'ದಿಯಾ' ಬಗ್ಗೆ ವಿಶೇಷ ಪರಿಚಯ ಬೇಕೆನಿಸದು. ಸ್ಯಾಂಡಲ್ವುಡ್ನಲ್ಲಿ ಸದ್ದು ಮಾಡಿದ ಸಿನಿಮಾ. ವಿಭಿನ್ನ ಪ್ರೇಮಕಥೆ ಮೂಲಕ ಪ್ರೇಕ್ಷಕರ ಮನ ಮುಟ್ಟಿದ ಚಿತ್ರ. ಇದೇ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಜನಪ್ರಿಯತೆ ಸಂಪಾದಿಸಿದ ನಟ ಕರಾವಳಿ ಪ್ರತಿಭೆ ಪೃಥ್ವಿ ಅಂಬಾರ್. ಕಡಿಮೆ ಅವಧಿಯಲ್ಲಿ ಜನಪ್ರಿಯತೆ ಸಂಪಾದಿಸಿ ಶಿವ ರಾಜ್ಕುಮಾರ್ ಅವರಂತಹ ಸ್ಟಾರ್ ನಟರುಗಳ ಜೊತೆ ಸ್ಕ್ರೀನ್ ಶೇರ್ ಮಾಡಿರುವ ಪೃಥ್ವಿ ಅಂಬಾರ್ ಅವರೀಗ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ದೂರದರ್ಶನ ಸಿನಿಮಾದಲ್ಲಿ ವಿಭಿನ್ನ ಪಾತ್ರದ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದ ಪೃಥ್ವಿ ಅಂಬಾರ್ ನಟನೆಯ ಮೂರು ಚಿತ್ರಗಳು ಈ ವರ್ಷ ಬಿಡುಗಡೆ ಆಗಲಿದೆ.
- " class="align-text-top noRightClick twitterSection" data="">
'ಮತ್ಸ್ಯಗಂಧ' ಟೀಸರ್ ರಿಲೀಸ್: ಹೌದು, ಪೃಥ್ವಿ ಅಂಬಾರ್ ಅವರ 'ಜೂನಿ' ಮತ್ತು 'ಫಾರ್ ರಿಜಿಸ್ಟ್ರೇಷನ್' ಎಂಬ ಎರಡು ಸಿನಿಮಾಗಳು ಬಿಡುಗಡೆಗೆ ರೆಡಿಯಾಗಿವೆ. ಈ ಮಧ್ಯೆ 'ಮತ್ಸ್ಯಗಂಧ' ಅನ್ನೋ ಚಿತ್ರ ಕೂಡ ಸದ್ದು ಮಾಡುತ್ತಿದೆ. ಈ ಚಿತ್ರದ ಮೂಲಕ ಖಾಕಿ ಖದರ್ನಲ್ಲಿ ಅಬ್ಬರಿಸಲು ದಿಯಾ ಸ್ಟಾರ್ ರೆಡಿಯಾಗಿದ್ದಾರೆ. ಬಹುತೇಕ ಶೂಟಿಂಗ್ ಮುಗಿಸಿರೋ 'ಮತ್ಸ್ಯಗಂಧ' ಚಿತ್ರದ ಟೀಸರ್ ಅನಾವರಣಗೊಂಡು ಸಿನಿಪ್ರಿಯರಲ್ಲಿ ಕುತೂಹಲವನ್ನು ಹುಟ್ಟು ಹಾಕಿದೆ.
ಮೊದಲ ಬಾರಿ ಪೊಲೀಸ್ ಅಧಿಕಾರಿಯಾಗಿ ಪೃಥ್ವಿ ಅಂಬಾರ್: 'ಮತ್ಸ್ಯಗಂಧ' ದೇವರಾಜ್ ಪೂಜಾರಿ ನಿರ್ದೇಶನದ ಕ್ರೈಂ ಡ್ರಾಮಾ. ಪೃಥ್ವಿ ಅಂಬಾರ್ ಮೊದಲ ಬಾರಿಗೆ ಪೊಲೀಸ್ ಅಧಿಕಾರಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಸಿನಿಮಾ ಬಿಡುಗಡೆ ದಿನಾಂಕ ಕೂಡ ಘೋಷಣೆಯಾಗಿದೆ.
ಪೃಥ್ವಿ ಅಂಬಾರ್ ಜೋಡಿಯಾಗಿ ದಿಶಾ ಶೆಟ್ಟಿ ಅಭಿನಯಿಸಿದ್ದಾರೆ. ಜೊತೆಗೆ ಭಜರಂಗಿ ಲೋಕಿ, ಶರತ್ ಲೋಹಿತಾಶ್ವ, ಪ್ರಶಾಂತ್ ಸಿದ್ದಿ, ನಾಗರಾಜ್ ಬೈಂದೂರು, ಕಿರಣ್ ನಾಯ್ಕ್, ಅಶೋಕ್ ಹೆಗ್ಡೆ, ಪಿಡಿ ಸತೀಶ್ ಚಂದ್ರ, ದಿಶಾ ಶೆಟ್ಟಿ, ಅಂಜಲಿ ಪಾಂಡೆ, ಮೈಮ್ ರಾಮದಾಸ್, ನಿರೀಕ್ಷಾ ಶೆಟ್ಟಿ ಸೇರಿದಂತೆ ಈ ಚಿತ್ರದಲ್ಲಿ ಗೋಪಾಲ್ ಕೃಷ್ಣ ದೇಶಪಾಂಡೆ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಪ್ರಶಾಂತ್ ಸಿದ್ದಿ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಬಿ.ಎಸ್ ವಿಶ್ವನಾಥ್ ಅವರ ಸಹ್ಯಾದ್ರಿ ಪ್ರೊಡಕ್ಷನ್ಸ್ ನಿರ್ಮಿಸಿರುವ ಈ ಚಿತ್ರವನ್ನು ಕನ್ನಡ ಪಿಚ್ಚರ್ ಪ್ರಸ್ತುತಪಡಿಸಲಿದೆ. ಹೊನ್ನಾವರ, ಕುಮಟಾ ಮತ್ತು ಅದರ ಸುತ್ತಮುತ್ತಲಿನ ಕರಾವಳಿ ಪ್ರದೇಶದಲ್ಲಿ ಚಿತ್ರೀಕರಿಸಲಾಗಿದೆ. ಪ್ರವೀಣ್ ಎಂ ಪ್ರಭು ಅವರ ಛಾಯಾಗ್ರಹಣವಿದೆ. ಸದ್ಯ ಟೀಸರ್ನಿಂದ ಕುತೂಹಲ ಕೆರಳಿಸಿರೋ 'ಮತ್ಸ್ಯಗಂಧ'ವು ಫೆಬ್ರವರಿ 23 ರಂದು ಚಿತ್ರಮಂದಿರ ಪ್ರವೇಶಿಸಲಿದೆ.