ರೇಲರ್ ಅನಾವರಣಗೊಂಡಿದೆ. ಮೊದಲ ಟ್ರೇಲರ್ ಭಾರತೀಯ ಪುರಾಣಗಳಲ್ಲಿ ಬೇರೂರಿರುವ 'ಕಲ್ಕಿ 2898 ಎಡಿ'ಯ ಸಿನಿಮೀಯ ಬ್ರಹ್ಮಾಂಡವನ್ನು ಪ್ರೇಕ್ಷಕರಿಗೆ ಪರಿಚಯಿಸಿದರೆ, ಇದೀಗ ಬಿಡುಗಡೆ ಆಗಿರುವ ಟ್ರೇಲರ್ ಚಿತ್ರದ ಆಳವನ್ನು ನೋಡುಗನಿಗೆ ಪರಿಚಯಿಸಿದೆ. ಇದು ಅಸಾಧಾರಣ ಚಿತ್ರದ ಅದ್ಭುತ ಟ್ರೇಲರ್ ಅಂತಿದ್ದಾರೆ ನೋಡುಗರು.
ಟ್ರೇಲರ್‌ನ ಪ್ರತೀ ಪಾತ್ರಗಳು ವಿಭಿನ್ನ. ಒಂದಕ್ಕಿಂತ ಒಂದನ್ನು ಮೀರಿಸುವಂಥ ಪಾತ್ರಗಳು. ಭಾರತೀಯ ಚಿತ್ರರಂಗದ ದಿಗ್ಗಜ ಅಮಿತಾಭ್ ಬಚ್ಚನ್ ಅಶ್ವತ್ಥಾಮನಾಗಿ ಧೈರ್ಯಶಾಲಿ ಸಾಹಸಗಳನ್ನು ಪ್ರದರ್ಶಿಸಿದ್ದಾರೆ. ಉಳಗನಾಯಗನ್ ಕಮಲ್ ಹಾಸನ್ ಯಾಸ್ಕಿನ್ ಆಗಿ ಕಾಣಿಸಿಕೊಂಡಿದ್ದಾರೆ. ಪ್ರಭಾಸ್ ಭೈರವನಾಗಿ, ದೀಪಿಕಾ ಪಡುಕೋಣೆ ಸುಮತಿ ಪಾತ್ರದಲ್ಲಿ ಎದುರಾಗಿದ್ದಾರೆ. ದಿಶಾ ಪಟಾನಿ ರಾಕ್ಸಿಯಾಗಿ ಮಿಂಚು ಹರಿಸಿದ್ದಾರೆ. ಈ ಟ್ರೇಲರ್ಗೆ ಡಾರ್ಲಿಂಗ್ ಫ್ಯಾನ್ಸ್ ಫಿದಾ ಆಗಿದ್ದಾರೆ.
ಕಲ್ಕಿ 2898 ಎಡಿ ಟ್ರೇಲರ್‌ಗಳಲ್ಲಿ ವಿಭಿನ್ನ ಪ್ರಪಂಚಗಳನ್ನು ಕಾಣಬಹುದು. ಒಂದು ಕಾಶಿ. ಅದರ ಉಳಿವಿಗಾಗಿ ಹೋರಾಡುತ್ತಿರುವ, ಕೊನೆಯದಾಗಿ ಉಳಿದ ನಗರವೆಂದು ಬಿಂಬಿಸಲಾಗಿದೆ. ದೃಶ್ಯವೈಭವವೇ ಇಡೀ ಟ್ರೇಲರ್‌ನ ಜೀವಾಳ. ಊಹೆಗೂ ನಿಲುಕದ ಒಂದಷ್ಟು ಅಚ್ಚರಿಗೆ ದೂಡುವ ದೃಶ್ಯಗಳೇ ಇಲ್ಲಿನ ಹೈಲೈಟ್. ಅತ್ಯುತ್ತಮ ಹಿನ್ನೆಲೆ ಸಂಗೀತ, ಹೈ ಕ್ಲಾಸ್ ವಿಎಫ್ಎಕ್ಸ್ ಮತ್ತು ರೋಮಾಂಚನಗೊಳಿಸುವ ದೃಶ್ಯಗಳೊಂದಿಗೆ ಈ ಸಿನಿಮಾ ಮೂಡಿ ಬಂದಿದೆ.
ಟ್ರೇಲರ್, ನಿರ್ದೇಶಕ ನಾಗ್ ಅಶ್ವಿನ್ ಅವರ ದೂರದೃಷ್ಟಿಯ ನಿರ್ದೇಶನಾ ಶೈಲಿ, ಭಾರತೀಯ ಸಿನಿಮಾ ಕ್ಷೇತ್ರವನ್ನು ಮರುವ್ಯಾಖ್ಯಾನಿಸುವ ಭರವಸೆ ನೀಡುತ್ತದೆ. ಇದೊಂದು ನಿಜವಾದ ಪ್ಯಾನ್-ಇಂಡಿಯನ್ ಸಿನಿಮಾ ಎನಿಸಿಕೊಂಡಿದೆ. ದಕ್ಷಿಣದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ವೈಜಯಂತಿ ಮೂವೀಸ್ ದೊಡ್ಡ ಮಟ್ಟದಲ್ಲಿ ಬಂಡವಾಳ ಹೂಡಿದೆ. 600 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂಬ ವರದಿಗಳಿವೆ. ಹಾಗಾಗಿ ಇದು ಭಾರತೀಯ ಚಿತ್ರರಂಗದಲ್ಲೇ ಬಿಗ್ ಬಜೆಟ್ ಸಿನಿಮಾ ಎಂದು ಗುರುತಿಸಿಕೊಂಡಿದೆ. ಈ ಬಹುಭಾಷಾ, ಪುರಾಣ ಪ್ರೇರಿತ ವೈಜ್ಞಾನಿಕ ಕಥೆಯುಳ್ಳ ಸಿನಿಮಾ ಇದೇ ಜೂನ್ 27ರಂದು ತೆಲುಗು, ಹಿಂದಿ, ತಮಿಳು, ಮಲಯಾಳಂ, ಕನ್ನಡ ಮತ್ತು ಇಂಗ್ಲಿಷ್ ಸೇರಿದಂತೆ ಬಹು ಭಾಷೆಗಳಲ್ಲಿ ಅದ್ಧೂರಿಯಾಗಿ ಚಿತ್ರಮಂದಿರ ಪ್ರವೇಶಿಸಲಿದೆ.
ಇದನ್ನೂ ಓದಿ: ನಾಡಪ್ರಭು ಕೆಂಪೇಗೌಡರ ಅವತಾರದಲ್ಲಿ ನಟರಾಕ್ಷಸ ಡಾಲಿ ಧನಂಜಯ್ - Nadaprabhu Kempegowda Movie
ಇದೇ ಜೂನ್ 10ರಂದು ಚಿತ್ರದ ಮೊದಲ ಟ್ರೇಲರ್ ಅನಾವರಣಗೊಂಡಿತ್ತು. ಬಿಡುಗಡೆಯಾದ 24 ಗಂಟೆಯೊಳಗೆ 13 ಮಿಲಿಯನ್ಗೂ ಹೆಚ್ಚು ವೀಕ್ಷಣೆ ಕಂಡು ಹೆಚ್ಚಿನವರ ಗಮನ ಸೆಳೆದಿತ್ತು. ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ಎರಡನೇ ಟ್ರೇಲರ್ ಸದ್ದು ಮಾಡುತ್ತಿದೆ.